
ಕಾಡು ಹುಲ್ಲಿನ ಪೊರಕೆಗಳು, ಎರಡು ವಿಧದ ಜೇಡಿಮಣ್ಣು ಬಳಸಿ ಮಾಡಿದ ಮಣ್ಣಿನ ಮಡಿಕೆಗಳು, ದೇಸಿ ಬಾತುಕೋಳಿಗಳು, ಮನೆಯಲ್ಲಿ ಬೆಳೆದ ತರಕಾರಿಗಳು, ಸ್ಥಳೀಯ ಮಸಾಲೆ ಮಿಶ್ರಣಗಳು, ಬೇವು ಮತ್ತು ಇತರ ಎಣ್ಣೆಗಳು, ಮಹುವಾ ಮದ್ಯ, ಖಾದ್ಯ ಇರುವೆಗಳು ಮತ್ತು ಇತರ ಅರಣ್ಯ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡುತ್ತಾರೆ ಟೈಲರ್‌ಗಳು, ಕ್ಷೌರಿಕರು ಮತ್ತು ಇತರೆ ಆಹಾರ ಮಳಿಗೆಗಳು ತಮ್ಮ ಜಾಗವನ್ನು ಜೋಪಾನ ಮಾಡುವ ಸಲುವಾಗಿ ನೂಕುನುಗ್ಗಲು ನಡೆಯುತ್ತದೆ.
ಇದು ಜುರುಡಿಯಲ್ಲಿ ಪ್ರತಿ ಮಂಗಳವಾರ ನಡೆಯುವ ಹಾತ್ (ವಾರದ ಸಂತೆ). ಕನಿಷ್ಠ 1940ರ ದಶಕದಿಂದಲೂ ಮಾರುಕಟ್ಟೆಯು ನಿರಂತರ ಚಾಲನೆಯಲ್ಲಿದೆ ಎಂದು ಗ್ರಾಮದ ಹಿರಿಯರು ನಮಗೆ ಹೇಳುತ್ತಾರೆ.
“ನಾನು ಚಿಕ್ಕ ಮಗುವಾಗಿದ್ದಾಗ, ನನ್ನ ಪೋಷಕರೊಂದಿಗೆ ಈ ಮಾರುಕಟ್ಟೆಗೆ ಆಗಾಗ್ಗೆ ಹೋಗುತ್ತಿದ್ದೆ. ನನ್ನ ಮದುವೆ ನಿಶ್ಚಯವಾದಾಗ, ನನ್ನ ತಂದೆ ಪಾತ್ರೆಗಳನ್ನು, ಬಟ್ಟೆಗಳನ್ನು ಮತ್ತು ಇತರ ವಸ್ತುಗಳನ್ನು ಇಲ್ಲಿಂದ ಖರೀದಿಸಿದ್ದರು. ನನ್ನ ಮಗಳ ಮದುವೆಗೂ ಇಲ್ಲೇ ಎಲ್ಲ ಸಾಮಾನುಗಳ್ಳನ್ನು ಖರೀದಿ ಮಾಡಿದ್ದೇನೆ,” ಎನ್ನುತ್ತಾರೆ ಲಲಿತಾ ನಾಯಕ್. ಜಲಹರಿ ಗ್ರಾಮದ 75 ವರ್ಷದ ಮಹಿಳೆ ಇಂದು ಕೆಲವು ಮನೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಬಂದಿದ್ದರು.
ಲಲಿತಾ ನಾಯಕರಂತಹ ಸಾವಿರಾರು ಜನರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಕೆಂದುಜಾರ್ (ಕಿಯೋಂಜ್ಹಾರ್ ಎಂದು ಸಹ ಉಚ್ಚರಿಸಲಾಗುತ್ತದೆ) ಜಿಲ್ಲೆಯ ಜೋಡಾ ಬ್ಲಾಕ್‌ನಲ್ಲಿ ಈ ಹಾತ್‌ನ ಅವಧಿಯಲ್ಲಿಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. “ವಿಧವಿಧವಾದ ವಸ್ತುಗಳು ಇಲ್ಲಿ ಲಭ್ಯವಿವೆ. ನೀವು ಇಲ್ಲಿ ಎಲ್ಲವನ್ನೂ ಖರೀದಿಸಬಹುದು … ನಿಮ್ಮ ತಂದೆ ಮತ್ತು ತಾಯಿಯನ್ನು ಹೊರತುಪಡಿಸಿ, ” ಎಂದು ಲಲಿತಾ ನಗುತ್ತಾ ಹೇಳಿದರು.
ನಾವು ನಮ್ಮ ಪ್ರದೇಶದ ಅತಿ ದೊಡ್ಡದಾದ ಜುರುಡಿ ಹಾತ್ ಅನ್ನು ವೀಕ್ಷಿಸಲು ಮತ್ತು ಅದರ ಬಗ್ಗೆ ತಿಳಿಯಲು ಬಂದಿರುವ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಗುಂಪು. ಎರಡು ಕಿಲೋಮೀಟರ್ ದೂರದಲ್ಲಿರುವ ಜಜಂಗದಲ್ಲಿರುವ ನಮ್ಮ ಮನೆಗಳಿಂದ ನಾವು ಬೆಳಿಗ್ಗೆ 5 ಗಂಟೆಗೆ ಇಲ್ಲಿಗೆ ಬಂದೆವು. ಮಾರಾಟಗಾರರು ತಮ್ಮ ಅಂಗಡಿಗಳನ್ನು ಹಾಕುವುದನ್ನು ನೋಡಿದೆವು. ಜುರುಡಿ ಹಾತ್ ಕೊನೆಯ ಐದು ಕಿಲೋಮೀಟರ್‌ಗಳು ಕಚ್ಚಾ ರಸ್ತೆಯಾಗಿದ್ದು. “ಹಲವು ಗುಂಡಿಗಳಿವೆ ಮತ್ತು ಮಳೆಗಾಲದಲ್ಲಿ ಯಾರಾದರೂ ತಮ್ಮ ಬೈಕ್‌ನಿಂದ ಬಿದ್ದರೆ ಅವರು ಮತ್ತೆ ಮೇಲೇಳಲು ಸಾಧ್ಯವಾಗುವುದಿಲ್ಲ!” ಎಂದು ನಮ್ಮ ಗುರುಗಳಾದ ಸುದೀಪ ಸೇನಾಪತಿಯವರು ತಮಾಷೆಯಾಗಿ ಹೇಳಿದರು.


ಮಾರಾಟಗಾರರು ಮತ್ತು ಖರೀದಿದಾರರು 40 ಕಿಲೋಮೀಟರ್ ದೂರದಿಂದ ಬರುತ್ತಾರೆ – ನೆರೆಯ ಬ್ಲಾಕ್‌ಗಳಾದ ಬನ್ಸ್‌ಪಾಲ್, ಜುಂಪುರ ಮತ್ತು ಚಂಪೂವಾದಿಂದ ಕಾಲ್ನಡಿಗೆಯಲ್ಲಿ, ಸೈಕಲ್‌ಗಳಲ್ಲಿ, ಮೋಟಾರ್‌ಸೈಕಲ್‌ಗಳಲ್ಲಿ, ಟೆಂಪೋಗಳಲ್ಲಿ ಮತ್ತು ಬಸ್‌ನಲ್ಲಿ ಬರುತ್ತಾರೆ.
ಇದು ಒಡಿಶಾದ ಬಹುಪಾಲು ಗ್ರಾಮೀಣ ಜಿಲ್ಲೆಯಾಗಿದ್ದು, 18,01,733 ಜನಸಂಖ್ಯೆಯ ಶೇಕಡಾ 86 ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ (ಜನಗಣತಿ 2011). ಮಾರಾಟಗಾರರಲ್ಲಿ ಹೆಚ್ಚಿನವರು ಆದಿವಾಸಿಗಳು, ಭೂರಹಿತ ರೈತರು, ದಲಿತರು ಮತ್ತು ವೃದ್ಧರು, ಈ ವಾರದ ಮಾರುಕಟ್ಟೆಯ ಆದಾಯವನ್ನು ಸಂಪೂರ್ಣವಾಗಿ ಅವಲಂಬಿಸಿದ್ದಾರೆ
ಕೃಷ್ಣ ಮುಂಡಾ ಚಿಮಿಲದ ರೈತ ಮತ್ತು ಟೈಲರ್. ಅವರ ಅರವತ್ತರ ಹರೆಯದಲ್ಲಿ, ಅವರು ಚಂಪೂವಾ ಬ್ಲಾಕ್‌ನಲ್ಲಿರುವ ತಮ್ಮ ಹಳ್ಳಿಯಿಂದ ಪ್ರತಿ ಮಂಗಳವಾರ ಈ ಮಾರುಕಟ್ಟೆಗೆ ತಮ್ಮ ಹೊಲಿಗೆ ಯಂತ್ರದ ಬಿಡಿ ಭಾಗಗಳನ್ನು ಅವರ ಹೆಗಲ ಮೇಲೆ ಹೊತ್ತುಕೊಂಡು ಬರುತ್ತಾರೆ. ಇವರು ಎಲ್ಲಿಗೆ ಸುಮಾರು ೧೦ ವರ್ಷಗಳಿಂದ ಬರುತ್ತಿದ್ದರೆ ಎಂದು ನೆನಪಿಸಿಕೊಳ್ಳುತ್ತಾರೆ. “ನಾನು ಇಲ್ಲಿ ಬಟ್ಟೆಗಳನ್ನು ತಯಾರಿಸುವುದರಿಂದ ಮತ್ತು ರಿಪೇರಿ ಮಾಡುವುದರಿಂದ ಸುಮಾರು 200 ರಿಂದ 250 ರೂಪಾಯಿಗಳನ್ನು ಗಳಿಸುತ್ತೇನೆ. ಇಲ್ಲ, ನನ್ನ ಟೈಲರಿಂಗ್ ಕೆಲಸಕ್ಕಾಗಿ ನಾನು ಯಾವುದೇ ಶಾಶ್ವತ ಅಂಗಡಿಯನ್ನು ಹೊಂದಿಲ್ಲ, ”ಎಂದು ಅವರು ನಮಗೆ ಹೇಳುತ್ತಾರೆ.
ಮುಂಡಾ ಒಬ್ಬ ಕೊಲ್ಹಾ ಆದಿವಾಸಿಯಾಗಿದ್ದು, ಬಿಘಾ (ಅರ್ಧ ಎಕರೆಗಿಂತ ಕಡಿಮೆ) ಭೂಮಿಯನ್ನು ಹೊಂದಿದ್ದು, ಅದರಲ್ಲಿ ಅವರು ಅಕ್ಕಿ, ಕಾಳು ಮತ್ತು ಹಸಿರುಬೇಳೆ ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. “ನಾನು ತಿನ್ನಲು ಅಕ್ಕಿ ಬೆಳೆಯುತ್ತೇನೆ ಮತ್ತು ಉಳಿದದ್ದನ್ನು ಮಾತ್ರ ಮಾರಾಟ ಮಾಡುತ್ತೇನೆ” ಎಂದು ಅವರು ಹೇಳುತ್ತಾರೆ.
ಕಿನಾರಿ ದೆಹುರಿ, 56 ವರ್ಷದ ಮಹಿಳೆ, ಬನ್ಸ್‌ಪಾಲ್ ಬ್ಲಾಕ್‌ನ ಫುಲ್ಜಾರ್ ಗ್ರಾಮದ ಇರುವೆ ಮಾರಾಟಗಾರ್ತಿ ಎಲ್ಲಿಗೆ ಸುಮಾರು ವರ್ಷಗಳಿಂದ ಬರುತ್ತಿದ್ದಾರೆ. ೨೦೦ ರೂ ಬಸ್ ಚಾರ್ಜ್ ಕೊಟ್ಟು, ಕೆಲವು ನೂರು ಗ್ರಾಂ ಕುರ್ಕುಟಿ (ನೇಕಾರ ಇರುವೆ), ಕುಲ್ಹಾರಿ ಹೂವುಗಳು (ತರಕಾರಿಯಾಗಿ ಬೇಯಿಸಿದ ಸ್ಥಳೀಯ ಹೂವು), ಅರುಮ್ (ಟ್ಯಾರೋ) ಎಲೆಗಳು ಮತ್ತು ಕಾಫಿ ಸೆನ್ನಾ (ಸೆನ್ನಾ ಆಕ್ಸಿಡೆಂಟಲಿಸ್) ಇನ್ನಿತಿರ ಸಾಮಗ್ರಿಗಳನ್ನು ಮಾರಾಟ ಮಾಡಲು ಬರುತ್ತಾರೆ. “ನಾನು ಕುಲ್ಹಾರಿ ಹೂವುಗಳು ಮತ್ತು ಕುರ್ಕುಟಿಯನ್ನು ಒಂದು ಗುಂಪಿಗೆ 20 ರೂಪಾಯಿಗೆ ಮಾರಾಟ ಮಾಡುತ್ತೇನೆ” ಎಂದು ಅವರು ಹೇಳುತ್ತಾರೆ.
ದೇಹುರಿ, ದಲಿತ ಮಹಿಳಾ ರೈತೆ, ಅವರ ಕುಟುಂಬವು 16 ಡಿಸ್ಮಿಲ್ ಭೂಮಿ (ಒಂದು ಎಕರೆಯ ಆರನೇ ಒಂದು ಭಾಗ) ಹೊಂದಿದೆ, ಅದರಲ್ಲಿ ಅವರು ಅಕ್ಕಿ ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. “ನಾವು ನಮ್ಮ ಕೊನೆಯ ಭತ್ತದ ಕೊಯ್ಲು ಎಲ್ಲವನ್ನೂ ಮಾರಾಟ ಮಾಡಿದ್ದೇವೆ ಏಕೆಂದರೆ ಗುಣಮಟ್ಟ ಉತ್ತಮವಾಗಿಲ್ಲ ಮತ್ತು ನಮಗೆ ಅದನ್ನು ತಿನ್ನಲು ಸಾಧ್ಯವಾಗಲಿಲ್ಲ. ಆ ಹಣವನ್ನು ನಾವು ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಬಳಸಿದ್ದೇವೆ, ”ಎಂದು ಅವರು ಹೇಳುತ್ತಾರೆ.


ಎಡ: ಕೃಷ್ಣ ಮುಂಡ, ಚಂಪೂವಾ ಬ್ಲಾಕ್‌ನ ಚಿಮಿಲದ ರೈತ ಮತ್ತು ಟೈಲರ್ ಇಲ್ಲಿ ಬಟ್ಟೆ ಟೈಲರಿಂಗ್ ಮತ್ತು ರಿಪೇರಿ ಮಾಡುವ ಮೂಲಕ ಸುಮಾರು 200 ರಿಂದ 250 ರೂ. ಸಮಾಡಿಸುತ್ತಾರೆ. ಅವರು ಅಕ್ಕಿ, ಕಾಳು, ಹಸಿರುಬೇಳೆ ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಬಲ: ಮಿನಾಟಿ ಮುಂದೈಸ್ ಅವರು ಪೊಂಗಮೆ, ಕುಸುಮ, ಬೇವು ಮತ್ತು ಮಾಲಿಕಾ ಬೀಜಗಳಿಂದ ತಯಾರಿಸಿದ ಎಣ್ಣೆಗಳನ್ನು ಮಾರಾಟ ಮಾಡುತ್ತಾರೆ. ಇವರು ಮರದ ಬೇರುಗಳು ಮತ್ತು ಅಕ್ಕಿಯಿಂದ ತಯಾರಿಸಿದ ಸ್ಥಳೀಯ ಮದ್ಯವಾದ ‘ಹಂಡಿಯಾ’ವನ್ನು ಸಹ ಬಟ್ಟಿ ಇಳಿಸುತ್ತಾಳೆ, ಇದನ್ನು ಇವರು ರೂ. 250 ಗ್ರಾಂಗೆ 50 ರೂ ಗಳಂತೆ ಮಾರುತ್ತಾರೆ
ಕೆಲವು ಮಳಿಗೆಗಳ ದೂರದಲ್ಲಿ ಮಿನಾಟಿ ಮುಂಡಾ, 55, ಅವರು ಪೊಂಗಮೆ (ಮಿಲ್ಲೆಟಿಯಾ ಪಿನ್ನಾಟಾ), ಕುಸುಮ್ (ಶ್ಲೀಚೆರಾ ಓಲಿಯೊಸಾ), ಬೇವು (ಅಜಾಡಿರಾಚ್ಟಾ ಇಂಡಿಕಾ), ಮಹುವ (ಮಧುಕಾ ಲಾಂಗಿಫೋಲಿಯಾ) ಮತ್ತು ಮಲಿಕಾ ಮಾವಿನ ಬೀಜಗಳಿಂದ ತಯಾರಿಸಿದ ಎಣ್ಣೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಿನಾಟಿಯು ಜಲಹರಿ ಗ್ರಾಮದ ಸಮೀಪವಿರುವ ಕುಗ್ರಾಮವಾದ ರುಗುಡಿ ಸಾಹಿಯಿಂದ ಭೂರಹಿತ ಕೊಹ್ಲಾ ಆದಿವಾಸಿ. ಇವರು ‘ಹ್ಯಾಂಡಿಯಾ’ ಎಂಬ ಸ್ಥಳೀಯ ಮದ್ಯವನ್ನು ಬಟ್ಟಿ ಇಳಿಸುತ್ತಾರೆ, ಅದನ್ನು ಅವರು ಕಾಲು ಲೀಟರ್‌ಗೆ 50 ರೂ. ಅಂತೇ ಮಾರುತ್ತಾರೆ. “ನಾನು ರಿಂಗ್ವರ್ಮ್ ಮತ್ತು ಚರ್ಮ ರೋಗವನ್ನು ಗುಣಪಡಿಸಲು ಬಳಸಲಾಗುವ ಮಹುವಾ ಬೀಜಗಳಿಂದ ಪಿಡಿಯಾ [ಪೇಸ್ಟ್] ಅನ್ನು ತಯಾರಿಸುತ್ತೇನೆ” ಎಂದು ಮಿನಾಟಿ ಹೇಳುತ್ತಾರೆ.
ಶೀಘ್ರವೇ ಎಲ್ಲ ಮಳಿಗೆಗಳು ಶುರುವಾದವು, ಕೆಲವು ನೀಲಿ ಟಾರ್ಪಾಲಿನ ಶೀಟ್‌ಗಳ ಕೆಳಗೆ ಮತ್ತು ಕೆಲವು ಮರಗಳನ್ನು ಹೊದಿಕೆ ಮಡಿಕೊಂಡು ಮಾರುಕಟ್ಟೆಯನ್ನು ಪ್ರಾರಂಭಿಸಿದರು. ಜೇನು, ಮಹುವಾ ಹೂವುಗಳು, ಎಣ್ಣೆಗಳು ಮತ್ತು ಕಾಡು ಅಣಬೆಗಳಂತಹ ಅರಣ್ಯ ಉತ್ಪನ್ನಗಳಲ್ಲದೆ, ಬದನೆ, ಟೊಮೆಟೊ, ಎಲೆಕೋಸು, ಆಲೂಗಡ್ಡೆ, ಈರುಳ್ಳಿ, ಕ್ಯಾರೆಟ್ ಮತ್ತು ಹೆಚ್ಚಿನ ತರಕಾರಿಗಳು ಸಹ ಮಾರಾಟದಲ್ಲಿವೆ.
ಭೂಯಾನ್ ಆದಿವಾಸಿ, ಕಾರ್ತಿಕ್ ನಾಯಕ್ ಅವರು ಕೆಲವು ಸಾಮಾನುಗಳ್ಳನ್ನು ಖರೀದಿ ಮಾಡಲು ಬಂದಿದ್ದಾರೆ ಮತ್ತು ಅವರು ಹೇಳುತ್ತಾರೆ, “ಕಿಯೋಂಜಾರ್ ಜಿಲ್ಲೆಯ 40 ಕ್ಕೂ ಹೆಚ್ಚು ಹಳ್ಳಿಗಳ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಇಲ್ಲಿಗೆ ಬರುತ್ತಾರೆ. ದೂರದ ಕುಗ್ರಾಮಗಳು ಮತ್ತು ಹಳ್ಳಿಗಳಲ್ಲಿ ವಾಸಿಸುವವರಿಗೆ, ಉಪ್ಪು, ಮಸಾಲೆ ಮತ್ತು ಎಣ್ಣೆಯಂತಹ ಅಗತ್ಯ ವಸ್ತುಗಳನ್ನು ಖರೀದಿಸಬಹುದಾದ ಏಕೈಕ ಸ್ಥಳವಾಗಿದೆ.”
ಅಥವಾ ಬಾತುಕೋಳಿಗಳು, ಸೋನು ಮುಂಡಾ ಸುತ್ತಲೂ ಅಲೆದಾಡುತ್ತಿವೆ. 55 ವರ್ಷದ ಮುಂಡಾ ಆದಿವಾಸಿ ರೈತ ಮತ್ತು ಬಾತುಕೋಳಿ ಸಾಕಣೆದಾರ, ಅವರು ಇಂದು ಎಂಟು ಬಾತುಕೋಳಿಗಳನ್ನು ತಂದಿದ್ದಾರೆ, ಅವರು ಹೊಂದಿರುವ ಉಳಿದ 60 ಬಾತುಕೋಳಿಗಳನ್ನು ಟೆಲ್ಕೊಯ್ ಬ್ಲಾಕ್‌ನಲ್ಲಿರುವ ಅವರ ಹಳ್ಳಿ ಖಂಡಬಂಧದಲ್ಲಿ ಬಿಟ್ಟು ಬಂದಿದ್ದಾರೆ. ಒಂದು ಬಾತುಕೋಳಿ ರೂ. 650 ರಂತೆ ಮಾರಾಟ ಮಾಡುತ್ತರೆ.
“ನಾನು ಬಾತುಕೋಳಿಗಳನ್ನು ಮಾರಾಟ ಮಾಡುವುದರಿಂದ ಬರುವ ಹಣವು ನನ್ನ ಕುಟುಂಬವನ್ನು ಪೋಷಿಸುತ್ತದೆ. ನನ್ನ ಬಳಿ 20 ಡಿಸ್ಮಿಲ್ ಭೂಮಿಯಿದೆ [ಒಂದು ಎಕರೆ ಜಮೀನಿನ ಐದನೇ ಒಂದು ಭಾಗ] ಆದರೆ ನಾನು ಅದರಲ್ಲಿ ಅರ್ಧದಷ್ಟು ಮಾತ್ರ ಕೃಷಿ ಮಾಡಲು ಶಕ್ತನಾಗಿದ್ದೇನೆ; ನಾನು ಅರ್ಧ ಭೂಮಿಯನ್ನು ಮೇಯಿಸಲು ಬಿಡುತ್ತೇನೆ, ”ಎಂದು ಅವರು ವಿವರಿಸುತ್ತಾರೆ.


ನೀವು ಕೋಳಿಗಳನ್ನು (ಹಾಗೆಯೇ ಬಾತುಕೋಳಿಗಳು) ಹುಡುಕುತ್ತಿದ್ದರೆ, ರಿಮುಲಿಯಿಂದ ಚಿತ್ತರಂಜನ್ ದಾಸ್ ಒಂದು ಪಕ್ಷಿಯನ್ನು 450 ರಿಂದ 500 ಕ್ಕೆ ಹೊಂದಿದ್ದಾರೆ. ಅವರು ಕಂದರ ಗ್ರಾಮ, ಬಿಳೈಪದ ಕುಗ್ರಾಮ ಮತ್ತು ರಿಮುಲಿಯಲ್ಲಿ ಇತರ ಹಾಟ್‌ಗಳಲ್ಲಿ ಮಾರಾಟ ಮಾಡುತ್ತಾರೆ.
ದಲಿತ ರೈತನಾಗಿರುವ ಇವರಿಗೆ ಒಂದು ಎಕರೆ ಜಮೀನಿದೆ. “ನಾವು ಆಲೂಗೆಡ್ಡೆ, ಈರುಳ್ಳಿ, ಬೆಳ್ಳುಳ್ಳಿ, ಎಲೆಕೋಸು, ಅರಮ್ ಮತ್ತು ಶುಂಠಿಯಂತಹ ತರಕಾರಿಗಳನ್ನು ಋತುಮಾನಕ್ಕೆ ಅನುಗುಣವಾಗಿ ಬೆಳೆಯುತ್ತೇವೆ. ನಾವು ಬೆಳೆದ ಅಕ್ಕಿಯನ್ನು ಮಾರಾಟ ಮಾಡುತ್ತೇವೆ ಮತ್ತು ಬದಲಿಗೆ PDS (ಸಾರ್ವಜನಿಕ ವಿತರಣಾ ಅಂಗಡಿಗಳು) ನಲ್ಲಿ ಮಾರಾಟವಾಗುವ ಅಕ್ಕಿಯನ್ನು ತಿನ್ನುತ್ತೇವೆ.
ಚಂಪೂವಾ ಬ್ಲಾಕ್‌ನ ರಿಮುಲಿಯಿಂದ ಭಾರತಿ ಕೈಬರ್ತಾ ಅವರು ಹಸಿರು ಸಾಲ್ ಎಲೆಗಳ ಮೇಲೆ ಸಣ್ಣ, ಅಚ್ಚುಕಟ್ಟಾಗಿ ಒಣಗಿದ ಮೀನಿನ ರಾಶಿಯನ್ನು ಹಾಕಿದರು ಮತ್ತು ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ರವಾಳ, ಸಿಗಡಿ, ಎಲಿಶಿ, ಕೋಕಿಲ, ಶಿಲಾ ಮತ್ತು ಪೀತ ಕರಂಡಿಯಂತಹ ಒಣ ಮೀನುಗಳನ್ನು ಅವರ ಮುಂದೆ ಮಾರಾಟ ಮಾಡಲು ಇಟ್ಟುಕೊಂಡಿದ್ದಾರೆ.
ಸುದರ್ಶನ್ ಕೈಬರ್ತ ಅವರು ತಮ್ಮ 60 ರ ದಶಕದ ಅಂತ್ಯದಲ್ಲಿ, ಬಾರ್ಬಿಲ್ ಪಟ್ಟಣದ ಸಮೀಪವಿರುವ ಹಳ್ಳಿಯಿಂದ ಬಂದವರು ಮತ್ತು ಕಳೆದ ಮೂರು ದಶಕಗಳಿಂದ ಇಲ್ಲಿಗೆ ಬರುತ್ತಿದ್ದಾರೆ. ಅವರು ಸ್ಥಳೀಯ ವಿಶೇಷ ಅಡುಗೆ ಮಾಡಲು ಬಳಸುವ ಮಸಾಲದ ರೆಡಿ-ಮಿಕ್ಸ್ಡ್ ಸಣ್ಣ ಪಾರ್ಸೆಲ್‌ಗಳನ್ನು ಹಾಕಿದ್ದಾರೆ – ಕೋಳಿ ಮಾಂಸದ ವಿವಿದ ಸಾರುಗಳ್ಳನ್ನು , ತರಕಾರಿ ಮತ್ತು ಅಣಬೆಗಳ ಸಾರುಗಳ್ಳನ್ನು ಮಾಡಲು ಈ ಮಸಾಲಾದ ಮಿಕ್ಸ್ ಅನ್ನು ಉಪಯೋಗಿಸುತ್ತಾರೆ. ಸುದರ್ಶನ್ ಯಾವುದೇ ಜಮೀನನ್ನು ಹೊಂದಿಲ್ಲ ಮತ್ತು ಅವರ ಒಬ್ಬನೇ ಮಗ ಮತ್ತು ಸೊಸೆ ಅವರನ್ನು ನೋಡಿಕೊಳ್ಳದ ಕಾರಣ ತನ್ನ ಹೆಂಡತಿಯೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದೇನೆ ಎಂದು ಹೇಳುತ್ತಾರೆ. “ನಾನು ಮತ್ತು ನನ್ನ ಹೆಂಡತಿಗೆ ಆಹಾರವನ್ನುಒದಗಿಸಲು ಈ ಮಾರಾಟ ಮಾಡುವುದನ್ನು ಮುಂದುವರಿಸಲು ಯೋಜಿಸುತ್ತೇನೆ, ಆದರೆ ನಾನು ಎಂದಿಗೂ ಭಿಕ್ಷೆ ಬೇಡುವುದಿಲ್ಲ” ಎಂದು ಅವರು ಹೇಳಿದರು.
ಸುದರ್ಶನ್ ಅವರಂತೆ ಅನೇಕರು ಮಾರಾಟಗಾರರು ವಯಸ್ಸಾದ ಭೂರಹಿತ ವೃದ್ಧರು. ಜುಂಪುರ ಬ್ಲಾಕ್‌ನ ಕನಕನ ಗ್ರಾಮದ ಹೊ ಮುಂಡಾ ಆದಿವಾಸಿ, ಸಿರಾ ಜಾನ್ ಕಲಂಡ್,74 ವರ್ಷ, ಅವರನ್ನೇ ತೆಗೆದುಕೊಳ್ಳಿ, ಅವರು ಬಿದಿರಿನಿಂದ ಮಾಡಿದ ಬುಟ್ಟಿಗಳು, ಮೀನು ಬಲೆಗಳು, ಮತ್ತು ಇತರ ವಸ್ತುಗಳನ್ನುಮಾರಾಟ ಮಾಡಲು ತಂದಿದ್ದಾರೆ. “ನಾನು ಈ ವಯಸ್ಸಿನಲ್ಲಿ ನನ್ನ ಕುಟುಂಬವನ್ನು ಪೋಷಿಸಲು ಬುಟ್ಟಿಗಳನ್ನು ಮಾರಾಟ ಮಾಡುವ ಬದಲಾಗಿ ಸರ್ಕಾರಿ ಪಿಂಚಣಿ ಯೋಜನೆಯನ್ನು ಪಡೆಯುವಂತಿರಬೇಕಿತ್ತು ಎಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದರು.



ದಲಿತ ಕುಂಬಾರ, ಭಾರತ್ ಚಂದ್ರ ಬೆಹೆರಾ ಅವರು 25 ಕಿಲೋಮೀಟರ್ ದೂರದ ಮಹದೇವಪುರದಿಂದ ಬಂದಿದ್ದಾರೆ. ಅವರ ಕುಟುಂಬವು ತಲೆಮಾರುಗಳಿಂದ ಮಡಕೆಗಳನ್ನು ತಯಾರಿಸುತ್ತಿದ್ದಾರೆ. ಈ ಮಡಕೆಗಳನ್ನು ತಯಾರಿಸಲು ಮರಳಿನ ಮಣ್ಣಿನೊಂದಿಗೆ ಕಪ್ಪು ಮತ್ತು ಕೆಂಪು – ಎರಡು ರೀತಿಯ ಜೇಡಿಮಣ್ಣಿನ ಅಗತ್ಯವಿದೆ ಎಂದು ಅವರು ಹೇಳುತ್ತಾರೆ. “ನಾನು ಮಣ್ಣನ್ನು ಪಡೆಯಲು ಅರಣ್ಯ ಇಲಾಖೆಯಿಂದ ಅನುಮತಿ ತೆಗೆದುಕೊಳ್ಳಬೇಕು ಮತ್ತು ನಾನು ಸ್ವಲ್ಪ ಲಂಚವನ್ನು ಸಹ ನೀಡಬೇಕಾಗಿದೆ” ಎಂದು ಅವರು ಹೇಳುತ್ತಾರೆ.
ಭಾರತ್, ಜುರುಡಿ ಮತ್ತು ಉಖುಂದ ಹಾತ್ ಮತ್ತು ಜುಂಪುರಾ ಬ್ಲಾಕ್‌ನಲ್ಲಿರುವ ಇತರ ಕೆಲವು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ಒಂದು ಮಡಕೆಗೆ 200. ರೂಪಾಯಿಗಳು ಹಾಗೆ ಕೆಲವು ಒಳ್ಳೆಯ ದಿನದಲ್ಲಿ ಸಾವಿರ ರೂಪಾಯಿ ಲಾಭ ಗಳಿಸಬಹುದು ಎನ್ನುತ್ತಾರೆ.
ಪೊರಕೆ ತಯಾರಿಕೆಗೆ ಕಚ್ಚಾವಸ್ತು ಹುಡುಕುವುದು ಸುಲಭವಲ್ಲ ಎನ್ನುತ್ತಾರೆ ಮೊಹಮ್ಮದ್ ಆಜಾದ್. “ಆದ್ದರಿಂದ ಒಂದು ಪೊರಕೆಗೆ 10 ರೂಪಾಯಿ ಇದ್ದ ಬೆಲೆಯನ್ನು 50 ರೂಪಾಯಿಗೆ ಹೆಚ್ಚಿಸಿದ್ದೇನೆ. ನಾನು ಪ್ರತಿ ಮಾರುಕಟ್ಟೆಯ ದಿನಕ್ಕೆ 200 ರಿಂದ 300 ರೂಪಾಯಿಗಳವರೆಗೆ ಲಾಭ ಗಳಿಸಬಹುದು,” ಎಂದು ಅವರು ಹೇಳಿದರು.
ಸಂಜೆಯಾದಂತೆ ಬೆಲೆಗಳೂ ಕಡಿಮೆಯಾಗುತ್ತವೆ. ಮಾರಾಟಗಾರರು ತಮ್ಮ ಸರಕುಗಳನ್ನು ನಿಜವಾಗಿಯೂ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಸಿದ್ಧರಿದ್ದಾರೆ – ತರಕಾರಿಗಲು 10 ರಿಂದ 20 ರೂಪಾಯಿಗಳಿಗೆ ಮಾರುತ್ತಿದ್ದಾರೆ. ನಾವು ಅಂಗಡಿಗಳ ಬಳಿ ತ್ಯಾಜ್ಯದ ರಾಶಿಗಳನ್ನು ಗಮನಿಸಿದೆವು- ಪ್ಲಾಸ್ಟಿಕ್, ತಿರಸ್ಕರಿಸಿದ ಆಹಾರ ಮತ್ತು ತರಕಾರಿಗಳು. ಮರು ಮಾರಾಟ ಮಾಡಬಹುದಾದ ಪ್ಲಾಸ್ಟಿಕ್ ಹಾಗು ತ್ಯಾಜ್ಯದ ಮೂಲಗಳಿಗಾಗಿ ಚಿಂದಿ ಆಯುವವರು ಹೋಗುತ್ತಿದ್ದಾರೆ ಮತ್ತು ಬಿಸಾಡಿದ ತರಕಾರಿಗಳಿಗಾಗಿ ಹಸುಗಳು ಮತ್ತು ಎಮ್ಮೆಗಳು ನಂತರ ಬರುತ್ತವೆ.
ನಾವು ನಮ್ಮ ವಸ್ತುಗಳನ್ನು ಪ್ಯಾಕ್ ಮಾಡಿ ನಮ್ಮ ಹಳ್ಳಿ ಮನೆಯ ಕಡೆ ನಡೆಯಲು ಪ್ರಾರಂಭಿಸಿದೆವು.
ಈ ಪ್ರತ್ಯೇಕ ತುಣುಕನ್ನು ವರದಿ ಮಾಡಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸರ್ಕಾರೇತರ ಸಂಸ್ಥೆಯಾದ ASPIRE ಮತ್ತು ಟಾಟಾ ಸ್ಟೀಲ್ ಫೌಂಡೇಶನ್‌ನ ಸಾವಿರ ಶಾಲೆಗಳ ಕಾರ್ಯಕ್ರಮದಡಿಯಲ್ಲಿ, ಲಾಕ್‌ಡೌನ್ ಕಲಿಕೆಯ ಉಪಕ್ರಮದ ಭಾಗವಾಗಿ ಇದನ್ನು ಬರೆದಿದ್ದಾರೆ. ಅವರು ತಮ್ಮ ಸುತ್ತಮುತ್ತಲಿನ ಬಗ್ಗೆ ತಿಳಿದುಕೊಳ್ಳುವ ಯೋಜನೆಯ ಭಾಗವಾಗಿ ಈ ವರದಿಯನ್ನು ಬರೆದಿದ್ದಾರೆ.
ಈ ತುಣುಕನ್ನು ಸಂಯೋಜಿಸಲು ಸಹಾಯ ಮಾಡಿದ ಸುದೀಪ ಸೇನಾಪತಿ ಮತ್ತು ಸ್ಮಿತಾ ಅಗರ್ವಾಲ್ ಅವರಿಗೆ PARI ಎಜುಕೇಷನ್ ತಂಡವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತದೆ.
Editor's note
ಅನನ್ಯ ತೋಪಿನೊ, ರೋಹಿತ್ ಗಾಗ್ರೈ, ಮತ್ತು ಆಕಾಶ್ ಏಕಾ (6ನೇ ತರಗತಿ) ಮತ್ತು ಪಲ್ಲಬಿ ಲುಗುನ್ (7ನೇ ತರಗತಿ) ಜೋಡಾ ಬ್ಲಾಕ್‌ನ ಜಜಂಗಾ ಪಟ್ಟಣದವರು. ಪಲ್ಲಬಿ ಹೇಳುತ್ತಾರೆ, "ಈ ರೀತಿಯ [ಸಂಶೋಧನೆ] ಕೆಲಸ ಮಾಡುವುದು ನಮಗೆ ಹೊಸದು. ಜನರು ತರಕಾರಿ ಮಾರುವವರೊಂದಿಗೆ ಚೌಕಾಶಿ ಮಾಡುವುದನ್ನು ನಾವು ನೋಡಿದ್ದೇವೆ, ಆದರೆ ತರಕಾರಿಗಳನ್ನು ಬೆಳೆಯುವುದು ಎಷ್ಟು ಕಷ್ಟ ಎಂದು ನಮಗೆ ತಿಳಿದಿದೆ, ಆದ್ದರಿಂದ ಜನರು ರೈತರೊಂದಿಗೆ ಬೆಲೆಗಳ ಬಗ್ಗೆ ಏಕೆ ವಾದಿಸುತ್ತಾರೆ ಎಂದು ನಮಗೆ ಆಶ್ಚರ್ಯವಾಯಿತು?"
ಈ ವರದಿಯಲ್ಲಿನ ಫೋಟೋಗಳನ್ನು ಅನನ್ಯಾ ಟೋಪ್ನೋ, ರೋಹಿತ್ ಗಾಗ್ರೈ, ಆಕಾಶ್ ಎಕಾ ಮತ್ತು ಪಲ್ಲಬಿ ಲುಗುನ್ ಚಿತ್ರೀಕರಿಸಿದ್ದಾರೆ.
ಅನುವಾದ: ಏಕತಾ ಹರ್ತಿ ಹಿರಿಯೂರು
ಏಕತಾ ಹರ್ತಿ ಹಿರಿಯೂರು ಅವರು ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ನಲ್ಲಿ ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಅವರು ಮಹಿಳೆಯರು, ಜಾತಿ ಮತ್ತು ಲಿಂಗದ ಸಮಸ್ಯೆಗಳ ಬಗ್ಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ