ಒದ್ದೆಯಾದ ಹೇರ್ ಬ್ಯಾಂಡ್‌ಗಳು ಮತ್ತು ತಿನ್ನಲು ಸಿದ್ಧವಾಗಿರುವ ಆಹಾರದ ಪೊಟ್ಟಣಗಳ ನಡುವೆ ಸಣ್ಣ, ಬಿಳಿ ಹುಳುಗಳು ಓಡಾಡುತ್ತಿದ್ದವು. ಸಾರಮ್ಮ ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಬರಿಗೈಯಲ್ಲಿ ಆ ತ್ಯಾಜ್ಯವನ್ನು ಎತ್ತಿಕೊಂಡು ದೊಡ್ಡ ಗಟ್ಟಿಯಾದ ಚೀಲವೊಂದಕ್ಕೆ ಹಾಕುತ್ತಾರೆ.

ಕಳೆದ 20 ವರ್ಷಗಳಿಂದ ಚ್ವಾರು ಪರುಕ್ಕುನ್ನ ಆಳುಕಳ್ (ತ್ಯಾಜ್ಯ ಆಯುವ ಆಳು) ಆಗಿ ಕೆಲಸ ಮಾಡುವ ಎನ್. ಸಾರಮ್ಮ ಅವರು ತಿರುವನಂತಪುರಂನ ಪೆರೂರ್ಕಡ ವಾರ್ಡಿನಲ್ಲಿ ಕೊಳೆತ ಆಹಾರ ಮತ್ತು ಒಡೆದ ಗಾಜುಗಳ ಜೊತೆಗೆ ಇತರ ಅಪಾಯಕಾರಿ ತ್ಯಾಜ್ಯಗಳ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸರಿಯಾಗಿ ವಿಲೇವಾರಿ ಮಾಡದ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಒಡೆದ ಗಾಜಿನ ತುಂಡುಗಳಿಂದ ತನಗೆ ನೋವಾದ ಹಲವಾರು ಸಂದರ್ಭಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. ಹೀಗೆ ಒಮ್ಮೆ ಗಾಜು ಚುಚ್ಚಿದ್ದರಿಂದಾಗಿ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗಿ ಬಂದಿತ್ತು. “ಆಸ್ಪತ್ರೆಯ ಖರ್ಚಿಗಾಗಿ ನನ್ನದೇ ಹಣವನ್ನು ಖರ್ಚುಮಾಡಬೇಕಾಯಿತು,” ಎಂದು ಕಾಲಿನ ಗಾಯ ತೋರಿಸುತ್ತಾ ಹೇಳಿದರು, “ನನ್ನ ಎರಡೂ ಕಾಲುಗಳಲ್ಲಿ ದದ್ದುಗಳಿವೆ. ಇದು ಸೋಂಕಿಗೆ ಒಳಗಾಗಿ ಸೆಪ್ಟಿಕ್ ಆಗಿ ಕಪ್ಪು ಬಣ್ಣಕ್ಕೆ ತಿರುಗಿತು. ಕೊನೆಗೆ, ನಾನು ಆಸ್ಪತ್ರೆಗೆ ಹೋದೆ. ಇದು ತ್ಯಾಜ್ಯ ನೀರಿನಿಂದ ಉಂಟಾಗುತ್ತದೆ ಎಂದು ನನಗೆ ತಿಳಿದಿತ್ತು.”

ಯಾವುದೇ ರಕ್ಷಣಾತ್ಮಕ ಕೈಗವಸು ಮತ್ತು ಮುಖಗವಸು ಇಲ್ಲದೆಯೇ ಕೆಲಸ ಮಾಡುವುದರಿಂದಾಗಿ ಸಾರಮ್ಮನವರ ಆರೋಗ್ಯ ದಿನ-ದಿನವೂ ಹಾನಿಗೆ ಒಳಗಾಗುತ್ತಿದೆ. ಆದರೆ ಈ ಕುರಿತು ಅವರು ಹೋರಾಡುವುದಿಲ್ಲ. “ಹಾಗೆ ನೋಡಿದರೆ ಪ್ಲಾಸ್ಟಿಕ್‌ ಕಸವನ್ನು ತೊಳೆದು ಎಸೆಯಬೇಕು. ಆದರೆ ಹಾಗೆ ಮಾಡುವಂತೆ ನಾನು ಯಾರನ್ನೂ ಒತ್ತಾಯಿಸುವುದಿಲ್ಲ,” ಎನ್ನುತ್ತಾರೆ ಸಾರಮ್ಮ. ಏಕೆಂದರೆ ಸಾಮಾನ್ಯವಾಗಿ ಮನೆಗಳಲ್ಲಿ ಪ್ಲಾಸ್ಟಿಕ್‌ ಕವರುಗಳನ್ನು ತೊಳೆಯುವಷ್ಟು ಸಮಯ ಇರುವುದಿಲ್ಲ ಎನ್ನುವುದು ನನಗೆ ತಿಳಿದಿದೆ ಎನ್ನುತ್ತಾರವರು.

ಸಾರಮ್ಮ ಪ್ರತಿದಿನ ಬೆಳಿಗ್ಗೆ 105 ಮನೆಗಳಿಂದ ಕಸವನ್ನು ಸಂಗ್ರಹಿಸುತ್ತಾರೆ. ಫೋಟೊ: ಆಯಿಷಾ ಜಾಯ್ಸ್

105 ಮನೆಗಳ ಕಸವನ್ನು ಸಂಗ್ರಹಿಸುವ 62 ವರ್ಷದ ಸಾರಮ್ಮನ ಕೆಲಸದ ದಿನವು ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭವಾಗುತ್ತದೆ, ಈ ಮನೆಗಳು ಕೇರಳದ ಈ ರಾಜಧಾನಿ ನಗರದ ಶ್ರೀ ನಗರ, ಐಶ್ವರ್ಯ ಗಾರ್ಡನ್, ದುರ್ಗಾ ನಗರ, ಉಳ್ಯನಾಡು ಮತ್ತು ಜರ್ನಲಿಸ್ಟ್ ಕಾಲೋನಿ ಎಂಬ ಐದಕ್ಕೂ ಹೆಚ್ಚು ವಸತಿ ಕಾಲೋನಿಗಳಲ್ಲಿವೆ. ಇಲ್ಲಿನ ಪ್ರತಿಯೊಂದು ಕುಟುಂಬವು ತಮ್ಮ ಮನೆಗಳಿಂದ ನೇರವಾಗಿ ತಮ್ಮ ಕಸವನ್ನು ಸಂಗ್ರಹಿಸಲು ತಿಂಗಳಿಗೆ 500 ರೂ.ಗಳನ್ನು ನೀಡುತ್ತದೆ.

ಈ ಸೌಲಭ್ಯ ಬಳಸಿಕೊಳ್ಳಲು ಯಾರು ಹಣ ಪಾವತಿಸುವುದಿಲ್ಲವೋ ಅವರು ತಡರಾತ್ರಿ ಕಸವನ್ನು ಹೊರಗೆ ಎಸೆಯುತ್ತಾರೆ. ಇದನ್ನು ಎತ್ತಿ ಚೀಲಕ್ಕೆ ಹಾಕಿಕೊಂಡಾಗ ಆಹಾರ ಹುಡುಕುವ ಬೀದಿನಾಯಿಗಳು ಚೀಲವನ್ನು ಹರಿದು ಅದರೊಳಗಿನ ಪ್ಲಾಸ್ಟಿಕ್‌ ಕವರ್‌ ಕಿತ್ತು ತಿನ್ನುತ್ತವೆ. ಇದರಿಂದಾಗಿ ಸಾರಮ್ಮನಿಗೆ ಆಗಾಗ ಚೀಲ ಬದಲಾಯಿಸಬೇಕಾಗಿ ಬರುತ್ತದೆ. ಸಾರಮ್ಮ ತಿಂಗಳಿಗೆ 10-16 ಚೀಲಗಳನ್ನು ಬದಲಾಯಿಸುತ್ತಾರೆ. ಇದಕ್ಕಾಗಿ ಹಣ ಅವರ ಕೈಯಿಂದಲೇ ಹಾಕಬೇಕಾಗುತ್ತದೆ. “ಜನರು ತಿಂಗಳಿಗೆ 500 ರೂಪಾಯಿ ಪಾವತಿಸಿ ಕಸ ಸಂಗ್ರಾಹಕರಿಗೆ ನೇರವಾಗಿ ಕಸ ನೀಡುವಂತಿದ್ದರೆ ಚೆನ್ನಾಗಿರುತ್ತಿತ್ತು,” ಎನ್ನುತ್ತಾರವರು.

ಮನೆಗಳು ಮತ್ತು ವಿಂಗಡಣೆ ಪ್ರದೇಶದ ನಡುವಿನ ಅಂತರವು ಸರಿಸುಮಾರು ಮೂರು ಕಿಲೋಮೀಟರ್ ಮತ್ತು ಸಾರಮ್ಮ ಈ ಕೆಲಸಕ್ಕಾಗಿ ಆಟೋ ರಿಕ್ಷಾವೊಂದನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಚಾಲಕನೊಂದಿಗೆ, ಅವರು ಮನೆಗಳು ಮತ್ತು ತ್ಯಾಜ್ಯ ವಿಂಗಡಣೆ ಪ್ರದೇಶದ ನಡುವೆ ಅನೇಕ ಬಾರಿ ಓಡಾಡುತ್ತಾರೆ, ಅಲ್ಲಿಂದ ಅದನ್ನು ಹಂದಿ ಫಾರ್ಮ್ಗಳು ಮತ್ತು ಮರುಬಳಕೆ ಕೇಂದ್ರಗಳಿಗೆ ಕೊಂಡೊಯ್ಯುವ ಖಾಸಗಿ ಕಂಪನಿಗೆ ಹಸ್ತಾಂತರಿಸಲಾಗುತ್ತದೆ.

ಸಾರಮ್ಮನಂತಹ ಕಸ ಸಂಗ್ರಹಿಸುವವರು ವಿಂಗಡಣೆ ಪ್ರದೇಶದಿಂದ ಕಸವನ್ನು ಸಂಗ್ರಹಿಸಲು ಈ ಕಂಪನಿಗಳಿಗೆ ಹಣ ಪಾವತಿಸುತ್ತಾರೆ. ಅವರ ಶುಲ್ಕ, ಮೂಟೆಗಳ ಹಣ ಮತ್ತು ಆಟೋ ಬಾಡಿಗೆಯನ್ನು ಲೆಕ್ಕಹಾಕುವ ಹೊತ್ತಿಗೆ, ಅವರ ಕೈಯಲ್ಲಿ ತಿಂಗಳಿಗೆ 5,000 ರೂಪಾಯಿಗಳಷ್ಟು ಉಳಿದಿರುತ್ತದೆ.


ಸಾರಮ್ಮ ತನ್ನ ಇಡೀ ಬದುಕನ್ನು ತಿರುವನಂತಪುರಂನ ದೊಡ್ಡ ಕೊಳೆಗೇರಿ ಪ್ರದೇಶವಾದ ರಾಜಾಜಿ ನಜರ್‌ನ ಚೆಂಗಲ್ಚೂಲಾ ಕಾಲೋನಿಯಲ್ಲಿ ಕಳೆದಿದ್ದಾರೆ. ಅವರು ಒಂದು ವರ್ಷದವರಿದ್ದಾಗ, ಅವರ ಕುಟುಂಬವು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಗುಂಡುಕಾಡ್ ಕಾಲೋನಿ ಎಂಬ ಮತ್ತೊಂದು ಕೊಳೆಗೇರಿಯಿಂದ ಇಲ್ಲಿಗೆ ಸ್ಥಳಾಂತರಗೊಂಡಿತ್ತು. ಆಗ ಅವರು ಉತ್ತಮ ಕೂಲಿ ಕೆಲಸವನ್ನು ಹುಡುಕುತ್ತಾ ಹೋಗಿದ್ದರು. ಇಲ್ಲಿಂದ 66 ಕಿಲೋಮೀಟರ್ ದೂರದಲ್ಲಿರುವ ಕೊಲ್ಲಂ ಎಂಬ ಪಟ್ಟಣದ ಮನೆಯೊಂದರಲ್ಲಿ ಸಾರಮ್ಮ ಸುಮಾರು ಏಳು ವರ್ಷದವರಿದ್ದಾಗ ಮನೆಕೆಲಸದಾಕೆಯಾಗಿ ಸೇರಿಕೊಂಡರು.

“ಆ ಸಮಯದಲ್ಲಿ ನನಗೆ ಏನೂ ತಿಳಿಯುತ್ತಿರಲಿಲ್ಲ. ನಾನು ನನ್ನ ಬಟ್ಟೆಗಳನ್ನು ನನ್ನ ನಿದ್ರೆಯಲ್ಲಿ ಒದ್ದೆ ಮಾಡಿಕೊಳ್ಳುತ್ತಿದ್ದೆ. ನಾನು ಆ ಮನೆಯಲ್ಲಿ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದೆ ಮತ್ತು ನಂತರ ಅಪ್ಪನಿಗೆ ನನ್ನನ್ನು ಕೆಲಸಕ್ಕೆ ಕಳುಹಿಸಿದ್ದಕ್ಕೆ ಪಾಪಪ್ರಜ್ಞೆಗೆ ಒಳಗಾಗಿ ಮರಳಿ ಮನೆಗೆ ಕರೆದೊಯ್ದರು,” ಎಂದು ಸಾರಮ್ಮ ನೆನಪಿಸಿಕೊಳ್ಳುತ್ತಾರೆ. ಆದಾಗ್ಯೂ, ಮನೆಗೆ ಹಿಂದಿರುಗಿದ ಅವರು ವಿವಿಧ ಮನೆಗಳಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಿದರು ಮತ್ತು 12 ವರ್ಷದವರಾಗುವುದರೊಳಗೆ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. “ಆಗಿನ ಕಾಲ ಬೇರೆಯಿತ್ತು, ಬಾಲಕಾರ್ಮಿಕ ಕಾನೂನು ಇರಲಿಲ್ಲ. ನಾನು [ನನ್ನ ವಯಸ್ಸಿಗಿಂತ] ಸ್ವಲ್ಪ ದೊಡ್ಡವಳಂತೆ ಕಾಣುತ್ತಿದ್ದೆ,” ಎನ್ನುವ ಅವರು ಅವರಂತಹ ದಲಿತ ಕುಟುಂಬಗಳಿಗೆ, ಅಂತಹ ಕಷ್ಟಗಳು ಸಾಮಾನ್ಯವಾಗಿದ್ದವು ಎಂದು ಹೇಳುತ್ತಾರೆ.

ಸಾರಮ್ಮನ ಪೋಷಕರು ಕೌಶಲರಹಿತ ಕಾರ್ಮಿಕರಾಗಿದ್ದರು ಮತ್ತು ಅವರು ನಾಲ್ಕನೇ ಮಗುವಾಗಿದ್ದರು. ಕುಟುಂಬದ ಸಂಪಾದನೆಗೆ ಪೂರಕವಾಗಿ ಅವರ ದುಡಿಮೆಯ ಅಗತ್ಯವಿತ್ತು ಮತ್ತು ಇದಕ್ಕಾಗಿ ಅವರು 2ನೇ ತರಗತಿಯಲ್ಲಿ ಶಾಲೆಯಿಂದ ಒರಗೆ ಬರಬೇಕಾಯಿತು ಆದರೆ ಅವರ ಒಡಹುಟ್ಟಿದವರು 8 ಮತ್ತು 10ನೇ ತರಗತಿಯವರೆಗೆ ಓದಿದ್ದರು.

“ನನಗೆ ಓದಲು ಅಥವಾ ಬರೆಯಲು ಬರುವುದಿಲ್ಲ. ನನ್ನ ಸಹಿ ಕೇವಲ ಮೂರು ಗೆರೆಗಳು. ಬಹಳ ಕಷ್ಟಪಟ್ಟು, ನಾನು ಮಲಯಾಳಂನಲ್ಲಿ ದೊಡ್ಡ ಮುದ್ರಿತ ಅಕ್ಷರಗಳನ್ನು ಓದಬಲ್ಲೆ. ನನ್ನ ಮಕ್ಕಳು ಓದಿದ್ದಾರೆ,” ಎಂದು ಅವರು ಹೇಳುತ್ತಾರೆ. ಅವರ ಮಕ್ಕಳು ಹತ್ತಿರದ ಸರ್ಕಾರಿ ಶಾಲೆಯಲ್ಲಿ ಓದಿದರು.

ಸಾರಮ್ಮ ಅವರಿಗೆ ಯಾವುದೇ ಬ್ಯಾಂಕ್ ಖಾತೆ, ಆರೋಗ್ಯ ವಿಮೆ ಅಥವಾ ವಿಧವಾ ಪಿಂಚಣಿಯಂತಹ ಕೇರಳದ ಸಮಾಜ ಕಲ್ಯಾಣ ಯೋಜನೆಗಳ ಯಾವುದೇ ಪ್ರಯೋಜನಗಳಿಲ್ಲ; ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ನೀಡಲಾಗುವ ಆರೋಗ್ಯ ವಿಮೆ ಮತ್ತು ವೃದ್ಧಾಪ್ಯ ಪಿಂಚಣಿ. ರಾಜ್ಯದ ವಿಧವಾ ಪಿಂಚಣಿ ಯೋಜನೆಯ ಪ್ರಕಾರ, ಅವರು ತಿಂಗಳಿಗೆ 1,400 ರೂಪಾಯಿಗಳನ್ನು ಪಡೆಯಬೇಕು ಆದರೆ ಅವರು ಅರ್ಜಿ ಸಲ್ಲಿಸಿಲ್ಲ ಎಂದು ಅವರು ಹೇಳುತ್ತಾರೆ.

“ತಿಂಗಳಿಗೆ 1,400 ರೂಪಾಯಿಗಳನ್ನು ಪಡೆಯಲು, ನೀವು ಅನೇಕ ದಿನಗಳವರೆಗೆ ಸರ್ಕಾರಿ ಅಧಿಕಾರಿಗಳ ಹಿಂದೆ ಓಡಬೇಕಾಗುತ್ತದೆ. ನಾನು ಒಂದು ದಿನ ಕೆಲಸ ಮಾಡದಿದ್ದರೆ, ಆ ದಿನದ ಸಂಬಳವನ್ನು ಕಳೆದುಕೊಳ್ಳುತ್ತೇನೆ,” ಎಂದು ಸಾರಮ್ಮ ಹೇಳುತ್ತಾರೆ. ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದರೂ, ಬ್ಯಾಂಕ್ ಖಾತೆಯನ್ನು ತೆರೆಯಲು ಕಾಗದಪತ್ರಗಳನ್ನು ಪೂರ್ಣಗೊಳಿಸಲು ಸಮಯ ಸಿಗುವುದಿಲ್ಲ ಎಂದು ಅವರು ಹೇಳುತ್ತಾರೆ. ಅಲ್ಲದೆ ಒಂದು ದಿನ ಕೆಲಸ ತಪ್ಪಿಸಿಕೊಂಡರೆ, “ತ್ಯಾಜ್ಯವು ಕೊಳೆಯುತ್ತದೆ ಮತ್ತು ಅದು ಎಲ್ಲರ ಮೇಲೂ ಪರಿಣಾಮ ಬೀರುತ್ತದೆ,” ಎಂದು ಅವರು ಹೇಳುತ್ತಾರೆ.


ಸಾರಮ್ಮ ಬೇಗನೆ ಮನೆಯಿಂದ ಹೊರಡುತ್ತಾಳೆ ಮತ್ತು ಅವರ ದಿನದ ಮೊದಲ ಊಟವೆಂದರೆ ಮಧ್ಯಾಹ್ನ 2 ಗಂಟೆಗೆ ಅಥವಾ ಅದರ ನಂತರ ಹಿಂದಿರುಗಿದಾಗ. ಮಧ್ಯಾಹ್ನದ ಊಟಕ್ಕೆ ಸಾಮಾನ್ಯವಾಗಿ ಹಿಂದಿನ ರಾತ್ರಿಯ ಅನ್ನ ಮತ್ತು ಸಾರು ಇರುತ್ತದೆ. “ನಾನು ಬೆಳಿಗ್ಗೆ ಕಪ್ಪು ಚಹಾವನ್ನು ಮಾತ್ರ ಸೇವಿಸುತ್ತೇನೆ. ಮನೆಗೆ ಬಂದು ಸ್ನಾನ ಮಾಡಿದ ನಂತರ ಏನನ್ನಾದರೂ ತಿನ್ನುತ್ತೇನೆ,” ಎಂದು ಅವರು ಹೇಳುತ್ತಾರೆ. ಬೆಳಗಿನ ತಿಂಡಿಗೆ ಅವರು ಸ್ಥಳೀಯ ಚಹಾ ಅಂಗಡಿಯಿಂದ ಒಂದು ಕಪ್ ಚಹಾ ಮತ್ತು ವಡೆ ಮಾತ್ರ ತಿನ್ನುತ್ತಾರೆ. ಏಕೆಂದರೆ ಬೆಳಗ್ಗೆ ತಿಮಡಿ ತಿನ್ನಲು ಅವರಿಗೆ ಸರಿಯಾಗಿ ಕೈ ತೊಳೆಯಲು ಸಾಧ್ಯವಾಗುವುದಿಲ್ಲ. ಕೆಲಸದಲ್ಲಿರುವಾಗ ನೀರನ್ನು ಮಾತ್ರ ಕುಡಿಯುತ್ತಾರೆ.

ಅವರು ವಾಸಿಸುವ ಪ್ರದೇಶವನ್ನು ಆಗಾಗ್ಗೆ ಅಕ್ರಮ ಮದ್ಯ, ಮಾದಕವಸ್ತುಗಳು, ಗೂಂಡಾಗಳು ಮತ್ತು ಅಪರಾಧಗಳಿಗೆ ಹೆಸರುವಾಸಿ ಸ್ಥಳವೆಂದು ಕರೆಯಲಾಗುತ್ತದೆ. ಆದರೆ ಕಳೆದ 20 ವರ್ಷಗಳಲ್ಲಿ ಬದಲಾವಣೆಗಳಾಗಿವೆ ಮತ್ತು ಆಹಾರ, ಮಲಗಲು ಸ್ಥಳ, ಧರಿಸಲು ಬಟ್ಟೆಗಳು ಮತ್ತು ಹಣದ ಅಗತ್ಯವಿರುವವರಿಗೆ ಈ ಕಾಲೋನಿ ಆಶ್ರಯವಾಗಿದೆ ಎಂದು ಸಾರಮ್ಮ ಹೇಳುತ್ತಾರೆ.

“ನಾನು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ, ಮಲಗಲು ಸ್ಥಳವಿರಲಿಲ್ಲ, ಆಹಾರವಿರಲಿಲ್ಲ, ಬಟ್ಟೆಗಳಿರಲಿಲ್ಲ. ನಾನು ವರಾಂಡಗಳಲ್ಲಿ ಮಲಗುತ್ತಿದ್ದೆ, ಬೆಳಿಗ್ಗೆ ಏಳುತ್ತಿದ್ದೆ, ಮದುವೆಯ ಸಭಾಂಗಣಗಳಿಗೆ ಹೋಗಿ ಅಲ್ಲಿಂದ ಉಚಿತ ಆಹಾರವನ್ನು ಪಡೆಯುತ್ತಿದ್ದೆ. ನಾನು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ,” ಎಂದು ಅವರು ಹೇಳುತ್ತಾರೆ. ತಾನು ಅನುಭವಿಸಿದ ಕಷ್ಟವನ್ನು ಬೇರೆ ಯಾರೂ ಅನುಭವಿಸಬಾರದೆಂದು, ಸಾರಮ್ಮನ ಮನೆಯ ಬಾಗಿಲುಗಳು ರಾತ್ರಿ 11 ಗಂಟೆಯವರೆಗೆ ತೆರೆದಿರುತ್ತವೆ, ಜನರಿಗೆ ಊಟ ಮಾಡಲು ಸಹಾಯ ಮಾಡುತ್ತಾರೆ. ಅವರು ಈ ಅಪರಿಚಿತ ಅತಿಥಿಗಳಿಗೆ ಅಡುಗೆ ಮಾಡುತ್ತಾರೆ, ಅವರಿಗೆ ಒಂದು ರಾತ್ರಿಯ ವಾಸ್ತವ್ಯದ ಅಗತ್ಯವಿದ್ದಲ್ಲಿ ಉಳಿಯಬಹುದು ಅಥವಾ ಕೊಳೆಗೇರಿಯ ಮಕ್ಕಳಿಗಾಗಿಯೂ.

“ನನ್ನ ಬಾಲ್ಯದಲ್ಲಿ ನಾನು ತೀವ್ರ ಬಡತನವನ್ನು ಎದುರಿಸಿದ್ದರಿಂದ ಯಾರೂ ಹಸಿವಿನಿಂದ ಬಳಲಬಾರದು ಎಂಬ ನಿಯಮವನ್ನು ನಾನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ. ನನ್ನ ಕುಟುಂಬವೂ ಇದನ್ನು ಅಭ್ಯಾಸ ಮಾಡುತ್ತದೆ,” ಎಂದು ಅವರು ತಮ್ಮ ಮಗಳು ಮತ್ತು ಸೊಸೆಯ ಬಗ್ಗೆ ಮಾತನಾಡುತ್ತಾರೆ. ಕುಟುಂಬವು ಪ್ರತಿದಿನ ಸುಮಾರು 2.5 ಕಿಲೋಗ್ರಾಂ ಅಕ್ಕಿಯ ಅನ್ನ ಬೇಯಿಸುತ್ತದೆ ಮತ್ತು 15 ದಿನಕ್ಕೆ ಒಂದು ಸಿಲಿಂಡರ್‌ ಖಾಲಿ ಮಾಡುತ್ತದೆ.

ಧನುಜಾ ಕುಮಾರಿ ಎಸ್. ಸಾರಮ್ಮ ಅವರ ಎರಡನೇ ಮಗಳು ಮತ್ತು 2014ರಲ್ಲಿ ಪ್ರಕಟವಾದ ಚೆಂಗಲ್ಚೂಲಾಯಿಲೆ ಎಂಟೆ ಜೀವಿದಮ್, (ಚೆಂಗಲ್ಚೂಲಾದಲ್ಲಿ ನನ್ನ ಬದುಕು) ಕೃತಿಯ ಲೇಖಕಿಯಾಗಿದ್ದಾರೆ. ಇದು ಒಂದು ಆತ್ಮಚರಿತ್ರೆ, ಇದು ಕೊಳೆಗೇರಿಯಲ್ಲಿ ಬೆಳೆದ ಧನುಜಾ ಅವರ ಅನುಭವದ ಬಗ್ಗೆ ಹೇಳುತ್ತದೆ. ತನ್ನ ಕುಟುಂಬವು ಎದುರಿಸಿದ ಜಾತಿ ತಾರತಮ್ಯ, ತನ್ನ ಇಬ್ಬರು ಮಕ್ಕಳಿಗೆ ಶಿಕ್ಷಣ ನೀಡುವ ಹೋರಾಟ ಮತ್ತು ಅಂಚಿನಲ್ಲಿರುವ ಸಮುದಾಯದಲ್ಲಿರುವುದರ ಕಷ್ಟಗಳನ್ನು ಅವರು ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಅವರು 10ನೇ ತರಗತಿಯನ್ನು ಮುಗಿಸಿದರೂ ಮತ್ತು ಮೂರು ಮುದ್ರಣ ಕಂಡ ಪುಸ್ತಕವನ್ನು ಹೊಂದಿರುವ ಸ್ಥಾಪಿತ ಲೇಖಕಿಯಾಗಿದ್ದರೂ ಸಹ ತನ್ನ ತಾಯಿಯೊಂದಿಗೆ ಕಸ ಸಂಗ್ರಹಣೆಯ ಕೆಲಸ ಮಾಡುತ್ತಾರೆ.

ನಿಮ್ಮ ಮಗಳು ಯಾಕೆ ಅದೇ ಕೆಲಸ ಮಾಡುತ್ತಿರುವುದು ಎಂದು ಸಾರಮ್ಮರನ್ನು ಕೇಳಿದಾಗ ವರು, “ದಲಿತರಿಗೆ ಯಾರು ಕೆಲಸ ಕೊಡುತ್ತಾರೆ?” ಎಂದು ಕೇಳುತ್ತಾರೆ. “ಇತರ ಜನರೊಂದಿಗೆ ಸಂಬಂಧದಲ್ಲಿ ನೀವು ಯಾರು ಎಂದು ಜನರು ಯಾವಾಗಲೂ ಪರಿಶೀಲಿಸುತ್ತಾರೆ. ನಾವು ಎಷ್ಟೇ ಜಾಣ್ಮೆಯಿಂದ ಕೆಲಸಗಳನ್ನು ಮಾಡಿದರೂ, ನಾವು ಏನೇ ಮಾಡಿದರೂ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಬದುಕು ಹೀಗೆ,” ಎಂದು ಅವರು ಹೇಳುತ್ತಾರೆ.

ನಾನು ಕಸ ಸಂಗ್ರಹಿಸುವ ಮೂಲಕ ಬದುಕುತ್ತಿದ್ದೇನೆ. ಅದರ ಬಗ್ಗೆ ನನಗೆ ಹೆಮ್ಮೆಯಿದೆ. ಇದು ಒಳ್ಳೆಯ ವಿಷಯ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. “ಆದರೆ ಮುಂದಿನ ಪೀಳಿಗೆಯು ಇದನ್ನು ಮಾಡಬಾರದು,” ಎಂದು ಅವರು ಹೇಳುತ್ತಾರೆ.

ಪರಿ’ಯ ಮುಖಪುಟಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ

Editor's note

ಆಯಿಷಾ ಜಾಯ್ಸ್ ಸೋನೆಪತ್‌ನ ಅಶೋಕ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು 2022ರಲ್ಲಿ ಪರಿಯೊಡನೆ ಇಂಟರ್ನ್‌ ಆಗಿ ಕೆಲಸ ಮಾಡಿದರು ಮತ್ತು ಸಾರಮ್ಮ ಅವರ ಕುರಿತು ವರದಿ ಮಾಡಲು ಬಯಸಿದರು. ಅವರು ಹೇಳುತ್ತಾರೆ, "ಧನುಜಾ ಅವರ ಜೀವನದ ಕುರಿತಾಗಿ ಆಗಾಗ್ಗೆ ವರದಿಯಾಗುತ್ತದೆ ಮತ್ತು ಪ್ರಸಾರವಾಗುತ್ತದೆ. ಧನುಜಾರನ್ನು ಬದುಕನ್ನು ಕಟ್ಟಿದ ವ್ಯಕ್ತಿಯ ಬಗ್ಗೆ ನಾನು ತಿಳಿದುಕೊಳ್ಳಲು ಬಯಸಿದೆ. ಅವರೇ ಧನುಜಾ ತಾಯಿ ಸಾರಮ್ಮ. ಪರಿ ವರದಿ ವಿಧಾನವು ಸರಿಯಾದ ಪ್ರಶ್ನೆಗಳನ್ನು ಕೇಳಲು ಮತ್ತು ವೈಯಕ್ತಿಕ ಅಭಿಪ್ರಾಯದ ಮಸೂರವಿಲ್ಲದೆ ಪತ್ರಿಕೋದ್ಯಮದ ಬಗ್ಗೆ ಯೋಚಿಸುವ ವಿಧಾನಗಳನ್ನು ಕಲಿಯಲು ನನಗೆ ಸಹಾಯ ಮಾಡಿತು."

ಅನುವಾದ: ಶಂಕರ ಎನ್. ಕೆಂಚನೂರು

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.