ಈ ಕಥೆಯನ್ನು ಮೂಲತಃ ಬಾಂಗ್ಲಾ ಭಾಷೆಯಲ್ಲಿ ವರದಿ ಮಾಡಿ ಬರೆಯಲಾಗಿದೆ. ಪರಿ ಎಜುಕೇಶನ್ ಭಾರತದಾದ್ಯಂತದ ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರೊಂದಿಗೆ ಕೆಲಸ ಮಾಡುತ್ತದೆ. ಅವರು ತಮ್ಮ ಆಯ್ಕೆಯ ಭಾಷೆಯಲ್ಲಿ ನಮಗಾಗಿ ಬರೆಯುತ್ತಾರೆ, ಚಿತ್ರೀಕರಿಸುತ್ತಾರೆ ಹಾಗು ವರದಿ ಮಾಡುತ್ತಾರೆ.

ನನ್ನ ತಂದೆ, ಶಂಕರ್ ಮೊಂಡೊಲ್ ಮತ್ತು ನನ್ನ ಅಜ್ಜ ಸಂತೋಷ್ ಮೊಂಡೊಲ್ ಮೀನು ಸಾಕಣೆಗಾರರು. ನಮ್ಮ ಮನೆಯ ಸಮೀಪದಲ್ಲಿರುವ ಮೂರು ಕೊಳಗಳಲ್ಲಿ ವಿವಿಧ ರೀತಿಯ ಮೀನುಗಳನ್ನು ಸಾಕುತ್ತಾರೆ.

ನಾನು ಸೋನಾರ್‌ಪುರ್ ನಲ್ಲಿನ ಖೇದಾಹಾ ಬಳಿಯ ಕುಗ್ರಾಮವಾದ ಭೇಲೆಖಾಲಿಯಲ್ಲಿ ವಾಸಿಸುತ್ತೆನೆ. ನಾನು ದಾದು ಎಂದು ಕರೆಯುವ ನನ್ನ ಅಜ್ಜ, ಸಂತೋಷ್ ಮೊಂಡಲ್ ಅವರು ತಮ್ಮ ಬಾಲ್ಯದಲ್ಲಿ ಜೀವನೋಪಾಯಕ್ಕಾಗಿ ಅಕ್ಕಿ ಮಾರುತ್ತಿದ್ದರು. ಅವರು ಮೂವತ್ತರ ಹರೆಯದಲ್ಲಿದ್ದಾಗ, ಅವರು ಮತ್ತು ನನ್ನ ದಿದಾ [ಅಜ್ಜಿ], ಈಗ 66 ವರ್ಷ ವಯಸ್ಸಿನ ಡೆಬೊಲಾ ಮೊಂಡೊಲ್, ಭೇಲೆಖಾಲಿಯಿಂದ ಸ್ವಲ್ಪ ದೂರದಲ್ಲಿರುವ ದಿವಾಡ ಎಂಬ ಗ್ರಾಮದಲ್ಲಿನ ತಮ್ಮ ಮನೆಯಿಂದ ಸ್ಥಳಾಂತರಗೊಂಡರು. ಅವರು ಇಲ್ಲಿ ಭೂಮಿಯನ್ನು ಖರೀದಿಸಿ, ನಾವು ವಾಸಿಸುವ ಮನೆಯನ್ನು ನಿರ್ಮಿಸಿದರು – ಒಂದು ಸಣ್ಣ ಏಳರಿಂದ ಹತ್ತು ಅಡಿಯ ಮಣ್ಣಿನ ಮನೆ. ನಾವು ಪೌಂಡ್ರಾ ಸಮುದಾಯಕ್ಕೆ ಸೇರಿದವರು (ರಾಜ್ಯದ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿದೆ).

ದಾದು ಭೆಲೆಖಾಲಿಯಲ್ಲಿ ನಮ್ಮ ಮನೆಯ ಸುತ್ತ ಮೂರು ಮಾನವ-ನಿರ್ಮಿತ ಮೀನುಗಾರಿಕೆ ಕೊಳಗಳನ್ನು ಖರೀದಿಸಿದರು ಮತ್ತು ಮೀನು ಸಾಕಣೆ ವ್ಯವಹಾರವನ್ನು ಪ್ರಾರಂಭಿಸಿದರು. ನನ್ನ ತಂದೆ ಅವರೊಂದಿಗೆ ಸೇರಿಕೊಂಡರು. ಈಗ ನನ್ನ ತಾಯಿ ಬೈಶಾಖಿ ಮೊಂಡೊಲ್ ಜೊತೆಗೆ ಅದನ್ನು ನಿರ್ವಹಿಸುತ್ತಿದ್ದಾರೆ.

ಕೋಲ್ಕತ್ತಾದ ಪೂರ್ವಕ್ಕೆ, ಸುಂದರ್‌ಬನ್ಸ್‌ಗೆ ಹೊಂದಿಕೊಂಡ ಪ್ರದೇಶದಲ್ಲಿ, ಜೌಗು ಪ್ರದೇಶಗಳಿವೆ (ವೆಟ್‌ಲ್ಯಾಂಡ್)- 12,500 ಹೆಕ್ಟೇರ್ ಭೂಮಿ ನೀರು ಮತ್ತು ಒಳಚರಂಡಿ ಕೊಳಗಳಿಂದ ಆವೃತವಾಗಿದೆ, ಅಲ್ಲಿ ಮೀನುಗಳನ್ನು ಮಾರಾಟ ಮಾಡಲಾಗುತ್ತದೆ. ಈ ಪ್ರದೇಶವನ್ನು ಪೂರ್ವ ಕೋಲ್ಕತ್ತಾ ವೆಟ್ಲ್ಯಾಂಡ್ಸ್ (East Kolkata Wetlands) ಎಂದು ಗುರುತಿಸಲಾಗಿದೆ ಹಾಗು ದಕ್ಷಿಣ ಮತ್ತು ಉತ್ತರ 24 ಪರಗಣಗಳ ಜಿಲ್ಲೆಗಳಲ್ಲಿ ಸುಮಾರು 254 ಕೊಳಚೆನೀರಿನ ಮೀನುಗಾರಿಕೆಯನ್ನು ಹೊಂದಿದೆ. ಮೀನು ಸಾಕಣೆದಾರರು, ಮೀನುಗಾರರು ಮತ್ತು ರೈತರು ಈ ತ್ಯಾಜ್ಯನೀರಿನ ಆಹಾರದ ಜಲಚರಗಳ ವ್ಯವಸ್ಥೆಯಲ್ಲಿ ವಾಸಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ, ಇದು ಜಲಪಕ್ಷಿಗಳು ಮತ್ತು ಹೆಚ್ಚಿನ ಸಂಖ್ಯೆಯ ಸಸ್ಯ ಮತ್ತು ಪ್ರಾಣಿಗಳ ಆವಾಸಸ್ಥಾನವಾಗಿದೆ.

ತ್ಯಾಜ್ಯ ನೀರಿನ ಕಾಲುವೆಗಳಿಂದ ಸೀಮಿತ ಪ್ರಮಾಣದ ನೀರನ್ನು ಕಾಲಕಾಲಕ್ಕೆ ಮೀನಿನ ಕೊಳಗಳಿಗೆ ಬಿಡಲಾಗುತ್ತದೆ. ಕೊಳಚೆ ನೀರನ್ನು ಮೀನುಗಳ ಸಂತಾನೋತ್ಪತ್ತಿಗೆ ಪೋಷಕಾಂಶವೆಂದು ಪರಿಗಣಿಸಲಾಗುತ್ತದೆ. ಸಂತಾನೋತ್ಪತ್ತಿ ಪ್ರಾರಂಭವಾಗುವ ಮೊದಲು ಮೀನುಗಾರರು ಕೊಳದ ನೀರನ್ನು ಸುಣ್ಣದಿಂದ ಸಂಸ್ಕರಿಸುತ್ತಾರೆ.

ನನ್ನ ಬಾಬಾ [ತಂದೆ], ಶಂಕರ ಮೊಂಡಲ್, ತಾವು ಸಾಕಿದ ಹಾಗು ಹಿಡಿದ ಮೀನುಗಳನ್ನು ಬಂಟಲ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಅವರು ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದ ಮೀನುಗಳನ್ನು ಹಿಡಿಯಲು ಬಯಸಿದಾಗ, ದೊಡ್ಡ ಬಲೆಗಳನ್ನು ಬಳಸುತ್ತಾರೆ ಮತ್ತು ನನ್ನ ಹಳ್ಳಿಯ ಸುತ್ತಮುತ್ತಲಿನ ದಿನಗೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಾರೆ.

ಮುಂಜಾನೆ 4 ಗಂಟೆಗೆ ನಮ್ಮ ಮನೆಯ ಮುಂದಿರುವ ಖೇದಾಹಾ ರಸ್ತೆಯಲ್ಲಿ ನಡೆಯುವುದರ ಮೂಲಕ ಬಾಬಾರ ದಿನ ಪ್ರಾರಂಭವಾಗುತ್ತದೆ. ಹಿಂತಿರುಗಿ ಬಂದು ನನ್ನ ತಾಯಿ ಮಾಡಿದ ಚಹಾವನ್ನು ಸೇವಿಸಿ ನಂತರ ಅವರು ಕೊಳಗಳಲ್ಲಿ ಮೀನುಗಳನ್ನು ಪರೀಕ್ಷಿಸಲು ಹೋಗುತ್ತಾರೆ.

ಅಮ್ಮನಿಗೆ 32 ವರ್ಷ. ಅವರು ಅಡುಗೆ ಮತ್ತು ಇತರ ಮನೆಕೆಲಸಗಳನ್ನು ನೋಡಿಕೊಳ್ಳುತ್ತಾರೆ. ಈಗ ಕ್ರಮವಾಗಿ 72 ಮತ್ತು 66 ವರ್ಷ ವಯಸ್ಸಿನ ನನ್ನ ದಾದು ಮತ್ತು ದಿದಾರನ್ನು ನೋಡಿಕೊಳ್ಳುತ್ತಾರೆ. ದಿನದಲ್ಲಿ, ಅವರು ಮೀನುಗಳಿಗೆ ಆಹಾರವನ್ನು ತಯಾರಿಸಲು ಸಮಯವನ್ನು ಕಂಡುಕೊಳ್ಳುತ್ತಾಳರೆ – ಗೋಧಿ ಧಾನ್ಯಗಳನ್ನು ನೆನೆಸಿ ಅವುಗಳನ್ನು ಹುದುಗಿಸುವುದು, ಮೀನುಗಾರಿಕೆ ಉಪಕರಣಗಳು ಮತ್ತು ಕೊಳದ ದಡಗಳನ್ನು ಸ್ವಚ್ಛಗೊಳಿಸುವುದು.

ಮಧ್ಯಾಹ್ನದ ಸುಮಾರಿಗೆ, ನನ್ನ ತಂದೆ ಮೀನುಗಳಿಗೆ ಆಹಾರವನ್ನು ನೀಡುವುದನ್ನು ವೀಕ್ಷಿಸಲು ನಾನು ಹೋಗುತ್ತೇನೆ. ಅವರು ಹಿಡಿದ ಮೀನುಗಳನ್ನು ಒಂದು ದೊಡ್ಡ ಅಲ್ಯೂಮಿನಿಯಂ ಪಾತ್ರೆಯಲ್ಲಿ ಹಾಕಿ ಅದನ್ನು ತಮ್ಮ ಸೈಕಲ್ ಕ್ಯಾರಿಯರ್‌ಗೆ ಕಟ್ಟಿ, ಭದ್ರಪಡಿಸುತ್ತಾರೆ. ನಂತರ ಬಂಟಲ-ಸೋನಾರ್‌ಪುರ ಹೆದ್ದಾರಿಯಲ್ಲಿರುವ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮೂರು ಕಿಲೋಮೀಟರ್ ಪ್ರಯಾಣವನ್ನು ಸೈಕಲ್‌ನಲ್ಲಿ ಮಾಡುತ್ತಾರೆ. ಕೆಲವೊಮ್ಮೆ ಮನೆಗೆ ಕೆಲವು ಮೀನುಗಳನ್ನು ತರುತ್ತಾರೆ. ನನ್ನ ತಾಯಿ ತಿಲಾಪಿಯಾರ್ ಜೊಲ್ (ತಿಲಾಪಿಯಾ ಮೀನಿನ ಒಂದು ತಿನಿಸು), ಶೋಲ್ ಮಚರ್ ಕಾಲಿಯಾ (ಮುರ್ರೆಲ್ ಮೀನಿನಿಂದ ಮಾಡಿದ ಖಾರವಾದ ತಿನಿಸು), ಪಬ್ಡಾ ಮಚರ್ ಝಾಲ್ (ಸಾಸಿವೆ ರಸದಲ್ಲಿ ಮಾಡಿದ ಮೀನು) ನಂತಹ ರುಚಿಕರವಾದ ಅಡುಗೆಗಳನ್ನು ಮಾಡುತ್ತಾರೆ.

ನನ್ನ ಕುಟುಂಬವು ನಮ್ಮ ಮನೆಯ ಪಕ್ಕದ ಒಂದು ಸಣ್ಣ ತುಂಡು ಭೂಮಿಯಲ್ಲಿ – ಸರಿಸುಮಾರು 15 x 20 ಅಡಿ – ತರಕಾರಿಗಳನ್ನು ಬೆಳೆಸುತ್ತದೆ. ಅಮ್ಮನಿಗೆ ಸಸ್ಯಗಳ ಬಗ್ಗೆ ಸಾಕಷ್ಟು ತಿಳಿದಿದೆ. ನಮ್ಮಲ್ಲಿ ಬಾಳೆ, ಮಾವು, ಲಿಚಿ, ಹಲಸು, ನಿಂಬೆ, ಬೇವು, ತೆಂಗಿನಕಾಯಿ, ಪಪ್ಪಾಯಿ, ವಿವಿಧ ಎಲೆಗಳ ತರಕಾರಿಗಳು, ಸೋರೆಕಾಯಿ ಮತ್ತು ತುಳಸಿಯನ್ನು ಬೆಳೆಯುತ್ತಾರೆ. ನಮ್ಮಲ್ಲಿ ಟೊಮೆಟೊ ಮತ್ತು ಮೆಣಸಿನಕಾಯಿ ಗಿಡಗಳೂ ಇವೆ. ಇತ್ತೀಚೆಗೆ ಬಾಬಾ ನಮ್ಮ ಸೌತೆಕಾಯಿ ಬಳ್ಳಿಗಳು ಬೆಳೆಯಲು ಸಹಾಯವಾಗುವಂತೆ ಒಡೆದ ಬಿದಿರನ್ನು ಬಳಸಿದರು.

ನಮ್ಮಲ್ಲಿ ದಾಸವಾಳ ಮತ್ತು ಸಂಧ್ಯಾಮಣಿಯಂತಹ (ಮಿರಾಬಿಲಿಸ್ ಜಲಪ) ಹೂವಿನ ಗಿಡಗಳೂ ಇವೆ. ನನ್ನ ಮನೆಯ ಸುತ್ತಲೂ ಹಲವಾರು ಪಕ್ಷಿಗಳನ್ನು ಕಾಣಬಹುದು – ಕೊಕ್ಕರೆ ಮತ್ತು ನೀರುಕಾಗೆಗಳು ಇವೆ; ಕೊಕ್ಕರೆಗಳು ನಮ್ಮ ಕೊಳಗಳಲ್ಲಿನ ಮೀನುಗಳನ್ನು ಹುಡುಕಿಕೊಂಡು ಬರುತ್ತವೆ. ಕಾಗೆಗಳು, ಕೋಗಿಲೆ, ಗುಬ್ಬಚ್ಚಿಗಳು, ಗಿಳಿಗಳು ಮತ್ತು ಇತರೆ ಪಕ್ಷಿಗಳು ಸಹ ಇಲ್ಲಿ ಕಾಣಸಿಗುತ್ತವೆ.

ಸುಮಾರು 11 ಗಂಟೆಗೆ ಬಾಬಾ ಮೀನುಗಳಿಗೆ ಮಂಡಕ್ಕಿ ಅಥವಾ ನೆನೆಸಿದ ಗೋಧಿಯನ್ನು ನೀಡಲು ಸಂತಾನೋತ್ಪತ್ತಿ ನಡೆಸುವ ಕೊಳಕ್ಕೆ ಹಿಂತಿರುಗುತ್ತಾರೆ. ಅವರು ಅದೇ ಕೊಳದಲ್ಲಿ ಸ್ನಾನ ಮಾಡಿ, ನಿದ್ದೆ ಮಾಡಲು ಮನೆಗೆ ಬರುತ್ತಾರೆ. ಮಿಂಚುಳ್ಳಿ ಮತ್ತು ಕ್ರೇನ್‌ಗಳಂತಹ ಯಾವುದೇ ಪಕ್ಷಿಗಳು ನಮ್ಮ ಮೀನುಗಳನ್ನು ಬೇಟೆಯಾಡಲು ಬರುವುದಿಲ್ಲವೆಂದು ಖಚಿತಪಡಿಸಿಕೊಳ್ಳಲು ಅವರು ಮತ್ತೆ ಹೊರಡುತ್ತಾರೆ.

ಮೀನುಗಳನ್ನು ಕದಿಯುವುದನ್ನು ತಡೆಯಲು, ಬಾಬಾ ಒಂದು ಸಾಧನವನ್ನು ತಯಾರಿಸಿದ್ದಾರೆ – ಕೊಳದ ಉದ್ದಕ್ಕೂ ಚಾಚಿರುವ ಉದ್ದವಾದ ಹಗ್ಗಕ್ಕೆ ಮರದ ಫಲಕವನ್ನು ಜೋಡಿಸಿ ಅದಕ್ಕೊಂದು ಹಳೆಯ ತವರಿನ ತಗಡನ್ನು ತಲೆಕೆಳಗಾಗಿ ಕಟ್ಟಲಾಗಿದೆ. ಹಗ್ಗವನ್ನು ಎಳೆದಾಗ, ತವರವು ಜೋರಾಗಿ ಬಡಿಯುವ ಶಬ್ದವನ್ನು ಮಾಡುತ್ತದೆ. ಆ ಸದ್ದು ಪಕ್ಷಿಗಳನ್ನು ಓಡಿಸುತ್ತದೆ.

ಅವರು ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ಕೊಳದ ಬಳಿ ಹೋಗುತ್ತಾರೆ. “ಕಳ್ಳರು ಮೀನು ಕದಿಯಲು ಸಾಮಾನ್ಯವಾಗಿ ರಾತ್ರಿಯ ವೇಳೆ ಬರುತ್ತಾರೆ. ನನ್ನ ಮೀನು ಕಳುವಾದರೆ ನನಗೆ ಬಹಳ ದೊಡ್ಡ ನಷ್ಟ. ಹಾಗಾಗಿ ನಾನು ಹುಷಾರಾಗಿರಬೇಕು,” ಎನ್ನುತ್ತಾರವರು.

ಈ ವರ್ಷ ಅತಿ ಹೆಚ್ಚು ಮಳೆಯಾದಾಗ ಕೆಲವು ಮೀನುಗಳು ನಮ್ಮ ಹೊಂಡದಿಂದ ಕಾಲುವೆಗೆ ಹಾರಿಹೊದವು, ಇನ್ನು ಕೆಲವು, ನಾವು ಅವುಗಳನ್ನು ಮಾರಾಟ ಮಾಡುವ ಮೊದಲೇ ಕೊಳೆತುಹೋದವು. ಇದು ಕಷ್ಟದ ವರ್ಷವಾಗಿದೆ.

ಶಂಕರ್ ಮತ್ತು ಸಂತೋಷ್ ಸೋನಾರ್‌ಪುರ ಬ್ಲಾಕ್‌ನ ಖೇದಾಹಾ ಬಳಿಯ ಗ್ರಾಮವಾದ ಭೇಲೆಖಾಲಿಯಲ್ಲಿರುವ ತಮ್ಮ ಮನೆಯ ಸಮೀಪವಿರುವ ಮೂರು ಕೊಳಗಳಲ್ಲಿ ವಿವಿಧ ರೀತಿಯ ಮೀನುಗಳನ್ನು ಸಾಕುತ್ತಾರೆ. ಚಿತ್ರ: ರುಪ್ಸಾ ಮೊಂಡೊಲ್
ಶಂಕರ್ ಅವರು ಖಬ್ಲಾ ಜಾಲ್ ಎಂದೂ ಕರೆಯಲ್ಪಡುವ ಸಾಂಪ್ರದಾಯಿಕವಾದ ಮೀನುಗಾರಿಕೆಯ ಬಲೆಯನ್ನು ಕೊಳಕ್ಕೆ ಎಸೆಯುತ್ತಾರೆ. ಚಿತ್ರ:ರುಪ್ಸಾ ಮೊಂಡೊಲ್
ಶಂಕರ್ ಆ ದಿನ ಹಿಡಿದ ಮೀನುಗಳನ್ನು ಪರಿಶೀಲಿಸುತ್ತಾರೆ. ಚಿತ್ರ: ರುಪ್ಸಾ ಮೊಂಡೊಲ್
ಆ ದಿನ ಹಿಡಿದ ಸ್ಥಳೀಯ ಲೈಲೊನ್ಟಿಕ ಮೀನು. ಚಿತ್ರ: ರುಪ್ಸಾ ಮೊಂಡೋಲ್
ಶಂಕರ್ ಮತ್ತು ಅವರ ತಂದೆ ಸಂತೋಷ್ ಅವರು ಭೇಲೆಖಾಲಿಯಲ್ಲಿ ಮೀನು ಸಾಕಣೆ ಮಾಡುವ ಮೂರು ಮೀನುಗಾರಿಕಾ ಕೊಳಗಳಲ್ಲಿ ಒಂದು ಇದಾಗಿದೆ.  ಚಿತ್ರ: ರುಪ್ಸಾ ಮೊಂಡೊಲ್
ಉಳಿದ ಮೀನುಗಾರರು ಕೊಳದಿಂದ ತಮ್ಮ ಬಲೆಗಳನ್ನು ಎಳೆಯುತ್ತಿದ್ದಾರೆ. ಚಿತ್ರ: ರುಪ್ಸಾ ಮೊಂಡೊಲ್

ದಿ ಡಿಸಪಿಯರಿಂಗ್ ಡೈಲಾಗ್ಸ್ ಕಲೆಕ್ಟಿವ್ (dD), ಸಮುದಾಯಗಳೊಂದಿಗೆ ಮತ್ತು ಸಮುದಾಯಗಳ ಒಳಗೆ ಕೆಲಸ ಮಾಡುತ್ತದೆ. ಕಲೆ ಮತ್ತು ಸಂಸ್ಕೃತಿಯನ್ನು, ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು, ಸಂಭಾಷಣೆಗಳನ್ನು ಪ್ರಾರಂಭಿಸಲು ಮತ್ತು ಹೊಸ ನಿರೂಪಣೆಗಳನ್ನು ನಿರ್ಮಿಸಲು ಮಾಧ್ಯಮವನ್ನಾಗಿ ಬಳಸುತ್ತದೆ. ಅಸ್ತಿತ್ವದಲ್ಲಿರುವ ಪರಂಪರೆ, ಸಂಸ್ಕೃತಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಸಹಾಯ ಹಸ್ತ ನೀಡಿ ಮೌಲ್ಯಗಳನ್ನು ತುಂಬುವುದು ಇದರ ಉದ್ದೇಶವಾಗಿದೆ.

ಈ ಲೇಖನವು ಜೋಲ್-ಎ-ಭೂಮಿರ್ ಗೋಲ್ಪೋ ಓ ಕಥಾ | ಸ್ಟೋರೀಸ್ ಆಫ್ ದಿ ವೆಟ್‌ಲ್ಯಾಂಡ್, ಇದರ ಸಂಕಲನವಾಗಿದೆ.ಈ ಯೋಜನೆಯನ್ನು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್‌ ತಮ್ಮ ಆರ್ಕೈವ್ಸ್ ಮತ್ತು ಮ್ಯೂಸಿಯಮ್ಸ್ ಕಾರ್ಯಕ್ರಮದ ಅಡಿಯಲ್ಲಿ, ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಹಯೋಗದೊಂದಿಗೆ ಕಾರ್ಯಗತಗೊಳಿಸಲಾಗಿದೆ. ಗೋಥೆ-ಇನ್ಸ್ಟಿಟ್ಯೂಟ್/ಮ್ಯಾಕ್ಸ್ ಮುಲ್ಲರ್ ಭವನ, ನವದೆಹಲಿ, ಇವರ ಬೆಂಬಲದೊಂದಿಗೆ ಸಾಧ್ಯವಾಗಿದೆ.

Editor's note

ರುಪ್ಸಾ ಮೊಂಡಲ್ ಪಶ್ಚಿಮ ಬಂಗಾಳದ ಖೇದಾಹಾ ಹೈಸ್ಕೂಲ್‌ನ 7 ನೇ ತರಗತಿಯ ವಿದ್ಯಾರ್ಥಿನಿ. ತನ್ನ ತಂದೆಯ ಜೀವನವನ್ನು ಛಾಯಾಚಿತ್ರಗಳೊಂದಿಗೆ ದಾಖಲಿಸಲು ಅವಳು ಆಸಕ್ತಳಾಗಿದ್ದಳು. ಈ ತುಣುಕಿನ ಚಿತ್ರಗಳನ್ನು ಚಿತ್ರೀಕರಿಸಲು ರೂಪ್ಸಾ ಮೊಬೈಲ್ ಸ್ಮಾರ್ಟ್‌ಫೋನ್ ಬಳಸಿದ್ದಾಳೆ. "ನಾನು ನನ್ನ ಸ್ವಂತ ಪರಿಸರವನ್ನು ಆನಂದಿಸಲು ಮತ್ತು ಪ್ರಶಂಸಿಸಲು, ಹಾಗು ನನ್ನ ತಂದೆಯ ಕೆಲಸವನ್ನು ಗೌರವಿಸಲು ಸಾಧ್ಯವಾಯಿತು. ಹೊಸ ಕೌಶಲ್ಯಗಳನ್ನು ಕಲಿಯಲು ನನಗೆ ಅವಕಾಶ ಸಿಕ್ಕಿತು," ಎಂದು ಆಕೆ ಹೇಳುತ್ತಾಳೆ.

ಕನ್ನಡದಲ್ಲಿ: ಚೇತನ ವಾಗೀಶ್‌

ಚೇತನ ವಾಗೀಶ್‌ ಅವರಿಗೆ ಪರಿಸರ, ಶಿಕ್ಷಣ ಮತ್ತು ಸಾರ್ವಜನಿಕ ನೀತಿ ವಿಷಯಗಳಲ್ಲಿ ಅಪಾರ ಆಸಕ್ತಿ ಇದೆ. ಇವರು ಇತ್ತೀಚೆಗೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಿಂದ ಪರಿಸರ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ.