
ಈ ಲೇಖನವನ್ನು ಮೂಲದಲ್ಲಿ ಹಿಂದಿ ಭಾಷೆಯಲ್ಲಿ ಬರೆದು ವರದಿ ಮಾಡಲಾಗಿತ್ತು. ‘ಪರಿ ಎಜುಕೇಶನ್’ ಭಾರತದಾದ್ಯಂತ ಅವರದೇ ಆಯ್ಕೆಯ ಭಾಷೆಯಲ್ಲಿ ನಮಗಾಗಿ ವರದಿಗಾರಿಕೆ ಮಾಡುವ, ಬರೆಯುವ ಮತ್ತು ವಿವರವಾಗಿ ಪ್ರಾತ್ಯಕ್ಷಿಕೆ ನೀಡಬಲ್ಲ ವಿದ್ಯಾರ್ಥಿಗಳೊಂದಿಗೆ, ಸಂಶೋಧಕರೊಂದಿಗೆ ಮತ್ತು ಅಧ್ಯಾಪಕರೊಂದಿಗೆ ಕೆಲಸ ಮಾಡುತ್ತಿದೆ.
ಮದ್ಯದ ಅಮಲಿನಲ್ಲಿ ಗಂಡ ಪ್ರಾಣ ಕಳೆದುಕೊಂಡ ಮೇಲೆ, ಬೀನಾ ದೇವಿಯವರು ಮಾವಂದಿರಿಂದ ಆಸ್ತಿಯಲ್ಲಿ ತನ್ನ ಪಾಲನ್ನು ಕೇಳಬೇಕಾದ ಪರಿಸ್ಥಿತಿ ಒದಗಿತು. “ನನ್ನ ಹಕ್ಕನ್ನು ನಾನು ಕೇಳಿದೆ. ನಾನು ಈ ಮನೆಯ ಸೊಸೆ, ನನ್ನ ಗಂಡನ ಪಾಲನ್ನು ನನಗೆ ಕೊಡಿಸಿ ಎಂದು ಹಳ್ಳಿಯ ಸರಪಂಚರಿಗೆ (ಮುಖ್ಯಸ್ಥ) ಹೇಳಿದೆ. ನಾನು ನನ್ನ ಮಕ್ಕಳನ್ನು ನೋಡಿಕೊಳ್ಳಬೇಕಿತ್ತು. ಅವರನ್ನೆಲ್ಲಿಗೆ ಕರೆದುಕೊಂಡು ಹೋಗಲಿ ಹೇಳಿ?” ಎಂದು ಕೇಳಿದರು.
ಹಿಮಾಚಲ ಪ್ರದೇಶದ ಪಾಲಂಪುರದಲ್ಲಿನ ನಾಯನ್ ಹಳ್ಳಿಯ, 54 ವರ್ಷದ ಬೀನಾ ಒಬ್ಬ ದಲಿತ ರೈತ ಮಹಿಳೆ, ಕೃಷಿ ಕಾರ್ಮಿಕಳು, ಸ್ವಚ್ಛತಾ ಕೆಲಸಗಾರ್ತಿ ಮತ್ತು ದಿನಸಿ ಅಂಗಡಿಯ ಮಾಲಕಿ. 249 ಜನಸಂಖ್ಯೆಯಿರುವ ಕಾಂಗ್ರಾ ಜಿಲ್ಲೆಯ ಈ ಹಳ್ಳಿಯಲ್ಲಿ ತನ್ನ ಮತ್ತು ತನ್ನ ಕುಟುಂಬದ ಹೊಟ್ಟೆಪಾಡಿಗಾಗಿ ಅವರಿಗೆ ಬೇರೆ ಬೇರೆ ದುಡಿಮೆಯ ದಾರಿಗಳ ಅಗತ್ಯವಿದೆ.
15ನೇ ವಯಸ್ಸಿನಲ್ಲಿ ಮದುವೆಯಾದ ಬೀನಾ, 19ನೇ ವಯಸ್ಸಿನಲ್ಲಿ ಮೂರು ಮಕ್ಕಳ ತಾಯಿಯಾಗಿದ್ದರು. ಅವರ ಗಂಡ ಗುರುಪಾಲ್ ಸಿಂಗ್ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದರು. ಅವರ ದಿನದ ದುಡಿಮೆ 150-200 ರೂಪಾಯಿಗಳು ಬಹುತೇಕ ಕುಡಿತಕ್ಕೇ ಖರ್ಚಾಗುತ್ತಿತ್ತು. “ಗಂಡ ಇದ್ದಿದ್ದರೂ ಒಂದೇ, ಇರದಿದ್ದರೂ ಒಂದೇ. ಆದರೂ ಅದಾದ ಮೇಲೆ (ಗಂಡ ತೀರಿದ ಮೇಲೆ) ನನ್ನ ಕಷ್ಟಗಳು ಕಡಿಮೆಯಾದವೆಂದೇ ಹೇಳಬೇಕು,” ಎಂದರು. ಜನವರಿ 7, 2019 ರಂದು ಸಾರಾಯಿಯ ನಶೆಯಲ್ಲಿಯೇ ಗುರುಪಾಲ್ ತೀರಿಹೋದರು. “ಅವರಿಗೆ ಶ್ವಾಸಕೋಶದ ಕಾಯಿಲೆಯಿತ್ತು, ಡಾಕ್ಟರು ಕುಡಿತವನ್ನು ಕಡಿಮೆ ಮಾಡುವಂತೆ ಹೇಳಿದರು, ಆದರೆ ಅವರು ಕೇಳಲಿಲ್ಲ.” ಎಂದು ಸೇರಿಸಿ ಹೇಳಿದರು.


ಗಂಡ ತೀರಿದ ಮೇಲೆ ಮಾವಂದಿರು ಮನೆ ಬಿಟ್ಟು ಹೋಗು ಎಂದರು. ಆಸ್ತಿಯಲ್ಲಿ ನನ್ನ ಹಕ್ಕಿನ ಪಾಲನ್ನು ಪಡೆಯಬೇಕೆಂಬ ಸಂಕಲ್ಪದಿಂದ ಹಳ್ಳಿಯ ಸರಪಂಚರ ಬಳಿಗೆ ಹೋದ ಮೇಲೆ ಸರಪಂಚರು, ಮನೆಯ ಸೊಸೆಯಾದುದರಿಂದ ಬೀನಾ ದೇವಿಗೆ ಆಸ್ತಿಯಲ್ಲಿ ಸಮಾನ ಪಾಲು ಕೊಡಬೇಕು ಎಂದು ತೀರ್ಮಾನಿಸಿದರು.
ಇನ್ನೂ ಬೆಳಗಿನ ಜಾವ ನಾಲ್ಕು ಗಂಟೆಯಾಗಿದೆ. ಬೀನಾ ದೇವಿ ಆಗಲೇ ಎದ್ದು ಮನೆಯವರ ಊಟಕ್ಕೆಂದು ರೋಟಿ ಮತ್ತು ರಾಜಮಾವನ್ನು ಮಾಡುತ್ತಿದ್ದಾರೆ. ಹಾರೆ ಗುದ್ದಲಿಗಳನ್ನು ಏರಿಸಿಕೊಂಡು ಹೊಲಕ್ಕೆ ಹೊರಟಾಗ ಅವರ ವಯಸ್ಸಿಗೆ ಬಂದ ಇಬ್ಬರು ಮಕ್ಕಳು ಇನ್ನೂ ಮಲಗಿದ್ದರು. ಅವರು ಮೂರು ಕಿಮೀ ದೂರವನ್ನು 15 ರಿಂದ 20 ನಿಮಿಷಗಳಲ್ಲಿ ಸವೆಸಿದರು. ಅವರ 2-3 ಕಣಾಳು ಜಾಗದಲ್ಲಿ (1 ಕಣಾಳು ಎಂದರೆ ಒಂದು ಎಕರೆಯ ಹತ್ತನೇ ಒಂದು ಭಾಗ ಅಥವಾ 4 ಗುಂಟೆ ಅಥವಾ 10 ಸೆಂಟ್ಸ್) ಅವರು ಭತ್ತ, ಗೋಧಿ ಮತ್ತು ಆಗಾಗ್ಗೆ ತರಕಾರಿಗಳನ್ನು ಬೆಳೆಯುತ್ತಾರೆ. “ಹೊಲದಲ್ಲಿ ಅರ್ಧ ಭಾಗ ಬರಡು ಭೂಮಿಯಾದ್ದರಿಂದ ಹೆಚ್ಚು ಬೆಳೆಯಲು ಸಾಧ್ಯವಿಲ್ಲ. ಬೆಳೆದದ್ದೆಲ್ಲವನ್ನೂ ಮನೆಗೆ ಬಳಸಿಕೊಳ್ಳುತ್ತೇವೆ, ಮಾರುವುದಿಲ್ಲ”
ಅವರಿಗೆ ಬೇಸಾಯವು ರಕ್ತದಲ್ಲೇ ಬಂದಿದೆ, ಏಕೆಂದರೆ ಕಾಂಗ್ರಾ ಜಿಲ್ಲೆಯ ನಜರಿ ಹಳ್ಳಿಯಲ್ಲಿರುವ ಅವರ ತಂದೆತಾಯಿಗೆ ಎರಡು ಬೇಸಾಯದಿಕ್ಕಿನಷ್ಟು (ಸುಮಾರು ಒಂದು ಎಕರೆ) ಜಮೀನಿತ್ತು, ಅದರಲ್ಲಿ ಗೋಧಿ, ಭತ್ತ ಮತ್ತು ಬೆಂಡೆ, ಹೀರೆ ಮತ್ತು ಹುರುಳಿ ಬೀನ್ಸಿನಂತಹ ತರಕಾರಿಗಳನ್ನು ಬೆಳೆಯುತ್ತದ್ದರು. ಬೀನಾ ಶಾಲೆಯ ಮುಖವನ್ನೇ ನೋಡಿದವರಲ್ಲ. ಬದಲಾಗಿ ತಂದೆತಾಯಿಗೆ ಬೇಸಾಯದಲ್ಲಿ ಸಹಾಯ ಮಾಡುತ್ತಾ, ಅವರೊಂದಿಗೆ ಬೇರೆಯವರ ಹೊಲದಲ್ಲಿಯೂ ಕೆಲಸ ಮಾಡುತ್ತಾ ಬೆಳೆದರು.



ಇನ್ನು ಕೆಲವು ದಿನ ಬೀನಾರವರು ಬೇರೆಯವರ ಮನೆಗಳಿಗೆ ಇಲ್ಲವೇ ಹೊಲಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಅವರ ಹಸು ಮತ್ತು ಮೇಕೆಗಳಿಗೆ ಹುಲ್ಲನ್ನೂ ತರುತ್ತಾರೆ. “ಒಂದು ದಿನದ ಕೆಲಸಕ್ಕೆ ನಾನು 150 ರೂಪಾಯಿ ದುಡಿಯುತ್ತೇನೆ ಮತ್ತು ಬೇರೆಯವರಿಗೆ ಹೊಲ್ಲು ಕೊಯ್ದುಕೊಟ್ಟು ಸುಮಾರು 50 ರಿಂದ 60 ರೂಪಾಯಿ ದುಡಿಯುತ್ತೇನೆ,“ ಎಂದರು. ಅದಾದ ಮೇಲೆ ಅವರ ಸಣ್ಣ ದಿನಸಿ ಅಂಗಡಿಯಲ್ಲಿ ಕುಳಿತು 100 ರೂಪಾಯಿವರೆಗೆ ಗಳಿಸುತ್ತಾರೆ.
ಅವರ ದುಡಿಮೆ ಇಲ್ಲಿಗೆ ಮುಗಿಯುವುದಿಲ್ಲ. ಉಡಾನಿನ ಖಾಸಗಿ ಶಾಲೆಯೊಂದರಲ್ಲಿ ನಾಲ್ಕು ವರ್ಷಗಳಿಂದ ಶಾಲೆ ಶುಚಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಸಂಜೆ 5 ರಿಂದ 7 ರವರೆಗೆ ಕೆಲಸ ಮಾಡಿ ತಿಂಗಳಿಗೆ ರೂ. 4000 ದುಡಿಯುತ್ತಾರೆ.
ಕೆಲವು ವರ್ಷಗಳ ಕೆಳಗೆ ಅವರ ಮಕ್ಕಳನ್ನು ಶಾಲೆಗೆ ಸೇರಿಸಲು ಹಣ ಬೇಕಾಗಿತ್ತು, ಬೀನಾ ಹೊಲಿಗೆ ಶುರು ಮಾಡಿದರು. “ನಾನು ನನ್ನ ಮಕ್ಕಳನ್ನು ಓದಿಸಬೇಕೆಂಬ ಆಸೆಯಿತ್ತು, ಹಾಗಾಗಿ ಧೈರ್ಯ ಮಾಡಿ ಹೊಲಿಗೆ ಕಲಿತೆ. ದಿನಕ್ಕೆ 150 ರಿಂದ 200 ರೂಪಾಯಿ ದುಡಿಯುತ್ತಿದ್ದೆ. ನನ್ನ ಗಂಡ ಆಗಾಗ್ಗೆ ಬಂದು ನಾನು ದುಡಿದ ಹಣವೆಲ್ಲವನ್ನು ಕಿತ್ತುಕೊಂಡು ಸಾರಾಯಿಗೆ ಸುರಿಯುತ್ತಿದ್ದ,” ಎಂದರು.


“ಇಷ್ಟೆಲ್ಲಾ ಕಷ್ಟದ ದುಡಿಮೆಯಿಂದ ನನ್ನ ಮಕ್ಕಳಿಗೆ ವಿದ್ಯೆ ಕೊಡಿಸಿ, ಅವರ ಕಾಲ ಮೇಲೆ ಅವರು ನಿಲ್ಲುವಂತಾಗಿದ್ದು ನನಗೆ ನೆಮ್ಮದಿ ತಂದಿದೆ,” ಎಂದರು. ಅವರ ಮಗಳು ಸೋನಿ, 40, ಸ್ವಂತ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದಾರೆ; ಮಗ ಸಂಜೀತ್, 37, ಚಂಡೀಗಡದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಕೊನೆಯ ಮಗ ಮಂಜೀತ್, 36 ವರ್ಷ, ಡ್ರೈವರ್ ಕೆಲಸ ಮಾಡುತ್ತಾ ಅಗತ್ಯವಿದ್ದಾಗ ಜಮೀನಿನ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ.
“ಜನರು ನನ್ನ ದುಡಿಮೆಯನ್ನು ನೋಡಿ ಹಂಗಿಸುತ್ತಾರೆ. ಆದರೆ ನಾನು ಮಾತ್ರ ಕಷ್ಟಪಟ್ಟು ದುಡಿಯುತ್ತೇನೆ. ನನ್ನ ಮಕ್ಕಳು ಇವೊತ್ತು ದುಡಿಯುತ್ತಿದ್ದಾರೆ, ಆದರೂ ನಾನು ಕೆಲಸ ಮಾಡುವುದನ್ನು ಬಿಡುವುದಿಲ್ಲ, ಏಕೆಂದರೆ ನನ್ನ ಜೀವನವನ್ನು ನಾನು ಹೇಗೆ ಬದುಕಬೇಕೆಂದು ಗೊತ್ತಿದೆ… ಮತ್ತು ಅದರಲ್ಲಿ ನನಗೆ ಸಂತೋಷವಿದೆ,” ಎಂದರು.
Editor's note
ಜ್ಯೋತಿ ಕುಮಾರಿಯವರು ಬಿಹಾರದ ಜಹಾನಾಬಾದ್ ಜಿಲ್ಲೆಯ ಕತ್ರಾಸಿನ್ ಹಳ್ಳಿಯವರು, ಇವರು 12 ನೇ ತರಗತಿಯವರೆಗೆ ಮುಕ್ದುಂಪುರ ಬ್ಲಾಕಿನ ದ್ವಾರಿಕಾ ಪ್ರಸಾದ್ ಯಾದವ್ (+2) ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಣ ಪಡೆದಿರುವರು. ಇವರು ‘ಸಹಜೆ ಸಪನೆ’ ಎಂಬ ಸರಕಾರೇತರ ಸಂಸ್ಥೆಯಿಂದ ಸಮಾಲೋಚನೆ ಮತ್ತು ಕೌಶಲ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಇದು ‘ಪರಿ ಶಿಕ್ಷಣ’ ದ ಡಾಕ್ಯುಮೆಂಟೇಶನ್ನಿನ (ದಾಖಲೀಕರಣ) ಸಣ್ಣ ಕೋರ್ಸನ್ನು ಒಳಗೊಂಡಿದೆ. “ಬೀನಾದೇವಿಯವರ ಧೈರ್ಯ ನನಗೆ ತುಂಬಾ ಹಿಡಿಸಿತು- ಈ ರೀತಿಯ ಧೈರ್ಯವನ್ನು ರಾಜಕಾರಣದಲ್ಲಿರುವ ಮಹಿಳೆಯರಲ್ಲಿ ಕಾಣುತ್ತೇವೆ. ವಿಧವೆಯಾದರೂ ಸಹ ಅವರನ್ನು ಯಾರೂ ಕಡೆಗಣಿಸಲಾಗಲಿಲ್ಲ. ಛಲದಿಂದ ಮುನ್ನುಗ್ಗಿ ಅವರ ಮತ್ತು ಅವರ ಮಕ್ಕಳ ಜೀವನದ ದಿಕ್ಕನ್ನೇ ಬದಲಿಸಿಕೊಂಡರು. ಅವರಿಗೆ ಮತ್ತು ಅವರಂತೆಯೇ ಬದುಕುತ್ತಿರುವ ಮಹಿಳೆಯರಿಗೆ ನನ್ನ ಅಭಿನಂದನೆ” ಎನ್ನುತ್ತಾರೆ ಜ್ಯೋತಿ.
ಅನುವಾದ: ಬಿ. ಎಸ್. ಮಂಜಪ್ಪ
ಬಿ.ಎಸ್. ಮಂಜಪ್ಪ ಇವರು ಒಬ್ಬ ಕನ್ನಡದ ಉದಯೋನ್ಮುಖ ಬರಹಗಾರ ಮತ್ತು ಅನುವಾದಕ.