ಈ ಸ್ಟೋರಿಯನ್ನು ಮೂಲತಃ ಹಿಂದಿಯಲ್ಲಿ ವರದಿ ಮಾಡಲಾಗಿತ್ತು ಮತ್ತು ಬರೆಯಲಾಗಿತ್ತು. PARI ಎಜುಕೇಷನ್ ಭಾರತದಾದ್ಯಂತದ ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರೊಂದಿಗೆ ಕೆಲಸ ಮಾಡುತ್ತದೆ, ಅವರು ತಮ್ಮ ಆಯ್ಕೆಯ ಭಾಷೆಯಲ್ಲಿ ನಮಗೆ ವರದಿ ಮಾಡುತ್ತಾರೆ, ಬರೆಯುತ್ತಾರೆ ಮತ್ತು ವಿವರಿಸುತ್ತಾರೆ.

ಒಂದು ಬಿಸಿಲಿನ ಮಧ್ಯಾಹ್ನ, ಮಣಿಂದರ್ ಮಜುಮ್ದಾರ್ ತನ್ನ ಅಂಗಡಿಯಲ್ಲಿ ಚಾಪ್ ಪಕೋಡಾಗಳನ್ನು ಕರಿಯುತ್ತಿದ್ದಾರೆ. ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ನಾನಕಮಟ್ಟಾ ಪಟ್ಟಣದ ಬಂಗಾಳಿ ಕಾಲೋನಿಯಲ್ಲಿ ವಾಸಿಸುವ ಮಣಿಂದರ್ ಹೇಳುತ್ತಾರೆ, “ವರ್ಷಗಳ ಕಾಲದಿಂದ ಇದು ನಮ್ಮ ಉದ್ಯೋಗವಾಗಿದೆ. ಇದು ಇಲ್ಲದೇ ಹೋದರೆ ನಮಗೆ ರೊಟ್ಟಿ ಸಿಗುವುದಿಲ್ಲ, ನಿಮಗೆ ಚಾಪ್ಸ್ ಸಿಗುವುದಿಲ್ಲ.”

ಮಣಿಂದರ್ ಅವರ ದಿನಚರಿ ಬೆಳಿಗ್ಗೆ ಐದು ಗಂಟೆಗೆ ಪ್ರಾರಂಭವಾಗುತ್ತದೆ. ಅಂದಿಗೆ ಬೇಕಾಗುವ ಹುಣಸೆಹಣ್ಣು, ಕಡಲೆಹಿಟ್ಟು, ಮೊಟ್ಟೆ, ದಿನಬಳಕೆಯ ವಸ್ತುಗಳನ್ನು ತರಲು ಹೋಗುತ್ತಾರೆ. ಮೂಲತಃ ಬೆಂಗಾಲಿ ಮಾತನಾಡುವ ಮಣಿಂದರ್ ಹೇಳುತ್ತಾರೆ, “ನಾನು ಏಳು ಮೊಟ್ಟೆಯ ಕ್ರೇಟ್‌ಗಳನ್ನು 1,200 ರೂಪಾಯಿಗೆ ಖರೀದಿಸಿ ತರುತ್ತೇನೆ. ಇದಲ್ಲದೇ ಜೀರಿಗೆ, ಕೊತ್ತಂಬರಿ ಸೊಪ್ಪು, ಮೈದಾ ಕೂಡ ದುಬಾರಿಯಾಗಿದೆ. ಮನೆಗೆ ಹಿಂದಿರುಗಿದ ನಂತರ, ಮಣಿಂದರ್ ಅಂಗಡಿಗೆ ಹೋಗುವ ಮೊದಲು ತಯಾರಿ ಪ್ರಾರಂಭಿಸುತ್ತಾರೆ ಮತ್ತು ಮನೆಯಲ್ಲಿ ಚಟ್ನಿ ಮಾಡುತ್ತಾರೆ. ಇದಾದ ಬಳಿಕ ಮಧ್ಯಾಹ್ನ 12 ಗಂಟೆ ಸುಮಾರಿಗೆ ತನ್ನ ಅಂಗಡಿಗೆ ಬಂದು ರಾತ್ರಿ 8 ಗಂಟೆಯವರೆಗೆ ಅಂಗಡಿ ನಡೆಸುತ್ತಾರೆ.

ಮಣಿಂದರ್ ತನ್ನ ಅಂಗಡಿಯನ್ನು ಎಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅವರ ಪತ್ನಿ ಮೀನು ಮಜುಮ್ದಾರ್ ಅವರು ಮನೆಗೆಲಸವನ್ನು ನಿಭಾಯಿಸುವುದರೊಂದಿಗೆ ಅಂಗಡಿಯ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ನನ್ನ ಹೆಂಡತಿ ಸಹಾಯ ಮಾಡದಿದ್ದರೆ, ನಾನು ಒಬ್ಬಂಟಿಯಾಗಿ ಅಂಗಡಿಯನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮಣಿಂದರ್ ಹೇಳುತ್ತಾರೆ. ಮಣಿಂದರ್‌ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮೂವರೂ ಮದುವೆಯಾಗಿದ್ದಾರೆ. ಇಬ್ಬರು ಗಂಡು ಮಕ್ಕಳಿದ್ದರು, ಆದರೆ ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದರು. (ಮಣಿಂದರ್ ತನ್ನ ಪುತ್ರರ ಬಗ್ಗೆ ಮಾತನಾಡಲು ಬಯಸುವುದಿಲ್ಲ.) ಅವರಿಗೆ ಇಬ್ಬರು ಮೊಮ್ಮಕ್ಕಳು ಕೂಡ ಇದ್ದಾರೆ.


ಇತಿಹಾಸದ ಒಂದು ಪುಟದಿಂದ

ನಾನಕಮಟ್ಟಾ ನಗರದಲ್ಲಿ ಮಣಿಂದರ್ ಮಜುಂದಾರ್ ವಾಸಿಸುವ ಬಂಗಾಳಿ ಕಾಲೋನಿ ರಚನೆಯ ಕಥೆಯು ಇತಿಹಾಸದ ಪುಟಗಳೊಡನೆ ಸಂಬಂಧ ಹೊಂದಿದೆ. ಮಣಿಂದರ್ ಮತ್ತು ಅವರ ಕುಟುಂಬ ಯಾವಾಗಲೂ ಹಿಂದಿನಿಂದಲೂ ಇಲ್ಲಿ ವಾಸಿಸುತ್ತಿರಲಿಲ್ಲ. 1964ರಲ್ಲಿ ಬಾಂಗ್ಲಾದೇಶವು ಪಾಕಿಸ್ತಾನದಿಂದ ಬೇರ್ಪಡದಿದ್ದರೂ ಸಂಘರ್ಷದ ಪರಿಸ್ಥಿತಿಗಳು ಇದ್ದವು ಎಂದು ಮಣಿಂದರ್ ವಿವರಿಸುತ್ತಾರೆ. ಆ ಸಮಯದಲ್ಲಿ ಮಣಿಂದರ್ ಅವರ ಕುಟುಂಬವು ಪಾಕಿಸ್ತಾನದ ಖುಲ್ನಾ ಜಿಲ್ಲೆಯ (ಈಗ ಬಾಂಗ್ಲಾದೇಶದಲ್ಲಿದೆ) ಒಂದು ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿತ್ತು. ಆಗ ಅವರಿಗೆ ಕೇವಲ 11 ವರ್ಷ, ಮತ್ತು ಈಗ ಅವರಿಗೆ ಆ ಹಳ್ಳಿಯ ಹೆಸರು ನೆನಪಿಲ್ಲ. ಅದೇ ವರ್ಷ (1964) ಮೂಲತಃ ಬಂಗಾಳಿಗಳು ವಾಸಿಸುತ್ತಿದ್ದ ಮಣಿಂದರ್ ವಾಸವಿದ್ದ ಪ್ರದೇಶದಲ್ಲಿ, ಗಲಭೆಕೋರರು ದಾಳಿ ನಡೆಸಿ ಅವರ ಮನೆಗಳಿಗೆ ಬೆಂಕಿ ಹಚ್ಚಿದರು. ಇವುಗಳಲ್ಲಿ ಒಂದು ಮನೆ ಮಣಿಂದರ್ ಮಜುಮ್ದಾರ್ ಅವರ ಕುಟುಂಬಕ್ಕೆ ಸೇರಿತ್ತು.

ಮಣಿಂದರ್ ಹೇಳುತ್ತಾರೆ, “ನಾನು ನನ್ನ ಮನೆಯಲ್ಲಿದ್ದೆ, ಮತ್ತು ಅದು ಸಂಜೆ 4 ರ ಸುಮಾರಿಗೆ ಆಗಿರಬೇಕು. ಅಮ್ಮ ಮತ್ತು ತಂದೆ ಬಟ್ಟೆ, ಪಾತ್ರೆ ಮತ್ತು ಪಡಿತರ ಎಲ್ಲವನ್ನೂ ಚೀಲಗಳಲ್ಲಿ ತುಂಬಿಕೊಂಡರು. ನಂತರ ನಾವು ನಮ್ಮ ಮನೆಯಿಂದ ಹೊರಟೆವು. ಸೆಪ್ಟೆಂಬರ್‌ನ ಆ ತಂಪಾದ ಸಂಜೆ, ಮಣಿಂದರ್ ಮಜುಮ್ದಾರ್ ಅವರ ಇಡೀ ಕುಟುಂಬ ಮತ್ತು ಅವರ ಹಳ್ಳಿಯ ನೂರಾರು ಜನರು ತಮ್ಮ ಮನೆಗಳನ್ನು ತೊರೆದರು. ಆ ದೃಶ್ಯವನ್ನು ವಿವರಿಸುವಾಗ ಮಣಿಂದರ್ ಹೇಳುತ್ತಾರೆ, “ಕೆಲವೆಡೆ ಬೆಂಕಿ ಉರಿಯುತ್ತಿತ್ತು, ಅಲ್ಲಲ್ಲಿ ಜಗಳವಾಗುತ್ತಿತ್ತು. ಜನರು ಅಳುತ್ತಾ ಓಡುತ್ತಿದ್ದರು. ಕೆಲವರು ತಮ್ಮ ಸಂಬಂಧಿಕರ ಮನೆಗೆ ಹೋಗುತ್ತಿದ್ದರು, ಕೆಲವರು ತಮ್ಮ ಪರಿಚಯಸ್ಥರ ಮನೆಗೆ ಓಡುತ್ತಿದ್ದರು ಮತ್ತು ನಾವು ಭಾರತಕ್ಕೆ ಬಂದೆವು.

ಪಿಲಿಭಿಟ್‌ನಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಗಬಿಯಾ ಎಂಬ ಹಳ್ಳಿಯನ್ನು ತಲುಪಿದ ಮಜುಮ್ದಾರ್ ಕುಟುಂಬವು ದಿನಗೂಲಿ ಕಾರ್ಮಿಕರಾಗಿ ದುಡಿಯಲು ಪ್ರಾರಂಭಿಸಿತು. ಕೇವಲ 11 ವರ್ಷ ಪ್ರಾಯದ ಮಣಿಂದರ್ ಕೃಷಿ ಕಾರ್ಮಿಕರಾಗಿಯೂ ಕೆಲಸ ಮಾಡುತ್ತಿದ್ದರು, ಮತ್ತು ಅ ಮೂಲಕ ದಿನಕ್ಕೆ ಎರಡೂವರೆ ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. 


ಆಲೂ ಚಾಪ್ (ಬೋಂಡಾ) ಅಥವಾ ಮೊಟ್ಟೆ ಚಾಪ್ ಬೆಂಗಾಲಿ ಖಾದ್ಯ. ಇದರಲ್ಲಿ ಹಿಸುಕಿದ ಆಲೂಗಡ್ಡೆ ಅಥವಾ ಮೊಟ್ಟೆಗಳನ್ನು ಕಡಲೆಹಿಟ್ಟು, ಕಾರ್ನ್‌ಫ್ಲೋರ್, ಅಡಿಗೆ ಸೋಡಾ, ಮಿಶ್ರ ಮಸಾಲೆಗಳು ಮತ್ತು ನೀಋು ಬೆರೆಸಿದ ಹಿಟ್ಟಿನಲ್ಲಿ ಕರಿಯಲಾಗುತ್ತದೆ. ಮಣಿಂದರ್‌ ಅವರ ಅಂಗಡಿಯಲ್ಲಿ ತಿನ್ನಲು ಬಿಸಿ ಚಾಪ್ಸ್, ಹಸಿರು ಚಟ್ನಿ ಮತ್ತು ಮೊಟ್ಟೆಗಳು ಲಭ್ಯವಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಅವರ ವ್ಯಾಪಾರ ಸಾಕಷ್ಟು ಕಡಿಮೆಯಾಗುತ್ತಿದೆ. ಮಣಿಂದರ್ ಹೇಳುತ್ತಾರೆ, “ಇತ್ತೀಚಿನ ದಿನಗಳಲ್ಲಿ ಗ್ರಾಹಕರು ತೀರಾ ಕಡಿಮೆ, ಮತ್ತು ದಿನಕ್ಕೆ 100-150 ರೂಪಾಯಿ ಗಳಿಸುವುದು ತುಂಬಾ ಕಷ್ಟವಾಗಿದೆ. ನಾನು ಮಾಡುವ ಕಠಿಣ ಕೆಲಸವು ಪ್ರತಿಫಲ ನೀಡುವುದನ್ನು ನಿಲ್ಲಿಸಿದೆ ಮತ್ತು ಕುಟುಂಬವನ್ನು ನಡೆಸುವುದು ನನಗೆ ತುಂಬಾ ಕಷ್ಟವಾಗುತ್ತಿದೆ.” ಮಣಿಂದರ್ ದುಃಖದ ದನಿಯಲ್ಲಿ ಮುಂದುವರಿಯುತ್ತಾರೆ, “ಕೆಲವೊಮ್ಮೆ ನನಗೆ ಈ ಕೆಲಸವನ್ನು ಬಿಡಬೇಕೆಂದು ಅನಿಸುತ್ತದೆ, ಆದರೆ ಇದನ್ನು ಬಿಟ್ಟರೆ ನನಗೆ ಬೇರೆ ಕೆಲಸ ಸಿಗುವುದಿಲ್ಲ. ಈಗ 60 ನೇ ವಯಸ್ಸಿನಲ್ಲಿ, ನನ್ನ ಕುಟುಂಬವನ್ನು ಪೋಷಿಸಲು ನಾನು ಇನ್ನೇನು ಮಾಡಬಹುದು?”

ʼಈಗ 60 ನೇ ವಯಸ್ಸಿನಲ್ಲಿ, ನನ್ನ ಕುಟುಂಬವನ್ನು ಪೋಷಿಸಲು ನಾನು ಇನ್ನೇನು ಮಾಡಬಹುದು? ಚಿತ್ರಗಳು: ಪ್ರಕಾಶ್ ಚಂದ್

ಮಣಿಂದರ್ ಅವರಿಗೆ ತಮ್ಮ ಕುಟುಂಬವು ಏಕೆ ಭಾರತಕ್ಕೆ ಬರಲು ನಿರ್ಧರಿಸಿತೆನ್ನುವುದು ತಿಳಿದಿಲ್ಲ. ಅವರ ಕುಟುಂಬ ನೂರಾರು ಕಿಲೋಮೀಟರ್ ದೂರವನ್ನು ಕ್ರಮಿಸಿ, ಸಾಕಷ್ಟು ಕಷ್ಟಗಳನ್ನು ಎದುರಿಸಿ ಭಾರತದ ಗಡಿಯನ್ನು ತಲುಪಿತ್ತು. ಇದಾದ ಬಳಿಕ ಚಿಕ್ಕ ದೋಣಿಯಲ್ಲಿ ಬಂಗಾಳದ ಇಚ್ಚಮತಿ ನದಿಯನ್ನು ದಾಟಿ ಪಶ್ಚಿಮ ಬಂಗಾಳದ ಬಂಗಾನ್ ಮಣ್ಣಿನಲ್ಲಿ ಕಾಲಿಟ್ಟು ಅಲ್ಲಿಂದ ಕೊಲ್ಕತ್ತಾಗೆ ತೆರಳಿದರು.

ಮಣಿಂದರ್ ಎಂದಿಗೂ ಶಾಲೆಯ ಮೆಟ್ಟಿಲು ಹತ್ತಿಲ್ಲ ಮತ್ತು ಅವರ ಕುಟುಂಬದ ಸದಸ್ಯರು ಯಾರೂ ಶಿಕ್ಷಣ ಪಡೆದಿರಲಿಲ್ಲ. ಮಣಿಂದರ್ ಹೇಳುತ್ತಾರೆ, “ನಾವೆಲ್ಲರೂ ಭಾರತವನ್ನು ತಲುಪಿದ ನಂತರ ತುಂಬಾ ಹೆದರುತ್ತಿದ್ದೆವು ಮತ್ತು ರಹಸ್ಯವಾಗಿ ಕೋಲ್ಕತ್ತಾ ತಲುಪಿದ್ದೆವು. ಪೊಲೀಸರು ನಮ್ಮನ್ನು ಹಿಡಿಯಬಹುದೆಂದು ಎಂದು ನಾವು ಹೆದರುತ್ತಿದ್ದೆವು. ಅವರ ದೂರದ ಚಿಕ್ಕಪ್ಪ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು, ಅಲ್ಲಿ ಅವರ ಕುಟುಂಬ ಹೋಗಲು ನಿರ್ಧರಿಸಿತ್ತು. ಮಣಿಂದರ್ ಹೇಳುತ್ತಾರೆ, “ನಾವು ಟ್ರಕ್‌ನಲ್ಲಿ ಪಿಲಿಭಿತ್‌ಗೆ ಹೋಗಿದ್ದೆವು.”

ಕೆಲವೇ ವರ್ಷಗಳಲ್ಲಿ, ಅವರ ಕುಟುಂಬವು ಹಳ್ಳಿಯಲ್ಲಿ ಯಶಸ್ವಿಯಾಗಿ ನೆಲೆಸಿತು. ಆದಾಗ್ಯೂ, 1972ರ ಮುಂಗಾರಿನಲ್ಲಿ, ಶಾರದಾ ನದಿಯ ಪ್ರವಾಹವು ಅವರ ಕುಟುಂಬಕ್ಕೆ ಮತ್ತೊಮ್ಮೆ ವಿನಾಶಕಾರಿ ಹೊಡೆತವನ್ನು ನೀಡಿತು. ಪ್ರವಾಹದಲ್ಲಿ ಅವರು ತಮ್ಮ ಮನೆ ಮತ್ತು ಹೊಲಗಳನ್ನು ಕಳೆದುಕೊಂಡರು.


ಮಣಿಂದರ್ ಅವರೇ ಸ್ವತಃ ತಮ್ಮ ಸೈಕಲ್‌ನ ಹಿಂದಿನ ಭಾಗಕ್ಕೆ ಕೈಗಾಡಿಯನ್ನು ಸೇರಿಸಿದ್ದಾರೆ ಮತ್ತು ಅವರು ತಮ್ಮ ಅಂಗಡಿಗೆ ಹೋಗುವುದು ಮತ್ತು ಬರುವುದು ಅದರಲ್ಲಿಯೇ. ಈ ಕೈಗಾಡಿಯಲ್ಲಿ ಮೊಟ್ಟೆಯ ತಟ್ಟೆಗಳು, ಹುಣಸೆ ಹಣ್ಣಿನ ಚಟ್ನಿ, ಗ್ಯಾಸ್ ಮತ್ತು ಸ್ಟೌವ್, ಬೇಳೆ ಹಿಟ್ಟು ಮತ್ತು ಮೊಟ್ಟೆಯ ಚಾಪ್ಸ್ ಇರಿಸಲಾಗುತ್ತದೆ. ಅವರು ಹೇಳುತ್ತಾರೆ, “ಎಂಟು ವರ್ಷಗಳ ಹಿಂದೆ, ನಾನು ವ್ಯಾಪಾರವನ್ನು ಪ್ರಾರಂಭಿಸಿದಾಗ, ಈ ಕೈಗಾಡಿಯನ್ನು ನನ್ನ ಕೈಯಾರೆ ಮಾಡಿದ್ದೇನೆ.” ವ್ಯವಹಾರದ ಆರಂಭಿಕ ವರ್ಷಗಳಲ್ಲಿ ಅವರ ಆರ್ಥಿಕ ಸ್ಥಿತಿಯು ಉತ್ತಮವಾಗಿತ್ತು ಎಂದು ಮಣಿಂದರ್ ಹೇಳುತ್ತಾರೆ. ಆದರೆ ಕೆಲವು ವರ್ಷಗಳ ಹಿಂದೆ, ಕೆಲಸದ ಸ್ಥಳದಲ್ಲಿ ಅಪಘಾತ ಸಂಭವಿಸಿ, ಅವರ ಎದೆಯ ಮೂಳೆಗಳು ಮುರಿದು, ಅವರು ದೀರ್ಘಕಾಲ ಹಾಸಿಗೆಯಲ್ಲಿ ಇರಬೇಕಾಯಿತು. ಮಣಿಂದರ್ ಹೇಳುತ್ತಾರೆ, “ಅದು ನನ್ನಿಂದ ಎಲ್ಲವೂ ದೂರವಾದ ಸಮಯ. ನನ್ನ ಶ್ರಮವೆಲ್ಲವೂ ವ್ಯರ್ಥವಾಯಿತು ಮತ್ತು ಉಳಿಸಿದ ಹಣವೆಲ್ಲ ನನ್ನ ಚಿಕಿತ್ಸೆಗೆ ಖರ್ಚಾಯಿತು.” ಸುದೀರ್ಘ ಚಿಕಿತ್ಸೆಯ ನಂತರ ಅವರು ಗುಣವಾಗಲು ಪ್ರಾರಂಭಿಸಿದಾಗ, ಅವರು ಮತ್ತೆ ಕೆಲಸ ಮಾಡಲು ನಿರ್ಧರಿಸಿದರು.


24 ವರ್ಷದ ಮಣಿಂದರ್ ದಿನಗೂಲಿ ಕೆಲಸ ಹುಡುಕಿಕೊಂಡು ಇತರ ಜಿಲ್ಲೆಗಳು ಮತ್ತು ರಾಜ್ಯಗಳಿಗೆ ಪ್ರಯಾಣಿಸಲು ಪ್ರಾರಂಭಿಸಿದರು. ಅವರು ಯಾರದೋ ಹೊಲದಲ್ಲಿ ಕೆಲಸ ಮಾಡಲು ನಾನಕ್‌ಮಟ್ಟ ಪ್ರಯಾಣಿಸುತ್ತಿದ್ದರು, “ಆ ದಿನಗಳಲ್ಲಿ ನಾನು ಪಿಲಿಭಿತ್‌ನಲ್ಲಿ ಎರಡೂವರೆ ರೂಪಾಯಿಗಳ ದಿನಗೂಲಿಯನ್ನು ಸಂಪಾದಿಸುತ್ತಿದ್ದೆ, ಆದರೆ ನಾನಕ್‌ಮಟ್ಟದಲ್ಲಿ ಐದು ರೂಪಾಯಿಗಳನ್ನು ಸಂಪಾದಿಸಬಹುದಾಗಿತ್ತು. ಜೊತೆಗೆ ಇಲ್ಲಿ ಕೆಲಸ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳಿದ್ದವು.”

ನಾನಕ್‌ಮಟ್ಟಾದಲ್ಲಿ ಕೆಲಸ ಮಾಡುತ್ತಿದ್ದಾಗ, ಮಣಿಂದರ್ ಬಾಂಗ್ಲಾದೇಶದಿಂದ ವಲಸೆ ಬಂದ ಕೆಲವು ಬಂಗಾಳಿ ನಿವಾಸಿಗಳ ಬಗ್ಗೆ ತಿಳಿದುಕೊಂಡರು, ಅದು ಆಗ ಪೂರ್ವ ಪಾಕಿಸ್ತಾನವಾಗಿತ್ತು. “ನನ್ನ ಹಳ್ಳಿಯ ಕೆಲವು ಜನರು ಇಲ್ಲಿ ನೆಲೆಸಿದ್ದಾರೆ ಎಂದು ನಾನು ಕಂಡುಕೊಂಡೆ ಮತ್ತು ನಾನು ಇಲ್ಲಿಯೂ ನೆಲೆಸಲು ಬಯಸಿದ್ದೆ. ನಾವು ನಮ್ಮ ಚಿಕ್ಕಪ್ಪನಿಗೆ ತೊಂದರೆ ನೀಡಲು ಬಯಸಲಿಲ್ಲ ಮತ್ತು ಶೀಘ್ರದಲ್ಲೇ ನಾವು ಇಲ್ಲಿಗೆ ಸ್ಥಳಾಂತರಗೊಂಡೆವು ಮತ್ತು ನಮ್ಮ [ಕಚ್ಚಾ] ಮನೆಯನ್ನು ನಿರ್ಮಿಸಿದೆವು. ನಂತರ, ನಾನು ಇಲ್ಲಿ ಭೂಮಿಯನ್ನು ಖರೀದಿಸಿದೆ ಮತ್ತು ಇಟ್ಟಿಗೆ ಮನೆಯನ್ನು ನಿರ್ಮಿಸಿದೆ” ಎಂದು ಅವರು ಹೇಳಿದರು.  


ಇಂದು, ಮಣಿಂದರ್ ಅವರು ಭಾರತೀಯ ನಾಗರಿಕ ಎಂದು ಸಾಬೀತುಪಡಿಸಲು ಪಡಿತರ ಚೀಟಿ ಮತ್ತು ಇತರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ಆದಾಗ್ಯೂ, ಅವರ ಬಳಿ ಜನನ ಪ್ರಮಾಣಪತ್ರವಿಲ್ಲ, ಅದರ ಕೊರತೆಯು ಅವರಿಗೆ ಅನೇಕ ಬಾರಿ ಸಮಸ್ಯೆಗಳನ್ನು ಉಂಟುಮಾಡಿದೆ. ಅವರು ಹೇಳುತ್ತಾರೆ, “ನಾನು [ಪೂರ್ವ] ಪಾಕಿಸ್ತಾನದಲ್ಲಿ ಜನಿಸಿದೆ. ಅಲ್ಲಿಂದ ನನ್ನ ಜನನ ಪ್ರಮಾಣಪತ್ರವನ್ನು ನಾನು ಹೇಗೆ ತರುವುದು? ಈ ದಾಖಲೆಗಳಿಂದ ನನಗೆ ಯಾವುದೇ ಪ್ರಯೋಜನವಿಲ್ಲ ಏಕೆಂದರೆ ಅಂತಹ ದಾಖಲೆಗಳನ್ನು ಹೊಂದಿರಬೇಕಾದ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ. ನಾನು ಏನು ಮಾಡುತ್ತಿದ್ದೇನೆ ಎಂಬುದರ ಮೇಲೆಯೇ ನಾನು ಗಮನ ಕೇಂದ್ರೀಕರಿಸಿದೆ.”

ತನ್ನ 15 ರೂ.ಗಳ ಚಾಪ್ ಮೂಲಕ ಜನರ ಮುಖದಲ್ಲಿ ನಗುವನ್ನು ತರುವ ಮಣಿಂದರ್ ಜೀವನದ ಬಗ್ಗೆ ಹೀಗೆ ಹೇಳುತ್ತಾರೆ, “ಕಠಿಣ ಪರಿಶ್ರಮದಿಂದ ತುಂಬಿದ ಈ ಪುರುಸೊತ್ತಿಲ್ಲದ ಬದುಕಿನಲ್ಲಿ, ನಾವು ಸಂತೋಷವನ್ನು ಎಲ್ಲಿ ಕಾಣಬೇಕು? ನನ್ನ ಎಲ್ಲಾ ಸಮಯ ಈ ಕೆಲಸದ ಕುರಿತು ಚಿಂತಿಸುವುದರಲ್ಲೇ ಕಳೆದುಹೋಗುತ್ತದೆ.”

Editor's note

ಪ್ರಕಾಶ್ ಚಂದ್ ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ನಾನಕಮಟ್ಟಾ ಪಬ್ಲಿಕ್ ಸ್ಕೂಲ್ನಲ್ಲಿ 10 ನೇ ತರಗತಿ ವಿದ್ಯಾರ್ಥಿ. ಅವರು ತಮ್ಮ ಪ್ರದೇಶದ 'ಗುಜ್ಜರ್' ಸಮುದಾಯದ ಕುರಿತು ಸಾಕ್ಷ್ಯ ಚಿತ್ರವನ್ನೂ ಮಾಡಿದ್ದಾರೆ. ಪ್ರಕಾಶ್ ಹೇಳುತ್ತಾರೆ, “ ಸ್ಟೋರಿಗಾಗಿ ಪರಿಯೊಂದಿಗೆ ಕೆಲಸ ಮಾಡುವಾಗ, ನನ್ನ ಸ್ವಂತ ಹಳ್ಳಿಯ ಜನರ ಬಗ್ಗೆ ನನಗೆ ಎಷ್ಟು ಕಡಿಮೆ ತಿಳಿದಿದೆ ಎಂದು ನಾನು ಅರಿತುಕೊಂಡೆ. ಸಮುದಾಯಗಳ ಇತಿಹಾಸವು ಅವರ ಕಥೆಗಳು, ಮತ್ತು ಉಪಕತೆಗಳಲ್ಲಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಮಣಿಂದರ್ ಜೀ ಅವರ ಕಥೆಯನ್ನು ಪದಗಳಲ್ಲಿ ವಿವರಿಸುವುದು ನನಗೆ ತುಂಬಾ ಸವಾಲಾಗಿತ್ತು. ಆದರೆ, ಅವರ ಕಥೆಯನ್ನು ಬರೆಯುವಾಗ, ವಲಸಿಗರ ನೋವು ಮತ್ತು ಅವರ ಬದುಕಿನ ಹೋರಾಟದ ಕುರಿತು ತಿಳಿಯುವ ಅವಕಾಶ ದೊರಕಿತು.”

ಅನುವಾದ: ಶಂಕರ. ಎನ್. ಕೆಂಚನೂರು 

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com -ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.