ನಿಯಾಜ್ ಹುಸೇನ್ ತನ್ನ ಮಲಗುವ ಕೋಣೆಯ ಗೋಡೆಯ ಮೇಲಿನ ನವಜಾತ ಶಿಶುವಿನ ಅಪೂರ್ಣ ವರ್ಣಚಿತ್ರವನ್ನು ಟೇಪ್ ಮಾಡುತ್ತಿದ್ದರು.

ಅವರು ಇದನ್ನು ಮಾಡುತ್ತಿರುವಾಗ, ಅವರ ಪತ್ನಿ ಸಮೀರಾ (ಹೆಸರು ಬದಲಾಯಿಸಲಾಗಿದೆ) ಪತಿಯ ಪೇಂಟ್ ಬ್ರಷ್ ಮತ್ತು ಪ್ಯಾಲೆಟ್ ಅನ್ನು ತರಲು ಹೋದರು. ಆದಾಗ್ಯೂ, ಈ 29 ವರ್ಷದ ಕಲಾವಿದ ಪತಿಗೆ ಅವರ ಪ್ರೀತಿಯ ಹೆಂಡತಿಯದೊಂದೇ ಬೆಂಬಲವಲ್ಲ. ಅವರಿಗೆ ಎದು ನಿಲ್ಲಲು ರಬ್ಬರ್ ಕ್ಯಾಲಿಪರ್‌ಗಳು (ದುರ್ಬಲ ಕಾಲುಳ್ಳವರಿಗೆ ಬಲವರ್ಧನೆಗಾಗಿ ಅಳವಡಿಸುವ ಆಧಾರ) ಮತ್ತು ಊರುಗೋಲುಗಳ ಸಹಾಯವೂ ಬೇಕು; ಎರಡನೆಯದನ್ನು ಅವರು ನಿಧಾನವಾಗಿ ತೆಗೆದು ಬದಿಗಿರಿಸುತ್ತಾರೆ, ಹೀಗೆ ಮಾಡಿದರೆ ಅವರಿಗೆ ಚಿತ್ರ ಬಿಡಿಸುವುದು ಸುಲಭ. ಒಮ್ಮೆ ನಿಯಾಜ್ ಪಾಲಿಗೆ ಎಲ್ಲವೂ ಸುಸೂತ್ರ ಎನ್ನಿಸಿದ ನಂತರ, ಸಮೀರಾ ಕೋಣೆಯಿಂದ ಹೊರಹೋಗುತ್ತಾರೆ.

ಅವರಿಗೆ ಈ ರೀತಿಯ ಬೆಂಬಲದ ಅಗತ್ಯವಿರುವುದು ಏಕೆಂದರೆ, ಜೀವನದ ಬಹುಭಾಗವನ್ನು ಅವರು ಪೋಲಿಯೊ ಅಥವಾ ಪೋಲಿಯೊ ಮೈಲಿಟಿಸ್ ಎಂಬ ವೈದ್ಯಕೀಯ ಪದದಿಂದ ಗುರುತಿಸಿಕೊಳ್ಳುವ ಊನದ ಜೊತೆ ಜೀವಿಸಿದ್ದಾರೆ.

ನಿಯಾಜ್ ದೆಹಲಿಯ ಜಾಮಿಯಾ ನಗರ ಮೂಲದ ಕಲಾವಿದ, ಅವರು ತನ್ನ ಅಂಗವೈಕಲ್ಯದ ಹೊರತಾಗಿಯೂ, ಸಾಲ್ವಡಾರ್ ಡಾಲಿ ಮತ್ತು ಮಧುಬನಿ ವರ್ಣಚಿತ್ರಕಾರರ ಕೃತಿಗಳಿಂದ ಪ್ರೇರಿತವಾದ ಬದುಕಿನ ಭಿತ್ತಿಚಿತ್ರಗಳಿಗಿಂತ ದೊಡ್ಡದಾದ ವರ್ಣಚಿತ್ರಗಳನ್ನು ಚಿತ್ರಿಸುತ್ತಾರೆ.

ನಿಯಾಜ್ ಹುಸೇನ್ ತನ್ನ ಕಲಾಕೃತಿಯೊಂದಿಗೆ. ಬಾಲ್-ಪಾಯಿಂಟ್ ಪೆನ್ ರೇಖಾಚಿತ್ರಗಳು ನಿಯಾಜ್ ಅವರ ಚಿತ್ರಗಳ ಲೆಕ್ಕದಲ್ಲಿ ಮುಂಚೂಣಿಯಲ್ಲಿದ್ದರೂ, ಅವರು ಬಣ್ಣದ ಭಾವಚಿತ್ರಗಳನ್ನು ಸಹ ಮಾಡುತ್ತಾರೆ. ಅವರು ಸ್ಪ್ಯಾನಿಷ್ ಕಲಾವಿದ ಸಾಲ್ವಡಾರ್ ಡಾಲಿ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಫೋಟೋ: ವಿಕ್ಕಿ ರಾಯ್

“ನಾನು ಒಮ್ಮೆ 15 ಅಡಿ ಎತ್ತರದ ವರ್ಣಚಿತ್ರವನ್ನು ಮಾಡಿದ್ದೆ. ಆಗ ಕ್ಯಾನ್ವಾಸಿನ ಮೇಲ್ಭಾಗವನ್ನು ತಲುಪಲು, ನಾನು ನನ್ನ ಕ್ಯಾಲಿಪರ್‌ಗಳನ್ನು ತೆಗೆದು ಕುರ್ಚಿಯ ಮೇಲೆ ಜೋಡಿಸಲಾದ ಸ್ಟೂಲಿನ ಮೇಲೆ ಕುಳಿತುಕೊಳ್ಳುತ್ತಿದ್ದೆ. ಬೀಳುವ ಭಯ ನನಗಿರಲಿಲ್ಲ” ಎಂದು ನಿಯಾಜ್ ನೆನಪಿಸಿಕೊಳ್ಳುತ್ತಾರೆ. “ಕ್ಯಾಲಿಪರ್‌ಗಳಿಂದಾಗಿ ನನ್ನ ಮೊಣಕಾಲುಗಳಿಗೆ ಗಾಯ ಮಾಡಿಕೊಂಡ ಸಂದರ್ಭಗಳಿವೆಯಾದರೂ, ನಾನು ಬಣ್ಣ ಹಚ್ಚುವಾಗ ಗಾಯಗಳ ಬಗ್ಗೆ ಮರೆತುಬಿಡುತ್ತೇನೆ” ಎಂದು ಅವರು ಹೇಳುತ್ತಾರೆ.

1993ರಲ್ಲಿ ಎರಡು ವರ್ಷದ ನಿಯಾಜ್‌ಗೆ ತೀವ್ರ ಜ್ವರ ಕಾಣಿಸಿಕೊಂಡಾಗ ಅದು ದುರಾದೃಷ್ಟದ ರಾತ್ರಿಯಾಗಿತ್ತು. ಕೆಲವು ದಿನಗಳ ನಂತರ, ಅವರ ಎಡ ಪಾದವು ಒಳಮುಖವಾಗಿ ಬಾಗಲು ಪ್ರಾರಂಭಿಸಿತು. ಸಕಾಲಿಕ ಮತ್ತು ಸರಿಯಾದ ವೈದ್ಯಕೀಯ ಆರೈಕೆಯ ಕೊರತೆಯು ನಿಯಾಜ್ ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಲು ಕಾರಣವಾಯಿತು. ಪೋಲಿಯೋ ವೈರಸ್ ಸೋಂಕಿಗೆ ಒಳಗಾಗುವ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 200 ಮಕ್ಕಳಲ್ಲಿ ಒಬ್ಬರು ಗುಣಪಡಿಸಲಾಗದ ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ ಎಂದು 2021ರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ವರದಿ ತಿಳಿಸಿದೆ.

1995ರಲ್ಲಿ, ವಿಶ್ವದ 60 ಪ್ರತಿಶತದಷ್ಟು ಪೋಲಿಯೊ ಪ್ರಕರಣಗಳು ಭಾರತದಲ್ಲಿತ್ತು. ಅರವತ್ತರ ದಶಕದಲ್ಲಿ ಮೌಖಿಕ ಲಸಿಕೆಗಳನ್ನು ಪರಿಚಯಿಸಲಾಗಿತ್ತು, ಆದರೆ ಅಂತಹ ಚುಚ್ಚುಮದ್ದಿನ ಕಡಿಮೆ ಪರಿಣಾಮಕಾರಿತ್ವದ ದರದಿಂದಾಗಿ ಪ್ರಕರಣಗಳು ಹೆಚ್ಚಾಗಿವೆ ಎಂದು ಈ ವರದಿ ಹೇಳುತ್ತದೆ. ಮೌಖಿಕ ಪೋಲಿಯೋ ಲಸಿಕೆಯನ್ನು ಪರಿಚಯಿಸಿದ ಎರಡು ದಶಕಗಳ ನಂತರ, 2014ರ ವೇಳೆಗೆ, ಭಾರತವು ಈ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಯಿತು.

ಉತ್ತರ ಪ್ರದೇಶದ ಜೌನಪುರ ನಗರದಲ್ಲಿ ಜನಿಸಿದ ನಿಯಾಜ್ ಅಲ್ಲೇ ವಾಸಿಸುತ್ತಿರುವಾಗಲೇ ಕೇಂದ್ರ ಸರ್ಕಾರದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಅವರ ತಾಯಿ ಶೆಹನಾಜ್ ಬೇಗಂ ಅವರು ನಿಯಾಜ್ ಅವರಿಗೆ ಲಸಿಕೆ ಕೊಡಿಸಲು ಪತಿ ಜಾಫರ್ ಖಾನ್ ಮತ್ತು ಅತ್ತೆ-ಮಾವಂದಿರ ಮನವೊಲಿಸಲು ಹಲವಾರು ಬಾರಿ ಪ್ರಯತ್ನಿಸಿದರು. “ಅವರ ತಂದೆ ನನ್ನನ್ನು ನಿರ್ಲಕ್ಷಿಸಿದರು, ಏಕೆಂದರೆ ನೆರೆಹೊರೆಯಲ್ಲಿ ಒಂದು ಮಗುವು [ಮೌಖಿಕ] ಲಸಿಕೆ ಪಡೆದ ಕೆಲವು ದಿನಗಳ ನಂತರ ಸಾವನ್ನಪ್ಪಿತ್ತು. ಆ ಸಮಯದಲ್ಲಿ, ಜೌನ್ಪುರದಲ್ಲಿ, ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸಲು ಯಾರಿಗೂ ಅನುಮತಿ ಸಿಗುತ್ತಿರಲಿಲ್ಲ” ಎಂದು ಅವರು ವಿವರಿಸುತ್ತಾರೆ.

ನಿಯಾಜ್‌ಗೆ ಜ್ವರ ಕಾಣಿಸಿಕೊಂಡ ರಾತ್ರಿ (1993), ಶೆಹನಾಜ್ ಮತ್ತು ಅವರ ಪತಿ ತಮ್ಮ ಮನೆಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಜೌನ್ ಪುರದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. “ವೈದ್ಯರು ಇದನ್ನು ಪೋಲಿಯೋ ಎಂದು ಪತ್ತೆಹಚ್ಚಿದರು ಮತ್ತು ‘ಅವನಿಗೆ ಚಿಕಿತ್ಸೆ ನೀಡಲು ಇಲ್ಲಿ ಏನೂ ಮಾಡಲು ಸಾಧ್ಯವಿಲ್ಲ, ದಯವಿಟ್ಟು ದೆಹಲಿಗೆ ಕರೆದೊಯ್ಯಿರಿ’ ಎಂದು ಹೇಳಿದರು” ಎಂದು ಶೆನಾಜ್ ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಉತ್ತಮ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ಭರವಸೆಯೊಂದಿಗೆ ಕುಟುಂಬವು 1993ರಲ್ಲಿ ಜೌನ್ಪುರದಿಂದ ದೆಹಲಿಗೆ ಸ್ಥಳಾಂತರಗೊಂಡಿತು.

ದೆಹಲಿಯಲ್ಲಿ, ನಿಯಾಜ್ ಅವರನ್ನು ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಆದರೆ ಏನೂ ಪ್ರಯೋಜನವಾಗಲಿಲ್ಲ. ಆ ಹೊತ್ತಿಗೆ, ಯೋಜಿಸಿದಂತೆ ಜೌನ್ಪುರಕ್ಕೆ ಮರಳಲು ಕುಟುಂಬದ ಬಳಿ ಹಣವಿರಲಿಲ್ಲ, ಆದ್ದರಿಂದ ಅವರು ದೆಹಲಿಯಲ್ಲಿಯೇ ಉಳಿದರು ಮತ್ತು ಅಲ್ಲಿ ಕೆಲಸವನ್ನು ಕಂಡುಕೊಂಡರು. “ನಾನು ಮತ್ತು ನನ್ನ ಪತಿ ದೆಹಲಿಯ ಗೋವಿಂದಪುರಿಯಲ್ಲಿ ಟೈಲರ್ ವರ್ಕ್‌ ಶಾಪಿನಿಲ್ಲಿ ಕೆಲಸ ಮಾಡುತ್ತಿದ್ದೆವು. ನಮಗೆ ಆ ಒಂದು ಬಟ್ಟೆಗೆ ಇಷ್ಟೆಂದು ಪಾವತಿಸಲಾಗುತ್ತಿತ್ತು ಮತ್ತು ಒಟ್ಟಿಗೆ ನಾವು ತಿಂಗಳಿಗೆ 2,500 ರೂಪಾಯಿಗಳನ್ನು ಸಂಪಾದಿಸಲು ಯಶಸ್ವಿಯಾಗುತ್ತಿದ್ದೆವು,” ಎಂದು ಶೆಹನಾಜ್ ಹೇಳುತ್ತಾರೆ.

ನಿಯಾಜ್ ಬೆಳೆಯುತ್ತಿದ್ದಂತೆ, ಅವರ ತಾಯಿ ಅವರಿಗೆ ಚಿಕಿತ್ಸೆ ಕೊಡಿಸುವುದನ್ನು ಬಿಡಲಿಲ್ಲ ಮತ್ತು ಅವರನ್ನು ಗುಣಪಡಿಸಬಹುದೆಂದು ಆಶಿಸಿ ಮನೆಮದ್ದುಗಳ ಮೊರೆಹೋದರು. “ಅಮ್ಮ ನನ್ನ ಪಾದಗಳಿಗೆ ಹಗ್ಗದಿಂದ ಇಟ್ಟಿಗೆಗಳನ್ನು ಕಟ್ಟುತ್ತಿದ್ದರು. ನಾನು ನಿದ್ರಿಸುವಾಗ, ಇಟ್ಟಿಗೆಗಳನ್ನು ನನ್ನ ಚಾರ್ಪಾಯ್ [ಮಂಚ] ಅಂಚಿನಲ್ಲಿ ನೇತುಹಾಕಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಳು. ಇಟ್ಟಿಗೆಗಳ ಭಾರವು ಇಡೀ ರಾತ್ರಿ ನನ್ನ ಕಾಲುಗಳನ್ನು ನೇರವಾಗಿರಿಸುತ್ತಿತ್ತು” ಎಂದು ನಿಯಾಜ್ ಹೇಳುತ್ತಾರೆ, ಈಗಲೂ ಆ ತೀವ್ರವಾದ ನೋವನ್ನು ನೆನಪಿಸಿಕೊಳ್ಳುತ್ತಾರೆ. ಅವರ ಪಾರ್ಶ್ವವಾಯು ಸ್ಥಿತಿ ಸುಧಾರಿಸಿದರೂ, ಎಡಗಾಲಿನ ಸ್ಥಿತಿಯು ಬದಲಾಗಲಿಲ್ಲ.

ನಿಯಾಜ್ ಇಂದು ಈ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನೀಡಿದ ಶೇಕಡಾ 90ರಷ್ಟು ಅಂಗವೈಕಲ್ಯ ಹೊಂದಿರುವ ಪ್ರಮಾಣಪತ್ರವನ್ನು ಹೊಂದಿದ್ದಾರೆ.


ನಿಯಾಜ್ ಮೊದಲ ಬಾರಿಗೆ ಐದು ವರ್ಷದವನಾಗಿದ್ದಾಗ ಒಂದು ಜೋಡಿ ಕ್ಯಾಲಿಪರ್‌ಗಳನ್ನು ಧರಿಸಿದ್ದರು. “ಆ ದಿನಗಳಲ್ಲಿ, ಕ್ಯಾಲಿಪರ್‌ಗಳನ್ನು ಕಬ್ಬಿಣದ ಸರಳುಗಳಿಂದ ಮಾಡಲಾಗುತ್ತಿತ್ತು, ಅದು ತುಂಬಾ ಭಾರವಾಗಿತ್ತು. ಅವು ಒಟ್ಟು ಎರಡು ಕಿಲೋಗಳಷ್ಟು ತೂಕವನ್ನು ಹೊಂದಿದ್ದವು ಮತ್ತು ಕ್ಯಾಲಿಪರ್‌ಗಳ ಮೇಲಿನ ಮೊಣಕಾಲು ಟೋಪಿಗಳು ಆಗಾಗ್ಗೆ ನನ್ನ ಬಟ್ಟೆಗಳನ್ನು ಹರಿದು, ನನ್ನ ಮೊಣಕಾಲುಗಳನ್ನು ನೋಯಿಸುತ್ತಿದ್ದವು” ಎಂದು ಅವರು ಹೇಳುತ್ತಾರೆ.

ದೈಹಿಕ ಮತ್ತು ಇತರ ಅನೇಕ ತೊಂದರೆಗಳ ಹೊರತಾಗಿಯೂ, ಶಾಲೆಯು ನಿಯಾಜ್ ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಫೋಟೋ: ವಂದನಾ ಬನ್ಸಾಲ್

ಅವರ ನೋವಿನ ಸ್ಥಿತಿ ಮತ್ತು ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಲು ಕಳೆದ ಸಮಯದಿಂದಾಗಿ, ನಿಯಾಜ್ ಅಂತಿಮವಾಗಿ ಶ್ರೀನಿವಾಸಪುರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಗೆ ದಾಖಲಾಗುವಾಗ ಅವರಿಗೆ ಏಳು ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ, ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಅವರ ತಾಯಿ ಅವರನ್ನು ಶಾಲೆಗೆ ಕರೆದೊಯ್ಯಬೇಕಾಯಿತು. ಅವರು ಶಾಲೆಯ ಶೌಚಾಲಯವನ್ನು ಉಳಿದ ಮಕ್ಕಳಂತೆ ಬಳಸಲು ಹೆಣಗಾಡುತ್ತಿದ್ದರು; ಅವರಿಗೆ ಸಹಾಯ ಮಾಡಲೆಂದು ತಾಯಿಯನ್ನು ಆಗಾಗ್ಗೆ ಮನೆಯಿಂದ ಕರೆಸಲಾಗುತ್ತಿತ್ತು.

ಈ ತೊಂದರೆಗಳ ಹೊರತಾಗಿಯೂ, ಶಾಲೆಯಲ್ಲಿ ನಿಯಾಜ್ ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಶಾಲಾ ದಿನಗಳನ್ನು ಹಿಂತಿರುಗಿ ನೋಡಿದಾಗ, “ನಾನು ಆಗಾಗ್ಗೆ ಕೊನೆಯ ಬೆಂಚಿನಲ್ಲಿ ಕುಳಿತು ಡೂಡಲ್ ಮಾಡುತ್ತಿದ್ದೆ” ಎಂದು ಅವರು ಹೇಳುತ್ತಾರೆ. 4ನೇ ತರಗತಿಯಲ್ಲಿ ಅವರು ಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದರು ಆದರೆ ಅವರನ್ನು ಆಯ್ಕೆ ಮಾಡಲಿಲ್ಲ. “ನಾನು ನನ್ನ ಕಲೆಯನ್ನು ಸುಧಾರಿಸಿಕೊಳ್ಳಬೇಕು ಎಂದು ನನಗೆ ತಿಳಿದಿತ್ತು” ಎಂದು ಅವರು ಹೇಳುತ್ತಾರೆ.

ನಿಯಾಜ್ ಮತ್ತು ಅವರ ತಂಡದವರು ಬಿಡಿಸಿದ ದೆಹಲಿ ಹೈಕೋರ್ಟ್ ಬಳಿಯ ಗೋಡೆ ವರ್ಣಚಿತ್ರಗಳು. ಫೋಟೋ: ವಿಕ್ಕಿ ರಾಯ್

ಮನೆಯಲ್ಲಿ, ಅವರ ಕಲೆಯು ತಂದೆಯಿಂದಾಗಿ ತೊಂದರೆಗೆ ಸಿಲುಕಿತು, ಅವರು ನಿಯಾಜ್‌ರನ್ನು ಹೊಡೆಯುತ್ತಿದ್ದರು. ಏಕೆಂದರೆ ಅವರ ವರ್ಣಚಿತ್ರಗಳು ಪ್ರಾತಿನಿಧಿಕವಾಗಿದ್ದವು, ಮತ್ತವು ಇಸ್ಲಾಂನಲ್ಲಿ ಹರಾಮ್ ಎಂದು ಪರಿಗಣಿಸಲ್ಪಟ್ಟಿವೆ ಅಥವಾ ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿವೆ.

ಪೋಲಿಯೊ ನಾಲ್ಕು ಮಕ್ಕಳಲ್ಲಿ ಹಿರಿಯವನಾಗಿ ನಿಯಾಜ್ ಅವರನ್ನು ಬದುಕಿನ ಜವಾಬ್ದಾರಿಗಳಿಂದ ಮುಕ್ತಗೊಳಿಸಲಿಲ್ಲ, ಮತ್ತು ಅವರು ಶಾಲೆ ಮುಗಿಸಿದ ನಂತರ, ತನ್ನ ಕುಟುಂಬವನ್ನು ಪೋಷಿಸಲು ಕೆಲಸ ಮಾಡಲು ಪ್ರಾರಂಭಿಸಿದರು. ಅವರು ತಮ್ಮ ಚಿಕ್ಕಪ್ಪನೊಂದಿಗೆ ಓಖ್ಲಾ ಮಂಡಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು ಮತ್ತು ದಿನಕ್ಕೆ 200-250 ರೂ.ಗಳನ್ನು ಸಂಪಾದಿಸುತ್ತಿದ್ದರು. ಮಂಡಿಯಲ್ಲಿ ಬೆಳಿಗ್ಗೆ ಸಂಪಾದಿಸಿದ ಹಣವನ್ನು ತನ್ನ ಕುಟುಂಬಕ್ಕೆ ನೀಡಿದರೆ, ದಿನದ ಉಳಿದ ಸಂಪಾದನೆಯು ಕಲಾ ಸಾಮಗ್ರಿಗಳಿಗೆ ಖರ್ಚಾಗುತ್ತಿತ್ತು. “ಮಂಡಿಯಲ್ಲಿ ಮಧ್ಯಾಹ್ನದ ನಿದ್ದೆ ಮಾಡುವ ಕಾರ್ಮಿಕರ ಭಾವಚಿತ್ರಗಳನ್ನು ಬಿಡಿಸುವುದನ್ನು ನಾನು ಆನಂದಿಸುತ್ತಿದ್ದೆ” ಎಂದು ನಿಯಾಜ್ ಹೇಳುತ್ತಾರೆ. 19ನೇ ವಯಸ್ಸಿನಲ್ಲಿ, ಅವರು ಮೆಹೆಂದಿ ಮತ್ತು ಹಚ್ಚೆ ಕಲಾವಿದರಾಗಿಯೂ ಕೆಲಸ ಮಾಡಿದರು ಮತ್ತು ಪೀಠೋಪಕರಣಗಳ ಅಂಗಡಿಯಲ್ಲಿ ವಿನ್ಯಾಸಗಳನ್ನು ಕೆತ್ತುವ ಕೆಲಸವನ್ನೂ ಮಾಡಿದರು, ನಂತರ ಅಲ್ಲಿ ಅವರಿಗೆ ಕೆಲವು ಕೆತ್ತನೆ ಕೌಶಲ್ಯಗಳನ್ನು ಕಲಿಸಿದರು. “ನಾನು ಏನೇ ಮಾಡಿದರೂ, ಅದು ನನ್ನ ಕಲೆಗೆ ಸಂಬಂಧಿಸಿದೆಯೇ ಎಂದು ನಾನು ಖಚಿತಪಡಿಸಿಕೊಳ್ಳುತ್ತಿದ್ದೆ” ಎಂದು ಅವರು ವಿವರಿಸುತ್ತಾರೆ.

2015ರಲ್ಲಿ, ನಿಯಾಜ್ 23 ವರ್ಷದವರಾಗಿದ್ದಾಗ, ಅವರು ದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಲಲಿತಕಲಾ ಪದವಿ ತರಗತಿ ಸೇರಿಕೊಂಡರು. ನಾಲ್ಕು ವರ್ಷಗಳ ಕೋರ್ಸ್ ಪೂರ್ಣಗೊಳಿಸಿದ ನಂತರ, ಅವರು ಇಂಡಿಯಾ ಗೇಟ್, ಬಹದ್ದೂರ್ ಷಾ ಜಾಫರ್ ಮಾರ್ಗ್ ಮತ್ತು ದೆಹಲಿ ಗಾಲ್ಫ್ ಕೋರ್ಸ್ ಸುತ್ತಮುತ್ತಲಿನ ಪ್ರದೇಶಗಳ್ಲಲಿ ಭಿತ್ತಿಚಿತ್ರಗಳನ್ನು ಖಾಸಗಿ ಕಂಪನಿಯೊಂದರಲ್ಲಿ ಫ್ರೀಲಾನ್ಸರ್‌ ಆಗಿ ಚಿತ್ರಿಸಿದರು.

ನಿಯಾಜ್‌ ಮತ್ತು ಸಮೀರಾ, ಸಮೀರಾ ಅಲ್ಲಿನ ಅವರ ಸಹೋದರಿ ಮಮತಾರಿಗೆ ಅಂಗವೈಕಲ್ಯದ ಸರ್ಟಿಫಿಕೇಟ್‌ ಪಡೆಯಲೆಂದು ಸಹಾಯ ಮಾಡಲು ಅವರ ಮನೆಗೆ ಹೋಗಿದ್ದಾಗ ಪರಸ್ಪರ ಭೇಟಿಯಾದರು. ಅವರು ಅಲ್ಲಿನ ಅಕ್ಕಪಕ್ಕದ ಕೊಳಗೇರಿಗಳಲ್ಲಿ ಈ ವಿಷಯದಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದರು. “ನಾನು ಶ್ರೀನಿವಾಸಪುರಿಯ ಜನರಿಗೆ ಸಹಾಯ ಮಾಡುತ್ತಿದ್ದೆ ಮತ್ತು ಆ ಸಮಯದಲ್ಲಿ ನಾನು ಅವಳನ್ನು ಭೇಟಿಯಾದೆ” ಎಂದು ನಿಯಾಜ್ ಹೇಳುತ್ತಾರೆ. ಏಳು ವರ್ಷಗಳ ಕಾಲ ಪ್ರೇಮದಲ್ಲಿದ್ದ ಜೋಡಿ 2020ರಲ್ಲಿ ಮದುವೆಯಾಗಲು ತೀರ್ಮಾನಿಸಿದರು. . “ಪ್ರಪೋಸ್ ಕಿಯಾ ಥಾ… ಫೂಲ್ ದಿಯಾ ಥಾ ಅನ್ಸಾಲ್ ಪ್ಲಾಜಾ ಮೇ ಕಿ, ‘ಆಪ್ ಪಸಂದ್ ಹೋ… ಆಪ್ಸೆ ಶಾದಿ ಕರ್ನಾ ಚಾಹ್ತಾ ಹೂಂ’ (ಅನ್ಸಾಲ್ ಪ್ಲಾಜಾದಲ್ಲಿ ಹೂಗಳೊಂದಿಗೆ ನನಗೆ ಪ್ರಪೋಸ್ ಮಾಡಿದರು, ಅವರು ನನ್ನನ್ನು ಇಷ್ಟಪಡುತ್ತೇನೆ ಮತ್ತು ನನ್ನನ್ನು ಮದುವೆಯಾಗಲು ಬಯಸುತ್ತೇನೆ ಎಂದು ಕೋರಿಕೊಂಡರು)” ಎಂದು ಸಮೀರಾ ಹೇಳುತ್ತಾರೆ.

ನಿಯಾಜ್ ಪ್ರಸ್ತುತ ತನ್ನ ಪತ್ನಿ, ಪೋಷಕರು ಮತ್ತು ಮೂವರು ಕಿರಿಯ ಒಡಹುಟ್ಟಿದವರೊಂದಿಗೆ ಜಾಮಿಯಾ ನಗರದ ಬಾಡಿಗೆ ಫ್ಲ್ಯಾಟ್ ಒಂದರಲ್ಲಿ ವಾಸಿಸುತ್ತಿದ್ದಾರೆ. ಅವರು ವರ್ಷಕ್ಕೆ ಸರಾಸರಿ ಮೂರರಿಂದ ನಾಲ್ಕು ವರ್ಣಚಿತ್ರಗಳನ್ನು ಮಾರಾಟ ಮಾಡುತ್ತಾರೆ ಮತ್ತು ಅವರ ವರ್ಣಚಿತ್ರಗಳ ಬೆಲೆ 30,000ದಿಂದ 2.8 ಲಕ್ಷ ರೂಪಾಯಿಗಳ ನಡುವೆ ಇರುತ್ತದೆ. ಅವರು ಸರ್ಕಾರೇತರ ಸಂಸ್ಥೆಯಲ್ಲಿ (ಅವರು ಹೆಸರಿಸಲು ಬಯಸಲಿಲ್ಲ) ಪೂರ್ಣ ಸಮಯದ ಉದ್ಯೋಗವನ್ನು ಸಹ ಹೊಂದಿದ್ದಾರೆ, ಅಲ್ಲಿ ಅವರು ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಾರೆ ಮತ್ತು ಭೌತಿಕ ಕಲಾ ಸ್ಥಾಪನೆಗಳನ್ನು ಮಾಡುತ್ತಾರೆ. “ಅಂಟುರೋಗದ ವರ್ಷವು ನನ್ನ ಕಲೆಗೆ ಆಶ್ಚರ್ಯಕರವಾಗಿ ಉತ್ತಮವಾಗಿತ್ತು. ನಾನು ಮನೆಯಿಂದ ಕೆಲಸ ಮಾಡಿದ್ದೇನೆ ಮತ್ತು ಚಿತ್ರ ಬಿಡಿಸಲು ಸಾಕಷ್ಟು ಸಮಯ ಸಿಕ್ಕಿತು. ಮೂರು ತಿಂಗಳಲ್ಲಿ ಆರು ವರ್ಣಚಿತ್ರಗಳನ್ನು ಮಾರಾಟ ಮಾಡಿದ್ದೇನೆ” ಎಂದು ಅವರು ಹೇಳುತ್ತಾರೆ, “ನನ್ನ ಗುರಿ ಹಣವಲ್ಲ. ನಾನು ಹೆಸರು ಗಳಿಸಲು ಬಯಸುತ್ತೇನೆ. ಜನರು ‘ನಿಯಾಜ್ ಹುಸೇನ್’ ಎಂದರೆ ಯಾರೆಂದು ತಿಳಿದಿರಬೇಕು.”

ಪರಿ ಎಜುಕೇಷನ್ ಅಂಚಿನಲ್ಲಿರುವ ಗುಂಪುಗಳ ಬಗ್ಗೆ ಬರೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ. ವಿಕಲಚೇತನರ ಕುರಿತ ಈ ಸರಣಿಯನ್ನು ಪುಣೆಯ ತಥಾಪಿ ಟ್ರಸ್ಟ್ ಬೆಂಬಲಿಸಿದೆ. ನೀವು ಈ ಲೇಖನವನ್ನು ಮರುಪ್ರಕಟಿಸಲು ಬಯಸಿದರೆ, ದಯವಿಟ್ಟು zahra@ruralindiaonline.org ಮತ್ತು namita@ruralindiaonline.org (CC ಮೇಲ್) ಈ ವಿಳಾಸಕ್ಕೆ ಬರೆಯಿರಿ.

Editor's note

ವಂದನಾ ಬನ್ಸಾಲ್ ನವದೆಹಲಿಯ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸ್ಟಡೀಸ್‌ ಸಂಸ್ಥೆಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. "ಕುಟುಂಬವು ಅನೇಕ ನೋವಿನ ನೆನಪುಗಳನ್ನು ಅಳಿಸಿಹಾಕಿದ್ದರಿಂದ ಮತ್ತು ನಾನು ಸೂಕ್ಷ್ಮವಾಗಿ ನಡೆದುಕೊಳ್ಳಬೇಕಾಗಿದ್ದರಿಂದ ನಿಯಾಜ್ ಅವರ ಕಥೆಯನ್ನು ಬರೆಯುವುದು ಒಂದು ಸವಾಲಾಗಿತ್ತು. ಸಂಪಾದಕೀಯ ಪ್ರಕ್ರಿಯೆಯು ಪತ್ರಿಕೋದ್ಯಮದ ಪ್ರಕ್ರಿಯೆಗೆ ಅಗತ್ಯವಿರುವ ಸೂಕ್ಷ್ಮ ವಿವರಗಳನ್ನು ನಾನು ಮೆಚ್ಚುವಂತೆ ಮಾಡಿತು. ಅಂಗವೈಕಲ್ಯ ಹೊಂದಿರುವ ಜನರ ಕಥೆಗಳನ್ನು ಘನತೆಯಿಂದ ಹೇಗೆ ವರದಿ ಮಾಡಬೇಕೆಂದು ನಾನು ಕಲಿತೆ." 'ನಾನು ಟ್ರಾನ್ಸ್ ಮ್ಯಾನ್ ಆಗಿ ನನ್ನ ಸತ್ಯವನ್ನು ಬದುಕಲು ಬಯಸುತ್ತೇನೆ' ಎಂಬ ಪರಿ ಕುರಿತ ಅವರ ಹಿಂದಿನ ಕಥೆಯನ್ನು ನವೆಂಬರ್ 27, 2021ರಂದು ಪ್ರಕಟಿಸಲಾಯಿತು.

ಅನುವಾದ: ಶಂಕರ ಎನ್. ಕೆಂಚನೂರು

 ಶಂಕರ ಎನ್. ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.