
ಮೊದಲನೇ ಲಾಕ್ಡೌನಿಗಿಂತ ಮುಂಚೆ ಓನೀಲರ ದಿನಚರಿ ಬೇರೆಯೇ ಇತ್ತು. “ಸೋಮವಾರ, ಬುಧವಾರ ಮತ್ತು ಶನಿವಾರದಂದು ಬಾಂದ್ರಾ ಕೋಜಿಯಂನಲ್ಲಿ ತರಬೇತಿ ನೀಡುತ್ತೇನೆ, ಉಳಿದ ದಿನಗಳು ದಕ್ಷಿಣ ಮುಂಬೈನ ಮರೀನ್ ಲೈನಿನ ಇಸ್ಲಾಮ್ ಜಿಮ್ಖಾನಾದಲ್ಲಿ. ಹತ್ತು ವರುಷಗಳಿಂದಲೂ ಇದೇ ನನ್ನ ಜೀವನ” ಎಂದರು 43 ವರ್ಷದ ಫುಟ್ಬಾಲ್ ತರಬೇತುದಾರ ಓನೀಲ್ ಕ್ಲಾರೆನ್ಸ್ ಕಾಳಿಚರಣ್.
ಕೋವಿಡ್- 19 ಮತ್ತು ನಂತರದ ಲಾಕ್ಡೌನುಗಳಿಂದ ದಿನಚರಿಯೂ ಬದಲಾಯಿತು. ಮಾರ್ಚಿ 25, 2020ರಿಂದ ಇದ್ದಕ್ಕಿದ್ದಂತೆ ಎಲ್ಲ ದೈಹಿಕ ಚಟುವಟಿಕೆಗಳನ್ನು ಸ್ತಬ್ದಗೊಳಿಸಿದ್ದರಿಂದ, ಫುಟ್ಬಾಲ್ ತರಬೇತಿಯನ್ನು ನಿಲ್ಲಿಸಿ ಜೀವನಕ್ಕಾಗಿ ಕುಟುಂಬದ ಕಸುಬಾದ ಮೀನು ಹಿಡಿಯಲು ಶುರು ಮಾಡಬೇಕಾಯಿತು.
“ಈ ಲಾಕ್ಡೌನಿನಿಂದಾಗಿ ದಿನಕ್ಕೆ ಮೂರು ಸಲವಾದರೂ ಮೀನು ಹಿಡಿಯಲು ಹೋಗದೆ ಉಪಾಯವಿರಲಿಲ್ಲ” ಓನೀಲ್ ಕ್ಲಾರೆನ್ಸ್ ಕಾಳಿಚರಣರನ್ನು ಭೇಟಿಯಾದಾಗ ಹೇಳಿದರು. ಒಂದರ ಮೇಲೊಂದು ಅದರ ಮೇಲೊಂದು ಅದರ ಹಿಂದೆ ಇನ್ನೊಂದು ಹೀಗೆ ಸವಾರಿ ಮಾಡುತ್ತಾ ಬರುತ್ತಿದ್ದ ಅಲೆಗಳು ‘ಮೇರಿ ಆಫ್ ನಜರೇತ್’ ಹೆಸರಿನ ಮರದ ದೋಣಿಗೆ ಬಡಿದು ಹಾರಿ ನೆಗೆದು ನೀರಾಗಿ ಹಿಂದೋಡುತ್ತಿದ್ದವು. ಬಾಂದ್ರಾದ ಅರೇಬಿಯನ್ ಸಮುದ್ರದ ದಡದಲ್ಲಿ ದೋಣಿಯನ್ನು ರಿಪೇರಿಗಾಗಿ ದಡಕ್ಕೆಳೆದು ಲಂಗರು ಹಾಕಲಾಗಿತ್ತು.
ಮುಂಬಯಿಯ ರಣವಾರ ಹಳ್ಳಿಯಲ್ಲಿ ಅಣ್ಣ 48 ವರುಷದ ಸಂಜಯ ಜೊತೆ ವಾಸವಾಗಿರುವ ಅವರ ಮೀನುಗಾರರ ವಠಾರದಲ್ಲಿನ ಮನೆಯ ಅಟ್ಟದ ಮೇಲೆ ಅರ್ಧ ಡಜನ್ ಫುಟ್ಬಾಲ್ ಟ್ರೋಫಿಗಳನ್ನು ಸಾಲಾಗಿ ಜೋಡಿಸಿಟ್ಟಿದ್ದರು. ಮನೆಯೆಂದರೆ ಒಂದು ಕೋಣೆಯ ಜೊತೆಗೆ ಇನ್ನೊಂದು ಅಡುಗೆ ಕೋಣೆ, ಜೊತೆಗೆ ಹಿಡಿದು ತಂದ ಮೀನುಗಳನ್ನಿಡಲು ಒಂದು ಸಣ್ಣ ಫ್ರಿಜ್ಜು ಅಷ್ಟೆ.


ಯೌವ್ವನದ ಆರಂಭದಲ್ಲಿ ಫುಟ್ಬಾಲಿನ ಕಡೆಗಿನ ಸೆಳೆತ ಎಷ್ಟು ಬಲವಾಗಿತ್ತು ಮತ್ತು ಸ್ಪಷ್ಟವಾಗಿತ್ತೆಂದರೆ 2000 ನೇ ಇಸವಿಯಲ್ಲಿ ತನ್ನ 16 ನೇ ವಯಸ್ಸಿಗೇ ‘ಬಾಂದ್ರಾ ಪ್ಯಾಕರ್ಸ್’ ಎನ್ನುವ ತನ್ನದೇ ಮಹಿಳಾ ಫುಟ್ಬಾಲ್ ತಂಡವನ್ನೇ ಕಟ್ಟಿದ್ದರು. ನಾಲ್ಕು ವರುಷಗಳ ನಂತರ ಕೇವಲ ತರಬೇತಿ ನೀಡುತ್ತಾ ಜೀವನ ಸಾಗಿಸಲು ಸಾಧ್ಯವಾಗದೇ ಹೋಯಿತು, ಕೊನೆಗೆ ಓನೀಲರು ಸ್ಟಾರ್ ಪ್ರೊಫೆಶನಲ್ಸಿನ ಸೌಂಡ್ ಡಿಪಾರ್ಟಮೆಂಟಿನಲ್ಲಿ ಕೆಲಸಕ್ಕೆ ಸೇರಿಕೊಂಡರು. “ಮೈಮುರಿಯುವಷ್ಟು ಕೆಲಸ, ಸಂಬಳ ಕಡಿಮೆ. ಆದರೂ ಹಣದ ಅವಶ್ಯಕತೆ ಇದ್ದುದರಿಂದ ನಾಲ್ಕು ವರುಷ ಅಲ್ಲೇ ಕೆಲಸ ಮಾಡಿದೆ. ಅಂತೂ ಕೊನೆಗೆ 2007 ರಲ್ಲಿ ಸರಿಯಾಗಿ ಮತ್ತು ಪೂರ್ಣಕಾಲಿಕವಾಗಿ ತರಬೇತಿಯನ್ನು ಆರಂಭಿಸಿದೆ,” ಎಂದು ನೆನಪಿಸಿಕೊಂಡರು.
ಅವರ ಫುಟ್ಬಾಲ್ ಚಳಕ ಮತ್ತು ತರಬೇತಿ ಕೌಶಲದಿಂದ ಇಸ್ಲಾಮ್ ಜಿಮ್ಖಾನಾದಲ್ಲಿ ಮತ್ತು ಬಾಂದ್ರಾದ ಬಾಂದ್ರಾ ಕೋಜಿಯಮ್ಮಿನಲ್ಲಿ ತರಬೇತುದಾರನ ಕೆಲಸ ಸಿಕ್ಕಿತು. ವಾರಪೂರ್ತಿ ಬಿಡುವಿಲ್ಲದ ಕೋಚಿಂಗಿನಿಂದ ತಿಂಗಳಿಗೆ ರೂ. 8000- ರೂ. 9000 ಗಳಿಸುವ ಅವರು “ಕೆಲಸದ ಒತ್ತಡವೇನೂ ಇರುವುದಿಲ್ಲ, ಖುಷಿಯಾಗಿದ್ದೇನೆ,” ಎನ್ನುತ್ತಾರೆ.
ಹುಡುಗನಾಗಿರುವಾಗಲೇ ಮನೆ ನಡೆಸಲು ಓನೀಲರು ಮಾಡದ ಕೆಲಸವಿಲ್ಲ. “ನಾನು ಕಣ್ಣು ಬಿಡುವ ಮೊದಲೇ ತಂದೆಯನ್ನು ಕಳೆದುಕೊಂಡಿದ್ದೆ; ತಂದೆಯ ಮುಖವನ್ನೇ ನಾನು ನೋಡಿಲ್ಲ,” ಎಂದರು. ತಾಯಿ ಮನೆಕೆಲಸ ಮಾಡುತ್ತಿದ್ದರು, 3-4 ಮನೆಗಳಲ್ಲಿ ಕೆಲಸ ಮಾಡಿ ತಿಂಗಳಿಗೆ ಸುಮಾರು ರೂ. 2,000 ಗಳಿಸುತ್ತಿದ್ದರು. 6 ನೇ ಕ್ಲಾಸಿನಲ್ಲಿರುವಾಗ ತಾಯಿಯ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ ಶಾಲೆಯನ್ನು ತೊರೆದು ಕೆಲಸ ಹುಡುಕಬೇಕಾಯಿತು.
1999ರಲ್ಲಿ 15ನೇ ವಯಸ್ಸಿನಲ್ಲಿ ಕಜೆ ಕೇಬಲ್ಸನ ಮಾಲೀಕನಾಗಿದ್ದ ಗೆಳೆಯನ ಬಳಿ ಕೆಲಸ ಮಾಡಲು ಆರಂಭಿಸಿದೆ. “ನನ್ನ ಗೆಳೆಯನು ಸೌಂಡ್ ಕೇಬಲ್ಲಿನ ಬಗ್ಗೆ ಸಂಪೂರ್ಣವಾಗಿ ಹೇಳಿಕೊಟ್ಟನು. ಆರಂಭದಲ್ಲಿ ತಿಂಗಳಿಗೆ ನನ್ನ ಸಂಬಳ 750 ಇತ್ತು, ಮುಂದೆ ಕಾಲಾಂತರದಲ್ಲಿ ತಿಂಗಳಿಗೆ ಎರಡರಿಂದ ಮೂರು ಸಾವಿರದವರೆಗೆ ಗಳಿಸಲಾರಂಭಿಸಿದೆ,” ಕೋಚ್ ಆಗುವ ಮೊದಲಿನ ಜೀವನದ ಬಗ್ಗೆ ಹೇಳುತ್ತಾ ಹೋದರು.



ಕಳೆದ 20 ತಿಂಗಳುಗಳಿಂದ, ಅದೃಶ್ಟದ ದಿನಗಳಲ್ಲಿ ಹೂ ಮೀನು, ಹಾವು ಮೀನು, ಮುಡಾರು, ತೇಡೆ, ಮುರು, ಏಡಿಗಳು ಸಿಕ್ಕಿದರೆ, ಮುಂಬಯಿಯ ಖರದಂಡೆಯ ಮಾರ್ಕೆಟ್ಟಿನಲ್ಲಿ ರೂ. 600- ರೂ. 800 ಸಿಗುತ್ತದೆ. ಕೆಲವೊಮ್ಮೆ ಕೇವಲ ರೂ. 200 – ರೂ. 300ಕ್ಕೆ ತೃಪ್ತಿಪಟ್ಟುಕೊಳ್ಳಬೇಕು. “ಎಷ್ಟು ಮೀನು ಸಿಗುತ್ತದೆ ಎಂದು ಹೇಳಲಾಗದು. ಹಾಗಾಗಿ ನಮ್ಮ ದುಡಿಮೆ ಯಾವಾಗಲೂ ಇಷ್ಟೇ ಇರುತ್ತದೆ ಎಂಬ ನಿಗಂಟಿಲ್ಲ” ಎಂದರು.
ಅಣ್ಣತಮ್ಮಂದಿರಿಬ್ಬರು ಸೇರಿ ಮೀನು ಹಿಡಿಯಲು ವಹನ ಪದ್ದತಿ ಎಂದು ಹೇಳುವ ಒಂದು ವಿಧಾನವನ್ನು ಅನುಸರಿಸುತ್ತಾರೆ: ಅಂದರೆ ಅರಬ್ಬೀ ಸಮುದ್ರದಲ್ಲಿ ಇಳಿತವಾದಾಗ, ಕಲ್ಲು ಮತ್ತು ಕಟ್ಟಿಗೆಯ ಸಹಾಯದಿಂದ ವೃತ್ತಾಕಾರದಲ್ಲಿ ಮೀನು ಸಿಕ್ಕಿಹಾಕಿಕೊಳ್ಳುವಂತೆ ನೈಲಾನ್ ಬಲೆಯನ್ನು ಕಟ್ಟುತ್ತಾರೆ, ನೀರು ಉಬ್ಬರವಾದಾಗ ಅಂದರೆ ಏರಿದಾಗ ನೀರಿನೊಡನೆ ಬಂದ ಮೀನುಗಳು ಬಲೆಯಲ್ಲಿ ಸಿಕ್ಕಿಕೊಳ್ಳುತ್ತವೆ. ಮತ್ತೆ ಸಮುದ್ರ ಇಳಿದಾಗ ಬಲೆಯನ್ನು ತೆಗೆಯುತ್ತಾರೆ.
ರೆಡ್ ಕಾರ್ಡು
ಓನೀಲ್ ಮತ್ತು ಅವರ ಅಣ್ಣನ ಜೀವನ ಲಾಕ್ಡೌನಿನ ನಂತರ ಮೇ 2021 ರವರೆಗೆ ಮುಂಬಯಿಗೆ ತೌಕ್ತೆ ಚಂಡಮಾರುತ ಅಪ್ಪಳಿಸುವತನಕ ಹೀಗೇ ನಡೆದಿತ್ತು. “ನಾವು ಈ ಹಿಂದೆ ಚಂಡಮಾರುತಗಳನ್ನು ಟಿವಿಯಲ್ಲಿ ನೋಡಿದ್ದೆವು, ಆದರೆ ಅದರ ನಿಜವಾದ ಅನುಭವವಾಗಿರಲಿಲ್ಲ, ಇದೇ ಮೊದಲು. ಬಾಂದ್ರಾದ ಕಟ್ಟೆಯ ಹತ್ತಿರದ ಮಾಹಿಮ್ ಬೀಚಿನ ಬಳಿ ದೋಣಿಯ ಎರಡೂ ಬದಿಯನ್ನು ಹಗ್ಗದಿಂದ ಕಟ್ಟಿ ಲಂಗರನ್ನೂ ಹಾಕಿ ಸುರಕ್ಷಿತವಾಗಿಯೇ ನಿಲ್ಲಿಸಿದ್ದೆವು. ಆದರೆ ಚಂಡಮಾರುತವು ಹಗ್ಗವನ್ನು ತುಂಡರಿಸಿತು, ಗಾಳಿಯು ದೋಣಿಯನ್ನು ಎತ್ತೊಯ್ದು ಬಂಡೆಗಳ ಮೇಲೆ ಎಸೆಯಿತು. ನಮ್ಮ ದೋಣಿ ಪುಡಿ ಪುಡಿಯಾಯಿತು”


ಕಳೆದ ಎಂಟು ತಿಂಗಳಿನಿಂದ ಅಣ್ಣತಮ್ಮಂದಿರಿಬ್ಬರಿಗೂ ಕೆಲಸವಿಲ್ಲ. ಓನೀಲ್ ಸದ್ಯಕ್ಕೆ ಮನೆ ಶುಚಿ ಮಾಡುವ, ಬಣ್ಣ ಹೊಡೆಯುವ ತರಹದ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾರೆ. ಕೋಚಿಂಗ್ ಶುರುವಾದರೂ ಆಟಗಾರರ ಸಂಖ್ಯೆ ತುಂಬಾ ಕಡಿಮೆಯಾಗಿರುವುದರಿಂದ ಸಿಗುವ ಆದಾಯವೂ ಕಡಿಮೆಯಾಗಿದೆ. “ಆರು ತಿಂಗಳವರೆಗೆ 2 ರಿಂದ 3 ವಿದ್ಯಾರ್ಥಿಗಳಿದ್ದರು. ಕಳೆದೆರಡು ತಿಂಗಳಿನಿಂದ ಒಬ್ಬರೂ ಇಲ್ಲದೆ ಸಂಪೂರ್ಣವಾಗಿ ಕೋಚಿಂಗ್ ನಿಂತುಹೋಗಿದೆ” ಎಂದರು.
ಒನೀಲ್ ಮತ್ತು ಅವರ ಅಣ್ಣನಿಗೆ ದೋಣಿಯು ಹಾಳಾಗಿದ್ದಕ್ಕಾಗಿ ಕೊಡಲಾಗುವ ಪರಿಹಾರವನ್ನೂ ಪಡೆಯಲಾಗಲಿಲ್ಲ, ಏಕೆಂದರೆ ಅವರ ಲೈಸನ್ಸ್ ದಾಖಲೆಗಳು ಸರಿಯಾಗಿರಲಿಲ್ಲ. “ಸರಕಾರದ ಪರಿಹಾರ ಅಥವಾ ಯಾವುದೇ ವಿಮಾ ಪರಿಹಾರ ಪಡೆಯಲು ದೋಣಿಯ ನೋಂದಣಿ ಸಂಖ್ಯೆಯ ಜೊತೆಗೆ ಇತರೆ ಪ್ರಮಾಣಪತ್ರಗಳು, ಮತ್ತು ವಿಮಾ ಪತ್ರ ಮಾಡಿಸಿಕೊಳ್ಳಬೇಕೆಂಬುದೇ ಬಹುಪಾಲು ಮೀನುಗಾರರಿಗೆ ಗೊತ್ತಿಲ್ಲ. ಆ ಪ್ರಮಾಣಪತ್ರಗಳಿಗೆ ವಾಯಿದೆ ಇರುತ್ತದೆ, ವಾಯಿದೆ ಮುಗಿಯುವ ಕಾಲಕ್ಕೆ ಮತ್ತೆ ಹೊಸತು ಮಾಡಿಸಿಕೊಳ್ಳಬೇಕು” ಎಂದರು ಅಲ್ಲಿಯೇ ಇದ್ದ ಓನೀಲರ ಮೀನು ಹಿಡಿಯುವ ಸಮುದಾಯದ ವ್ಯಕ್ತಿಯೊಬ್ಬರು (ಹೆಸರು ಹೇಳಬಯಸಲಿಲ್ಲ).
“ನೋಂದಣಿ ಸಂಖ್ಯೆಯನ್ನು ನವೀಕರಿಸಿಕೊಳ್ಳಬೇಕು ಎನ್ನುವುದೇ ನಮಗೆ ಗೊತ್ತಿರಲಿಲ್ಲ, ಅದು ಗೊತ್ತಾದಾಗ ತುಂಬಾ ಹೊತ್ತಾಗಿತ್ತು,” ಎಂದರು ಓನೀಲ್. “ನಮ್ಮನ್ನು, ನಾವು ಎದುರಿಸುತ್ತಿದ್ದ ಬವಣೆಯನ್ನು ನೋಡಿದವರು ನಮಗೆ ಸಹಾಯವನ್ನು, ಸ್ವಲ್ಪ ಹಣವನ್ನು ನೀಡಿದರು. ಕೆಲವರು ಬೇಳೆ, ಕಡಲೆಕಾಳು ಕೊಟ್ಟರು. ಆದರೆ ಮೀನುಗಾರರಾದ ನಾವು ದೋಣಿಯಿಲ್ಲದೆ ಬದುಕುವುದೆಂತು?” ಎಂದು ಕೇಳುತ್ತಾರೆ.
ಈಗ ಕೋಚ್ ಓನೀಲ್ ತಮ್ಮನ್ನು ಒಬ್ಬ ಮೀನುಗಾರರೆಂದು ಹೇಳಿಕೊಳ್ಳುತ್ತಾರೆ.
ಈ ವರದಿಯು ಕೋವಿಡ್ ಕಾಲದ ಜೀವಗಳು ಸರಣಿಯ ಒಂದು ಭಾಗವಾಗಿದೆ. ಸಂತ ಕ್ಸೇವಿಯರ್ ಕಾಲೇಜು (ಸ್ವಾಯತ್ತ) ಮುಂಬಯಿಯ ಪ್ರೊಫೆಸರುಗಳಾದ ಅಕ್ಷರ ಪಾಠಕ್-ಜಾಧವ್ ಮತ್ತು ಪೆರ್ರಿ ಸುಬ್ರಮಣಿಯಂರವರಿಗೆ ‘ಪರಿ ಶಿಕ್ಷಣ’ ತಂಡದಿಂದ ಧನ್ಯವಾದಗಳು.
ಪರಿ’ಯ ಮುಖಪುಟಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ
Editor's note
ರುತುಜಾ ಗೈದಾನಿ ಮತ್ತು ಸೃಷ್ಟಿ ಮುರಳಿ ಇಬ್ಬರೂ ಸಂತ ಕ್ಸೇವಿಯರ್ ಕಾಲೇಜು (ಸ್ವಾಯತ್ತ), ಮುಂಬಯಿ ಇಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಎರಡನೇ ವರುಷದ ವಿದ್ಯಾರ್ಥಿಗಳು. ‘ಪರಿ ಶಿಕ್ಷಣ’ದ ಸಹಯೋಗದಲ್ಲಿ ಕಾಲೇಜಿನ ಕೋರ್ಸಿನಲ್ಲಿ ಕೋವಿಡ್ ಕಾಲದ ಜೀವಗಳು ಸರಣಿಗಾಗಿ ಮುಂಬಯಿಯ ಬಾಂದ್ರಾದ ಮೀನುಗಾರ ಸಮುದಾಯದ ಮೇಲೆ ಕೋವಿಡ್ -19 ನಿಂದಾದ ಪರಿಣಾಮಗಳ ಬಗ್ಗೆ ಬರೆಯಲು ಆಯ್ಕೆ ಮಾಡಿಕೊಂಡಿದ್ದಾರೆ. “ಪರಿಯೊಂದಿಗಿನ ನಮ್ಮ ಒಡನಾಟದಲ್ಲಿ ನಮಗೆ ಅವರು ಕೇವಲ ಪತ್ರಿಕೆಗಳಿಗೆ ವರದಿ ಬರೆಯುವುದನ್ನು ಮಾತ್ರ ಕಲಿಸುತ್ತಾರೆ ಎಂದುಕೊಂಡಿದ್ದೆವು, ಆದರೆ ಅದಕ್ಕಿಂತಲೂ ಮೀರಿ ವಿಶೇಷವಾಗಿ ಜನರ ಧ್ವನಿಯನ್ನು ಬೆಳಕಿಗೆ ತರುವುದು ಹೇಗೆ ಎಂಬುದನ್ನು ಈಗ ಕಲಿತಿದ್ದೇವೆ” ಎನ್ನುತ್ತಾರೆ ರುತುಜಾ. ಮುಂದುವರೆದು ಸೃಷ್ಟಿಯವರು “ಪತ್ರಿಕೋದ್ಯಮವೆಂದರೆ ಸತ್ಯವನ್ನು ಹುಡುಕುವುದು ಎಂದು ಕಲಿತಿದ್ದವು – ಅದು ನಿಜ ಕೂಡ – ಆದರೆ ಅದರ ಜೊತೆ ಸುದ್ದಿಗಾಗಿ ಮಾಹಿತಿಯನ್ನು ಹುಡುಕುವುದರೊಂದಿಗೆ ಜನರ ಬಗ್ಗೆಯೂ ತಿಳಿದುಕೊಳ್ಳುವುದಾಗಿದೆ. ಕೇವಲ ನಮ್ಮ ದೃಷ್ಟಿಯಿಂದ ಮಾತ್ರವಲ್ಲದೇ ಬೇರೆಯವರ ದೃಷ್ಟಿಯಲ್ಲಿಯೂ ಜೀವನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಈ ಅನುಭವ ತುಂಬಾ ಉಪಯುಕ್ತವಾದುದು” ಎಂದರು.
ಅನುವಾದ: ಬಿ.ಎಸ್.ಮಂಜಪ್ಪ
ಬಿ.ಎಸ್. ಮಂಜಪ್ಪ ಇವರು ಒಬ್ಬ ಕನ್ನಡದ ಉದಯೋನ್ಮುಖ ಬರಹಗಾರ ಮತ್ತು ಅನುವಾದಕ.