
ಪ್ರತಿದಿನವೂ ತನ್ನ ಕಿಟಕಿಯಲ್ಲಿ ಏಕಾಂಗಿಯಾಗಿ ಕುಳಿತ ಮಾಯಾ, ಕೋವಿಡ್-೧೯ ಸರ್ವವ್ಯಾಪಿ ವ್ಯಾಧಿ ಹರಡಿದಾಗಿನಿಂದಲೂ ಜೀವನವು ಅದೆಷ್ಟು ಬದಲಾಗಿ ಹೋಗಿದೆಯೆಂದು ಆಲೋಚಿಸುತ್ತಿರುತ್ತಾಳೆ. ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ ನಂತರದ ವಾರಗಳಲ್ಲಿ, ತರಕಾರಿಗಳನ್ನು ಮಾರುವ ಸಲುವಾಗಿ ಆನ್‌ಲೈನ್ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗಿ ಬಂದ ತನ್ನ ಸಹಪಾಠಿ ಚಿನ್ಮಯ್‌ನಿಂದ ಮೊದಲುಗೊಂಡು, ವ್ಯಾಧಿಗೀಡಾದಾಗಿನಿಂದಲೂ ತನ್ನ ವೃತ್ತಿಯನ್ನು ನಿರ್ವಹಿಸಲಾಗದ ವೃದ್ಧ, ರದ್ದಿಯ ವ್ಯಾಪಾರಿಯವರೆಗೆ, ತನ್ನ ಸುತ್ತಮುತ್ತಲಿನ ಜನರ ಸಮಾಚಾರಗಳು ಆಕೆಗೆ ತಿಳಿದುಬರುತ್ತಿವೆ.
“ಬೇ-ಜಾರು” ಯಾರನ್ನೂ ನಿರ್ದಿಷ್ಟವಾಗಿ ಉದ್ದೇಶಿಸದೇ, ತನಗೆ ತಾನೆ ನಿಡುಸುಯ್ದಳು ಮಾಯಾ.
ದಿವಾನಖಾನೆಯ ಕಿಟಕಿಯಲ್ಲಿ ಕುಳಿತ ಮಾಯಾ, ನಿರ್ಜನ ಬೀದಿಯತ್ತ ದೃಷ್ಟಿಹರಿಸಿದಳು. ಆಕೆಯ ಬೀದಿಯ ದಿನನಿತ್ಯದ ಚೈತನ್ಯಪೂರ್ಣ ಸಡಗರ ಮತ್ತು ಹುರುಪನ್ನು ಕೋವಿಡ್-೧೯, ನಾಶಗೊಳಿಸಿದಂತೆ ಭಾಸವಾಗುತ್ತಿತ್ತು. ಈ ಹಿಂದೆ, ಕಾಲುದಾರಿಯಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಗಾರರು ಸಾಲುಗಟ್ಟುತ್ತಿದ್ದು, ಸರಂಜಾಮುಗಳನ್ನು ಸಾರುತ್ತಿದ್ದ ಧ್ವನಿಯು ಆಕೆಯ ಕಿಟಕಿಯಿಂದ ತೇಲಿಬರುತ್ತಿತ್ತು. ಈ ದಿನಗಳಲ್ಲಿ ಆಕೆಗೆ ಮೀನು ಮಾರುವವಳು ಮಾತ್ರ ಕಾಣಸಿಗುತ್ತಾಳೆ. ಅದೂ ಅಪರೂಪಕ್ಕೊಮ್ಮೆ. ಯಾರಿಗೂ ಇನ್ನುಮೇಲೆ ಆಕೆಯಿಂದ ಮೀನನ್ನು ಕೊಳ್ಳುವ ಇಚ್ಛೆಯಿದ್ದಂತಿರಲಿಲ್ಲ. ಇದಕ್ಕೂ ಮೊದಲು, ಆಕೆಯು ಬೀದಿಗೆ ಬರುತ್ತಿದ್ದಂತೆಯೇ ಜನರು ಹೊರಗೆ ಧಾವಿಸಿ ಬರುತ್ತಿದ್ದರು. ಯಾವಾಗಲೊಮ್ಮೆ, ಮುಖಗವಸು (mask) ಧರಿಸಿದ ಯಾರಾದರೊಬ್ಬರು ಹತ್ತಿರದ ದಿನಸಿ ಅಂಗಡಿಗೆ ಅಧೀರರಾಗಿ ತರಾತುರಿಯಿಂದ ಹೋಗುತ್ತಿರುವುದನ್ನು ನೋಡುತ್ತಿದ್ದ ಮಾಯಾ ನಿಡುಸುಯ್ಯುತ್ತಿದ್ದಳು.
ಕೇವಲ ಕೆಲವು ವಾರಗಳ ಹಿಂದೆ ಮೊದಲ ಬಾರಿಗೆ, ಶಾಲೆಗಳನ್ನು ಮುಚ್ಚುತ್ತಿದ್ದು, ಪರೀಕ್ಷೆಗಳಿಲ್ಲವೆಂಬುದನ್ನು ಕೇಳಿದ ಮಾಯಾ, ಅನೇಕ ಸಹಪಾಠಿಗಳಂತೆ, ತಾನೂ ಖುಷಿಪಟ್ಟಿದ್ದಳು. ಆದರೆ ಪ್ರತ್ಯೇಕತೆಯೆಂದರೆ, ಗೆಳೆಯರೂ ಇರುವುದಿಲ್ಲವಷ್ಟೇ. ಭಯವನ್ನು ಮೂಡಿಸುವ ಪರೀಕ್ಷೆಗಳನ್ನು ಬರೆದರೂ ಸರಿಯೇ, ಶಾಲೆಗೆ ಹೋಗಿ ಬರುತ್ತಾ, ಗೆಳೆಯರನ್ನು ನೋಡುವುದೇ ಸಂತೋಷಕರವೆಂದು ಆಕೆ ನಿಶ್ಚಯಿಸಿದಳು.
ಹೊಳಪು ಕಂಗಳ ೧೨ರ ಆಕೆಗೆ, ೧೦೦ನೇ ಬಾರಿ ನಾನು ಈ ನೋಟವನ್ನು ನೋಡುತ್ತಿರುವೆನೆನಿಸಿತು. ಹೊಸದಾಗಿ ಪತ್ತೆಮಾಡಿದ ಕೊರೊನಾ ವೈರಸ್, ಅತ್ಯಂತ ವೇಗವಾಗಿ ಹರಡಿದ್ದು, ಶ್ವಾಸ ಕ್ರಿಯೆಯ ಮೇಲೆ ದಾಳಿಮಾಡಿದೆಯೆಂದು ಆಕೆಯ ತಾಯಿ ವಿವರಿಸಿದ್ದರು. ಪ್ರಪಂಚದ ಎಲ್ಲ ಕಡೆಗೂ ಹರಡಿರುವ ಇದು, ಪ್ರತಿಯೊಬ್ಬರ ಬದುಕಿನ ರೀತಿಯನ್ನು ಸ್ಥಗಿತಗೊಳಿಸಿದೆಯೆಂಬುದನ್ನು ಮಾಯಾ ಅರಿತಳು. ಅನೇಕ ಇತರೆ ದೇಶಗಳು ಲಾಕ್‌ಡೌನ್ ಘೋಷಿಸಿದ್ದು, ಅವಶ್ಯಕ ಸೇವೆಗಳನ್ನು ನಿರ್ವಹಿಸುವವರಿಗೆ ಮಾತ್ರ ಹೊರಗೆ ಬರಲು ಅವಕಾಶ ನೀಡಲಾಗುತ್ತಿದೆ.
ಹಿಂದಿನ ತಿಂಗಳು ಮಾಯಾ, ಎಂದೂ ಕೇಳರಿಯದ ರೀತಿಯ ಘಟನೆಗಳನ್ನು ಕಂಡಳು. ಹಣ್ಣು, ತರಕಾರಿ, ಹಾಲಿನ ಉತ್ಪನ್ನಗಳು ಮತ್ತು ತಿನಿಸುಗಳನ್ನು ಮಾರುವ ದೊಡ್ಡ ಕಿರಾಣಿ ಅಂಗಡಿಯಲ್ಲಿ ಕೆಲಸವನ್ನು ನಿರ್ವಹಿಸುವ ಆಕೆಯ ತಂದೆಯ ಹೊರತಾಗಿ ಯಾರೂ, ಒಮ್ಮೆಯೂ ಮನೆಯಿಂದ ಹೊರಗೆ ಅಡಿಯಿಡಲಿಲ್ಲ. ಮಾ (ಅಮ್ಮ ಎಂಬ ಅರ್ಥದ ಹಿಂದಿಯ ಪದ), ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ. ಬಾಬಾ (ಅಪ್ಪ ಎಂಬ ಅರ್ಥದ ಹಿಂದಿಯ ಪದ) ನಿರ್ವಹಿಸುತ್ತಿದ್ದ ಕೆಲಸಗಳನ್ನೂ ಒಳಗೊಂಡಂತೆ, ತನ್ನ ಗೃಹಕೃತ್ಯಗಳನ್ನೂ ನಿರ್ವಹಿಸುತ್ತಾ, ಆಕೆಯು ದಿನವಿಡೀ ಆನ್‌ಲೈನ್ ತರಗತಿಗಳಲ್ಲಿ ಮಗ್ನಳಾಗಿದ್ದಳು. ಬಾಬಾನ ಹೊಸ ಸಹೋದ್ಯೋಗಿಯು ಇನ್ನೇನು ಕೆಲಸಕ್ಕೆ ಹಾಜರಾಗಬೇಕೆಂದಿರುವಾಗ, ಅವರಿಗೆ ಕೋವಿಡ್ ತಗುಲಿತ್ತು. ಇದರಿಂದಾಗಿ ಬಾಬಾ, ಅಂಡಿಯ ಸಮಸ್ತ ಹೊಣೆಗಾರಿಕೆಗಳನ್ನು ನಿರ್ವಹಿಸಬೇಕಿತ್ತು. ತಾಜಾ ಗಾಳಿ ಮತ್ತು ವ್ಯಾಯಾಮವನ್ನು ಆನಂದಿಸುವ ಮಾಯಾಳ ಅಜ್ಜಿ, ಮನೆವಾರ್ತೆಯ ಸಣ್ಣಪುಟ್ಟ ಕೆಲಸಗಳ ನಿಟ್ಟಿನ ಓಡಾಟದಲ್ಲಿ ತೊಡಗಿರುತ್ತಿದ್ದರು. ಆದರೆ ಆಜಿಯ (ಅಜ್ಜಿ ಎಂಬ ಅರ್ಥದ ಮರಾಠಿ ಪದ) ವಯೋಮಾನದರನ್ನು ಹಾಗೂ ಹಿರಿಯರನ್ನು ಹೆಚ್ಚಿನ ಅಪಾಯಕ್ಕೆ ಈಡಾಗುವವರೆಂದು ವರ್ಗೀಕರಿಸಿರುವ ಕಾರಣ, ಅವರು ತಮ್ಮ ಓಡಾಟವನ್ನು ನಿಲ್ಲಿಸಿದ್ದಾರೆ. ಮಾಯಾ ಹಾಗೂ ಆಕೆಯ ಹಿರಿಯ ಅಕ್ಕ ದ್ಯುತಿ, ಗಣಕ ಯಂತ್ರ ಅಥವಾ ಸ್ಮಾರ್ಟ್ ಫೋನಿನ ಮುಂದೆ ಕುಳಿತಿದ್ದು, ಲಾಗ್‌ಔಟ್ ಆಗುವ ಸಮಯದವರೆಗೂ ಗಂಟೆಗಟ್ಟಲೆ ತಮ್ಮ ಉಪಾಧ್ಯಾಯರನ್ನು ಗಮನಿಸುತ್ತಿದ್ದರು. ಸ್ವತಃ ಉಪಾಧ್ಯಾಯಿನಿಯಾಗಿದ್ದು, ಸಾಮಾನ್ಯವಾಗಿ ಓದು, ಬರಹದ ಬಗ್ಗೆ ಕಟ್ಟುನಿಟ್ಟಾಗಿರುವ ಮಾ, ಸಂಜೆಯ ಹೊತ್ತಿನಲ್ಲಿ ತನಗಿಷ್ಟವಾದುದರಲ್ಲಿ ನಿರತಳಾಗಲು ಮಾಯಾಳಿಗೆ ಅನುವುಮಾಡಿಕೊಟ್ಟಿದ್ದರಾದರೂ, ಮಾಡಲು ಏನೂ ಇರಲಿಲ್ಲವಷ್ಟೇ ಅಲ್ಲ, ಭೇಟಿಯಾಗಲು ಗೆಳೆಯರೂ ಇರಲಿಲ್ಲ.
ಮಾಯಾ ನಿರೀಕ್ಷಿಸುತ್ತಿದ್ದ ಏಕೈಕ ಸಂಗತಿಯೆಂದರೆ, ವಾರದ ಕೊನೆಯಲ್ಲಿ ಆಜಿಯೊಂದಿಗೆ ಸಮಯ ಕಳೆಯುತ್ತಾ, ಹಾರ್ಮೋನಿಯಂ ಕಲಿಯುವುದು. ಆಜಿ, ತಾಳ್ಮೆಯಿಂದ ಆಕೆಗೆ ಅದನ್ನು ಕಲಿಸುತ್ತಿದ್ದರಲ್ಲದೆ, ಆ ಪರಿವಾರದಲ್ಲಿ ತನ್ನ ಬಾಲ್ಯದಿಂದಲೂ ಇದ್ದ ಈ ಹಳೆಯ ವಾದ್ಯವನ್ನು ಕುರಿತ ಕಥೆಗಳನ್ನು ಹೇಳುತ್ತಿದ್ದರು. ಇದು ನಿಧಾನವಾದರೂ, ಮನೋರಂಜಕವಾಗಿತ್ತು. ಹಿಂದಿನ ಕಾಲದ ಜೀವನವನ್ನು ಕುರಿತು ಆಜಿಯು ತಿಳಿಸುತ್ತಿದ್ದ ಸಮಾಚಾರಗಳನ್ನು ಆಲಿಸುವುದು ಮಾಯಾಳಿಗೆ ಇಷ್ಟವಾಗುತ್ತಿತ್ತು. ಆಜಿಯು ಚಿಕ್ಕ ಹುಡುಗಿಯಾಗಿದ್ದಾಗ, ಲಾಕ್‌ಡೌನ್ ಅನ್ನು ಎಂದಾದರೂ ಅನುಭವಿಸಿದ್ದರೇ ಎಂದು ಮಾಯಾ ಪ್ರಶ್ನಿಸಿದಳು. ತನ್ನ ಜೀವನದಲ್ಲೆಂದೂ ಇಂತಹುದನ್ನು ಕಂಡಿಲ್ಲವೆಂಬುದಾಗಿ ಆಜಿ ಉತ್ತರಿಸಿದರಲ್ಲದೆ, “ಪ್ರಪಂಚದಲ್ಲಿ ಭೀಕರ ಸರ್ವವ್ಯಾಪಿ ವ್ಯಾಧಿಯು ಕಾಣಿಸಿಕೊಂಡದ್ದು ನೂರು ವರ್ಷಗಳಿಗೂ ಸಾಕಷ್ಟು ಹಿಂದೆ! ಆಗ ೧೯೧೮ನೇ ಇಸವಿ.” ಎಂದರು.
ಮಾಯಾ, ಕಣ್ಣುಗಳನ್ನು ಅಗಲಿಸಿದ್ದನ್ನು ಕಂಡ ಆಜಿ, ಮೊಮ್ಮಗಳಿಗೆ ಹುರುಪು ತುಂಬಲು, ಹಾರ್ಮೋನಿಯಂ ಅನ್ನು ಶ್ರುತಿಗೊಳಿಸುವಾಗ, ಆಕೆಯತ್ತ ಮುಗುಳುನಗೆ ಬೀರಿದರು. ಮಾಯಾ ಕಿಟಕಿಯತ್ತ ದೃಷ್ಟಿಹರಿಸಿದಳು. ಮುಂಬಾಗಿಲ ಬಳಿ ಯಾರೋ ಬರುತ್ತಿದ್ದರು. ಆ ಹುಡುಗನನ್ನು ಗುರುತಿಸಲು ಮಾಯಾಳಿಗೆ ಕೆಲವು ಕ್ಷಣ ಹಿಡಿಯಿತು. ಬಾಗಿಲ ಬಳಿ ಧಾವಿಸುತ್ತಾ, “ಚಿನ್ಮಯ್” ಎಂದು ಸಂಭ್ರಮದಿಂದ ಕೂಗಿದಳು ಮಾಯಾ.
ಅಮ್ಮನು ಬಾಗಿಲು ತೆರೆಯುತ್ತಿದ್ದಂತೆ, ಮಾಯಾ ತನ್ನ ಮೆತ್ತಗಿನ ಬಟ್ಟೆಯ ಮುಖಗವಸನ್ನು ಸೆಳೆದು, ಮೂಗು ಮತ್ತು ಬಾಯಿಯ ಸುತ್ತ ಅದನ್ನು ಬಿಗಿಗೊಳಿಸಿದಳು.
ಕೊನೆಗೊಮ್ಮೆ, ಶಾಲೆಯ ಗೆಳೆಯನನ್ನು ನೋಡಲು ಸಿಕ್ಕ ಖುಷಿಯಲ್ಲಿ, ಆಕೆ, “ಹಾಯ್” ಎಂದು ಉದ್ಗರಿಸಿದಳು. “ಹೇಗಿದ್ದೀಯ, ಚಿನ್ಮಯ್? ಆನ್‌ಲೈನ್ ಕ್ಲಾಸುಗಳಲ್ಲಿ ನಿನ್ನನ್ನು ನಾನು ನೋಡಿಯೇ ಇಲ್ಲ. ಒಳಗೆ ಬಾ!”
“ಓಹ್, ಇಲ್ಲ, ನನ್ನ ಅಮ್ಮ ಯಾರ ಮನೆಯ ಒಳಗೂ ಹೋಗಬೇಡವೆಂದು ಹೇಳಿದ್ದಾರೆ” ಕ್ಷಮೆಯಾಚಿಸುವ ದನಿಯಲ್ಲಿ ಉತ್ತರಿಸಿದನಾತ. ಸ್ವಚ್ಛವಾಗಿದ್ದ ಹಸಿರು ಮುಖಗವಸಿನ ಹಿಂದೆ ಆತನ ಮಾತು ಕೊಂಚ ಧ್ವನಿಗುಂದಿತು. “ಬೆಳಗಿನಿಂದ ಕೆಲಸದಲ್ಲಿ ತೊಡಗಿದ್ದೇನೆ. ಬಹಳ ಬಿಸಿಲಿದೆ. ನಿಮ್ಮ ಮನೆಯಲ್ಲಿ ಸ್ವಲ್ಪ ನೀರು ಸಿಗಬಹುದೆಂದು ಭಾವಿಸಿದೆ.”
ಕೆಲಸದಲ್ಲಿ ತೊಡಗಿದ್ದೀಯ! ಮಾಯಾಳಿಗೆ ಆಶ್ಚರ್ಯವೆನಿಸಿದರೂ, ಮಾ, ತಕ್ಷಣವೇ ಆತನಿಗೆ ನೀರು ತರಲು ಕಳುಹಿಸಿದ್ದರಿಂದ, ಅದರ ಬಗ್ಗೆ ಕೇಳಲು ಅವಕಾಶವಾಗಲಿಲ್ಲ. ಲೋಟವನ್ನು ತುಂಬಿಸುತ್ತಿದ್ದಂತೆಯೇ ಆಕೆ ಕಿಟಕಿಯ ಹೊರಗೆ ಕಣ್ಣಾಡಿಸಿದಳು. ಚಿನ್ಮಯ್, ಬೆಳಗಿನಿಂದಲೂ ಹೆಣಗುತ್ತಿದ್ದಾನೆಯೇ?
ತನ್ನ ತಾಯಿಯೊಂದಿಗೆ ಮಾತನಾಡುತ್ತಾ, ಹೊರಗೆ ನೆರಳಿದ್ದ ಮೆಟ್ಟಿಲಿನ ಮೇಲೆ ಆತ ವಿಶ್ರಮಿಸುತ್ತಿದ್ದುದನ್ನು ವಾಪಸ್ಸು ಬರುವಾಗ ಆಕೆ ಗಮನಿಸಿದಳು. ತರಕಾರಿಗಳಿಂದ ಭಾಗಶಃ ತುಂಬಿದ್ದ ಬುಟ್ಟಿಯೊಂದು ಆತನ ಪಕ್ಕದಲ್ಲಿತ್ತು. ಮುಗುಳ್ನಗುತ್ತ ಆತ ನೀರನ್ನು ತೆಗೆದುಕೊಂಡ. ತರಕಾರಿಗಳತ್ತ ನೋಡಿದ ಮಾಯಾ, ನೀನು ಇವನ್ನು ಮಾರುತ್ತಿದ್ದೀಯಾ? ಎಂದು ಕೇಳಿದಳು.
ಚಿನ್ಮಯ್ ತಲೆಯಾಡಿಸಿದ. ನಮ್ಮ ಅಪ್ಪ ಡ್ರೈವರ್ ಕೆಲಸ ಮಾಡುತ್ತಿದ್ದುದು ನಿನಗೆ ಗೊತ್ತಿದೆಯಷ್ಟೇ. ಇತ್ತೀಚೆಗೆ ಅವರು ಕೆಲಸವನ್ನು ಕಳೆದುಕೊಂಡರು. ದೊಡ್ಡ ಕಛೇರಿಯೊಂದನ್ನು ಸ್ವಚ್ಛಗೊಳಿಸುತ್ತಿದ್ದ ಆಯಿ(ಅಮ್ಮ ಎಂಬ ಅರ್ಥದ ಮರಾಠಿ ಪದ)ಯ ಕೆಲಸವೂ ಇಲ್ಲದಂತಾಯಿತು. ಅಪ್ಪನಿಗೆ ಕಾವಲುಗಾರನ ಕೆಲಸ ದೊರೆತಿದೆಯಾದರೂ, ಆಯಿ, ಇನ್ನೂ ಕೆಲಸವನ್ನು ಹುಡುಕುತ್ತಲೇ ಇದ್ದಾರೆ. ಹೀಗಾಗಿ, ನಾನು ಹಾಗೂ ಸ್ನೇಹಲ್, ಪ್ರತಿ ದಿನ ಮುಂಜಾನೆ ಈ ತರಕಾರಿಗಳನ್ನು ಮಾರಬೇಕಿದೆ. ಆತನ ಹಿರಿಯ ಅಕ್ಕ ಸ್ನೇಹಲ್‌ಳ ಪರಿಚಯವಿದ್ದ ಮಾಯಾಳಿಗೆ ಆಕೆಯೂ ಗೆಳತಿಯೇ. ಮಾಯಾ, ಬುಟ್ಟಿಯೆಡೆಗೆ ಕಣ್ಣು ಹಾಯಿಸಿದಳು. ತರಕಾರಿಗಳಿಂದ ತುಂಬಿರುವಾಗ ಅದು ಭಾರವಾಗುವಂತೆ ಕಂಡಿತು. ಮುಂಜಾನೆಯಾದ್ಯಂತ ಅದನ್ನು ಹೊರುವುದನ್ನು ಕಲ್ಪಿಸಿಕೊಳ್ಳುವುದೂ ಆಕೆಗೆ ಸಾಧ್ಯವಾಗಲಿಲ್ಲ. “ದಿನವಿಡೀ ಇದನ್ನು ಹೊತ್ತು ಓಡಾಡುವುದರಿಂದ ಬಹಳ ಆಯಾಸವಾಗುತ್ತಿರಬಹುದು.” ಎಂದಳವಳು. ಹುಬ್ಬಿನ ಬೆವರನ್ನು ಒರೆಸಿಕೊಂಡ ಚಿನ್ಮಯ್, “ಅದನ್ನು ಏನೆಂದು ತಾನೇ ಹೇಳಲಿ… ಪ್ರತಿ ದಿನ ಕತ್ತು ಅಪಾರವಾಗಿ ನೋಯುತ್ತದೆ. ನಾನು ಮನೆಗೆ ಮರಳಿದಾಗ ಅಮ್ಮ, ಬೆಚ್ಚಗಿನ ಬಟ್ಟೆಯೊಂದರಿಂದ ಎಣ್ಣೆಯ ಮಸಾಜ್ ಮಾಡುತ್ತಾರೆ. ಹೀಗಾಗಿ, ನಾಳೆ ಬೆಳಿಗ್ಗೆ ಮತ್ತೊಂದು ಹೊರೆಯನ್ನು ನಾನು ಹೊರಬಹುದು.”

ಒಳಗೆ ತೆರಳಿದ್ದ ಮಾಯಾಳ ತಾಯಿ, ಲಾಡುಗಳ ತಟ್ಟೆಯೊಂದಿಗೆ ಹಿಂದಿರುಗಿ, ಅದನ್ನು ಚಿನ್ಮಯ್‌ಗೆ ಕೊಡಲು ಮುಂದಾದರು. ಲಾಡುಗಳನ್ನು ನೋಡುತ್ತಿದ್ದಂತೆಯೇ ಆತನ ಕಣ್ಣುಗಳು ಬೆಳಗಿದವು. ಆದರೆ ಆತ ಹಿಂಜರಿದು, “ನೀವು ಅನ್ಯಥಾ ಭಾವಿಸದಿದ್ದಲ್ಲಿ, ಅದನ್ನು ನಾನು ಮನೆಗೆ ಕೊಂಡೊಯ್ಯಲು ಒಂದು ಬಾಕ್ಸ್‌ನಲ್ಲಿ ಹಾಕಿ ಕೊಡುತ್ತೀರಾ? ನಾನು ಮುಖಗವಸನ್ನು ತೆಗೆಯಲಿಚ್ಛಿಸುವುದಿಲ್ಲ. ಆಗ ಸ್ನೇಹಲ್‌ಗೆ ಕೂಡ ಸ್ವಲ್ಪ ಲಾಡುಗಳು ದೊರೆಯುತ್ತವೆ” ಎಂದು ಹೇಳಿದ
ಒಳಗೆ ಹೋಗಿ, ತಿಂಡಿಯ ಡಬ್ಬದೊಂದಿಗೆ ಹಿಂದಿರುಗಿದ ಅಮ್ಮ, “ಹಾಗೇ ಆಗಲಿ!” ಎಂದರು. ಚಿನ್ಮಯ್ ಸದಾ ಶಾಲೆಯಲ್ಲಿ ತನ್ನ ಉಪಹಾರವನ್ನು ಹಂಚಿಕೊಂಡು ತಿನ್ನಲು ಬಯಸುತ್ತಿದ್ದುದನ್ನು ನೆನೆದ ಛಾಯಾ ಮುಗುಳ್ನಕ್ಕಳು. ಡಬ್ಬವನ್ನು ಚಿನ್ಮಯ್‌ಗೆ ನೀಡುತ್ತಾ, “ನೀನು ಪ್ರತಿ ದಿನವೂ ದೊಡ್ಡ ಮಾರುಕಟ್ಟೆಗೆ ಹೋಗಬೇಕಾಗುತ್ತದೆಯೇ?” ಎಂದು ಆಕೆಯ ಅಮ್ಮ ಪ್ರಶ್ನಿಸಿದರು. “ಸಾಮಾನ್ಯವಾಗಿ ಸ್ನೇಹಲ್, ಅಪ್ಪ ಅಥವಾ ನಮ್ಮ ನೆರೆಯವರಾದ ವಿಕ್ರಮ್ ಜೊತೆಗೆ ಹೋಗುತ್ತಾಳೆ. ಆತ ತಮ್ಮ ಸ್ಕೂಟರನ್ನು ನಮಗೆ ನೀಡುತ್ತಾರಾದರೂ ನಾವು ಪೆಟ್ರೋಲ್‌ನ ಹಣವನ್ನು ಭರಿಸುತ್ತೇವೆ. ನಂತರ ಆಯಿ, ನಾವು ಮಾರಾಟ ಮಾಡಲೆಂದು ತರಕಾರಿಗಳ ಕಂತೆ ಕಟ್ಟುತ್ತಾರೆ” ಎಂದು ಆತ ತಲೆಯಾಡಿಸಿದ.
ಮಧ್ಯಾಹ್ನವು ಸಮೀಪಿಸುತ್ತಿದ್ದು, ಆತನ ಬುಟ್ಟಿಯಲ್ಲಿ ಸೊಪ್ಪಿನ ಕೆಲವು ಕಂತೆ ಮತ್ತು ಕರಿಬೇವಿನ ಚಿಗುರುಗಳು ಮಾತ್ರವೇ ಉಳಿದಿದ್ದವು.
ಮಾಯಾಳ ತಾಯಿ, ಅವೆಲ್ಲವನ್ನೂ ಕೊಂಡರು. ಆಕೆಯು ಹಣವನ್ನು ಪಾವತಿಸುತ್ತಾ, ತಮಗೆ ತರಕಾರಿಗಳು ಅವಶ್ಯವಾಗಿ ಬೇಕಿದ್ದು; ನಿಯತವಾಗಿ ತಮ್ಮ ಮನೆಗೆ ಬರಬಹುದೆಂದು ಆತನಿಗೆ ತಿಳಿಸಿದರು. ಎಲ್ಲವನ್ನೂ ಮಾರಿದ ಹಾಗೂ ಬುಟ್ಟಿಯ ಹೊರೆ ತಪ್ಪಿದ ಖುಷಿಯಿಂದ ಎದ್ದು ನಿಂತ ಚಿನ್ಮಯ್, ಹೊರನಡೆಯುತ್ತಾ, ಅವರಿಗೆ ವಿದಾಯವನ್ನು ಹೇಳಿದ.
ಪ್ರತಿಯಾಗಿ, ಮಾಯಾ, ಆತನಿಗೆ ಕೈಬೀಸಿದಳು. ಆಕೆಯು ತರಕಾರಿಗಳನ್ನು ಎತ್ತಿಡುವಾಗ, ಅಮ್ಮ, ಚಿನ್ಮಯ್‌ನ ತಾಯಿಗೇನಾದರೂ ಕೆಲಸವು ದೊರೆಯುವುದೇ ಎಂಬುದಾಗಿ ಸುತ್ತಮುತ್ತ ವಿಚಾರಿಸುತ್ತೇನೆಂದು ಹೇಳಿದರು. ಸ್ಕೂಲಿನಲ್ಲಿ ಯಾರಿಗಾದರೂ ತಿಳಿದಿರಬಹುದು ಎಂದರಾಕೆ.
ತನ್ನ ಗೆಳೆಯರು ಕೆಲಸದಲ್ಲಿ ತೊಡಗಿದ್ದು, ಎಲ್ಲ ತರಗತಿಗಳನ್ನು ತಪ್ಪಿಸಿಕೊಳ್ಳದಂತೆ, ಯಾರಾದರೂ ಸಹಾಯ ನೀಡಿದರೆ ಸಾಕೆಂಬುದು ಮಾಯಾಳ ಉತ್ಕಟ ಇಚ್ಛೆಯಾಗಿತ್ತು.
ಮಾರನೆಯ ದಿನ, ಭಾನುವಾರವಾಗಿದ್ದಾಗ್ಯೂ ಮಾಯಾಳ ಇಡೀ ಕುಟುಂಬ ಕೆಲಸದಲ್ಲಿ ಮಗ್ನವಾಗಿತ್ತು. ಕೋವಿಡ್‌ನಿಂದ ಪೀಡಿತರಾಗಿ, ಸ್ವಲ್ಪಮಟ್ಟಿನ ಉಸಿರಾಟದ ತೊಂದರೆಯ ಕಾರಣ, ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ಸಂಬಂಧಿಕರೊಂದಿಗೆ ಅಜ್ಜಿಯು ದೂರವಾಣಿ ಸಂಭಾಷಣೆಯಲ್ಲಿ ನಿರತರಾಗಿದ್ದರು. ಮಾಯಾಳ ಹಿರಿಯ ಸಹೋದರಿ, ಮುಂದಿನ ಅಧ್ಯಯನಗಳನ್ನು ಕುರಿತ ಆನ್‌ಲೈನ್ ಉಪನ್ಯಾಸದಲ್ಲಿ ಮಗ್ನಳಾಗಿದ್ದಳು. ಮಾಯಾಳ ಮಾ, ತಾನು ಶಿಕ್ಷಕಿಯಾಗಿದ್ದ ಶಾಲೆಯ ಇತರೆ ಶಿಕ್ಷಕರೊಂದಿಗಿನ ಸುದೀರ್ಘ ಕಾನ್ಫರೆನ್ಸ್ ಕಾಲ್‌ನಲ್ಲಿ ನಿರತರಾಗಿದ್ದರು. ಲೆಕ್ಕದ ಪುಸ್ತಕಗಳಲ್ಲಿ ಮಗ್ನರಾಗಿದ್ದ ಬಾಬಾ, ತಮ್ಮ ಅನೇಕ ಗ್ರಾಹಕರು ಇತ್ತೀಚೆಗೆ ದಿನಸಿಗಳ ಆನ್‌ಲೈನ್ ಖರೀದಿಯಲ್ಲಿ ತೊಡಗಿರುವ ಕಾರಣಕ್ಕಾಗಿ ಚಿಂತಿತರಾದಂತೆ ಕಂಡುಬರುತ್ತಿದ್ದರು.
ಆಜಿಯು ದೂರವಾಣಿ ಕರೆಯನ್ನು ಮುಗಿಸುತ್ತಿದ್ದಂತೆಯೇ, “ಆನಂದ್ ಕಾಕಾ (ಮರಾಠಿಯಲ್ಲಿ ಚಿಕ್ಕಪ್ಪ ಎಂಬ ಅರ್ಥವನ್ನು ನೀಡುವ ಪದ) ಹೇಗಿದ್ದಾರೆ?” ಎಂದಳು ಮಾಯಾ. ಆನಂದ್ ಕಾಕಾ ಆಕೆಗೆ ಅಚ್ಚುಮೆಚ್ಚು. ಆಗಾಗ ಅವರು, ಉತ್ತಮ ಆರೋಗ್ಯವು ಬಹು ದೊಡ್ಡ ಅನುಗ್ರಹವಿದ್ದಂತೆ ಎನ್ನುತ್ತಿದ್ದರು. “ಅವರ ಆರೋಗ್ಯ ಸುಧಾರಿಸುತ್ತದೆ” ಎನ್ನುತ್ತಾರವರು. ಕೆಲವು ದಿನಗಳವರೆಗೆ ನಿಗಾ ವಹಿಸಬೇಕಾಗುತ್ತದೆ. ನಂತರ ಅವರು ಮನೆಗೆ ಬರಬಹುದು” ಎಂದು ಅಜ್ಜಿ ಉತ್ತರಿಸಿದರು. ಮನೆಯ ಹಿಂದಿನ ಅಂಗಳದಲ್ಲಿ ಬಾಬಾ ಚೂಲೂ ಮಾಡಿದ್ದ ದೂರದರ್ಶನದತ್ತ ತಿರುಗಿದ ಆಜಿ, ದುಃಖಿತರಾಗಿ ತಲೆಯಾಡಿಸಿದರು. ಲಾಕ್‌ಡೌನ್ ಅಂದರೆ, ಎಲ್ಲ ಅಂತರ-ರಾಜ್ಯ ರೈಲು ಮತ್ತು ಬಸ್ಸುಗಳ ಸೇವೆಯು ಸ್ಥಗಿತಗೊಳ್ಳುತ್ತದೆಂದು ಅರ್ಥ. ಹೀಗಾಗಿ, ಸಾವಿರಾರು ವಲಸಿಗರು ಹಳ್ಳಿಯಲ್ಲಿನ ತಮ್ಮ ಮನೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ವರದಿಯನ್ನು ಮಾಯಾ ವೀಕ್ಷಿಸಿದಳು. “ಪರದೆಯತ್ತ ನೋಡಿದ ಬಾಬಾ, ಈ ಬಿಸಿಲಿನಲ್ಲಿ, ನೂರಾರು ಕಿ.ಮೀ.ಗಳು ಭೀಕರವೆನ್ನುತ್ತಾ ನಿಟ್ಟುಸಿರಿಟ್ಟರು.” ದಾರಿಯಲ್ಲಿ ಕುಸಿದು ಬಿದ್ದು, ಸಾವಿಗೀಡಾದ ತನ್ನದೇ ವಯಸ್ಸಿನ ಹುಡುಗಿಯೊಬ್ಬಳ ಬಗ್ಗೆ ಸುದ್ದಿಗಾರು ನೀಡುತ್ತಿದ್ದ ವರದಿಯನ್ನು ವೀಕ್ಷಿಸಿದ ಮಾಯಾ ಆಘಾತಗೊಂಡಳು.
ತಮ್ಮ ಕುರ್ಚಿಯಿಂದ ಏಳುತ್ತಾ, “ಒಂದು ನಿಮಿಷ ಶುಕ್ಷಾಜಿಯೊಂದಿಗೆ ಮಾತನಾಡಲು ತೆರಳುತ್ತಿದ್ದೇನೆ. ನನ್ನೊಂದಿಗೆ ಬರುವೆಯಾ?” ಬಾಬಾ, ಮಾಯಾಳನ್ನು ಕೇಳಿದರು. “ಅವರು ತನ್ನ ಹಳ್ಳಿಗೆ ಹಿಂದಿರುಗಬೇಕೆಂದಿದ್ದರು. ಅವರ ಯೋಜನೆ ಏನಿದೆಯೋ.”
ಅವರ ಹೌಸಿಂಗ್ ಸೊಸೈಟಿಯ ಭದ್ರತಾ ಸಿಬ್ಬಂದಿಗಳಲ್ಲಿ ಶುಕ್ಲಾಜಿಯೂ ಒಬ್ಬರು. ಮೂಲತಃ ಇವರು, ತಮ್ಮ ಪರಿವಾರವು ಈಗಲೂ ವಾಸವಾಗಿರುವ ಉತ್ತರ ಪ್ರದೇಶದವರು. ಈಗ ಕನಿಷ್ಠ ಎರಡು ವರ್ಷಗಳಿಂದ ಮುಂಬೈಯಲ್ಲಿ ಕೆಲಸಮಾಡುತ್ತಿದ್ದಾರೆ. ತಮ್ಮ ಪರಿವಾರವು ತಮ್ಮ ಬಗ್ಗೆ ಅತ್ಯಂತ ವ್ಯಾಕುಲಗೊಂಡಿದ್ದು, ಹಳ್ಳಿಯ ಮನೆಗೆ ವಾಪಸ್ಸು ಬಂದಲ್ಲಿ, ಅವರು ಸುರಕ್ಷಿತರಾಗಿರುತ್ತಾರೆಂಬ ಕಾರಣಕ್ಕಾಗಿ, ಹಳ್ಳಿಗೆ ಮರಳಬೇಕೆಂದು ಬಯಸುತ್ತಾರೆ ಎಂಬುದಾಗಿ ಆತ ಈ ಮೊದಲೇ ಬಾಬಾನಿಗೆ ತಿಳಿಸಿದ್ದರು.

ಶುಕ್ಲಾಜಿ ಗೇಟಿನ ಬಳಿ ಕುರ್ಚಿಯ ಮೇಲೆ, ತಮ್ಮ ಎಂದಿನ ಭಂಗಿಯಲ್ಲಿ ಕುಳಿತಿದ್ದರು. ಪ್ಯಾಕ್ ಮಾಡಿದ ಕೆಲವು ಬ್ಯಾಗುಗಳೊಂದಿಗೆ ಅವರ ಪಕ್ಕದಲ್ಲಿ ವ್ಯಕ್ತಿಯೊಬ್ಬರು ನಿಂತಿದ್ದರು. ತಮ್ಮ ನೆರೆಹೊರೆಯ ಕಟ್ಟಡಗಳೊಂದರಲ್ಲಿನ ಕಾವಲುಗಾರ ಮೋಹನ್ ಎಂಬುದಾಗಿ ಮಾಯಾ ಆತನನ್ನು ಗುರುತಿಸಿದಳು. ಅವರು ಅಲ್ಲಿಗೆ ತೆರಳುತ್ತಿದ್ದಂತೆ, ಮೋಹನ್, ಶುಕ್ಲಾಜಿಗೆ ವಿದಾಯವನ್ನು ಹೇಳುತ್ತಾ ಹೊರನಡೆದರು.
“ನಮಸ್ಕಾರ! ತಿರುಗಾಡಲು ಹೋಗುತ್ತಿದ್ದೀರಾ?” ಶುಕ್ಲಾಜಿ ಅವರನ್ನು ಸ್ವಾಗತಿಸಿದರು.
“ನಿಮ್ಮನ್ನು ವಿಚಾರಿಸಲೆಂದು ಬಂದೆವು,” ಮಾಯಾಳ ತಂದೆ ಉತ್ತರಿಸಿದರು. “ನಿಮ್ಮ ಪ್ರಯಾಣದ ಯೋಜನೆ ಏನಾಯಿತು? ಏನಾದರೂ ಮಾಹಿತಿ ದೊರೆಯಿತೇ?”
“ಓಹ್, ಇಲ್ಲ!” ಶುಕ್ಲಾಜಿ ಉತ್ತರಿಸಿದರು. “ಎಲ್ಲವೂ ಅವ್ಯವಸ್ಥಿತವಾಗಿದೆ.” ಲಾಕ್‌ಡೌನ್ ಅನ್ನು ಯಾವಾಗ ತೆರವುಗೊಳಿಸಲಾಗುತ್ತದೆಂಬ ಬಗ್ಗೆ ಯಾವುದೇ ಸುದ್ದಿಯಿಲ್ಲ. ಮೋಹನ್ ಅವರಂತೆ ನಾನೂ ಹತ್ತಿರದಲ್ಲಿಯೇ ವಾಸಮಾಡಬೇಕಿತ್ತು. ಅವರು ಇಂದು ಕೊಲಡ್‌ನಲ್ಲಿ ತಮ್ಮ ಮನೆಗೆ ತೆರಳುತ್ತಿದ್ದಾರೆ.”
ಆಗ, ಮಧ್ಯಾಹ್ನದ ಚಹಾದೊಂದಿಗೆ, ಸ್ಥಳೀಯ ಚಹಾ ಮಾರಾಟಗಾರ ತಮ್ಮ ಬೈಸಿಕಲ್‌ನ ಮೇಲೆ ಅಲ್ಲಿಗೆ ಬಂದರು. ಅವರಿಂದ ಚಹಾ ತೆಗೆದುಕೊಳ್ಳುತ್ತಾ, ಶುಕ್ಲಾಜಿ ಮುಂದುವರಿಸಿದರು, “ಅದೃಷ್ಟವಶಾತ್, ನಮಗೆ ಇಲ್ಲಿ ಚಹಾ ದೊರೆಯುತ್ತದೆ. ನಮ್ಮ ಏಜೆನ್ಸಿಯು ದಿನನಿತ್ಯ ನಮಗೆ ಊಟವನ್ನು ಒದಗಿಸುತ್ತದೆ. ಆದರೆ ನಾನು ಕೆಲವು ವರ್ಷಗಳ ಹಿಂದೆ ಆಂಧ್ರ ಪ್ರದೇಶದಲ್ಲಿ ಕೆಲಸಮಾಡುತ್ತಿದ್ದೆ. ನನ್ನ ಸಹೋದ್ಯೋಗಿಗಳಾಗಿದ್ದವರು ಈ ಲಾಕ್‌ಡೌನ್‌ನಲ್ಲಿ ಅತ್ಯಂತ ಕಷ್ಟವನ್ನು ಅನುಭವಿಸುತ್ತಿದ್ದಾರೆ. . . ಕೆಲಸವಿಲ್ಲದ ಕಾರಣ, ಸಂಬಳವೂ ಇಲ್ಲ.”
“ಅವರು ಹೇಗೆ ನಿಭಾಯಿಸುತ್ತಿದ್ದಾರೆ? ಅವರಿಗೆ ಸಂಬಳವನ್ನೇಕೆ ನೀಡುತ್ತಿಲ್ಲ?” ಎಂದರು ಬಾಬಾ. ಅವರ ಹಣೆಯ ಮೇಲೆ ಚಿಂತೆಯ ಗೆರೆಗಳು ಮೂಡತೊಡಗಿದವು.
“ಅವರು ಹಳ್ಳಿಯೊಂದರಲ್ಲಿ ಭದ್ರತಾ ಸಿಬ್ಬಂದಿಗಳಾಗಿ ಕೆಲಸವನ್ನು ನಿರ್ವಹಿಸುತ್ತಾರಾದರೂ ಅದು ವಿಧ್ಯುಕ್ತವಲ್ಲ. ಅಲ್ಲಿ ಯಾವುದೇ ನಿಗದಿತ ಸಂಬಳವಿಲ್ಲ. ಪ್ರತಿ ತಿಂಗಳ ಮೊದಲ ಕೆಲವು ದಿನಗಳಲ್ಲಿ, ನೆರೆಹೊರೆಯ ಎಲ್ಲ ಮನೆಗಳು ಹಾಗೂ ಅಂಗಡಿಗಳಿಗೆ ತೆರಳಿ ತಮಗೆ ಸಾಧ್ಯವಾದಷ್ಟು ಕೂಲಿಯನ್ನು ಅವರು ಸಂಗ್ರಹಿಸುತ್ತಾರೆ. ಪ್ರತಿ ಜಾಗದಿಂದ ಸುಮಾರು ೨೦-೩೦ ರೂ.ಗಳು ದೊರೆಯುತ್ತವೆ. ಆದರೆ, ಲಾಕ್‌ಡೌನ್‌ನಲ್ಲಿ, ಅಂಗಡಿಗಳು ಮುಚ್ಚಿರುವುದರಿಂದ, ಅವರಿಗೆ ಏನೂ ದೊರೆತಿಲ್ಲ,” ಎಂದರು ಶುಕ್ಲಾಜಿ.
“ಅವರ ಬಳಿ ಕನಿಷ್ಠ, ಅತ್ಯವಶ್ಯಕ ವಸ್ತುಗಳಾದರೂ ಇವೆಯೇ?” ಎಂದ ಬಾಬಾರ ಧ್ವನಿಯು ವ್ಯಾಕುಲಗೊಂಡಿತ್ತು. “ಸಾಕಷ್ಟು ಪ್ರಮಾಣದಲ್ಲಿ ಇರಲಿಲ್ಲ. ಕಳೆದ ಬಾರಿ ನಾನು ಅವರೊಂದಿಗೆ ಮಾತನಾಡಿದಾಗ, ತಮ್ಮಲ್ಲಿದ್ದ ಅಲ್ಪಸ್ವಲ್ಪ ಹಣದಿಂದ ಸಿಲಿಂಡರ್ ಮತ್ತು ಕೆಲವು ದಿನಸಿಗಳನ್ನು ಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಅದೆಲ್ಲವೂ ಬಹಳ ಬೇಗನೆ ಖಾಲಿಯಾಯಿತು.”
“ಅವರು ನಿಮ್ಮ ಹಳ್ಳಿಯವರೇ?” ಮಾಯಾ ಪ್ರಶ್ನಿಸಿದಳು. ಅವರು ವಾಪಸ್ಸು ತೆರಳಲು ಬಯಸುತ್ತಿದ್ದಿರಬೇಕು.”
“ಅದು ಅವರಿಗಿದ್ದ ಮತ್ತೊಂದು ಸಮಸ್ಯೆ!” ಶುಕ್ಲಾಜಿ ಉತ್ತರಿಸಿದರು. “ನನ್ನ ಗೆಳೆಯ ಗೋಪಾಲ್ ಮತ್ತು ಆತನ ಮಗ ನೇಪಾಳದವರು. ನೇಪಾಳ ಸರ್ಕಾರವು ದೇಶದ ಗಡಿಗಳನ್ನು ಮಾರ್ಚ್‌ನಲ್ಲಿಯೇ ಮುಚ್ಚಿತು. ಯಾರೂ ವಾಪಸ್ಸು ತೆರಳುವಂತಿರಲಿಲ್ಲ. ಹೆಚ್ಚೆಂದರೆ, ಅವರು ಗಡಿಯ ಹೊರಶಿಬಿರಗಳಲ್ಲೊಂದನ್ನು ತಲುಪಿ, ಅದನ್ನು ದಾಟಲು ಅನುಮತಿ ದೊರೆಯುವವರೆಗೂ ಕಾಯಬೇಕು.”
ವಾರ್ತೆಯಲ್ಲಿ ತಾನು ನೋಡಿದ, ದಿನಗಟ್ಟಲೆ ನಡೆಯುತ್ತಿದ್ದ ಜನರು ಹಾಗೂ ಆ ಎಲ್ಲ ಹೆಣಗಾಟದ ನಂತರವೂ ಕೆಲವರಿಗೆ ಮನೆಗೆ ತೆರಳಲು ಸಹ ಅನುಮತಿ ದೊರೆಯದ ಬಗ್ಗೆ ಯೋಚಿಸಿದ ಮಾಯ, “ಓಹ್, ಇಲ್ಲ!” ಎಂದು ಉದ್ಗರಿಸಿದಳು.
“ಎಲ್ಲಕ್ಕಿಂತ ಖೇದಕರ ಸಂಗತಿಯೆಂದರೆ. . .” ಶುಕ್ಲಾಜಿ ಮುಂದುವರಿಸಿದರು. “ಗೋಪಾಲ್ ಅವರ ಮಗನಿಗೆ ಆರೋಗ್ಯ ಅಷ್ಟಾಗಿ ಸರಿಯಿಲ್ಲ. ಕೆಲವು ತಿಂಗಳ ಹಿಂದೆ ನಡೆದ ಅಪಘಾತದಿಂದ ಆತನು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಚಿಕಿತ್ಸೆಗೂ ಅವರ ಬಳಿ ಹಣವಿಲ್ಲ. ನಾನು ಹಳ್ಳಿಗೆ ಹಿಂದಿರುಗಬೇಕೆಂದಿದ್ದೆ, ಆದರೆ ನಾನು ಇಲ್ಲಿದ್ದರೆ, ಬಹುಶಃ ಸ್ವಲ್ಪ ಹಣವನ್ನು ಉಳಿಸಿ ಆತನಿಗೆ ಸಹಾಯಮಾಡಬಹುದು. ಆಗಲೂ, ಈ ಅಗ್ನಿ ಪರೀಕ್ಷೆಯನ್ನು ನಿಭಾಯಿಸಲು ಆತನಿಗೆ ಸಾಕಷ್ಟು ಅದೃಷ್ಟದ ಅಗತ್ಯವಿದೆ.”
ಮಾಯಾಳ ಮುಖ ಕಳೆಗುಂದಿತು. ತಮಗೆ ಶುಕ್ಲಾಜಿ ತಿಳಿಸುತ್ತಿದ್ದ ಜನರ ಬಗ್ಗೆ ಆಕೆ ವ್ಯಾಕುಲಗೊಂಡಿದ್ದಳು.
ತನ್ನ ಹೋಂವರ್ಕ್ ಅನ್ನು ಮಾರನೆಯ ದಿನ, ವಾಟ್ಸ್ಯಾಪ್ ಮೂಲಕ ಸಲ್ಲಿಸುತ್ತಿದ್ದಂತೆಯೇ ಮಾಯಾ, “ಆನ್‌ಲೈನ್ ಶಾಲೆಯನ್ನು ನಾನು ದ್ವೇಷಿಸುತ್ತೇನೆ,” ಎಂದು ಗೊಣಗಿದಳು. ಸದಾ ದೂರವಾಣಿಯನ್ನು ಬಳಸುವ ಕಾರಣ, ಆಕೆಯ ತಲೆ ಮತ್ತು ಭುಜದಲ್ಲಿ ನೋವು ಕಾಣಿಸಿಕೊಂಡಿದೆಯಲ್ಲದೆ ಆಕೆ ಯಾವಾಗಲೂ ತನ್ನ ಕಣ್ಣುಗಳನ್ನು ಉಜ್ಜುತ್ತಿರುತ್ತಾಳೆ. ಆಕೆಗೆ ತನ್ನ ಸ್ನೇಹಿತರೊಂದಿಗಿನ ಮಾತುಕತೆ ತಪ್ಪಿಹೋಗಿದೆ. ಕೊನೆಯ ಗಂಟೆ ಬಾರಿಸಿ, ಶಾಲೆಯು ಮುಗಿಯುವುದನ್ನೇ ಕಾತರಿಸುತ್ತಿದ್ದ ಆಕೆಗೀಗ, ತರಗತಿಯ ವಾಟ್ಸ್ಯಾಪ್ ಗುಂಪಿಗೆ ಕೊನೆಯಿಲ್ಲದಂತೆ ಹರಿದುಬರುವ ಸಂದೇಶಗಳಿಂದಾಗಿ, ಶಾಲಾ ದಿನವು ನಿರಂತರವಾಗಿ ಮುಂದುವರಿಯುತ್ತಿರುವಂತೆ ಭಾಸವಾಗುತ್ತಿದೆ. ಅಂತರ್ಜಾಲದ(internet) ಅನಿಶ್ಚಿತತೆಯಿಂದಾಗಿ, ಕೆಲವು ನಿಮಿಷಗಳ ಕಾಲ ತರಗತಿಯನ್ನು ತಪ್ಪಿಸಿಕೊಂಡಾಗಿನ ಪಾಠಗಳ ಬಗ್ಗೆ ಮಾಯಾ ಹಾಗೂ ಆಕೆಯ ಗೆಳೆಯರು ಅದರಲ್ಲಿ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.
ಅಂತರ್ಜಾಲದ ಸಂಪರ್ಕವಿಲ್ಲದವರ ಬಗ್ಗೆ ಆಲೋಚಿಸಿದ ಆಕೆ, “ಆ ಮಕ್ಕಳು ಏನು ಮಾಡುತ್ತಾರೆ” ಎಂಬುದಾಗಿ ಬಾಬಾನನ್ನು ಕೇಳಿದಳು. “ಅವರು ಶಾಲೆಗೆ ಹೋಗುವುದೇ ಇಲ್ಲ,” ಎಂದರವರು. “ಆದರೆ ಅವರು ಅಂತರ್ಜಾಲದ ತರಗತಿಗಳ ಪಾಠಗಳನ್ನು ಕಲಿಯುವುದಾದರೂ ಹೇಗೆ?” ಮಾಯಾ ಪ್ರಶ್ನಿಸಿದಳು. ತಲೆಯಾಡಿಸಿದ ಅವರು, “ಬಹಳ ಕಷ್ಟವಾಗುತ್ತದೆ,” ಎನ್ನುತ್ತಾ ನಿಟ್ಟುಸಿರಿಟ್ಟು, “ಬಾ, ನಮ್ಮ ಕೆಲಸದ ಕಡೆ ಗಮನಹರಿಸಿ, ನಮ್ಮ ಕೈಲಾದಷ್ಟು ಸಹಾಯ ಮಾಡೋಣ” ಎಂದರು.
ಮಾಯಾ ಹಾಗೂ ಬಾಬಾ, ಪಠ್ಯಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳ ದೊಡ್ಡ ರಾಶಿಯನ್ನು ನೆಲದ ಮೇಲೆ ಹರಡಿದರು. ಅಮ್ಮನ ಶಾಲೆಯಲ್ಲಿನ ಅನೇಕ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಅವಕಾಶವಿಲ್ಲದ ಕಾರಣ, ಅಧ್ಯಾಪಕ ವರ್ಗದವು ಸಾಮಗ್ರಿಗಳ ಚಿತ್ರವನ್ನು ತೆಗೆದು ಅದನ್ನು ಆನ್‌ಲೈನ್ ಫೋಲ್ಡರ್‌ವೊಂದರಲ್ಲಿಡಲು ನಿರ್ಧರಿಸಿತು. ಮನೆಗಳಲ್ಲಿ ಪ್ರಿಂಟರ್‌ಗಳಿದ್ದ ಕೆಲವು ಅಧ್ಯಾಪಕರು ಸ್ಮಾರ್ಟ್‌ಫೋನ್‌ಗಳಿಲ್ಲದ ಮಕ್ಕಳಿಗೆ ಸ್ವಯಂಪ್ರೇರಿತರಾಗಿ ಪ್ರತಿಗಳ(copies) ಪ್ರಿಂಟ್ ಔಟ್‌ಗಳನ್ನು ತೆಗೆದರು. ಇದರಿಂದಾಗಿ, ಅವರು ಮಕ್ಕಳು ಕನಿಷ್ಠಪಕ್ಷ ಅಂಚೆಯ ಮೂಲಕವಾದರೂ ಅಧ್ಯಯನದ ಸಾಮಗ್ರಿಗಳನ್ನು ಪಡೆಯುವಂತಾಯಿತು.

ಅವರು, ಕೊಠಡಿಯಲ್ಲಿ ಸಂಗ್ರಹವಾಗಿದ್ದ ಹಳೆಯ ಪುಸ್ತಕಗಳು, ಹಾಳೆಗಳು ಮತ್ತು ರದ್ದಿಯ ಸುತ್ತ ಕಣ್ಣಾಡಿಸಿದರು. “ನಾವು ಈ ಕೆಲಸವನ್ನು ಮುಗಿಸಿದ ಬಳಿಕ, ನಮಗೆ ಅವಶ್ಯವಿಲ್ಲದವುಗಳನ್ನು ಹೊರಗೆಸೆಯತಕ್ಕದ್ದು” ಎಂದರು ಬಾಬಾ. ವೃದ್ಧಿಸುತ್ತಲೇ ಇದ್ದ ಇಷ್ಟು ದೊಡ್ಡ ರಾಶಿಯನ್ನು ನಾವೆಂದಿಗೂ ಗಮನಿಸದಿದ್ದುದು ಆಶ್ಚರ್ಯಕರ ಎಂಬುದಾಗಿ ಮಾಯಾ ಯೋಚಿಸಿದಳು. ಬಹುಶಃ ಇದಕ್ಕೂ ಮೊದಲು, ಇಷ್ಟು ದೀರ್ಘ ಅವಧಿಯವರೆಗೆ ಅವರು ಮನೆಯಲ್ಲಿರಲಿಲ್ಲದಿದ್ದುದು ಇದಕ್ಕೆ ಕಾರಣವಿರಬಹುದು.
ಮಾರಾಟವು ಕಡಿಮೆಯಾದ ಕಾರಣ, ಕಿರಾಣಿ ಅಂಗಡಿಯ ಮಾಲೀಕನು ಎರಡು ವಾರಗಳ ಕಾಲ ಪ್ರತ್ಯೇಕ ವಾಸದಲ್ಲಿದ್ದ ಹೊಸ ನೌಕರನಿಗೆ ವೇತನವನ್ನು ನಿರಾಕರಿಸಿದ್ದು, ಬಾಬಾನಿಗೆ ಲಾಕ್‌ಡೌನ್ ಸಮಯದಲ್ಲಿ ಕೇವಲ ಅರ್ಧ ಸಂಬಳವನ್ನು ಮಾತ್ರವೇ ನೀಡುವುದಾಗಿ ತಿಳಿಸಿದ್ದಾನೆ ಎಂಬುದಾಗಿ ಮುಂಜಾನೆಯೇ ಬಾಬಾ ಆಜಿಯೊಂದಿಗೆ ಮಾತನಾಡುತ್ತಿದ್ದುದನ್ನು ಮಾಯಾ ಕೇಳಿಸಿಕೊಂಡಿದ್ದಳು. ತಮ್ಮ ವಸತಿಯ ಬಾಡಿಗೆಯನ್ನು ಸಂಪೂರ್ಣವಾಗಿ ಸಲ್ಲಿಸಬೇಕಾದ ಕಾರಣ, ಇದು ಆತಂಕಕಾರಿಯಾದ ವಿಷಯ ಎಂದ ಆಜಿಯು ಉತ್ತರಿಸಿದಾಗ, ಬಾಬಾ, “ನೋಡೋಣ, ಹೆಚ್ಚು ಉಳಿತಾಯದ ಮಾರ್ಗಗಳನ್ನು ನಾವು ಆಲೋಚಿಸಬೇಕು. ನಾಳೆ ನಾನು ಕೆಲಸಕ್ಕೆ ತೆರಳುವಾಗ ರದ್ದಿಯನ್ನು ನನ್ನೊಂದಿಗೆ ಒಯ್ಯುತ್ತೇನೆ” ಎಂದರು.
ಮಾಯಾ ಅವರಲ್ಲಿಗೆ ತೆರಳುತ್ತಾ, “ಆದರೆ ನಾವು ರದ್ದಿಯನ್ನು ಸದಾ ಮೋರುಗೆ ನೀಡುತ್ತೇವೆ” ಎಂದಳು. ರದ್ದಿಯನ್ನು ಸಂಗ್ರಹಿಸುವ ಹಿರಿಯರೊಬ್ಬರು ವಾರಕ್ಕೊಮ್ಮೆ ತಮ್ಮ ನೆರೆಹೊರೆಯಲ್ಲಿ ರದ್ದಿಗಾಗಿ ಕೂಗುತ್ತಾ ಬರುತ್ತಿದ್ದರಾದರೂ, ಇತ್ತೀಚೆಗೆ ಅವರು ಕಣ್ಣಿಗೆ ಬೀಳಲಿಲ್ಲವಾಗಿ, ಮಾಯಾಗೆ ಆಶ್ಚರ್ಯವೆನಿಸಿತು.
“ತಿಂಗಳ ಆರಂಭದಲ್ಲಿ, ಮೋರು, ಕೋವಿಡ್ ಸೋಂಕಿತರಾಗಿದ್ದು, ಅವರ ಪರಿಸ್ಥಿತಿಯು ಉತ್ತಮವಾಗಿರಲಿಲ್ಲ. ಸಂಪರ್ಕಿತರನ್ನು ಗುರುತಿಸುವ ನಿಟ್ಟಿನಲ್ಲಿ, ಅವರ ಮಗನು ನೆರೆಹೊರೆಯವರಿಗೆ ಕರೆಮಾಡಿದ್ದನೆಂದು ತಿಳಿಸಿದ ಮಾ, ಆತನು ಅವರ ನಿಗಾ ವಹಿಸುತ್ತಿದ್ದಾನೆ” ಎಂದರು.
ಪಕ್ಕದ ಕೋಣೆಯಲ್ಲಿದ್ದ ದ್ಯುತಿ, “ಬಡಪಾಯಿ ಮೋರು, ಲಾಕ್‌ಡೌನ್ ಸಮಯದಲ್ಲಿ ರದ್ದಿ ವ್ಯಾಪಾರಿಗಳು ಕಠಿಣ ಪರಿಸ್ಥಿತಿಯಲ್ಲಿದ್ದಾರೆ.” ಎಂದು ಹೇಳುತ್ತಾ, ಗಣಕಯಂತ್ರ(ಕಂಪ್ಯೂಟರ್)ದೆಡೆಗೆ ತೆರಳಿ, ಲೇಖನವೊಂದನ್ನು ತೆಗೆದು, “ಬಂಗಾಳದಲ್ಲಿನ ಕಲು ದಾಸ್ ಎಂಬ ರದ್ದಿ ಮಾರಾಟಗಾರನೊಬ್ಬನನ್ನು ಕುರಿತ ಈ ಲೇಖನವನ್ನು ಅಂದು ನಾನು ಓದುತ್ತಿದ್ದೆ. ಲಾಕ್‌ಡೌನ್‌ಗಿಂತಲೂ ಮೊದಲು ಕೊಲ್ಕತ್ತದಲ್ಲಿ ೨೫ ವರ್ಷಗಳಿಂದಲೂ ಆತ ರದ್ದಿಯನ್ನು ಸಂಗ್ರಹಿಸುತ್ತಿದ್ದು, ಈಗ ತನ್ನ ಕೆಲಸವನ್ನು ನಿಲ್ಲಿಸಿದ್ದಾರೆ” ಎಂದಳು.
“25 ವರ್ಷಗಳು!” ಮಾಯಾ ಉದ್ಗರಿಸಿದಳು.
“ದೀರ್ಘಾವಧಿ, ಅಲ್ಲವೇ? ಯುದ್ಧದ ಕಾರಣದಿಂದಾಗಿ 1971ರಲ್ಲಿ ಆತ ಬಾಂಗ್ಲಾದೇಶದಿಂದ ಬಂದರು. ಲಾಕ್‌ಡೌನ್‌ಗಿಂತಲೂ ಮೊದಲು ಅವರು ಮಾಹೆಯಾನ 3000 ರೂ.ಗಳನ್ನು ಗಳಿಸುತ್ತಿದ್ದರು. ಮೋರು ಇದಕ್ಕಿಂತಲೂ ಹೆಚ್ಚಿಗೆ ಗಳಿಸುವರೆಂದು ನನಗನಿಸುವುದಿಲ್ಲ. ಈ ಸಮಯವನ್ನು ನಿಭಾಯಿಸುವ ನಿಟ್ಟಿನಲ್ಲಿ, ಹೆಚ್ಚೇನನ್ನೂ ಉಳಿಸುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ” ಎಂದಳು ದ್ಯುತಿ.
ಮಾಯಾ ಕೋಣೆಯ ಸುತ್ತಲೂ ವರ್ಷಾನುಗಟ್ಟಲೆಯಿಂದ ಶೇಖರವಾಗಿದ್ದ ಪುಸ್ತಕ, ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳ ಗುಡ್ಡೆಯ ಮೇಲೆ ಕಣ್ಣಾಡಿಸಿದಳು. ಅಪಾರ ಹಣವನ್ನು ಖರ್ಚುಮಾಡಿ ಇವುಗಳನ್ನು ಕೊಂಡಿದ್ದಾಗ್ಯೂ, ರದ್ದಿಯ ನಿಟ್ಟಿನಲ್ಲಿ ಇವುಗಳಿಗೆ ವೆಚ್ಚದ ಲವಲೇಶವೂ ದೊರೆಯುವುದಿಲ್ಲ.
ಮಾಯಾ ಪರದೆಯಲ್ಲಿ ಇಣುಕಿ, ಕಲು ದಾಸ್ ಅವರ ಭಾವಚಿತ್ರವನ್ನು ನೋಡಿದಳು. ಆಕೆಯ ತಾತನಿಗಿರಬಹುದಾದಷ್ಟೇ ವಯಸ್ಸು ಅವರದ್ದು. ಈ ಸಮಯದಲ್ಲಿ ಅವರ ಬಳಿ ಹಣವಿಲ್ಲದಂತಾದುದು ಆಕೆಗೆ ಖೇದಕರವೆನಿಸಿತು. ಕೋವಿಡ್ ಇಲ್ಲದಂತಾಗಲು ಇನ್ನೂ ಎಷ್ಟು ದೀರ್ಘ ಕಾಲವಿದೆಯೋ ಎಂದು ಯೋಚಿಸಿದ ಆಕೆ ಖಿನ್ನಳಾದಳು.
ಮಾರನೆಯ ದಿನ ಭಾನುವಾರದಂದು ಬೇಗನೇ ಎದ್ದ ಮಾಯಾಳಿಗೆ, ಮನೆಯಲ್ಲಿನ ನಿಶ್ಶಬ್ದತೆಯು ವಿಲಕ್ಷಣವೆನಿಸಿತು. ಶಾಲೆಯ ವರ್ಷ ಪ್ರಾರಂಭವಾದಾಗಿನಿಂತಲೂ ಪ್ರತಿಯೊಬ್ಬರೂ ನಿರಂತರವಾಗಿ ಕೆಲಸದಲ್ಲಿ ಮುಳುಗಿರುತ್ತಿದ್ದರು. ಆಕೆ ಹಾಗೂ ಸಹೋದರಿ ದ್ಯುತಿ, ವಾರದ ದಿನಗಳಲ್ಲಿ ಮಧ್ಯಾಹ್ನದಂದು ವರ್ಚ್ಯುಅಲ್ ತರಗತಿಗಳಲ್ಲಿ ಉಪಸ್ಥಿತರಿರುತ್ತಿದ್ದರು. ಮಾ, ತಮ್ಮ ಆನ್‌ಲೈನ್ ತರಗತಿಗಳಲ್ಲಿನ ಅಧ್ಯಾಪನದಲ್ಲಿ ಮಗ್ನರಾಗಿರುತ್ತಿದ್ದರು. ಬಾಬಾರ ಸಂಬಳವು ಕಡಿಮೆಯಾದ ಕಾರಣ, ಮಾ, ಶಾಲೆಯ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದರು. ಹೀಗಾಗಿ ಅವರು ಸಂಜೆ ಬಹಳ ಹೊತ್ತಿನವರೆಗೆ ಹಾಗೂ ವಾರದ ಕೊನೆಯ ದಿನಗಳಲ್ಲೂ ಕೆಲಸದಲ್ಲಿ ತೊಡಗಿರುತ್ತಿದ್ದರು.
ಒಂದೊಮ್ಮೆ, ಮಾಯಾಳಿಗೆ ಮನೆಕೆಲಸ (homework) ವಿರಲಿಲ್ಲ. ಆಕೆ ಎಂದಿನಂತೆ ಕಿಟಕಿಯ ಬಳಿ ತಾನು ಕುಳಿತುಕೊಳ್ಳುವ ಜಾಗಕ್ಕೆ ಹೋದಳು. ಗೇಟಿನ ಬಳಿ ಶುಕ್ಲಾಜಿ ತಮ್ಮ ಕಾಲುಗಳನ್ನು ಹಿಗ್ಗಿಸುತ್ತಿದ್ದರು. ನೆರೆಯವರ ಕಾರುಗಳು ಮತ್ತು ಮೋಟಾರ್‌ಸೈಕಲ್ಲುಗಳನ್ನು ತೊಳೆಯಲು ನಿಯುಕ್ತನಾಗಿದ್ದ ಅತೀಫ್, ಕಾಂಪೌಂಡಿನಲ್ಲಿ ಕೆಲಸದಲ್ಲಿ ತೊಡಗಿದ್ದ.
ಆತನು ತನ್ನ ಪಕ್ಕದಲ್ಲಿದ್ದ ಬಕೆಟ್ಟಿನಲ್ಲಿ ಜೂಲುಬಟ್ಟೆಯನ್ನು ಜಾಲಿಸಿ, ತಾನೀಗ ಸ್ವಚ್ಛಗೊಳಿಸುತ್ತಿದ್ದ ಮೋಟಾರ್‌ಸೈಕಲ್‌ನೆಡೆಗೆ ಮತ್ತೊಮ್ಮೆ ತಿರುಗುವ ಮೊದಲು ಅದನ್ನು ಹಿಂಡಿದ. ಅತೀಫ್ ಮಾಮೂಲಿನಂತೆ ಕಾಣುತ್ತಿರಲಿಲ್ಲ. ಕೃಶನಾಗಿದ್ದ. ಕೆಲವು ವಾರಗಳ ಹಿಂದೆ ಆತನು ಕೋವಿಡ್ ಸೋಂಕಿತನಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದನೆಂಬುದು ಮಾಯಾಳಿಗೆ ತಿಳಿದಿತ್ತು. ಈಗಲೂ ಆತ ಕೊಂಚ ನಿಶ್ಶಕ್ತನಾಗಿರುವುದನ್ನು ಮಾಯಾ ಗಮನಿಸಿದಳು. ಹಿಂದಿನಂತೆ ಆತ ಶುಕ್ಲಾಜಿಯೊಂದಿಗೆ ತಮಾಷೆಮಾಡುತ್ತಿರಲಿಲ್ಲವಷ್ಟೇ ಅಲ್ಲ, ವಾರ್ತಾಪತ್ರಿಕೆಯನ್ನು ವಿತರಿಸುತ್ತ, ಗೇಟಿನ ಮೂಲಕ ಹಾದುಹೋಗುತ್ತಿದ್ದ ಹುಡುಗರೊಂದಿಗೂ ಆತ ಹರಟುತ್ತಿರಲಿಲ್ಲ.
ಕಿಟಕಿಯಲ್ಲಿ ಮಾಯಾಳನ್ನು ಗಮನಿಸಿದ ಆತ, “ಹಲೋ ಮಾಯಾ, ಹೇಗಿದ್ದೀಯ?” ಎಂದ.
“ನಾನು ಚೆನ್ನಾಗಿದ್ದೇನೆ ಅತೀಫ್ ಅಂಕಲ್” ಮಾಯಾ ಉತ್ತರಿಸಿದಳು. “ನೀವು ಹೇಗಿದ್ದೀರ? ನಿಮಗೆ ಅನಾರೋಗ್ಯವೆಂದು ಕೇಳಿದೆ.”
“ಈಗ ಪರವಾಗಿಲ್ಲ. ಕೆಲಸ ಮಾಡುವಂತಾಗಿದ್ದೇನೆ,” ಆತ ಮುಗುಳ್ನಕ್ಕ. ಆಕೆ ಮತ್ತೇನಾದರೂ ಹೇಳುವುದಕ್ಕೆ ಮೊದಲೇ, ಆಕೆಯ ನೆರೆಯವರೊಬ್ಬರು ಅತೀಫ್‌ನ ಬಳಿಗೆ ಬಂದು ಸಂಭಾಷಣೆಗೆ ತೊಡಗಿದರು. ಅಷ್ಟರಲ್ಲಿ ಅಲ್ಲಿಗೆ ಬಂದ ಮಾ, ಕಿಟಕಿಯಲ್ಲಿ ಮಾಯಾಳ ಜೊತೆಗೂಡಿದರು.
“ಓಹೋ, ಅತೀಫ್ ಇಂದು ಮರಳಿ ಬಂದಿದ್ದಾನೆ, ಮಾ ದುಃಖದಿಂದ ನುಡಿದಳು. “ನಿನಗೆ ಗೊತ್ತೇ? ಬಹುತೇಕ ಒಂದು ವಾರದವರೆಗೂ ಆತ ಆಸ್ಪತ್ರೆಯಲ್ಲಿರಬೇಕಾಯಿತು.”
ಮಾಯಾ ತಲೆಯಾಡಿಸಿದಳು, “ಇಷ್ಟೊಂದು ಕೆಲಸವನ್ನು ನಿರ್ವಹಿಸಲು ಆತನಿನ್ನೂ ಸಾಕಷ್ಟು ಶಕ್ತನಾಗಿಲ್ಲವೆಂದು ತೋರುತ್ತದೆ.”
“ಇಲ್ಲ. ಉದ್ಯೋಗವಿಲ್ಲದೆ ಇನ್ನು ಹೆಚ್ಚು ದಿನ ಆತ ನಿಭಾಯಿಸಲಾರನೆಂದು ನನಗನಿಸುತ್ತದೆ. ತನ್ನ ಮಗನ ಸಹಾಯವೂ ಆತನಿಗೆ ಬೇಕಾಗಬಹುದು. 14 ವರ್ಷದ ಅವನು ಮುಂದಿನ ಕಟ್ಟಡದಲ್ಲಿ ಕೆಲಸಮಾಡುತ್ತಿರಬಹುದೆನಿಸುತ್ತದೆ.”
ದಿನವನ್ನು ಆರಂಭಿಸಲು ಮಾ, ಅಡಿಗೆಮನೆಗೆ ತೆರಳುತ್ತಿದ್ದಂತೆಯೇ, ಆಜಿಯೂ ಎದ್ದಿರುವುದನ್ನು ಮಾಯಾ ಗಮನಿಸಿದಳು. ಆಕೆಯು ಮತ್ತೊಮ್ಮೆ ತಮ್ಮ ಹಾರ್ಮೋನಿಯಂ ನುಡಿಸುವಲ್ಲಿ ಮಗ್ನರಾಗಿದ್ದರು. ಅದು ತನ್ನ ಲಯದಲ್ಲಿಲ್ಲವೆಂದು ಆಕೆ ಹಲವು ದಿನಗಳಿಂದ ದೂರುತ್ತಿದ್ದರು. ಮಾಯಾ ಆಕೆಯನ್ನು ಸಮೀಪಿಸಿದಾಗ, ಹಾರ್ಮೋನಿಯಂ ಅನ್ನು ಬಟ್ಟೆಯಿಂದ ಮುಚ್ಚುತ್ತಿದ್ದರು.

“ಇದು ಬೇಗನೇ ಸರಿಹೋಗುವಂತೆ ಕಾಣುತ್ತಿಲ್ಲ” ಎಂದರು ಆಜಿ.
“ನೀವು ನಿಮ್ಮ ಗೆಳೆತಿಯರಲ್ಲೊಬ್ಬರಿಗೆ ಈ ಬಗ್ಗೆ ಕರೆಮಾಡುತ್ತೀರೆಂದು ಭಾವಿಸಿದೆ” ಮಾಯಾ ಕೇಳಿದಳು.
“ಕರೆ ಮಾಡಿದ್ದೆ,” ಆಕೆಯ ಅಜ್ಜಿ ಉತ್ತರಿಸಿದರು. “ಹಳೆಯ ಗೆಳತಿಯೊಬ್ಬಳಿಗೆ ಕರೆ ಮಾಡಿದ್ದೆ. ಈ ವಾದ್ಯಗಳ ರಿಪೇರಿಯ ಕಲೆಯಲ್ಲಿ ನಿಪುಣರಾದ ಪೇಟಿವಾಲಾ (ಹಾರ್ಮೋನಿಯಂ ರಿಪೇರಿಗಾರರೆಂಬ ಹಿಂದಿ ಪದ) ಗಳ ಗುಂಪಿನ ಬಗ್ಗೆ ಆಕೆಗೆ ತಿಳಿದಿದೆ. ಅವರು ಹಾರ್ಮೋನಿಯಂಗಳನ್ನು ರಿಪೇರಿಮಾಡುತ್ತಾ ಅಕ್ಟೋಬರ್‌ನಿಂದ ಜೂನ್‌ವರೆಗೆ ರಾಜ್ಯಾದ್ಯಂತ ಪ್ರಯಾಣಿಸುತ್ತಾರೆ.”
“ಲಾಕ್‌ಡೌನ್‌ನೊಂದಿಗೆ ಅವರು ಪ್ರಯಾಣಿಸುವುದಾದರೂ ಹೇಗೆ?” ಮಾಯಾ ಪ್ರಶ್ನಿಸಿದಳು. “ಅವರಿಗೂ ಈ ಸರ್ವವ್ಯಾಪಿ ವ್ಯಾಧಿಯು ಭಯಾನಕವೆನಿಸಿರಬಹುದು.”
“ದುರದೃಷ್ಟವಶಾತ್, ಹೌದು” ಎಂದರು ಆಜಿ. “ಮಧ್ಯ ಪ್ರದೇಶದಿಂದ ಪ್ರತಿ ವರ್ಷವೂ ಬರುವ ಅವರು, ಮಾರ್ಗದಲ್ಲಿ ಹಾರ್ಮೋನಿಯಂಗಳನ್ನು ರಿಪೇರಿ ಮಾಡುತ್ತಾ, ರಾಜ್ಯಗಳಾದ್ಯಂತ ಅನೇಕ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದ ಮೇಲೆ ಅವರಿಗೆ ಇದು ಸಾಧ್ಯವಾಗುತ್ತಿಲ್ಲ.”
“ಕನಿಷ್ಠ ಪಕ್ಷ ಅವರು ಮನೆಗಾದರೂ ಹೋಗುತ್ತಾರೆಯೇ, ಆಜಿ?”
“ಇಲ್ಲ. ಇವರದ್ದೂ ಶುಕ್ಲಾಜಿ ಅವರ ಗೆಳೆಯರದೇ ಕಥೆ,” ಆಜಿ ಉತ್ತರಿಸಿದರು. “ಪ್ರಯಾಣಕ್ಕೆ ಅವರಲ್ಲಿ ಹಣವಿಲ್ಲವಷ್ಟೇ ಅಲ್ಲ, ಸಾರಿಗೆಯೂ ಇಲ್ಲ. ನಾನು ಕರೆಮಾಡಿದ ಗೆಳತಿಯು, ಅವರ್ತನ್ ಪ್ರತಿಷ್ಠಾನ್ ಎಂಬ ಸಂಸ್ಥೆಯು ಅವರಿಗೆ ಸಹಾಯಮಾಡುತ್ತಿದೆಯೆಂದು ತಿಳಿಸಿದಳು. ಅವರು ಪಡಿತರದ ಕಿಟ್‌ಗಳನ್ನು ಒದಗಿಸಲು ಹಣವನ್ನು ಸಂಗ್ರಹಿಸಿದರು.”
“ದಯಾಳುತನಕ್ಕೆ ಧನ್ಯವಾದಗಳು,” ಎಂದಳು ಮಾಯಾ. ಆದರೆ ಆಜಿ ಇನ್ನೂ ಚಿಂತಿತರಾಗಿದ್ದರು.
“ಅವರು ಗಳಿಸುವ ಸಣ್ಣ ಮೊತ್ತವು ನಿಜವಾಗಿಯೂ ಅವಮಾನಕರವಾದುದು. ಹಾರ್ಮೋನಿಯಂ ಅನ್ನು ಲಯಕ್ಕೆ ತರುವಲ್ಲಿನ ನೈಪುಣ್ಯವು ಎಷ್ಟೆಂದು ನಿನಗೆ ಗೊತ್ತೇ? ಸ್ವರಗಳು ಮತ್ತು ಶ್ರುತಿಗಳ ಬಗ್ಗೆ ನಿಪುಣರಾಗಿರಬೇಕು. ವಿಭಿನ್ನತೆಗಳನ್ನು ಅರ್ಥಮಾಡಿಕೊಂಡು, ಗಾಯನಕ್ಕೆ ತಕ್ಕಂತೆ ಅದರ ಲಯವನ್ನು ಹೊಂದಿಸಲು ಆವರ್ತನಗಳು, ಸ್ವರಜ್ಞಾನ, ತಾಳಗತಿ ಮತ್ತು ಲಯದ ಅಸಾಮಾನ್ಯ ಗ್ರಹಿಕೆಯು ಅವಶ್ಯ. ಇದು ಸುಲಭದ ಕೆಲಸವಲ್ಲ.”
“ಆದರೆ ಅವರಿಗೆ ಅಷ್ಟು ಕಡಿಮೆ ಹಣವನ್ನು ಪಾವತಿಸುವುದೇಕೆ?” ಮಾಯಾ ಕೇಳಿದಳು.
“ಏಕೆಂದರೆ ಕೆಲವೊಂದು ಕೌಶಲ್ಯಗಳನ್ನು ಈಗ ಯಾರೂ ಗುರುತಿಸುವುದಿಲ್ಲ,” ಆಜಿ ಉತ್ತರಿಸಿದರು. “ಭಾರತದ ಶಾಸ್ತ್ರೀಯ ಸಂಗೀತವು ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದು, ಅದರೊಂದಿಗೆ, ಅದನ್ನು ಬೆಂಬಲಿಸುವವರೂ ಕಷ್ಟಕ್ಕೀಡಾಗಿದ್ದಾರೆ. ನನ್ನ ಗೆಳತಿಯು ಹೇಳಿದಂತೆ, ಇಂದಿನ ದಿನಗಳಲ್ಲಿ, ಪಿಯಾನೋ ಅನ್ನು ಲಯಕ್ಕೆ ತರಲು ೭,೦೦೦ ರೂ.ಗಳಿಂದ ೮,೦೦೦ ರೂ.ಗಳವರೆಗೆ ಪಾವತಿಸಬೇಕಾಗುತ್ತದೆ. ಆದರೆ, ಹಾರ್ಮೋನಿಯಂ ಅನ್ನು ಲಯಕ್ಕೆ ತರುವವರಿಗೆ ಸಿಗುವುದು ಕೇವಲ ೨,೦೦೦ ರೂ.ಗಳು.” ಈ ಜನರು ನಿಪುಣ ಕಲೆಗಾರರು. ಆದರೆ ಕಲೆಯೇ ನಶಿಸುತ್ತಿರುವಾಗ, ಕಲೆಗಾರರು ಏನು ತಾನೇ ಮಾಡಿಯಾರು?”
ಆಜಿ, ಹಾರ್ಮೋನಿಯಂ ಅನ್ನು ದೂರದಲ್ಲಿಟ್ಟು ಕೋಣೆಯಿಂದ ಹೊರನಡೆದರು. ಮಾಯಾ ಮತ್ತೊಮ್ಮೆ ಕಿಟಕಿಯ ಬಳಿ ಕುಳಿತುಕೊಳ್ಳಲು ಅತ್ತ ಸಾಗಿದಾಗ, ಮಳೆಯು ಪ್ರಾರಂಭವಾಗಿರುವುದನ್ನು ಗಮನಿಸಿದಳು. ಸಾಮಾನ್ಯವಾಗಿ, ಮಳೆಯ ಹನಿಗಳನ್ನು ನೋಡಿ ಆಕೆ ಉತ್ತೇಜಿತಳಾಗುತ್ತಿದ್ದಳು. ಆದರಿಂದು, ಲಾಕ್‌ಡೌನ್ ಸಮಯದಲ್ಲಿ ತಾನು ಕಲಿತ ವಿಷಯಗಳೆಲ್ಲದರ ಬಗ್ಗೆ ಆಕೆ ಆಲೋಚಿಸಿದಳು. ಅದು ವೈರಸ್ ಅಲ್ಲವಾದಲ್ಲಿ, ಲಾಕ್‌ಡೌನ್ ಕಾರಣದಿಂದಾಗಿ ಜನರು ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ತಮ್ಮ ಜೀವ ಹಾಗೂ ಜೀವನೋಪಾಯವನ್ನು ಕಳೆದುಕೊಂಡ ಎಲ್ಲರ ಬಗ್ಗೆ ಮತ್ತು ಮಳೆಗಾಲವು ಈ ಎಲ್ಲವನ್ನೂ ಮತ್ತಷ್ಟು ಸಂಕಷ್ಟಕ್ಕೀಡುಮಾಡುತ್ತದೆಂಬ ವಾರ್ತೆಯ ಬಗ್ಗೆ ಆಕೆ ಆಲೋಚಿಸಿದಳು.
ದೂರದಲ್ಲಿ, ವ್ಯಕ್ತಿಯೊಬ್ಬ ಏನನ್ನೋ ತಳ್ಳುತ್ತ, ತಮ್ಮ ಕಟ್ಟಡದೆಡೆಯಿಂದ ಸಾಗುತ್ತಿರುವುದನ್ನು ಆಕೆ ನೋಡಿದಳು. ಶುಕ್ಲಾಜಿ, ಅವರೆಡೆಗೆ ಕೈಬೀಸುತ್ತಿದ್ದಂತೆ, ಮಾಯಾ ಅವರನ್ನು ಬಾಬು ಎಂದು ಗುರುತಿಸಿದಳು. ವಯೋವೃದ್ಧರಾದ ಅವರು ಮೃದು ಮಾತಿನ ದರ್ಜಿ. ಕೆಳ ರಸ್ತೆಯಲ್ಲಿ ತನ್ನ ಹೊಲಿಗೆ ಯಂತ್ರದಿಂದ ಹರಿದ ಬಟ್ಟೆಗಳನ್ನು ರಿಪೇರಿಮಾಡುತ್ತಿದ್ದರಲ್ಲದೆ, ಪ್ಯಾಚ್‌ವರ್ಕ್ ಟೇಬಲ್‌ಕ್ಲಾತ್‌ಗಳಂತಹ ಸಣ್ಣ ವಸ್ತುಗಳನ್ನು ಹೊಲಿಯುತ್ತಿದ್ದರು. ಲಾಕ್‌ಡೌನ್ ಸಮಯದಲ್ಲಿ ಅವರು ಬರುವುದನ್ನು ನಿಲ್ಲಿಸಿದ್ದರಾದರೂ, ಈಗ ಮತ್ತೊಮ್ಮೆ ಕಾಣಸಿಕ್ಕ ಅವರು ಅಶಕ್ತ ಹಾಗೂ ಬಳಲಿದಂತೆ ಕಾಣುತ್ತಿದ್ದರು.
ಅವರು ತಮ್ಮ ವಾಡಿಕೆಯ ಸ್ಥಳದಲ್ಲಿ ಹೊಲಿಗೆ ಯಂತ್ರವನ್ನಿರಿಸುವವರೆಗೂ ಮಾಯಾ ಕಾಯುತ್ತಿದ್ದಳು. ಆದರೆ ಅಚಾನಕ್ಕಾಗಿ ಮಳೆಯು ಬಿರುಸಾಗಿ ಸುರಿಯತೊಡಗುತ್ತಿದ್ದಂತೆ ಅವರು ಚಕ್ರವನ್ನುಳ್ಳ ತನ್ನ ಹೊಲಿಗೆ ಯಂತ್ರವನ್ನು ಮೂಲೆಗೆ ತಳ್ಳಿ, ಓಡಿದರು. ಕತ್ತನ್ನು ಚಾಚಿ ಅವರನ್ನು ಹುಡುಕಿದ ಮಾಯಾ, “ಸರ್ವವ್ಯಾಪಿ ವ್ಯಾಧಿಯ ನಡುವೆ ತನ್ನ ಅಂಗಡಿಯನ್ನು ಮತ್ತೊಮ್ಮೆ ನೆಲೆಗೊಳಿಸುವ ನಿಟ್ಟಿನಲ್ಲಿ ಕಳೆದ ತಿಂಗಳು ಅವರು ಏನೆಲ್ಲವನ್ನೂ ಅನುಭವಿಸಿರಬಹುದು? ಅದು ಸಾಧ್ಯವಾಗದಿದ್ದಲ್ಲಿ ಅವರ ಪರಿಸ್ಥಿತಿ ಏನಾಗಬಹುದು? ಎಂದು ಆಲೋಚಿಸತೊಡಗಿದಳು.” “ಕಟ್ಟಡದ ವಾಟ್ಸ್‌ಆಪ್ ಗುಂಪಿನಲ್ಲಿ ಎಲ್ಲರಿಗೂ ಸಂದೇಶವೊಂದನ್ನು ಕಳುಹಿಸೋಣ” ಬಾಬಾ ಬಳಲಿದ ಧ್ವನಿಯಲ್ಲಿ ಉಸುರಿದರು. “ಮಳೆ ನಿಂತು ಅವರು ಮರಳಿದಾಗ, ನಾವು ಅವನಿಗೆ ಸ್ವಲ್ಪ ಕೆಲಸವನ್ನು ನೀಡಿದಂತಾಗುತ್ತದೆ.”
ಬಾಬಾ ಸಂದೇಶವನ್ನು ಕಳುಹಿಸುತ್ತಿದ್ದಂತೆಯೇ ಮಾಯಾ ತಲೆದೂಗಿದಳು. ಬಿರುಗಾಳಿಯ ಅವಿರತ ಝೇಂಕಾರವನ್ನು ಆಲಿಸುತ್ತಾ ಆಕೆ ಕಣ್ಣು ಮುಚ್ಚಿದಳು. ಬಾಬುವಿನ ಸೌಮ್ಯ ಮುಖವನ್ನು ತನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡ ಅವಳು, ಅವರಿಗೆ ಸ್ವಲ್ಪಮಟ್ಟಿನ ಸುಯೋಗವೊದಗಲಿ ಎಂದು ಮನಸಾರೆ ಆಶಿಸಿದಳು.
ಪರಿ ಎಜುಕೇಷನ್ ತಂಡದ ಟಿಪ್ಪಣಿ
ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಕೋವಿಡ್-19 ಮತ್ತು ಮಾರ್ಚ್ 2020ರ ಲಾಕ್‌ಡೌನ್ ಪ್ರಾರಂಭವನ್ನು ಕುರಿತ ಪರಿಯ ವಿಸ್ತೃತ ಕಾರ್ಯಕ್ಷೇತ್ರವನ್ನು ಆಧರಿಸಿದೆ.
ದೇಶವು ಲಾಕ್‌ಡೌನ್‌ಗೆ ಒಳಪಡುತ್ತಿದ್ದಂತೆಯೇ, ಸುಮಾರು 122 ಮಿಲಿಯನ್ ಜನರು ತಮ್ಮ ಕೆಲಸವನ್ನು ಕಳೆದುಕೊಂಡರೆಂದು ವರದಿಯಾಗಿದ್ದು, ಅವರಲ್ಲಿನ ಬಹುತೇಕರು ಸಣ್ಣ ಪುಟ್ಟ ವ್ಯಾಪಾರಿಗಳು ಮತ್ತು ಕೂಲಿ ಕಾರ್ಮಿಕರು. ಲಾಕ್‌ಡೌನ್ ಅನ್ನು ಅನುಸರಿಸಿದ ವರ್ಷದಲ್ಲಿ, ಮನೆಬಳಕೆಯ ಆದಾಯವು ಕಡಿಮೆಯಾಗಿ, ಕುಟುಂಬಗಳಿಗೆ ಮೂಲಭೂತ ಅವಶ್ಯಕತೆಗಳಿಗೂ ಹಣವನ್ನು ಹೊಂದಿಸಲಾಗದ ಸಂಕಷ್ಟವು ತಲೆದೋರಿತು.
ನಗರದಿಂದ ಗ್ರಾಮೀಣ ಪ್ರದೇಶಕ್ಕೆ ಕೂಲಿ ಕಾರ್ಮಿಕರ ಕಾಲ್ನಡಿಗೆಯ ಸಾಮೂಹಿಕ ವಲಸೆ ಭಾರತದ ಆಧುನಿಕ ಇತಿಹಾಸದ ಮಾನವ ಕುಲಕ್ಕೆ ಒದಗಿದ ಮಹತ್ವದ ಬಿಕ್ಕಟ್ಟು ಎನ್ನಲಾಗಿದೆ. ಸುಮಾರು 11.4 ಮಿಲಿಯನ್ ವಲಸೆ ಕಾರ್ಮಿಕರಿಗೆ (ಸರಿಸುಮಾರು ನ್ಯೂಜಿಲೆಂಡ್‌ನ ಎರಡು ಪಟ್ಟು ಜನಸಂಖ್ಯೆ) ಮನೆಯನ್ನು ತಲುಪಲು ನೂರಾರು ಕಿ.ಮೀ.ಗಳನ್ನು ಕಾಲ್ನಡಿಗೆಯಲ್ಲಿ ಸವೆಸದೆ ಬೇರೆ ಆಯ್ಕೆಗಳಿರಲಿಲ್ಲ.
ಪ್ರಾರಂಭದಲ್ಲಿ, 2019ರ ಡಿಸೆಂಬರ್ 31ರಂದು ಕೋವಿಡ್-19 ಅಥವಾ ಕೊರೊನ ವೈರಸ್ ಅನ್ನು ವುಹಾನ್‌ನಲ್ಲಿ ಗುರುತಿಸಲಾಯಿತು. 2020ರ ಮಾರ್ಚ್ 11ರಂದು ವಿಶ್ವ ಆರೋಗ್ಯ ಸಂಸ್ಥೆಯು ಈ ಆಸ್ಫೋಟವನ್ನು ಸರ್ವವ್ಯಾಪಿ ವ್ಯಾಧಿಯೆಂದು ಘೋಷಿಸಿತು. ಏಪ್ರಿಲ್ 2020ರ ಹೊತ್ತಿಗೆ, ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಕೆಲವು ಪ್ರಕಾರದ ಲಾಕ್‌ಡೌನ್‌ಗೆ ಒಳಪಟ್ಟರಲ್ಲದೆ, ದೇಶಗಳು ತಮ್ಮ ಗಡಿಗಳನ್ನು ಮುಚ್ಚಿದವು.
Schoolkids: digital divide to digital partition, Lockdown lays waste to Kalu Das’s scrap work and Dealing with dissonance, restoring harmonyಗಳನ್ನು ಒಳಗೊಂಡಂತೆ, ಲೇಖಕರು ಪರಿಯ ಕಥೆಗಳಿಂದ ಈ ಲೇಖನವನ್ನು ಪ್ರಸ್ತುತಪಡಿಸಿದ್ದಾರೆ. ಇತರೆ ಎಲ್ಲ ಹೆಸರು, ಸ್ಥಳ, ಸಂಭಾಷಣೆ ಮತ್ತು ಘಟನೆಗಳು ಲೇಖಕರ ಕಲ್ಪನೆಗಳು.
ಪದಕೋಶ
ಮಾ: ಹಿಂದಿಯಲ್ಲಿ ಅಮ್ಮ ಎಂಬ ಅರ್ಥವನ್ನು ನೀಡುವ ಪದ
ಬಾಬಾ: ಮರಾಠಿಯಲ್ಲಿ ಅಪ್ಪ ಎಂಬ ಅರ್ಥವನ್ನು ನೀಡುವ ಪದ
ಕಿರಾನ: ಕಿರಾಣಿ
ಆಯಿ: ಮರಾಠಿಯಲ್ಲಿ ಅಮ್ಮ ಎಂಬ ಅರ್ಥವನ್ನು ನೀಡುವ ಪದ
ಆಜಿ: ಮರಾಠಿಯಲ್ಲಿ ಅಜ್ಜಿ ಎಂಬ ಅರ್ಥವನ್ನು ನೀಡುವ ಪದ
ಕಾಕಾ: ಮರಾಠಿಯಲ್ಲಿ ಚಿಕ್ಕಪ್ಪ ಎಂಬ ಅರ್ಥವನ್ನು ನೀಡುವ ಪದ
ಪೇಟಿವಾಲ: ಹಾರ್ಮೋನಿಯಂ ಅನ್ನು ರಿಪೇರಿಮಾಡುವವರನ್ನು ಹಿಂದಿಯಲ್ಲಿ ಹೀಗೆ ಕರೆಯಲಾಗುತ್ತದೆ
Editor's note
ಸ್ವದೇಶ ಶರ್ಮಾ ಅವರು ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ವೈವಿಧ್ಯಮಯ ನಿರೂಪಣೆಗಳು, ಅವುಗಳ ಒಳವಿಭಾಗಗಳು ಮತ್ತು ದೊಡ್ಡ ಸಾಮಾಜಿಕ ರಚನೆಗಳಲ್ಲಿ ಅವು ಆಕ್ರಮಿಸಿಕೊಂಡಿರುವ ಸ್ಥಳಗಳನ್ನು ಅನ್ವೇಷಿಸಲು ಆಸಕ್ತಿ ಹೊಂದಿದ್ದಾರೆ. ಸ್ವದೇಶ ಪತ್ರಿಕೋದ್ಯಮ ಮತ್ತು ಕಾದಂಬರಿಯನ್ನು ಸಮಾಜದ ಅತ್ಯಂತ ದುರ್ಬಲ ಜನರ ಅನುಭವಗಳನ್ನು ಹೈಲೈಟ್ ಮಾಡಲು ಮತ್ತು ಪರೀಕ್ಷಿಸಲು ಪರಿಣಾಮಕಾರಿ ಸಾಧನವೆಂದು ಪರಿಗಣಿಸುತ್ತಾರೆ. ಈ ಅನುಭವದ ಬಗ್ಗೆ ಅವರು ಹೇಳುವಂತೆ, "ಪರಿಯೊಂದಿಗಿನ ನನ್ನ ಕೆಲಸವು ವೈವಿಧ್ಯಮಯ ವ್ಯಕ್ತಿಗಳ ನಿರೂಪಣೆಗಳನ್ನು ಅನ್ವೇಷಿಸಲು ಮತ್ತು ಅವರ ಜೀವನವನ್ನು ಚಿತ್ರಿಸಲು ಅಗತ್ಯವಾದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿತು."
ಅನುವಾದ: ಶೈಲಜಾ ಜಿ.ಪಿ.
ಶೈಲಜಾ (shailaja1.gp@gmail.com) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪೇಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ನಂತಹ ಎನ್ ಜಿಒಗಳಿಗೆ ಅನುವಾದಕರಾಗಿಯೂ ಕೊಡುಗೆ ನೀಡುತ್ತಿದ್ದಾರೆ.