
ಕೇವಲ ಒಂದು ಜೊತೆ ಚಪ್ಪಲಿ ಧರಿಸಿ ಹರಿಶ್ಚಂದ್ರಗಡದ ಕೊಟೆಯ ದಾರಿಯಲ್ಲಿ ಹತ್ತಿಳಿಯುತ್ತಾರೆ 72 ವರ್ಷದ ಅನುಸೂಯ ಬಾಯಿ. ಈ ಕೋಟೆಯ ದಾರಿ ಸಾಧಾರಣ ದಾರಿಯಲ್ಲ. ಇದು ಏರು-ತಗ್ಗು ಕಲ್ಲುಮುಳ್ಳಿನ ಹಾದಿ. ಕಳೆದ ಒಂದು ದಶಕದಿಂದ, ಪಶ್ಚಿಮ ಘಟ್ಟಗಳಲ್ಲಿ 4,710 ಅಡಿ ಎತ್ತರದಲ್ಲಿರುವ ಈ ಕೋಟೆಯನ್ನು ಅವರು ಏರುತ್ತಿದ್ದಾರೆ. 2012ರಲ್ಲಿ ಕುಟುಂಬವು ಬೆಟ್ಟದ ತುದಿಯಲ್ಲಿ ಒಂದು ಉಪಾಹಾರ ಗೃಹವೊಂದನ್ನು ಸ್ಥಾಪಿಸಲು ನಿರ್ಧರಿಸಿದಾಗ ಅವರ ಈ ಪರ್ವತಾರೋಹಣದ ಪಯಣ ಪ್ರಾರಂಭವಾಯಿತು. ಈ ಬೆಟ್ಟದ ತುದಿಗೆ ಏರಲು ಇರುವ ಏಕೈಕ ದಾರಿಯೆಂದರೆ 60-80 ಡಿಗ್ರಿಗಳ ಕೊರಕಲು ಮತ್ತು ಕಲ್ಲುಗಳಿಂದ ಕೂಡಿದ ಹಾದಿ. ಈ ದಾರಿಯ ಒಂದು ಬದಿಯ ಪ್ರಯಾಣ ಮೂರು ಕಿಲೋಮೀಟರ್ ಇದ್ದು ದಾರಿ ಮೂರು ಗಂಟೆಗಳ ಕಾಲ ಹಿಡಿಯುತ್ತದೆ.
ನಂತರ ಅನುಸೂಯ ಬಾಯಿಯವರ ಕುಟುಂಬವು ಹೆಚ್ಚುತ್ತಿರುವ ಪ್ರವಾಸಿಗರ ದಟ್ಟಣೆಯ ಫಾಯಿದೆ ಪಡೆಯುವ ಸಲುವಾಗಿ ಬಯಲು ಪ್ರದೇಶದ ಕೆಳಗೆ ಒಂದು ಹೋಂಸ್ಟೇಯನ್ನು ಸಹ ಸ್ಥಾಪಿಸಿತು. ಇಂದು ಅನುಸೂಯಾಬಾಯಿ ಚಾರಣ ಸಮುದಾಯದಲ್ಲಿ ಹೆಸರುವಾಸಿಯಾಗಿದ್ದಾರೆ, ಅವರ ಪರ್ವತಾರೋಹಣ ಕೌಶಲ್ಯ ಮತ್ತು ಅವರು ಎರಡೂ ಸ್ಥಳಗಳಲ್ಲಿ ಬಡಿಸುವ ಮನೆಯ ರುಚಿ ಹೊಂದಿರುವ ಆಹಾರಕ್ಕಾಗಿ.



“ಜನರು ನಿನಗೆ ಶೂ ಬೇಕೆ ಎಂದು ಕೇಳುತ್ತಾರೆ. ಆದರೆ ನನಗೆ ಚಪ್ಪಲಿಯೇ ಆರಾಮ ಎನ್ನಿಸುತ್ತದೆ,” ಎನ್ನುತ್ತಾರೆ ಅನುಸೂಯ ಬದಾದ್. ಅವರು ಸಾಂಪ್ರದಾಯಿಕ ಮಹಾರಾಷ್ಟ್ರದ ನೌವರಿ (ಒಂದೇ ಒಂಬತ್ತು ಯಾರ್ಡ್ ಬಟ್ಟೆಯಿಂದ ಮಾಡಿದ ಸೀರೆ) ಸೀರೆ ಉಡುತ್ತಾರೆ. ಸಾಮಾನ್ಯವಾಗಿ ಅವರು ಈ ದಾರಿಯಲ್ಲಿ ನಡೆಯುವಾಗ ಒಬ್ಬ ಸಹಾಯಕನನ್ನು ಜೊತೆಯಲ್ಲಿ ಕರೆದುಕೊಳ್ಳುತ್ತಾರೆ. ಅವರೊಡನೆ ಬೆಟ್ಟದ ಮೇಲಿನ ಉಪಹಾರ ಗೃಹಕ್ಕೆ ಬೇಕಾದ ದಿನಸಿ ಪದಾರ್ಥಗಳನ್ನು ಒಯ್ಯುತ್ತಾರೆ. ಈ ಹೋಟೆಲ್ ಎನ್ನುವುದು ಬೆಟ್ಟದ ಮೇಲೆ ಬರುವವರಿಗೆ ಸ್ವಾಗತ ಕೋರುವ ಮತ್ತು ಊಟ ನೀಡುವ ಏಕೈಕ ತಾಣವಾಗಿದೆ.
ಅವರ ಈ ಜನಪ್ರಿಯ ಹೋಟೆಲ್ ಎನ್ನುವುದು ಮಣ್ಣು ಮತ್ತು ಮರದ ಕೋಲುಗಳನ್ನು ಬಳಸಿದ ರಚನೆ. ಈ ದುರ್ಬಲ ರಚನೆಯು ಪ್ರತಿ ಮಳೆಗಾಲದಲ್ಲೂ ಬಿದ್ದು ಹೋಗುತ್ತದೆ. ಮಳೆಗಾಲ ಮುಗಿದ ನಂತರ ಮತ್ತೆ ಹೋಟೆಲ್ ನಿರ್ಮಾಣ ಮಾಡುತ್ತಾರೆ. “ಮಳೆ ಯಾವ ಸಮಯದಲ್ಲಿ ವಿಪರೀತವಾಗುತ್ತದೆಯೆನ್ನುವುದು ನಮಗೆ ತಿಳಿದಿದೆ. ಹೀಗಾಗಿ ನಾವು ಮೊದಲೇ ಹೋಟೆಲ್ ಮುಚ್ಚಿಬಿಡುತ್ತೇವೆ. ಇದರಿಂದ ನಮ್ಮ ಅತಿಥಿಗಳು ಸುರಕ್ಷಿತವಾಗಿರುತ್ತಾರೆ,” ಎಂದು ಅನುಸೂಯಾಬಾಯಿ ಹೇಳುತ್ತಾರೆ. ಹೋಟೆಲ್ಲಿನ ಪುನರ್ನಿರ್ಮಾಣದ ಪ್ರಕ್ರಿಯೆಯು ಸುಮಾರು ಎರಡು ವಾರಗಳನ್ನು ತೆಗೆದುಕೊಳ್ಳುತ್ತದೆ.
ಈ ಕುಟುಂಬದ ಮತ್ತೊಂದು ಪ್ರವಾಸಿ ಸಂಸ್ಥೆ ಹರಿಶ್ಚಂದ್ರಗಡ ಬೆಟ್ಟದ ತಪ್ಪಲಿನಲ್ಲಿರುವ ಹೋಂಸ್ಟೇ ಆಗಿದೆ. ಇದು ಅಹ್ಮದ್ ನಗರ್ ಜಿಲ್ಲೆಯ ಅಕೋಲಾ ಬ್ಲಾಕ್ ಪಚನೈ ಎಂಬ ಹಳ್ಳಿಯಲ್ಲಿದೆ, ಇದರ ಒಂದು ಬದಿಯಲ್ಲಿ ಕೋಟೆ ಮತ್ತು ಇನ್ನೊಂದು ಬದಿ ಅರಣ್ಯ ಸುತ್ತುವರೆದಿದೆ.


ಹರಿಶ್ಚಂದ್ರಗಡ ಕೋಟೆಯು 6ನೇ ಶತಮಾನಕ್ಕೆ ಸೇರಿದ್ದು ಎನ್ನಲಾಗುತ್ತದೆ ಮತ್ತು ಇದು ಈ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. “ಜುಲೈನಿಂದ ಡಿಸೆಂಬರ್ ತಿಂಗಳವರೆಗಿನ ಋತುವಿನಲ್ಲಿ ಪ್ರತಿ ವಾರಾಂತ್ಯದಲ್ಲಿ ಸುಮಾರು 100-150 ಪ್ರವಾಸಿಗರು ಆಹಾರಕ್ಕಾಗಿ ನಮ್ಮೊಂದಿಗೆ ಸೇರುತ್ತಾರೆ. ವರ್ಷದ ಈ ಸಮಯದಲ್ಲಿ ಜನರು ಸಾಹಸ ಕ್ರೀಡೆಗಳು ಮತ್ತು ಜಲಪಾತದ ಋತುವನ್ನು ಆನಂದಿಸಲು ಬರುತ್ತಾರೆ,” ಎಂದು ಅನುಸೂಯ ಬಾಯಿ ಹೇಳುತ್ತಾರೆ, ಅವರು ವಾರಾಂತ್ಯದಲ್ಲಿ ಚಾರಣ ಮಾಡಿ ಪ್ರವಾಸಿಗರ ಸೇವೆ ಮಾಡುತ್ತಾರೆ. “ಮಾರ್ಚ್ ತಿಂಗಳು ಕೋಟೆಗೆ ಭೇಟಿ ನೀಡಲು ಉತ್ತಮ ಸಮಯ. ಅದರ ನಂತರ, ಯಾವುದೇ ಸಂದರ್ಶಕರು ಇರುವುದಿಲ್ಲ,” ಎಂದು ಅವರು ಹೇಳುತ್ತಾರೆ.
ಹಳ್ಳಿಯ ಹೆಚ್ಚಿನ ಮನೆಗಳು ಹುಲ್ಲು ಮತ್ತು ಇಟ್ಟಿಗೆಯಿಂದ ಕಟ್ಟಲ್ಪಟ್ಟಿದ್ದ ಹಸುವಿನ ಸಗಣಿಯಿಂದ ಪ್ಲಾಸ್ಟರ್ ಮಾಡಲ್ಪಟ್ಟಿವೆ. ಒಂದೇ ಬಲ್ಬ್ ಬದಾದ್ ಅವರ ಮನೆಯ ಅಡುಗೆ ಮನೆ ಮತ್ತು ತೊಳೆಯುವ ಪ್ರದೇಶವನ್ನು ಬೆಳಗಿಸುತ್ತದೆ, ಇದು ಮಣ್ಣಿನ ರಚನೆಯಾಗಿದೆ. ಈ ಮನೆ ಸಿಮೆಂಟ್ ರಚನೆಯ ವಿಸ್ತರಣೆಯನ್ನು ಹೊಂದಿದೆ, ಅಲ್ಲಿ ಅವರು ಆಹಾರವನ್ನು ಬಡಿಸುತ್ತಾರೆ ಮತ್ತು ಅತಿಥಿಗಳು ರಾತ್ರಿಯಿಡೀ ಅಲ್ಲಿ ನಿದ್ರೆ ಮಾಡಬಹುದು. ಮಧ್ಯಾಹ್ನದ ಊಟದ ಬೆಲೆ ರೂ. 150 ಮತ್ತು ಈ ಬೆಲೆಗೆ ತರಕಾರಿ ಪಲ್ಯಗಳು, ಅನ್ನ, ಬೇಳೆ ಮತ್ತು ಉಪ್ಪಿನಕಾಯಿಯೊಂದಿಗೆ ನೀವು ತಿನ್ನುವಷ್ಟು ಚಪಾತಿಗಳನ್ನು ನೀಡಲಾಗುತ್ತದೆ. ಖರ್ಚುವೆಚ್ಚಗಳನ್ನು ಕಳೇದು ಕುಟುಂಬವು ವಾರಕ್ಕೆ ಸುಮಾರು 5,000ದಿಂದ 8,000 ರೂ.ಗಳನ್ನು ಗಳಿಸುತ್ತದೆ.
ಅದು ಆಗಸ್ಟ್ ತಿಂಗಳು, ಅಂದು ಉತ್ಸಾಹಿ ಚಾರಣಿಗರಿಂದ ತುಂಬಿದ ಬಸ್ ಮಧ್ಯರಾತ್ರಿಯ ನಂತರ ಬೆಟ್ಟದ ಕೆಳಗಿರುವ ಹೋಂ ಸ್ಟೇಯಲ್ಲಿರುವ ಪಾರ್ಕಿಂಗ್ ಪ್ರದೇಶಕ್ಕೆ ಬಂದು ನಿಂತಿತು. ಆಯಿಯ ಹಿರಿಯ ಮಗ ಭಾಸ್ಕರ್ ಬದಾದ್, ಚಾರಣಿಗರನ್ನು ಸ್ವಾಗತಿಸಲು ಮತ್ತು ಕತ್ತಲೆಯಲ್ಲಿ ಮಾರ್ಗದರ್ಶನ ನೀಡಲು ಬಾಗಿಲ ಬಳಿಗೆ ಓಡುತ್ತಾರೆ, ಅವರ ಸಾಮಾನು ಸರಂಜಾಮುಗಳನ್ನು ಇಳಿಸಲು, ಅವರ ಬೂಟುಗಳನ್ನು ತೆಗೆಯಲು ಮತ್ತು ಮನೆ-ಕಮ್-ಹೋಟೆಲ್‌ಗೆ ಪ್ರವೇಶಿಸಲು ವಾಹನವನ್ನು ಎಲ್ಲಿ ನಿಲ್ಲಿಸಬಹುದು ಎಂದು ಹೇಳುತ್ತಾರೆ. ಅವರ ಕಿರಿಯ ಸೊಸೆ ಆಶಾ ಚಾರಣಿಗರಿಗೆ ಕುಳಿತುಕೊಳ್ಳಲು ಚಾಪೆಗಳನ್ನು ಹರಡಲು ಸಹಾಯ ಮಾಡುತ್ತಾರೆ, ಒಂದು ಮಡಕೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಗುಂಪಿಗೆ ಬಿಸಿ ಚಹಾವನ್ನು ಸಿದ್ಧಗೊಳಿಸುತ್ತಾಳೆ. ಚಾರಣಿಗರು ನೆಲೆಸುತ್ತಿದ್ದಂತೆ, ಅನುಸೂಯ ಬಾಯಿಯ ಪತಿ ನಾಥು ಬದಾದ್ ಅವರನ್ನು ಸಂಭಾಷಣೆಯಲ್ಲಿ ತೊಡಗಿಸಿ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ, ಆದರೆ ಭಾಸ್ಕರ್ ಉಪಾಹಾರವನ್ನು ಬಡಿಸಲು ಸಹಾಯ ಮಾಡುತ್ತಾರೆ, ಅದು ಸಾಮಾನ್ಯವಾಗಿ ಅವಲಕ್ಕಿಯಾಗಿರುತ್ತದೆ. “2011-12ರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ,” ಎಂದು ಭಾಸ್ಕರ್ ಹೇಳುತ್ತಾರೆ.
ಅವರ ಪಾಲಿನ ವಾರಾಂತ್ಯಗಳು ಎರಡು ಉಪಾಹಾರ ಗೃಹಗಳನ್ನು ನಡೆಸುವುದರ ಮೂಲಕ ಕಳೆದು ಹೋಗುತ್ತದೆ ಆದರೆ ವಾರದಲ್ಲಿ, ಅನುಸೂಯ ಬಾಯಿ ಮತ್ತು ಅವರ ಕುಟುಂಬವು ತಮ್ಮ 2.5 ಎಕರೆ ಭತ್ತವನ್ನು ಬೆಳೆಯುವ ಜಮೀನಿನಲ್ಲಿ ಕೆಲಸ ಮಾಡುತ್ತದೆ. “ಈ ಮೊದಲು ನಾವು ಕೇವಲ ನಾಲ್ಕರಿಂದ ಐದು ಚೀಲ ಅಕ್ಕಿಯನ್ನು ಪಡೆಯುತ್ತಿದ್ದೆವು. ಇಂದು, ಹೆಚ್ಚಿದ ಶ್ರಮ ಮತ್ತು ಹೈಬ್ರಿಡ್ ಬೀಜಗಳ ಬಳಕೆಯಿಂದ, ನಾವು ನಮ್ಮ ಭೂಮಿಯಿಂದ 20-30 ಚೀಲ ಅಕ್ಕಿಯನ್ನು ಕೊಯ್ಲು ಮಾಡಲು ಸಾಧ್ಯವಾಗುತ್ತದೆ. ಈ ಸುಗ್ಗಿಯ ಬಹುಭಾಗವನ್ನು ಚಾರಣಿಗರಿಗೆ ಸೇವೆ ಸಲ್ಲಿಸಲು ಬಳಸಲಾಗುತ್ತದೆ,” ಎಂದು 40 ವರ್ಷದ ಭಾಸ್ಕರ್ ಹೇಳುತ್ತಾರೆ. ಕುಟುಂಬವು ಉಳಿದದ್ದನ್ನು ತಮ್ಮ ಸ್ವಂತ ಬಳಕೆಗಾಗಿ ಇಟ್ಟುಕೊಳ್ಳುತ್ತದೆ.


ವಾರಾಂತ್ಯದ ಅತಿಥಿಗಳಿಗೆ ಸಾಮಗ್ರಿಗಳನ್ನು ಸಂಗ್ರಹಿಸಲು, ಅನುಸೂಯ ಬಾಯಿ ಸೋಮವಾರ ಮತ್ತು ಗುರುವಾರ ಭಾಸ್ಕರ್ ಅವರೊಂದಿಗೆ ರಾಜೂರಿಗೆ ಪ್ರಯಾಣಿಸುತ್ತಾರೆ. ರಾಜೂರ್ ಪಚನೈಗೆ ಹತ್ತಿರದ ನಗರವಾಗಿದೆ ಮತ್ತು ರಸ್ತೆಗಳು ಗುಂಡಿಗಳಿಂದ ತುಂಬಿವೆ. “ಇವೆರಡರ ನಡುವಿನ ಅಂತರವು ಕೇವಲ 25 ಕಿಲೋಮೀಟರುಗಳಷ್ಟಿದೆ, ಆದರೆ ಮೋಟಾರುಬೈಕ್ ಮೂಲಕ ಅಲ್ಲಿಗೆ ತಲುಪಲು ನಮಗೆ ಒಂದೂವರೆ ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ,” ಎಂದು ಭಾಸ್ಕರ್ ಹೇಳುತ್ತಾರೆ.
ಪಚನೈ ಗ್ರಾಮದಲ್ಲಿ ಸುಮಾರು 155 ಕುಟುಂಬಗಳು ಮತ್ತು 700 ಜನಸಂಖ್ಯೆಯಿದೆ, ಆದರೆ ನಿವಾಸಿಗಳು ಇಲ್ಲಿ ನಾಗರಿಕ ಸೌಲಭ್ಯಗಳ ಕೊರತೆಯಿದೆ ಎಂದು ಹೇಳುತ್ತಾರೆ, ಪಿಡಿಎಸ್ ಪಡಿತರ ಸಹ ಬರುವುದಿಲ್ಲ. “ನಮ್ಮ ಗ್ರಾಮವು ಬಹಳ ಹಿಂದೆಯೇ ಸರ್ಕಾರಿ ಪಡಿತರವನ್ನು ಪಡೆಯುವುದನ್ನು ನಿಲ್ಲಿಸಿತು,” ಎಂದು ಅನುಸೂಯ ಬಾಯಿ ಹೇಳುತ್ತಾರೆ. ಆದ್ದರಿಂದ ಗ್ರಾಮಸ್ಥರು ತಾವೇ ಕೆಲಸಗಳನ್ನು ಕೈಗೆತ್ತಿಕೊಂಡರು. ಸ್ಥಳೀಯ ಬಾವಿಯ ನೀರು ಕುಡಿಯಲು ಅಯೋಗ್ಯವಾದಾಗ, “ಚಾರಣಕ್ಕಾಗಿ ಹಳ್ಳಿಯನ್ನು ಪ್ರವೇಶಿಸಿದ ಪ್ರತಿ ವಾಹನಕ್ಕೆ ಒಂದರಿಂದ ಎರಡು ರೂಪಾಯಿಗಳ ಸಣ್ಣ ಕಮಿಷನ್ ನಾವು ಸಂಗ್ರಹಿಸಿದೆವು ಮತ್ತು ಈ ಹಣವನ್ನು ಹತ್ತಿರದ ಜಲಪಾತದ ಬುಡಕ್ಕೆ ಹೊಂದಿಕೊಳ್ಳುವಂತೆ ಮೋಟಾರ್ ಮತ್ತು ಪೈಪುಗಳನ್ನು ಖರೀದಿಸಲು ಬಳಸಿದೆವು,” ಎಂದು ನಾಥು ಹೇಳುತ್ತಾರೆ. ಇತ್ತೀಚೆಗೆ, ಅರಣ್ಯ ಇಲಾಖೆಯಿಂದ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ.
ಅನುಸೂಯ ಬಾಯಿ ನೆರೆಯ ಕೊತಲೆಯಲ್ಲಿ ಜನಿಸಿದರು. 16ನೇ ವಯಸ್ಸಿನಲ್ಲಿ ನಾಥು ಅವರನ್ನು ಮದುವೆಯಾಗಿ ಪಚನೈಯಲ್ಲಿರುವ ಅವರ ಮನೆಗೆ ಹೋದರು. ಅವರಲ್ಲಿ ಕೆಲವರು ಉತ್ತಮ ಅವಕಾಶಗಳನ್ನು ಹುಡುಕಿಕೊಂಡು ನಗರಗಳಿಗೆ ಹೋಗುವುದರೊಂದಿಗೆ ದೊಡ್ಡ ಕುಟುಂಬವು ವಿಭಜನೆಗೊಳ್ಳಲು ಪ್ರಾರಂಭಿಸಿತು. “ಆಯಿ ನಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ದಿನಗೂಲಿ ಕೃಷಿ ಕಾರ್ಮಿಕರಾಗಿ ದುಡಿಯಲು ನೆರೆಯ ಗ್ರಾಮವಾದ ನಾರಾಯಣಗಾಂವ್‌ಗೆ ಪ್ರಯಾಣಿಸುತ್ತಿದ್ದರು, 12 ಗಂಟೆಗಳ ಕೆಲಸಕ್ಕಾಗಿ 40-50 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು,” ಎಂದು ಭಾಸ್ಕರ್ ತಮ್ಮ ಉಪಾಹಾರ ಗೃಹಗಳ ಹಿಂದಿನ ಜೀವನದ ಬಗ್ಗೆ ನೆನಪಿಸಿಕೊಳ್ಳುತ್ತಾರೆ.


ಚಾರಣ ಸಮುದಾಯದವರು ಹರಿಶ್ಚಂದ್ರಗಡವನ್ನು ಕಷ್ಟಕರವಾದ ಚಾರಣ ತಾಣವೆಂದು ಪರಿಗಣಿಸುತ್ತಾರೆ. ಇದು ದೊಡ್ಡ ಬಂಡೆಗಳನ್ನು ಹೊಂದಿರುವ ಕಡಿದಾದ ಪ್ರದೇಶವಾಗಿದೆ ಮತ್ತು ಇದಕ್ಕೆ ಯಾವುದೇ ಮೆಟ್ಟಿಲುಗಳಿಲ್ಲ; ಜಲಪಾತದ ಕೆಳಗೆ ಜಾರುವ ಜಾಗಗಳು ಅಪಾಯವನ್ನು ಹೆಚ್ಚಿಸುತ್ತವೆ. ಹಾದಿಯ ಕೆಲವು ಭಾಗಗಳಲ್ಲಿ ಚೀಲಗಳನ್ನು ತೆಗೆದು ನಾಲ್ಕು ಕಾಲಿನ ಮೇಲೆ ತೆವಳಬೇಕಾದ ಅಗತ್ಯವಿರುತ್ತದೆ, ಆದರೆ ಆಯಿ ತನ್ನ ತಲೆಯ ಮೇಲೆ ಹೊರೆಯನ್ನು ಹೊತ್ತುಕೊಂಡು ಇಡೀ ಬೆಟ್ಟದ ಆರೋಹಣವನ್ನು ನೇರವಾಗಿ ನಿರ್ವಹಿಸಬಲ್ಲರು.
ಈ ವರ್ಷದ ಆರಂಭದಲ್ಲಿ, ಅನುಸೂಯ ಬಾಯಿ ಕೋಟೆಯ ಕೋಕಂಕಡ ಶಿಖರದಿಂದ (1,800 ಅಡಿ) 500 ಅಡಿಗಳಷ್ಟು ಕೆಳಗೆ ರಾಪೆಲ್ (ಹಗ್ಗದ ಮೂಲಕ ಇಳಿಯುವುದು) ಮಾಡಿದರು. ಅವರು ಹೇಳುತ್ತಾಳೆ, “ನಾನು ಬಹಳ ಸಮಯದಿಂದ ಆ ಶಿಖರದಿಂದ ಕೆಳಗಿಳಿಯಲು ಬಯಸಿದ್ದೆ, ಆದರೆ ಮುದುಕಿಯನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಾರೆ.”


ಈ ಕಥನ-ಲೇಖನವನ್ನು ವರದಿ ಮಾಡಲು ಸಹಾಯ ಮಾಡಿದ ಗಣೇಶ್ ಗೀಧ್ ಮತ್ತು ಭಾಸ್ಕರ್ ಬದಾದ್ ಅವರಿಗೆ ವಿದ್ಯಾರ್ಥಿ ವರದಿಗಾರರು ಧನ್ಯವಾದವನ್ನು ಅರ್ಪಿಸಲು ಬಯಸುತ್ತಾರೆ.
ಪರಿ’ಯ ಮುಖಪುಟಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ
Editor's note
ರುತುಜಾ ಗೈದಾನಿ ಅವರು ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ (ಸ್ವಾಯತ್ತ) ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದ ಅಂತಿಮ ವರ್ಷದ ವಿದ್ಯಾರ್ಥಿ. ಶುಭಂ ರಸಲ್ ಅವರು 2021ರಲ್ಲಿ ಥಾಣೆಯ ಸತೀಶ್ ಪ್ರಧಾನ್ ದಯಾನಂದ ಕಾಲೇಜಿನಿಂದ ಪದವಿ ಪಡೆದರು. ಅವರು ಹೇಳುತ್ತಾರೆ, "ಈ ಸ್ಟೋರಿಯು ನಮಗೆ ತಿಳಿದಿರುವ ಆದರೆ ಆದರೆ ಅದನ್ನು ನೋಡಲು ವಿಫಲವಾಗಿದ್ದ ಪ್ರಪಂಚಕ್ಕೆ ನಮ್ಮನ್ನು ತೆರೆಯಿತು,... ಹಳ್ಳಿಗರು [ನಮ್ಮ ವರದಿಯಲ್ಲಿ] ತಮ್ಮ ಸಮಸ್ಯೆಗಳನ್ನು ವಿಭಿನ್ನ ಬೆಳಕಿನಲ್ಲಿ ನೋಡಲು ನಮಗೆ ಸಹಾಯ ಮಾಡಿದರು."
ಅನುವಾದ: ಶಂಕರ ಎನ್. ಕೆಂಚನೂರು
ಶಂಕರ ಎನ್. ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.