
ಐದರಿಂದ ಹನ್ನೆರಡು ವರ್ಷ ವಯಸ್ಸಿನ ವಿವೇಕ್ ಮತ್ತು ಆತನ ಸ್ನೇಹಿತರು ತಮ್ಮ ದೈನಂದಿನ ಆಟಗಳನ್ನು ಸ್ವಲ್ಪ ವಿಭಿನ್ನವಾಗಿ ಆಡುತ್ತಾರೆ. ಉದಾಹರಣೆಗೆ, ಅವರು ಒಬ್ಬರ ಹಿಂದೆ ಒಬ್ಬರು ಓಡುವ ಬದಲು ಕಾಗದದ ಮೇಲೆ ಕಳ್ಳ-ಪೋಲಿಸ್ ಆಟ ಆಡುತ್ತಾರೆ. ಕಣ್ಣಾ ಮುಚ್ಚಾಲೆ ಆಟವನ್ನು ನೆಲದ ಮೇಲೆ ಕುಳಿತುಕೊಂಡು ಕರವಸ್ತ್ರದ ನೆರವಿನಿಂದ ಆಡುತ್ತಾರೆ. ಕುಂಟೆಬಿಲ್ಲೆಯನ್ನೂ ಆಡುವ ವಿವೇಕ್, ತನ್ನ ಗೆಳೆಯರ ಸಹಾಯದಿಂದ ಈ ಆಟದಲ್ಲಿ ಭಾಗವಹಿಸುತ್ತಾನೆ.

ವಿವೇಕನಿಗೆ ಆಟವಾಡಲು ಅವಕಾಶ ಕಲ್ಪಿಸಬೇಕೆಂದು ಆಟಗಳ ವಿಧಾನವನ್ನು ಸ್ವಲ್ಪ ಬದಲಾಯಿಸಲಾಗಿದೆ.
ವಿವೇಕನಿಗೆ ಇರುವ ವೈದ್ಯಕೀಯ ಸಮಸ್ಯೆಯನ್ನು ಲ್ಯಾಟಿನ್ ಭಾಷೆಯಲ್ಲಿ ಜೆನ್ಯು ವಾಲ್ಗಮ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಲಾಕ್-ನೀಸ್ ಅಥವಾ ತಾಗುಮಂಡಿಗಳು ಎಂದು ಕರೆಯಲಾಗುವ ಈ ಅಂಗವೈಕಲ್ಯವು ಚಲನೆಯ ವೈಕಲ್ಯವಾಗಿದೆ. ವಿವೇಕ್ ಎದ್ದು ನಿಂತಾಗ ಅವನ ಮೊಣಕಾಲುಗಳು ಒಟ್ಟಿಗೆ ಬಂದು ಒಂದನ್ನೊಂದು ತಾಗಿಕೊಂಡರೆ, ಅವನ ಪಾದಗಳು ಪರಸ್ಪರ ದೂರ ಹರಡುತ್ತವೆ. ಎದ್ದು ನಿಲ್ಲುವುದು, ಸಮತೋಲನ ಕಾಪಾಡಿಕೊಳ್ಳುವುದು ಮತ್ತು ನಡೆಯುವುದು ಅವನಿಗೆ ಕಷ್ಟದ ಕೆಲಸ.
“ಅವನ ಕಾಲುಗಳ ನಡುವೆ ಅಂತರವಿದೆ. ಜೋಕರ್ ತರಹ ನಡೆಯುತ್ತಾನೆ ಅವ,” ಎಂದು ವಿವೇಕನ ತಾಯಿ ಗೀತಾ ದೇವಿ ತಮ್ಮ ಮಗನ ಪರಿಸ್ಥಿತಿಯ ಬಗ್ಗೆ ವಾಸ್ತವಿಕವಾಗಿ ಮಾತನಾಡುತ್ತಾ, “ಅವನು ತನ್ನ ಸಮತೋಲನವನ್ನು ಕಾಪಾಡಿಕೊಳ್ಳುವುದು ಕಷ್ಟ, ಆದ್ದರಿಂದ ಮೆಟ್ಟಿಲುಗಳಿಂದ ಇಳಿಯುವಾಗ ಆಗಾಗ ಜಾರಿ ಬೀಳುತ್ತಾನೆ. ಅವನಿಗೆ ವೇಗವಾಗಿ ಚಲಿಸಲಾಗುವುದಿಲ್ಲ ಹಾಗು ಬೇಗನೆ ಆಯಾಸಗೊಳ್ಳುತ್ತಾನೆ,” ಎಂದು ಹೇಳುತ್ತಾರೆ. ತನ್ನ ಇಪ್ಪತ್ತರ ಹರೆಯದ ಕೊನೆಯಲ್ಲಿರುವ ಗೀತಾ, ಆಗ್ನೇಯ ದೆಹಲಿಯ ವಸತಿ ಕಾಲೋನಿಯಾದ ಸರಿತಾ ವಿಹಾರ್ ನಲ್ಲಿ ಮನೆಗೆಲಸ ಮಾಡುತ್ತಾರೆ.
ವಿವೇಕ್ ತನ್ನ ಸ್ಥಿತಿಯನ್ನು ವಿವರಿಸುತ್ತಾ, “ನನ್ನ ಮೊಣಕಾಲುಗಳು ಒಂದಕ್ಕೊಂದು ತಾಗುತ್ತವೆ, ಬೇರೆಯವರದು ತಾಗುವುದಿಲ್ಲ. ದೇವರು ನನಗೆ ನನ್ನದೇ ಆದ ನಡಿಗೆ ಶೈಲಿಯನ್ನು ಕೊಟ್ಟಿದ್ದಾನೆ.” ಆಗಾಗ್ಗೆ ತಾನು ಬೀಳುವ ಬಗ್ಗೆ ವಿವರಿಸುತ್ತಾ, “ನಾನು ಬೀಳುತ್ತೇನೆ, ಆದರೆ ಎದ್ದು ನಿಲ್ಲುವ ಕ್ಷಮತೆ ನನ್ನಲ್ಲಿದೆ,”ಎಂದು ಹೇಳುತ್ತಾನೆ.
0-6 ವರ್ಷ ವಯಸ್ಸಿನ ಪ್ರತಿ 100 ಮಕ್ಕಳಲ್ಲಿ ಒಬ್ಬರು, ಯಾವುದೋ ಒಂದು ರೀತಿಯ ಅಂಗವೈಕಲ್ಯವನ್ನು ಹೊಂದಿದ್ದಾರೆ. ಇದಲ್ಲದೆ, 2011ರ ಜನಗಣತಿಯ ಪ್ರಕಾರ ಭಾರತದಲ್ಲಿ 26.8 ದಶಲಕ್ಷಕ್ಕೂ ಹೆಚ್ಚು ವಿಕಲಚೇತನರಿದ್ದಾರೆ. ಇದರಲ್ಲಿ 14.9 ದಶಲಕ್ಷ ಪುರುಷರು ಮತ್ತು 11.8 ದಶಲಕ್ಷ ಮಹಿಳೆಯರು ಇದ್ದಾರೆ. ಪುರುಷರಲ್ಲಿ, 22 ಪ್ರತಿಶತದಷ್ಟು ಜನರು ವಿವೇಕ್ ನಂತೆ ಚಲನೆಯ ಅಂಗವಿಕಲತೆಯನ್ನು ಹೊಂದಿದ್ದಾರೆ.
ವಿವೇಕನಿಗೆ ಒಂದು ವರ್ಷ ವಯಸ್ಸು ಪೂರ್ಣಗೊಂಡ ನಂತರ – ಎಳೆ ಮಕ್ಕಳು ನಡೆಯಲು ಪ್ರಯತ್ನಿಸುವ ಸಮಯ – ಅವನ ಕಾಲುಗಳು ವಿಭಿನ್ನವಾಗಿ ಆಕಾರಗೊಂಡಿವೆ ಎಂದು ಗೀತಾರಿಗೆ ಅರಿವಾಯಿತು. “ತನ್ನ ವಯಸ್ಸಿನ ಇತರೆ ಮಕ್ಕಳಿಗಿಂತ ಹೆಚ್ಚು ತೂಕವಿರುವುದರ ಕಾರಣ ಅವನಿಗೆ ನಡೆಯಲು ಕಷ್ಟವಾಗುತ್ತಿದೆ ಎಂದು ನಾನು ಭಾವಿಸಿದ್ದೆ,” ಎನ್ನುತ್ತಾರೆ ಗೀತಾ. ಅವನು ದೊಡ್ಡವನಾಗುತ್ತಾ ಹೋದಂತೆ, ಅವನಿಗೆ ಸರಾಗವಾಗಿ ನಡೆಯಲು ಸಾಧ್ಯವಾಗಲಿಲ್ಲ. 2019ರ ಆರಂಭದಲ್ಲಿ, ತಮ್ಮ ಹುಟ್ಟೂರಾದ ಗುಜರಾತಿನ ಡಾಹೊದಿನಲ್ಲಿ ಒಬ್ಬ ವೈದ್ಯರನ್ನು ಭೇಟಿಯಾದರು. ಅವರು, ದೆಹಲಿಯ ಒಂದು ಮಕ್ಕಳಾಸ್ಪತ್ರೆ, ಚಾಚಾ ನೆಹರು ಬಾಲ ಚಿಕಿತ್ಸಾಲಯದ ವೈದ್ಯರನ್ನು ಸಂಪರ್ಕಿಸಲು ಹೇಳಿದರು. ವಿವೇಕನನ್ನು ದೆಹಲಿಗೆ ಕರೆದೊಯ್ಯಲು ಗೀತಾ ಹಾಗೂ ಅವರ ಕುಟುಂಬವು ಅಗತ್ಯ ಸಂಪನ್ಮೂಲಗಳನ್ನು ಒಟ್ಟುಗೂಡಿಸುವಷ್ಟರಲ್ಲಿ, ಸಾಂಕ್ರಾಮಿಕ ರೋಗವು ಅಪ್ಪಳಿಸಿತು. ಇದರ ತತ್ಪರಿಮಾಣವಾಗಿ ಹೇರಲಾದ ಲಾಕ್ಡೌನ್ ಗಳಿಂದಾಗಿ ವೈದ್ಯರ ಭೇಟಿಯು ಅಸಂಭವವಾಯಿತು.
“ಆಸ್ಪತ್ರೆಯ ವೈದ್ಯರು ಇವನಿಗೆ ಎಂಟು ವರ್ಷ ತುಂಬುವ ಮೊದಲು ಗುಣಪಡಿಸುವುದು ಸಾಧ್ಯ ಎಂದು ಹೇಳಿದ್ದರು, ಆದರೆ ಆ ಸಮಯದಲ್ಲಿ ನಾವು ಭೇಟಿ ಮಾಡಲು ಸಾಧ್ಯವಾಗಲಿಲ್ಲ,” ಎಂದು ಗೀತಾ ಹೇಳುತ್ತಾರೆ. ವಿವೇಕನ ಕುಟುಂಬವು ಹಣಗಾಸು ಹಾಗೂ ಸಮಯಕ್ಕಾಗಿ ಹೆಣಗಾಡುವಷ್ಟರಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲವೇ ಕಳೆದು ಹೋಯಿತು. “ಅವರು ಕೋವಿಡ್ ಪರೀಕ್ಷಾ ವರದಿಯನ್ನು ತರ ಹೇಳುತ್ತಾರೆ ಅದಲ್ಲದೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬಹಳ ದೊಡ್ಡ ಸರತಿ ಸಾಲುಗಳಿರುತ್ತವೆ… ಆದ್ದರಿಂದ ಬಹಳ ಅನಾನುಕೂಲವಾಗುತ್ತದೆ. ಇಷ್ಟೆಲ್ಲ ಮಾಡಿದ ನಂತರವೂ (ಇದರಿಂದ ಸಕಾರಾತ್ಮಕ ಪರಿಣಾಮ ಹೊರಹೊಮ್ಮುತ್ತದೆ ಎಂಬ) ಖಾತರಿ ಇಲ್ಲ.”
“ಹೀಗೆ ಕಾದು ಕಾದು ಅಂತೂ ಇವನಿಗೆ ಚಿಕಿತ್ಸೆ ಕೊಡಿಸಲಾಗಲಿಲ್ಲ,” ಎಂದು ಹೇಳುತ್ತಾರೆ ಗೀತಾ.



ವಿವೇಕನ ತಂದೆ, ಧರ್ವೇಂದ್ರ (ಅವರು ಈ ಹೆಸರನ್ನು ಮಾತ್ರ ಬಳಸುತ್ತಾರೆ) ಮತ್ತು ಗೀತಾ, ವಿವೇಕನು ಸುಮಾರು ಎರಡು ವರ್ಷದವನಾಗಿದ್ದಾಗ (2015) ದಾಹೊದಿನಿಂದ ದೆಹಲಿಗೆ ಬಂದಿರು. ಹಿಂದೆ ಧರ್ವೇಂದ್ರ ಅವರು ಸಮೋಸ, ಜಲೇಬಿ ಹಾಗೂ ತರಕಾರಿಗಳನ್ನು ಮಾರುವುದರ ಜೊತೆಯಲ್ಲಿ ಇತರೆ ಉದ್ಯಮಗಳನ್ನು ಮಾಡಲು ಪ್ರಯತ್ನಿಸಿದ್ದರು. ಈಗ ಅವರು ದೆಹಲಿ-ಬದರ್ಪುರ ಗಡಿಯಲ್ಲಿರುವ ದೊಡ್ಡ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸಾಮಾನ್ಯವಾಗಿ ಮಧ್ಯಾಹ್ನ ಮೂರರಿಂದ ರಾತ್ರಿ ಹತ್ತರವರೆಗಿನ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. “ನನ್ನ ಪತಿ ಈ ಪಾಳಿಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೆಂದರೆ ನಾವು ಅವನು (ವಿವೇಕನು) ಒಂಟಿಯಾಗಿ ಇರದಿರುವ ಹಾಗೆ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ. ನನ್ನ ಪತಿ ಮನೆಯಲ್ಲಿ ಇಲ್ಲದಿದ್ದಾಗ ನೆರೆಹೊರೆಯವರು ನೋಡಿಕೊಳ್ಳುತ್ತಾರೆ,” ಎನ್ನುತ್ತಾರೆ ಗೀತಾ.

ಅವರು ನಗರದಲ್ಲಿ ಇದ್ದ ಅಷ್ಟೂ ಕಾಲ ಗೀತಾ ಮನೆ ಕೆಲಸದವರಾಗಿ ಕೆಲಸ ಮಾಡಿದ್ದಾರೆ. ಒಟ್ಟಾಗಿ ಒಂದು ತಿಂಗಳಿಗೆ ಸುಮಾರು 20 ಸಾವಿರ ರೂಪಾಯಿ ಸಂಪಾದಿಸುತ್ತಾರೆ ದೆಹಲಿ-ಹರಿಯಾಣ ಗಡಿಯ ಸಮೀಪದಲ್ಲಿರುವ ಮದನ್ಪುರ್ ಖಾದರ್ನಲ್ಲಿ ಬಾಡಿಗೆ ಪಡೆದ ಒಂದು ಕೊಠಡಿಯ ಮನೆಗೆ 5,000 ರೂಪಾಯಿ ಬಾಡಿಗೆ ಕಟ್ಟಿದ ನಂತರ, ತಿಂಗಳಿಗೆ 4000ರಿಂದ 5000 ರೂಪಾಯಿಗಳನ್ನು ಉಳಿಸಲು ಸಾಧ್ಯವಾಗುತ್ತದೆ. “ಸಾಲಭಾದೆಯ ಚಿಂತೆ ನಮಗಿಲ್ಲ, ಅದಕ್ಕಾಗಿ ನಾನು ಧನ್ಯಳಾಗಿದ್ದೇನೆ,” ಎಂದು ಹೇಳುತ್ತಾರೆ.
ವಿವೇಕನು ಮದನ್ಪುರ ಖಾದರ್ ನಲ್ಲಿರುವ ಒಂದು ಆಂಗ್ಲ ಮಾಧ್ಯಮ ಶಾಲೆಗೆ ಮೂರು ವರ್ಷಗಳ ಕಾಲ ಹೋಗುತ್ತಿದ್ದನು. ಗೀತಾ ಅವನು ಶಾಲೆಗೆ ಹೋಗಿ ಬರಲು ಒಂದು ಸೈಕಲ್ ರಿಕ್ಷಾದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. ಅದೇ ಶಾಲೆಯ 7 ಮತ್ತು 9ನೇ ತರಗತಿಯಲ್ಲಿ ಓದುತ್ತಿದ್ದ ಅವನ ತಂದೆಯ ಸಹೋದರನ ಹೆಣ್ಣು ಮಕ್ಕಳು, ಅವನನ್ನು ತೋಳುಗಳಿಂದ ಹಿಡಿದು, ಅವರ ನಡುವೆ ಕೂರಿಸಿ, ಎಚ್ಚರಿಕೆಯಿಂದ ಕರೆದೊಯ್ಯುತ್ತಿದ್ದರು. “ಜನನಿಬಿಡ ರಸ್ತೆಗಳನ್ನು ದಾಟುವಾಗ ಬಹಳ ಗಾಬರಿಗೊಳ್ಳುತ್ತಾನೆ. ತಾನು ಬೀಳುತ್ತೇನೆ ಎಂದು ಹೆದರುತ್ತಾನೆ,” ಎಂದು ಅವನ ತಾಯಿ ಹೇಳುತ್ತಾರೆ.
ಲಾಕ್ಡೌನ್ ಪ್ರಾರಂಭವಾದಾಗ ಗೀತಾ ಹಾಗೂ ಅವರ ಪತಿಯ ಉದ್ಯೋಗಗಳು ಅನಿಶ್ಚಿತವಾಗಿ, ಅವರ ಆದಾಯವು ಕುಸಿಯಿತು. ಆರು ತಿಂಗಳುಗಳಿಗೆ ಹನ್ನೆರಡು ಸಾವಿರ ಶಾಲಾ ಶುಲ್ಕವನ್ನು ಪಾವತಿಸಲಾಗದ ಕಾರಣ ವಿವೇಕನನ್ನು ಶಾಲೆಯಿಂದ ಹೊರತೆಗೆದು ಸರಿತ ವಿಹಾರಿನ ಸರ್ವೋದಯ ಕನ್ಯಾ ವಿದ್ಯಾಲಯ ಎಂಬ ಸರ್ಕಾರಿ ಶಾಲೆಗೆ ದಾಖಲು ಮಾಡಿಸಲಾಯಿತು.
ಈಗ ಮೂರನೇ ತರಗತಿಯಲ್ಲಿ ಓದುತ್ತಿರುವ ವಿವೇಕ್, ತನ್ನ ತಾಯಿಯ ಸ್ಮಾರ್ಟ್ ಫೋನಿನ ಮೂಲಕ ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಾನೆ. ಅವನಿಗೆ ವಿಶೇಷ ಗಮನವನ್ನು ನೀಡಿ, ಅವನ ಕೆಲಸಗಳ ಬಗ್ಗೆ ಜಾಗರೂಕರಾಗಿರಲು ಅವನ ಶಿಕ್ಷಕರಲ್ಲಿ ಗೀತಾ ವಿನಂತಿಸಿಕೂಂಡಿದ್ದಾರೆ. “(ಅವನ ಶಿಕ್ಷಕರು) ಅವನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ,” ಎನ್ನುತ್ತಾರೆ ಗೀತಾ. ಕೋವಿಡ್ ಪರಿಸ್ಥಿತಿ ಸುಧಾರಿಸಿದ ನಂತರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ವಿಕಲಚೇತನರಿಗೆ ನೀಡುವ ವಿಶಿಷ್ಟ ಅಂಗವಿಕಲ ಐಡಿ (ಯುಡಿಐಡಿ) ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಅವರು ಕಾಯುತ್ತಿದ್ದಾರೆ. ಯುಡಿಐಡಿ ಎಂಬ ಈ ಏಕಮಾತ್ರ ಗುರುತಿನ ದಾಖಲೆಯು ಸರ್ಕಾರದ ಪ್ರಯೋಜನಗಳನ್ನು ಪಡೆಯಲು ವಿವೇಕನಿಗೆ ಅನುವು ಮಾಡಿಕೊಡುತ್ತದೆ.

ಕೆಲವೊಮ್ಮೆ ವಿವೇಕ್ ತನ್ನ ಸ್ನೇಹಿತರೊಂದಿಗೆ ಆಟವಾಡುವಾಗ, ರಸ್ತೆ ದಾಟುವಾಗ ಅಥವಾ ವೇಗವಾಗಿ ಚಲಿಸಲು ಅಗತ್ಯವಿರುವಾಗ, ಹಿಂಜರಿಯುತ್ತಾನೆ. “ನಾನು ವೇಗವಾಗಿ ನಡೆಯಲು ಸಾಧ್ಯವಾಗುವುದಿಲ್ಲ ಎಂದು ಹೆದರುತ್ತೇನೆ,” ಎಂದು ಅವನು ಹೇಳುತ್ತಾನೆ.
ಪ್ರಾರಂಭದಲ್ಲಿ ಮಕ್ಕಳೊಡನೆ ಆಟವನ್ನಾಡುವುದು ಅವನಿಗೆ ಬಹಳ ಕಷ್ಟಕರವಾಗಿತ್ತು. “ಇತರ ಮಕ್ಕಳು ‘ಅವನು ಬಹಳ ಸಾರಿ ಬೀಳುತ್ತಿದ್ದಾನೆ’ ಎಂದು ನನಗೆ ದೂರು ಹೇಳುತ್ತಿದ್ದರು. ನಾನು ಅವರಿಗೆ, ‘ಒಂದೋ ಅವನನ್ನು ಆಡುವಂತೆ ಮಾಡಬೇಡಿ, ಆದರೆ ಹಾಗೆ ಮಾಡಿದ್ದಲ್ಲಿ, ಅವನನ್ನು ಜಾಗರೂಕತೆಯಿಂದ ನೋಡಿಕೊಳ್ಳಿ’,” ಎಂದು ಹೇಳುತ್ತಿದ್ದೆ. ಗೀತಾರ ನಡುವಳಿಕೆಯಿಂದ ವಿವೇಕನ ಪರಿಸ್ಥಿತಿಯ ಜೊತೆ ಅಂಟಿಕೊಂಡಿದ್ದ ಮುಜುಗರ ಕಡಿಮೆಯಾಯಿತು. “ಈಗ ನಮ್ಮ ಕಟ್ಟಡದಲ್ಲಿರುವವರು ಹಾಗೂ ಸುತ್ತಮುತ್ತಲಿನ ಜನರಲ್ಲಿ ಅವನ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿದೆ ಹಾಗಾಗಿ ಟೀಕಿಸುವುದನ್ನು ನಿಲ್ಲಿಸಿದ್ದಾರೆ.”
ಕುಟುಂಬದ ವಯಸ್ಕರು ಅಷ್ಟೇನೂ ಬೆಂಬಲವನ್ನು ನೀಡಿಲ್ಲ. “ಕುಟುಂಬದ ಹಿರಿಯ ಸದಸ್ಯರು ಸೂಕ್ಷ್ಮತೆಯನ್ನು ಅರಿಯದೆ ವಿವೇಕನ ಕಾಲಗಳು ಹೀಗೆ ಏಕೆ ಇವೆ ಮತ್ತು ನೀವು (ಅವನ ಪೋಷಕರು) ಇದರ ಬಗ್ಗೆ ಏಕೆ ಎನೂ ಮಾಡಿಲ್ಲ ಎಂದು ನಮ್ಮನ್ನು ಕೇಳುತ್ತಾರೆ. ನನಗೂ ನನ್ನ ಪತಿಗೂ ಈ ಪ್ರಶ್ನೆಗಳನ್ನು ಕೇಳಿದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಈ ಪ್ರಶ್ನೆಗಳು ವಿವೇಕನಿಗೆ ಕೇಳಿದಾಗ ಅವನು ಖಿನ್ನತೆಗೆ ಒಳಗಾಗುತ್ತಾನೆ ಎಂದು ಹೆದರುತ್ತೇನೆ,” ಎಂದು ಆಕೆ ಹೇಳುತ್ತಾರೆ.
“ಜೋಕರ್ ಬಂದಿದ್ದಾನೆ!”
ವಿವೇಕ್ ಇದನ್ನು ಕೇಳಿದಾಗಲೆಲ್ಲ ಬಹಳ ಕೋಪಗೊಳ್ಳುತ್ತಾನೆ, ಸಿಟ್ಟಿಗೇರಿ ಗೊಂದಲಕ್ಕೊಳಗಾಗುತ್ತಾನೆ. ಜನರು ಅವನನ್ನು ಏಕೆ ಗೇಲಿ ಮಾಡುತ್ತಾರೆ ಎಂದು ತನ್ನ ತಾಯಿಯನ್ನು ಕೇಳುತ್ತಾನೆ. ಹೀಗೆ ಒಮ್ಮೊಮ್ಮೆ ಗೇಲಿಗೊಳಗಾದರೂ, ತನ್ನ ಕಟ್ಟಡದ ಮಾಳಿಗೆಯಲ್ಲಿ ಸೇರುವ ತನ್ನ ಗೆಳೆಯರೊಡನೆ ಆಟವಾಡಲು ಇಷ್ಟಪಡುತ್ತಾನೆ. ವಿವೇಕನು ಬೆಳೆದು ನಿಂತು, ಎಲ್ಲಿ ತನ್ನ ಭಾವನೆಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿ ಬಿಡುವನೊ ಎಂಬ ಭಯ ತನಗೆ ಕಾಡುತ್ತದೆ ಎಂದು ಅವನ ತಾಯಿ ಗೀತಾ ಹೇಳುತ್ತಾರೆ.
ವಿವೇಕನ ತಂಗಿ ಜಾನ್ಹವಿಗೂ ತಾಗುಮಂಡಿಗಳ ಸಮಸ್ಯೆ ಇದೆ, ಆದರೆ ಅವಳಿಗೆ ಎರಡು ವರ್ಷವಿದ್ದಾಗಲೇ ರೋಗ ಪರೀಕ್ಷೆ ಮಾಡಿಸಲಾಗಿದ್ದು ಅವಳ ಚಿಕಿತ್ಸೆಯು ಬೇಗನೆ ಶುರುವಾಯಿತು. ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯವಾಗುವಂತೆ ಜಾನ್ಹವಿ, ವಿಟಮಿನ್ D3 ಚುಚ್ಚುಮದ್ದುಗಳನ್ನು ಪಡೆದಳು. ಇದರಿಂದ ದೇಹದ ಮೂಳೆಗಳು ಬಲಿಷ್ಟಕೊಂಡು, ಕ್ಯಾಲ್ಸಿಯಂನ ಕೊರತೆಯು ದೂರವಾಗುವುದು. ಇದರಿಂದ ತಾಗುಮಂಡಿಗಳ ಸಮಸ್ಯೆಯನ್ನು ಗುಣಪಡಿಸಬಹುದು.
ಗೀತಾ ಚುಚ್ಚುಮದ್ದುಗಳನ್ನು ಮೆಡಿಕಲ್ ಸ್ಟೋರಿನಿಂದ ಖರೀದಿಸಿ, ಜಾನ್ಹವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅವುಗಳನ್ನು ಕೊಡಿಸಿದರು. “ನಾವು ಇವಳಿಗೆ ಎರಡು ತಿಂಗಳುಗಳ ಕಾಲ ಅತ್ಯಗತ್ಯವಾದ ಔಷಧಿಗಳು ಹಾಗೂ ಚುಚ್ಚುಮದ್ದುಗಳನ್ನು ನೀಡಲು ಸಾಧ್ಯವಾಯಿತು, ಇದರಿಂದ ಅವಳಿಗೆ ನೆರವಾಗಿದೆ. ತದ್ವಿರುದ್ದವಾಗಿದ್ದ ಅವಳ ಪಾದಗಳು ನಿಧಾನವಾಗಿ ನೇರವಾದವು. ಅವಳು ವಿಶೇಷ ಬೂಟುಗಳನ್ನು ಸಹ ಧರಿಸುವಂತೆ ಮಾಡಿದ್ದೇವೆ. ಒಟ್ಟಾರೆಯಾಗಿ ಅವಳ ಸ್ಥಿತಿ ವಿವೇಕನಿಗಿಂತ ಬಹಳ ಉತ್ತಮವಾಗಿದೆ,” ಎಂದು ಗೀತಾ ಹೇಳುತ್ತಾರೆ. ಆದರೆ, ಜಾನ್ಹವಿಗೆ ವಯಸ್ಸಾದಂತೆ ಎಲ್ಲಿ ಪುನಃ ಈ ಪರಿಸ್ಥಿತಿ ಮರಳುತ್ತದೆಯೋ ಎಂದು ಅವರು ಇನ್ನೂ ಚಿಂತಿತರಾಗಿದ್ದಾರೆ.
ಕೋವಿಡ್ ಸಮಸ್ಯೆಯಿಂದ ಸಾರ್ವಜನಿಕ ಆಸ್ಪತ್ರೆಗಳು ತುಂಬಿ ತುಳುಕಿದವು. ಇದರಿಂದ ಜಾನ್ಹವಿಗೆ ಚುಚ್ಚುಮದ್ದುಗಳನ್ನು ನೀಡಲು ಆಗಲಿಲ್ಲ. ಗೀತಾ ತಮ್ಮ ವೈದ್ಯರ ಸಲಹೆಯ ಮೇರೆಗೆ ವಿಟಮಿನ್ ಬಿ3 ಸಿರಪ್ಅನ್ನು ಅವಳಿಗೆ ನೀಡಲಾರಂಭಿಸಿದರು. ಜಾನ್ಹವಿಗೆ ವಿಶೇಷ ಆರ್ಥೋಪೆಡಿಕ್ ಬೂಟುಗಳನ್ನು ಸಹ ಅವರು ತರಲಿದ್ದಾರೆ, ಇದರಿಂದ ಅವಳಿಗೆ ನೆರವಾಗುತ್ತದೆ ಎಂದು ಅವರು ಅಪೇಕ್ಷಿಸುತ್ತಾರೆ.
ವಿವೇಕನ ಸ್ಥಿತಿ ಮತ್ತಷ್ಟು ಹದಗೆಡಬಹುದೆಂದು ಅವನ ಕುಟುಂಬಸ್ಥರು ಚಿಂತಿಸುತ್ತಾರೆ. ಅವನ ಪಾದಗಳ ನಡುವಿನ ಅಂತರ ನಿಧಾನವಾಗಿ ಹೆಚ್ಚಾಗುತ್ತಿದೆ, ಅವನಿಗೆ ವಯಸ್ಸಾದಂತಂತೆ ಇದು ಗಮನಾರ್ಹ ರೀತಿಯಲ್ಲಿ ಹೆಚ್ಚಾಗುತ್ತದೆ. “ದೇಹದ ಸಮತೋಲನ ಹಾಗೂ ಚಲನದಲ್ಲಿ ಅವನಿಗೆ ಕಷ್ಟವಾಗುತ್ತದೆ,” ಎಂದು ಗೀತಾ ಹೇಳುತ್ತಾರೆ. “ಅವನ ಇಚ್ಛೆಯಂತೆ ಅವನು ಎಷ್ಟು ಓದ ಬಯಸುತ್ತಾನೋ ಅಷ್ಟು ಓದಲಿ, ಅದಾದ ನಂತರ ಅವನಿಗಾಗಿ ನಾವು ಒಂದು ಸಣ್ಣ ಅಂಗಡಿಯನ್ನು ತೆರೆದು ಕೊಡಲು ಯೋಚಿಸಿದ್ದೇವೆ, ಬಹುಶಃ ಒಂದು ಐಸ್ ಕ್ರೀಮ್ ಅಂಗಡಿ, ಅವನಿಗಲ್ಲಿ ಹೆಚ್ಚು ಓಡಾಡುವ ಅಗತ್ಯವಿರುವುದಿಲ್ಲ, ಎಂದು ಅವರು ಆಶಾದಾಯಕವಾಗಿ ಹೇಳುತ್ತಾರೆ.
ಪರಿ ಎಜುಕೇಶನ್ ಅಂಚಿನಲ್ಲಿರುವ ಗುಂಪುಗಳ ಬಗ್ಗೆ ಬರೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ. ಅಂಗವಿಕಲರ ಕುರಿತಾದ ಈ ಸರಣಿಯು ಪುಣೆಯ ತಥಾಪಿ ಟ್ರಸ್ಟ್ ಬೆಂಬಲವನ್ನು ಹೊಂದಿದೆ. ನೀವು ಈ ಲೇಖನವನ್ನು ಮರು ಪ್ರಕಟಿಸಲು ಬಯಸಿದರೆ, ದಯವಿಟ್ಟು zahra@ruralindiaonline.org ಮತ್ತು cc namita@ruralindiaonline.org ಇಲ್ಲಿಗೆ ಬರೆಯಿರಿ.
Editor's note
ಸಂಪಾದಕರ ಟಿಪ್ಪಣಿ ರೋಹನ್ ಚೋಪ್ರಾ ಅಶೋಕ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದ ಎರಡನೇ ವರ್ಷದ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. 'ಕಾಲೇಜು ಪದವಿಯು ಉದ್ಯೋಗದ ಭರವಸೆ ನೀಡುವುದಿಲ್ಲ' ಎಂಬ ಅವರ ಹಿಂದಿನ ಲೇಖನ ನವೆಂಬರ್ 2, 2021 ರಂದು ಪ್ರಕಟವಾಗಿತ್ತು. ಕಡಿಮೆ ಆದಾಯದ ಕುಟುಂಬಗಳ ಮಕ್ಕಳ ಮೇಲೆ ದೈಹಿಕ ಅಂಗವೈಕಲ್ಯದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಅವರು ಈ ಕಥೆಯನ್ನು ಮಾಡಲು ಆಯ್ಕೆ ಮಾಡಿದರು. ಅವರು ಹೇಳುತ್ತಾರೆ: "ಈ ಲೇಖನವನ್ನು ಬರೆಯುವಾಗ, ಗೀತಾ ದೀದಿಯಂತಹ ಜನರ ಸವಾಲಿನ ಜೀವನ ಮತ್ತು ಅವರಂತಹ ಪೋಷಕರ ಮೇಲಿನ ಒತ್ತಡದ ಬಗ್ಗೆ ನನಗೆ ಒಂದು ನೋಟ ಸಿಕ್ಕಿತು. ಅವರು ತಮ್ಮ ವೈಯಕ್ತಿಕ ವಿವರಗಳು ಮತ್ತು ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ."
ಚಿತ್ರಗಳು: ಅಂತರ ರಾಮನ್
ಅನುವಾದ: ಚೇತನ ವಾಗೀಶ್
ಚೇತನ ವಾಗೀಶ್ ಚೇತನ ವಾಗೀಶ್ ಚೇತನ ವಾಗೀಶ್ ಅವರಿಗೆ ಪರಿಸರ, ಶಿಕ್ಷಣ ಮತ್ತು ಸಾರ್ವಜನಿಕ ನೀತಿ ವಿಷಯಗಳಲ್ಲಿ ಅಪಾರ ಆಸಕ್ತಿ ಇದೆ. ಅವರು ಇತ್ತೀಚೆಗೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಿಂದ ಪರಿಸರ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ.