ಸುಹಾಗನ್‌ ರಾಣಿಯವರ ಸುತ್ತ ಅವರು ಹಾಗೂ ಅವರ ಕುಟುಂಬ ತಯಾರಿಸಿದ ಮಣ್ಣಿನ ಮಡಿಕೆ, ತಟ್ಟೆ ಹೂಜಿಗಳಿಂದ ಸುತ್ತುವರಿದಿದ್ದವು. ಇವೆಲ್ಲವನ್ನೂ ಮಾರಬೇಕೆಂಬ ಅಪೇಕ್ಷೆಯಿಂದ ಅವರು “ಬದುಕುವುದಕ್ಕಾಗಿ ನಾವು ಏನೇನನ್ನು ಮಾಡಬೇಕೋ ಅವೆಲ್ಲವನ್ನೂ ಮಾಡಬೇಕಿದೆ” ಎಂದು ಹೇಳುತ್ತಾರೆ.

ಮಧ್ಯ ಭಾರತದ ಬೇಗಮ್‌ಗಂಜ್ ಪಟ್ಟಣದಲ್ಲಿರುವ ತನ್ನ ಮನೆಯ ಬಾಗಿಲಿನ ಬಳಿ ಕುಳಿತುಕೊಂಡು ಈ ಕುಂಬಾರ್ತಿ ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಈ ಪಟ್ಟಣದಲ್ಲಿ ಕಳೆದ 38 ವರ್ಷಗಳಿಂದ ಬದುಕುತ್ತಿರುವ ತನ್ನ ಹೆಗ್ಗುರುತುಗಳನ್ನು ತೋರಿಸುತ್ತಾರೆ.

ಬಿಳಿ ಬಣ್ಣ ಬಳಿದು ಎದ್ದು ಕಾಣುತ್ತಿರುವ ಎರಡು ಅಂತಸ್ತಿನ ಕಟ್ಟಡಗಳಿಂದ ಕೂಡಿದ ಜನನಿಬಿಡ ರಸ್ತೆಯ ಉದ್ದಕ್ಕೂ ಹಸುಗಳ ಗುಂಪು ಅಡ್ಡಾಡುತ್ತಿದ್ದವು. ಸುಹಾಗನ್ ಆ ಸಾಲಿನ ಕೊನೆಯಲ್ಲಿರುವ ಇಟ್ಟಿಗೆ ಗೋಡೆಯ ಮೇಲೆ ಸಿಮೆಂಟ್ ಕೋಟ್ ಬಳಿದಿರುವ ಮನೆಯಲ್ಲಿ ವಾಸಿಸುತ್ತಾರೆ. ಒಂಬತ್ತು ಮಕ್ಕಳ ಈ ತಾಯಿ 2021 ಡಿಸೆಂಬರ್ ನಲ್ಲಿ ತನ್ನ ಪತಿಯನ್ನು ಕಳೆದುಕೊಂಡರು. ಸದ್ಯ ತಮ್ಮ 24 ವರ್ಷದ ಕಿರಿಯ ಮಗ ದುರ್ಗೇಶ್ ಜೊತೆಗೆ ವಾಸಿಸುತ್ತಿದ್ದಾರೆ. ಅವರ ಮನೆಯ ಪಕ್ಕದಲ್ಲಿಯೇ ಅವರ ಸೋದರ ಮಾವ ಪೂರನ್, ಪತ್ನಿ ಲಕ್ಷ್ಮಿ ಮತ್ತು ಮಗ ಸಂದೀಪ್ ವಾಸಿಸುತ್ತಿದ್ದಾರೆ.

“ನೀವು ಈ ಮರವನ್ನು ನೋಡಿದ್ರಾ?” ಸುಹಾಗನ್ ರಸ್ತೆಯ ಕೆಳಗೆ ಇರುವ ಅಲದ ಮರವನ್ನು ತೋರಿಸುತ್ತಾ ಕೇಳಿದರು. “ನನ್ನ ಮಾವ ಪ್ರಜಾಪತಿಯವರು ಇದನ್ನು ನೆಟ್ಟು ಬೆಳೆಸಿ ಆರೈಕೆ ಮಾಡಿದರು. ನಾವು ನಮ್ಮ ಕೆಲಸವನ್ನು ಮಾಡಲು ಮರದ ಸುತ್ತ ಇರುವ ಕಟ್ಟೆಯನ್ನು ಬಳಸುತ್ತೇವೆ. ಮಾರಾಟಕ್ಕೆ ಸಿದ್ಧವಾಗಿರುವ ಮಣ್ಣಿನ ಮಡಕೆಗಳು, ಪಾತ್ರೆಗಳು (handi), ಹೂಜಿಗಳು (ghelas), ಮಣ್ಣಿನ ಕುದುರೆ ಆಟಿಕೆಗಳು, ಮೇಲ್ಮುಖ ಪಾತ್ರೆಗಳು (kalles), ಹಣತೆಗಳು ಮತ್ತು ಚಿಲ್ಲಂಗಳನ್ನು (chillums) ಆ ಮರದ ನೆರಳಿನಲ್ಲಿ ನಾವು ಪ್ರದರ್ಶನಕ್ಕೆ ಇಡುತ್ತೇವೆ. ಸುಹಾಗನ್ ಪ್ರಕಾರ 34,031 ಜನಸಂಖ್ಯೆ ಇರುವ ಈ ಪಟ್ಟಣದಲ್ಲಿ ಕೇವಲ ಐದು ಕುಟುಂಬಗಳು ಮಾತ್ರ ಕುಂಬಾರ ಕೆಲಸವನ್ನು ಮಾಡುತ್ತಾರೆ.

ಎಡ: ಸುಹಾಗಾನ್ ರಾಣಿ ತನ್ನ ಮುಂದೆ ಮಡಿಕೆಗಳು ಮತ್ತು ಮಣ್ಣಿನ ಕಲಾಕೃತಿಗಳನ್ನು ಇಟ್ಟು ಮಾರುತ್ತಿರುವುದು. ಬಲ: ರಸ್ತೆಬದಿಯಲ್ಲಿ ಮಣ್ಣಿನ ವಸ್ತುಗಳನ್ನು ಮಾರುತ್ತಿರುವ ಪೂರನ್ ಪ್ರಜಾಪತಿ. ಫೋಟೋ: ಆಶಿ ವರ್ಮಾ

ಎಡ: ಅಡುಗೆ ಮನೆಯಲ್ಲಿ ರಾತ್ರಿಯ ಊಟ ಸಿದ್ಧಪಡಿಸುತ್ತಿರುವ ಸುಹಾಗನ್ ರಾಣಿ. ಅವರ ಹಿಂದೆ ಮಗ ದುರ್ಗೇಶ್ ಕುಳಿತಿದ್ದಾರೆ. ಬಲ: ಆಲದ ಮರದ ಸುತ್ತ ತಾವು ತಯಾರಿಸಿದ ಮಣ್ಣಿನ ಮಡಕೆಗಳನ್ನು ಒಣಗಿಸುತ್ತಿರುವ ಪ್ರಜಾಪತಿ. ಫೋಟೋ: ಆಶಿ ವರ್ಮಾ

ಐವತ್ತು ವರ್ಷ ಪ್ರಾಯದ ಸುಹಾಗನ್ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಎದ್ದು ತನ್ನ ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಹರಿಯುವ ಬಿನಾ ನದಿಯ ದಡದಿಂದ ಮಣ್ಣು, ಕುದುರೆಯ ಸೆಗಣಿ, ಹಾಗೂ ದನದ ಸೆಗಣಿಯನ್ನು ಸಂಗ್ರಹಿಸಲು ಹೋಗುತ್ತಾರೆ. ಅದನ್ನು ತಿಂಗಳಿಗೆ ಎರಡು ಬಾರಿ ಖರೀದಿಸಿದ ಮಣ್ಣಿನೊಂದಿಗೆ ಬೇರೆಸುತ್ತಾರೆ. ಒಂದು ಟ್ರಾಲಿ ಮಣ್ಣಿನ ಬೆಲೆ ರೂ.1,500. ಇದರಿಂದ 10 ಹೂಜಿ ಹಾಗೂ ಕೆಲವು ಹಣತೆಗಳನ್ನು ತಯಾರಿಸುತ್ತಾರೆ. ಇವರು ಪ್ರತೀ ಹೂಜಿಯಿಂದ ರೂ. 20 ರಿಂದ 25 ಲಾಭ ಗಳಿಸುತ್ತಾರೆ.

ಒದ್ದೆ ಜೇಡಿ ಮಣ್ಣು ಹಾಗೂ ಗೊಬ್ಬರದ ಮಿಶ್ರಣವನ್ನು ವಿದ್ಯುತ್ ಚಾಲಿತ ಚಕ್ರದ ಮೇಲೆ ತಿರುಗಿಸಿ ಆಕಾರ ನೀಡಲಾಗುತ್ತದೆ. “ಮುಂಜಾನೆ ಸಂಪೂರ್ಣ ಸೂರ್ಯೋದಯಕ್ಕೆ ಮುನ್ನ ಕೆಲಸವನ್ನು ಆರಂಭಿಸುತ್ತೇವೆ. ಹಾಗಾಗಿ ಉಳಿದ ಇಡೀ ದಿನ ನಾವು ಅವನ್ನು ಒಣಗಿಸಬಹುದು” ಎಂದು ಸುಹಾಗನ್ ಅವರ ಸೋದರ ಮಾವ ಪೂರನ್ ಪ್ರಜಾಪತಿ ಹೇಳುತ್ತಾರೆ.

ತಯಾರಿಸಿದ ವಸ್ತುಗಳನ್ನು ಆಲದ ಮರದ ಕೆಳಗೆ ಒಣಗಿಸಿ ನಂತರ ತೆರೆದ ಕುಲುಮೆಯಲ್ಲಿ (bhatti) ಸುಡಲಾಗುತ್ತದೆ. “ನಾವು ಹೂಜಿಗಳನ್ನು ಸಣ್ಣ ಸಣ್ಣ ಗುಂಪುಗಳನ್ನಾಗಿ ಮಾಡುತ್ತೇವೆ. ಹೂಜಿಯ ದೊಡ್ಡ ದೊಡ್ಡ ಗುಂಪುನ್ನು ಸುಡುವುದರಿಂದ ಹೆಚ್ಚು ಹೊಗೆ ಉತ್ಪತ್ತಿಯಾಗುತ್ತದೆ. ಹಾಗಾಗಿ ಪುರಸಭೆಯ ಅಧಿಕಾರಿಗಳು ಅನುಮತಿ ನೀಡುವುದಿಲ್ಲ. ಮಾತ್ರವಲ್ಲ, ಸ್ವಚ್ಚತಾ ಅಭಿಯಾನವನ್ನು ಅನುಸರಿಸಲು ಸೂಚಿಸಿದ್ದಾರೆ,” ಎಂದು ಅವರು ವಿವರಿಸುತ್ತಾರೆ.

ಇಷ್ಟಾಗಿಯೂ, ಕಳೆದ ಕೆಲವು ವರ್ಷಗಳಿಂದ ಹಸುವಿನ ಸೆಗಣಿ, ಕುಲುಮೆಗೆ ಕಟ್ಟಿಗೆ ಮಣ್ಣಿನ ವಸ್ತುಗಳನ್ನು. ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಲು ಕಷ್ಟವಾಗುತ್ತಿದೆ. ಎರಡೂ ಕುಟುಂಬಗಳು ಪೀಕ್ (ಉತ್ತುಂಗದ) ಸಮಯದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಸುಮಾರು ರೂ.250 ಕೊಟ್ಟು ಒಣ ಕಟ್ಟಿಗೆಯ ಬದಲು ಅಗ್ಗದ ಬೆಲೆಗೆ ಸಿಗುವ ಒದ್ದೆಯಾದ ಮರದ ದಿಮ್ಮಿಗಳನ್ನು ಖರೀದಿಸುತ್ತಾರೆ. “ಹೂಜಿಗಳನ್ನು ತಯಾರಿಸಲು ಹೆಚ್ಚು ಖರ್ಚು ಆಗುವುದರಿಂದ ನಾವು ಹೆಚ್ಚಿನ ಹೂಜಿಗಳನ್ನು ಸಮೀಪದ ಭೋಪಾಲ್ ನಿಂದ ಖರೀಸುತ್ತೇವೆ. ಇದೊಂದು ಸುಲಭ ಮಾರ್ಗವಾಗಿದೆ,” ಎಂದು ಪೂರನ್ ಹೇಳುತ್ತಾರೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (Khadi and Village Industries Commission) ಗ್ರಾಮೋದ್ಯೋಗ ವಿಕಾಸ್ ಯೋಜನೆಯನ್ನು ಆರಂಭಿಸಿದೆ. ಇದು ಕುಂಬಾರರಿಗೆ ತರಬೇತಿ ಮತ್ತು ಸಲಕರಣೆಗಳನ್ನು ನೀಡಿ ನೆರವು ನೀಡುವ ಯೋಜನೆಯನ್ನು ಒಳಗೊಂಡಿದೆ. ಆದರೆ ಇದ್ಯಾವುದೂ ತಮಗೆ ದೊರೆತಿಲ್ಲ ಎಂದು ದುರ್ಗೇಶ್ ಹೇಳುತ್ತಾ “ನನ್ನ ಕುಟುಂಬಕ್ಕೆ ಯಾವುದೇ ಯಂತ್ರ ಅಥವಾ ಉಪಕರಣಗಳು ಸಿಕ್ಕಿಲ್ಲ. ಸರ್ಕಾರದಿಂದ ದೊರೆಯುವ ಯಾವುದೇ ನೆರವಿನ ಬಗ್ಗೆ ಕೂಡ ನಾವು ಕೇಳಿಲ್ಲ. ನಮ್ಮ ಕೆಲಸಕ್ಕೆ ಬೇಕಾದ ಎಲ್ಲವನ್ನೂ ನಾವೇ ಒದಗಿಸಿಕೊಳ್ಳುತ್ತಿದ್ದೇವೆ,” ಎನ್ನುತ್ತಾರೆ. ತಾವು ಹಾಗೂ ತಮ್ಮ ಚಿಕ್ಕಪ್ಪ ಪೂರನ್ ಪ್ರಜಾಪತಿ “ನಮ್ಮ ವ್ಯಾಪಾರವನ್ನು ವಿಸ್ತರಿಸಲು ಬೇಕಾದ ಅಗತ್ಯ ಸಾಲವನ್ನು ಪಡೆಯಲು ಹಾಗೂ ನಮ್ಮ ಕೆಲಸಕ್ಕೆ ಒಳ್ಳೆಯ ಮಾನ್ಯತೆಯನ್ನು ಪಡೆಯಲು ನಾವು ಅನೇಕ ಬಾರಿ ಪುರಸಭೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆವು. ಆದರೆ ಅದರಿಂದ ಏನೂ ಪ್ರಯೋಜನವಾಗಿಲ್ಲ,” ಎಂದು ದುರ್ಗೇಶ್ ಹೇಳುತ್ತಾರೆ.

ಫ್ರಿಜ್, ಪ್ಲಾಸ್ಟಿಕ್ ನೀರಿನ ಪಾತ್ರೆಗಳು ಮತ್ತು ಆಟಿಕೆಗಳಿಂದಾಗಿ ಇವರ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ. “ನಮ್ಮ ವ್ಯಾಪಾರವು 2008-2009 ರ ಸಮಯದಲ್ಲಿ ತುಂಬಾ ಚೆನ್ನಾಗಿತ್ತು, ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ,” ಎಂದು ಪೂರನ್ ಹೇಳುತ್ತಾರೆ. “ಇಂದು ಪ್ಲಾಸ್ಟಿಕ್ ಅತ್ಯಂತ ಅಗತ್ಯವಾಗಿದೆ, ಮತ್ತು ಮಕ್ಕಳು ಇನ್ನು ಮುಂದೆ ಮಣ್ಣಿನ ಆಟಿಕೆಗಳೊಂದಿಗೆ ಆಡುವುದೂ ಇಲ್ಲ.” ಎಂದು ಹೇಳುತ್ತಾರೆ.

“ನಾವು ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಸುಡು ಬಿಸಿಲಲ್ಲಿ ಕುಳಿತು ಮಣ್ಣಿನ ವಸ್ತುಗಳನ್ನು ತಯಾರಿಸಿ ಕಡಿಮೆ ಹಣವನ್ನು ಪಡೆಯುತ್ತೇವೆ. ಅದೂ ಸಹ, ದಿನಕ್ಕೆ 50 ರೂಪಾಯಿ ಬಂದರೇ ಹೆಚ್ಚು.” ಎಂದು ಸುಹಾಗನ್ ಹೇಳುತ್ತಾರೆ.

ಹೂವಿನ ಕುಂಡಗಳು ಮತ್ತು ಹೂಜಿಗಳು ಹೆಚ್ಚು ಮಾರಾಟವಾಗುತ್ತಿದ್ದವು, ಆದರೆ ಇನ್ನು ಮುಂದೆ ಅದೂ ಸಾಧ್ಯವಿಲ್ಲ. ಗ್ರಾಹಕರು ಬೇರೆ ಬೇರೆ ಆಕಾರದ, ಬಣ್ಣ ಬಣ್ಣದ ಮತ್ತು ಕೆತ್ತನೆಗಳಿರುವ ಮಡಿಕೆಗಳನ್ನು ಬಯಸುತ್ತಾರೆ. “ನಗರದ ಈ ಮಡಕೆಗಳಿಗೆ ಸಾಂಪ್ರದಾಯಿಕ ರೀತಿಯ ಮಾಡಿಕೆಗಳಿಗಿಂತ ಹೆಚ್ಚು ಬೇಡಿಕೆಯಿದೆ” ಎಂದು ಪೂರನ್ ಹೇಳುತ್ತಾರೆ. ಹಾಗಾಗಿ ನಗರಗಳಲ್ಲಿ ಬೇಡಿಕೆ ಇಲ್ಲದ ಕಾರಣ ಇವರು ತಾವು ಉತ್ಪಾದಿಸಿದ ವಸ್ತುಗಳನ್ನು ಮಾರಲು ತಮ್ಮ ಪಟ್ಟಣದಲ್ಲಿ ಕೆಲವು ಗ್ರಾಹಕರನ್ನು ಕಂಡುಕೊಂಡಿದ್ದಾರೆ.

ಪೂರನ್ ಹಾಗೂ ಲಕ್ಷ್ಮಿ ಅವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಗುಮಾಸ್ತ ಕೆಲಸ ಮಾಡುತ್ತಿರುವ ಮಗ ಸಂದೀಪ್ ಧೈರ್ಯ ತುಂಬುತ್ತಾರೆ. ಸಂದೀಪ್ ತಮ್ಮ ಕೆಲಸದ ನಂತರ ಮತ್ತು ರಜಾ ದಿನಗಳಲ್ಲಿ ತಮ್ಮ ಹೆತ್ತವರಿಗೆ ಸಹಾಯ ಮಾಡುತ್ತಾರೆ. ತಮ್ಮ ಮಗನೊಂದಿಗೆ ಕೆಲಸ ಮಾಡುತ್ತಿರುವ ಸುಹಾಗನ್ ಅವರು ತಮ್ಮ ಮನೆ ನಡೆಸಲು ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆಯ (Indira Gandhi National Widow Pension Scheme) ಪಿಂಚಣಿಯನ್ನು ಅವಲಂಬಿಸಿದ್ದಾರೆ. ” ನಾನು ಕಳೆದ ತಿಂಗಳು ಪಿಂಚಣಿ ಪಡೆದಿಲ್ಲ. ಯಾವುದೋ ಫರ್ಮಾಲಿಟಿಗಾಗಿ ಬಂದ ಹಣ ಕಡಿತವಾಗಿದೆ ಎಂದು ಹೇಳುತ್ತಾರೆ,” ಎಂದು ಹೇಳುತ್ತಾ, “ನನಗೆ ಕೇವಲ ರೂ. 600 ಸಿಗುತ್ತದೆ. ಅದು ಹೆಚ್ಚು ಮೊತ್ತ ಅಲ್ಲದೇ ಇದ್ದರೂ ಅದರಿಂದ ದೊಡ್ಡ ಉಪಕಾರ ಆಗುತ್ತಿದೆ,” ಎಂದು ಸುಹಾಗನ್ ಹೇಳುತ್ತಾರೆ. ಇತರ ಮಕ್ಕಳು ಇವರಿಂದ ದೂರ ವಾಸಿಸುತ್ತಿದ್ದಾರೆ; ಬೇರೆ ಗಂಡು ಮಕ್ಕಳು ಬೇರೆ ಬೇರೆ ಸ್ಥಳಗಳಲ್ಲಿ ಕುಂಬಾರ ವೃತ್ತಿ ಮಾಡುತ್ತಿದ್ದಾರೆ.

ದೀಪಾವಳಿ ಮತ್ತು ನವರಾತ್ರಿಯಂತಹ ಹಬ್ಬಗಳ ಸಮಯದಲ್ಲಿ ಜನರು ಹಣತೆಗಳು, ಹಣದ ಹುಂಡಿಗಳು, ಹವನ ಬೇಡಿ (ಧಾರ್ಮಿಕ ವಸ್ತು) ಮತ್ತು ಲಕ್ಷ್ಮಿ ದೇವಿಯ ಪ್ರತಿಮೆಗಳನ್ನು ಖರೀದಿ ಮಾಡುವುದರಿಂದ ಸುಹಾಗನ್ ಹಾಗೂ ದುರ್ಗೇಶ್ ಸುಮಾರು ರೂ.30-40,000 ಗಳಿಸುತ್ತಾರೆ. ಜೂನ್ ಹಾಗೂ ಸಪ್ಟೆಂಬರ್ ತಿಂಗಳ ನಡುವಿನ ಆಫ್ ಸೀಸನ್ ಮಾನ್ಸೂನ್ ಸಮಯದಲ್ಲಿ ತಮ್ಮ ಉತ್ಪನ್ನವನ್ನು ಹೊರಗಡೆ ತಯಾರಿಸಲು ಮತ್ತು ಒಣಗಿಸಲು ಸಾಧ್ಯವಿಲ್ಲದೆ ಇದ್ದಾಗ ಉಂಟಾಗುವ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಈ ಮೊತ್ತ ನೆರವಿಗೆ ಬರುತ್ತದೆ. ಈ ಸಮಯದಲ್ಲಿ ಎರಡೂ ಕುಟುಂಬಗಳು ತಾವು ತಯಾರಿಸಿದ ವಸ್ತುಗಳನ್ನು ಶೇಖರಿಸಿ ಇಡಲು ಪೂರನ್ ಅವರ ಮನೆಯಲ್ಲಿ ಇರುವ ಹೆಚ್ಚುವರಿ ಕೊಠಡಿಯನ್ನು ಬಳಸುತ್ತಾರೆ.

ಸುಹಾಗನ್ ಅವರ ಮರಣ ಹೊಂದಿರುವ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರ ವೈದ್ಯಕೀಯ ಚಿಕಿತ್ಸೆಗಾಗಿ ನೆರೆಹೊರೆಯವರಿಂದ ಸುಮಾರು ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು. “ಈ ಹಣವನ್ನು ಹಿಂತಿರುಗಿಸಲು ಬೇಕಾದಷ್ಟನ್ನೂ ನಾವು ಸಂಪಾದಿಸುತ್ತಿಲ್ಲ,” ಎಂದು ಅವರು ಹೇಳುತ್ತಾರೆ.

ಪತಿಯ ನಿಧನದ ಕೆಲವು ದಿನಗಳ ನಂತರ ಸುಹಾಗನ್ ಸ್ಥಳೀಯ ಪುರಸಭೆ ಕಚೇರಿಗೆ ಹೋಗಿ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದಡಿ (National Social Assistance Programme) ಆರ್ಥಿಕ ನೆರವಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಮನೆಯಲ್ಲಿ ಹಣ ಸಂಪಾದನೆ ಮಾಡುವ ಮುಖ್ಯ ವ್ಯಕ್ತಿ ಮರಣ ಹೊಂದಿದರೆ ಆ ಕುಟುಂಬಕ್ಕೆ ರೂ. 20,000 ನೆರವು ನೀಡುತ್ತದೆ. “ನಾವು ತೆಗೆದುಕೊಂಡಿರುವ ಸಾಲವನ್ನು ಮತ್ತೆ ಎಲ್ಲರಿಗೂ ನೀಡಬೇಕಾಗಿದೆ. ಆದರೆ ಈ ಪರಿಹಾರ ಹಣ ಇನ್ನೂ ಬಾರದೆ ತುಂಬಾ ಕಷ್ಟವಾಗಿದೆ.” ಕೌಟುಂಬಿಕ ಸಂಬಂಧಗಳನ್ನು ಜೀವಂತವಾಗಿರಿಸಿಕೊಳ್ಳುವುದರ ಜೊತೆಗೆ ಮದುವೆಗಳು ಮತ್ತು ಇತರ ಬದ್ಧತೆಗಳನ್ನೂ ಹೊಂದಬೇಕು, ಆದರೆ ಇದು ಅಸಾಧ್ಯ ಎಂದು ದುರ್ಗೇಶ್ ಹೇಳುತ್ತಾರೆ.

ಆರ್ಥಿಕ ಅಭದ್ರತೆಯು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕೆಟ್ಟ ಪ್ರಭಾವ ಬೀರಿದೆ: “ನನ್ನ ದೇಹ ಯಾವಾಗಲೂ ನೋಯುತ್ತದೆ ಹಾಗೂ ನನ್ನ ರಕ್ತ ಮತ್ತು ಶಕ್ತಿಯ ಮಟ್ಟ ಯಾವಾಗಲೂ ಕಡಿಮೆ ಇರುತ್ತದೆ. ಆರೋಗ್ಯ ತಪಾಸಣೆಗಾಗಿ ನಾನು ನಗರಕ್ಕೆ ಹೋಗಬೇಕು. ಆದರೆ ಸದ್ಯಕ್ಕೆ ಅದನ್ನೂ ಮುಂದೂಡಬೇಕಾಗಿದೆ, ”ಎಂದು ಹೇಳುತ್ತಾರೆ. ದೈಹಿಕ ಶಕ್ತಿ ಕಡಿಮೆ ಇರುವುದರಿಂದ ದುರ್ಗೇಶ್ ಆಗಾಗ ವಿಶ್ರಾಂತಿ ಪಡೆಯಬೇಕಾಗುತ್ತದೆ. ಅವರ ತಾಯಿ ಹೊಸ್ತಿಲಲ್ಲಿ ಕುಳಿತು ಊಟಕ್ಕೆ ತರಕಾರಿಗಳನ್ನು ಕತ್ತರಿಸುವಾಗ ಅವರು ಮನೆಯ ಮುಂಭಾಗದ ಕೋಣೆಯಲ್ಲಿ ಮಲಗಿ ಬರುವ ಗ್ರಾಹಕರ ಮೇಲೆ ಮೇಲೊಂದು ಕಣ್ಣು ಇಡುತ್ತಾರೆ.

ಸೂರ್ಯ ಮುಳುಗುತ್ತಾನೆ, ಮತ್ತು ರಾತ್ರಿ 9 ಗಂಟೆಗೆ ದುರ್ಗೇಶ್ ತಮ್ಮ ಮಣ್ಣಿನ ಉತ್ಪನ್ನಗಳನ್ನು ಟಾರ್ಪಾಲಿನ್ ನಿಂದ ಮುಚ್ಚಿ ಅಂಗಡಿಯ ಬಾಗಿಲು ಮುಚ್ಚುತ್ತಾರೆ.

“ಕೆಲಸದಿಂದ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ದಾರಿಹೋಕರು ಏನನ್ನಾದರೂ ಖರೀದಿಸುತ್ತಾರೆಯೋ ಎಂದು ಎದುರು ನೋಡುತ್ತೇನೆ. ನಂತರ ನಾನು ಮನೆಗೆ ಹೋಗಿ ನಾಳೆಗಾಗಿ ಕಾಯುತ್ತೇನೆ,” ಎಂದು ಅವರು ಹೇಳುತ್ತಾರೆ.

ಪರಿ ಮುಖಪುಟಕ್ಕೆ ಮರಳಲು, ಇಲ್ಲಿ ಕ್ಲಿಕ್ ಮಾಡಿ.

Editor's note

ಆಶಿ ವರ್ಮಾ ಅಹಮದಾಬಾದ್ ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಅವರು ಹೇಳುವಂತೆ: "ನಾನು ವೇಗದ ನಗರೀಕರಣ, ವಿಶೇಷವಾಗಿ ಸಾಂಕ್ರಮಿಕ ಕಾಯಿಲೆ ಸಣ್ಣ ಪ್ರಮಾಣದ ಕಾರ್ಮಿಕರ ಮೇಲೆ ಹೇಗೆ ಪ್ರಭಾವವನ್ನು ಬೀರಿದೆ ಎಂಬುದರ ಬಗ್ಗೆ ಅಧ್ಯಯನ ಮಾಡುವ ಆಸಕ್ತಿಯನ್ನು ಹೊಂದಿದ್ದೇನೆ. ಕಥೆಯ ಮೇಲೆ ಕೆಲಸ ಮಾಡುವಾಗ ನನಗೆ ಸುಹಾಗನ್ ದೇವಿಯವರ ದೈನಂದಿನ ಬದುಕು ಹಾಗೂ ಕೌಟುಂಬಿಕ ಜವಾಬ್ದಾರಿಗಳ ಪ್ರಾಮುಖ್ಯತೆಯನ್ನು ದಾಖಲಿಸುವ ಹಾಗೂ ವೀಕ್ಷಿಸುವ ಅವಕಾಶ ಸಿಕ್ಕಿತು. ಪರಿ ಶಿಕ್ಷಣಕ್ಕಾಗಿ ಬರೆಯುವ ಅವಕಾಶ ದೊರೆತ ಕಾರಣದಿಂದಾಗಿ ನಾವು ಕ್ಷೇತ್ರ ಕಾರ್ಯ ಮಾಡುವಾಗ ಪ್ರತೀ ವಿವರಗಳು ಎಷ್ಟು ಮುಖ್ಯ ಎಂಬುದು ಅರಿವಿಗೆ ಬಂತು. ಪ್ರತೀ ಮಾಹಿತಿಯೂ ಒಂದು ಕಥೆಯನ್ನು ಹೇಳುತ್ತದೆ."

ಅನುವಾದ: ಚರಣ್‌ ಐವರ್ನಾಡು

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು charanaivar@gmail.com -ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.