
ಹಳೆಯ ಉಸ್ಮಾನ್ ಪುರದ ನಿವಾಸಿಗಳು ಬುಲ್ಡೋಜರ್ ಹೊರಡಿಸುವ ಗುಡುಗಿನ ಸದ್ದು ಕೇಳಿ ಬಂದಾಗ, ಅದು ಅವರು ಅಲ್ಲಿಂದ ಹೊರಡಬೇಕಿರುವ ಸಮಯವೆಂದು ಅರಿತುಕೊಳ್ಳುತ್ತಾರೆ. ಚಿಂದಿ ಆಯುವವರು, ರಿಕ್ಷಾ ಎಳೆಯುವವರು, ಗುಜರಿ ವ್ಯಾಪಾರಿಗಳು ಮತ್ತು ಭಿಕ್ಷಾಟನೆ ಮಾಡುವ ಜನರ ಈ ಕೊಳಗೇರಿಯಲ್ಲಿ, ಯಾವುದೇ ಮುನ್ಸೂಚನೆಯಿಲ್ಲದೆ ಇದ್ದಕ್ಕಿದ್ದಂತೆ ತಮ್ಮ ಗುಡಿಸಲುಗಳನ್ನು (ಜುಗ್ಗಿಂಯಾ) ಕಳೆದುಕೊಳ್ಳುವ ನಿರಂತರ ಭಯದ ವಾತಾವರಣವಿದೆ. ಕಳೆದ ದಶಕದಲ್ಲಿ ತಮ್ಮ ಮನೆಗಳು ಹಲವಾರು ಬಾರಿ ಕಣ್ಮುಂದೆಯೇ ಕುಸಿದಿರುವುದನ್ನು ನಾವು ನೋಡಿದ್ದೇವೆ ಎಂದು ಅಲ್ಲಿನ ಜನರು ಹೇಳುತ್ತಾರೆ.
“ನಮ್ಮ ಜುಗ್ಗಿಗಳನ್ನು ಬದಲಾಯಿಸುವುದೆನ್ನುವುದು ನಮ್ಮ ಬದುಕಿನ ಒಂದು ಭಾಗವೇ ಆಗಿಬಿಟ್ಟಿದೆ,” ಎನ್ನುತ್ತಾರೆ ಇಲ್ಲಿನ ಸಪೇರಾ ಸಮುದಾಯದ ಸದಸ್ಯ ರಘು (ಹೆಸರು ಬದಲಾಯಿಸಲಾಗಿದೆ). ಸಪೇರಾ ಒಂದು ಡಿನೋಟಿಫೈಡ್ ಬುಡಕಟ್ಟು ಜನಾಂಗವಾಗಿದೆಯಾದರೂ ಅದಕ್ಕೆ ಇದುವರೆಗೆ ಆದರೆ ಯಾವುದೇ ಕಲ್ಯಾಣ ಯೋಜನೆಗಳನ್ನು ಪಡೆಯಲು ಸಾಧ್ಯವಾಗಿಲ್ಲ.
ಯಮುನಾ ನದಿಯ ದಡದಿಂದ ಕೇವಲ ಮೀಟರ್ ದೂರದಲ್ಲಿರುವ ಹಳೇ ಉಸ್ಮಾನ್‌ಪುರ ಗ್ರಾಮವು ನದಿಯ ಪ್ರವಾಹ ಪ್ರದೇಶದ ಭಾಗವಾಗಿದೆ. 2010ರಲ್ಲಿ, ದೆಹಲಿ ಅಭಿವೃದ್ಧಿ ಪ್ರಾಧಿಕಾರವು ಈ ಗ್ರಾಮವು ಆಕ್ರಮಿಸಿಕೊಂಡಿರುವ ಈ ಪ್ರದೇಶವನ್ನು ವಲಯ ‘ಒ’ ಎಂದು ನಿಗದಿಪಡಿಸಿತು – ಹೆಚ್ಚು ಕಲುಷಿತಗೊಂಡಿರುವ ಯಮುನಾ ನದಿಯನ್ನು ಪುನರುಜ್ಜೀವನಗೊಳಿಸಲು. ನದಿಯು ದೆಹಲಿಯ ಮೂಲಕ 22 ಕಿಲೋಮೀಟರ್ ಹರಿಯುತ್ತದೆ ಮತ್ತು ಇದರ ಜಲಾನಯನ ಪ್ರದೇಶದಲ್ಲಿ ಮನರಂಜನಾ ಪ್ರದೇಶಗಳನ್ನು ರಚಿಸುವುದು ಡಿಡಿಎ ಯೋಜನೆಯಾಗಿದೆ.



2014ರಲ್ಲಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಈ ಪ್ರವಾಹ ಪಾತ್ರದ ಪ್ರದೇಶಗಳಲ್ಲಿ ನಿರ್ಮಾಣ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಿಷೇಧಿಸಿತ್ತು. ಅಂದಿನಿಂದ, ಸರ್ಕಾರಿ ಅಧಿಕಾರಿಗಳು ನಿಯಮಿತವಾಗಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ ಮತ್ತು ಅಂತಹ ಮನೆಗಳನ್ನು ನೆಲಸಮ ಮಾಡುತ್ತಿದ್ದಾರೆ. ಅಲ್ಲಿ ವಾಸಿಸುವ ಜನರನ್ನು ಯಾವುದೇ ಪೂರ್ವ ಸೂಚನೆಯಿಲ್ಲದೆ ಆಗಾಗ್ಗೆ ಬೇರುಸಹಿತ ಕಿತ್ತುಹಾಕಲಾಗುತ್ತದೆ. ರಘು ಪದೇ ಪದೇ ನೆಲಸಮ ಮಾಡುವ ಬಗ್ಗೆ ಹೇಳುತ್ತಾರೆ, “ಅವರು [ಸರ್ಕಾರಿ ಅಧಿಕಾರಿಗಳು] ಏನನ್ನೂ ಹೇಳುವುದಿಲ್ಲ. ಯಾವುದೇ ರೀತಿಯ ಮಾತುಕತೆ ಅಥವಾ ಚರ್ಚೆ ನಡೆಸುವುದಿಲ್ಲ. ಅವರು ಬಂದು ನಮ್ಮ ಮನೆಗಳನ್ನು ಒಡೆದು ಅದು ಸರ್ಕಾರಿ ಭೂಮಿ ಎಂದು ಹೇಳುತ್ತಾರೆ ಅಷ್ಟೇ.
ಅವರ ಮನೆಗಳು ಮತ್ತು ವಸ್ತುಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ನೆಲಸಮಗೊಳಿಸುವುದು ಎಂದರೆ ಅವರು ದಿನಗಳು ಅಥವಾ ತಿಂಗಳುಗಳವರೆಗೆ ಛಾವಣಿಯಿಲ್ಲದೆ ಬದುಕಬೇಕಾಗುತ್ತದೆ. ರುಬಿನಾ (ಅವಳು ತನ್ನ ಮೊದಲ ಹೆಸರನ್ನು ಮಾತ್ರ ಬಳಸುತ್ತಾಳೆ) ಹೇಳುತ್ತಾರೆ, “2020 ರಲ್ಲಿ, ಅವರು ನಮ್ಮ ಗುಡಿಸಲುಗಳನ್ನು ನೆಲಸಮ ಮಾಡಿದಾಗ, ಚಳಿಗಾಲದ ತಿಂಗಳುಗಳಲ್ಲಿ ನಡುಗುವ ಚಳಿಯಲ್ಲಿ ನಾವು ನಮ್ಮ ದಿನಗಳನ್ನು ಕಳೆದಿದ್ದೇವೆ. ವಿಶೇಷವಾಗಿ, ನಮ್ಮ ಹಿರಿಯರು ತುಂಬಾ ಕಷ್ಟಪಟ್ಟರು. ಆ ಸಮಯದಲ್ಲಿ, ಐದು ಕುಟುಂಬಗಳು ಬೆಂಕಿಯ ಜ್ವಾಲೆಯೊಂದಿಗೆ ತಮ್ಮನ್ನು ಬೆಚ್ಚಗಿಡಲು ಪ್ರಯತ್ನಿಸುತ್ತಿದ್ದವು.”
ರುಬಿನಾ ಹಳೇ ಉಸ್ಮಾನಪುರದ ನಿವಾಸಿಯಾಗಿದ್ದು, ಈ ಕಾಲನಿಯ ಬಂಗಾಳಿ ಟೋಲಾದಲ್ಲಿ ತನ್ನ ಇಡೀ ಜೀವನವನ್ನು ಕಳೆದಿದ್ದಾರೆ. ಅವರು ತನ್ನ ಹೆತ್ತವರೊಂದಿಗೆ ಒಂದು ವಯಸ್ಸಿನಲ್ಲಿ ಪಶ್ಚಿಮ ಬಂಗಾಳದಿಂದ ಇಲ್ಲಿಗೆ ಬಂದರು. ಮನೆಯನ್ನು ನೆಲಸಮಗೊಳಿಸಿದಾಗಲೆಲ್ಲಾ, “ನಾವು ಅದನ್ನು ಸಹಿಸಿಕೊಳ್ಳಬೇಕು ಮತ್ತು ಇನ್ನೊಂದು ಮನೆಯನ್ನು ನಿರ್ಮಿಸಬೇಕು” ಎಂದು ಅವರು ಹೇಳುತ್ತಾರೆ.
ಹೆಚ್ಚಿನ ನಿವಾಸಿಗಳು ದಿನಗೂಲಿಗಾಗಿ ಕೆಲಸ ಮಾಡುತ್ತಿರುವುದರಿಂದ, ಮನೆ ಬೀಳಿಸುವುದನ್ನು ಕಾಯುತ್ತಾ ತಮ್ಮ ಸೊತ್ತುಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಅವರು ಮನೆಯಲ್ಲೇ ಇರಬೇಕಾಗುತ್ತದೆ. ಇದರಿಂದಾಗಿ ಅವರಿಗೆ ಸಂಪಾದನೆ ಇಲ್ಲದಂತಾಗುತ್ತದೆ ಎನ್ನುತ್ತಾರೆ ರುಬೀನಾ. “ನಮ್ಮ ಜನರ ಮುಖ್ಯ ಕಸುಬು ಕಬಾಡಿ (ತ್ಯಾಜ್ಯ ಸಂಗ್ರಹಿಸುವುದು), ಭಿಕ್ಷಾಟನೆ ಮತ್ತು ರಿಕ್ಷಾಗಳನ್ನು ಎಳೆಯುವುದು. ಏನೂ ಸಂಪಾದನೆಯಿಲ್ಲದ ದಿನಗಳೂ ನಮ್ಮ ಬದುಕಿನಲ್ಲಿರುತ್ತವೆ. ನಾವು ಬಾಡಿಗೆಯನ್ನು ಹೇಗೆ ಪಾವತಿಸುವುದು?” ಎಂದು ರುಬೀನಾ ಕೇಳುತ್ತಾರೆ. ಈ ಪ್ರದೇಶದಲ್ಲಿ ಬಾಡಿಗೆ 4,000 ರೂ.ಗಳವರೆಗೆ ಇದೆ ಮತ್ತು ನಿವಾಸಿಗಳಿಗೆ ಯಾವುದೇ ಸರ್ಕಾರಿ-ಸಬ್ಸಿಡಿ ವಸತಿ ಪರ್ಯಾಯವಿಲ್ಲ ಎಂದು ಅವರು ಹೇಳುತ್ತಾರೆ.



ಮೇ 2022ರಲ್ಲಿ, ಹಳೇ ಉಸ್ಮಾನ್ಪುರದ ನಿವಾಸಿಗಳು ಜೂನ್ 6 ಮತ್ತು 7ರಂದು ದೊಡ್ಡ ನೆಲಸಮ ಕಾರ್ಯಾಚರಣೆ ನಡೆಯಲಿದೆ ಎಂದು ಸ್ಥಳೀಯವಾಗಿ ಗಾಳಿಸುದ್ದಿ ಕೇಳಲ್ಪಟ್ಟರು. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಅವರು ಹೇಳುತ್ತಾರೆ.
“ನಾವು ಹೋಗದಿದ್ದರೆ, ಅವರು [ಅಧಿಕಾರಿಗಳು] ಎಲ್ಲವನ್ನೂ ನಾಶಪಡಿಸುತ್ತಾರೆ ಎಂದು ಕೇಳಲ್ಪಟ್ಟಿದ್ದೇವೆ,” ಎಂದು ರುಬೀನಾ ಹೇಳುತ್ತಾರೆ, ಅವರು ಶಾಲೆಗೆ ಹೋಗುವ ಮಕ್ಕಳ ಬಗ್ಗೆ ವಿಶೇಷವಾಗಿ ಚಿಂತಿತರಾಗಿದ್ದಾರೆ, ಮಕ್ಕಳು ಹತ್ತಿರದ ಮುನ್ಸಿಪಲ್ ಪ್ರತಿಭಾ ವಿದ್ಯಾಲಯ, ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಇಲ್ಲಿಂದ ಹೊರಡಲು ಶಾಲಾರಂಭದಲ್ಲಿಯೇ ಶಾಲೆಯನ್ನು ತೊರೆಯಬೇಕಾಗುತ್ತದೆ; ಇಲ್ಲವಾದರೆ ಮತ್ತೊಂದು ಶಾಲೆಯಲ್ಲಿ ಪ್ರವೇಶ ಪಡೆಯುವುದು ಕಷ್ಟವಾಗುತ್ತದೆ. ಈ ಕಾರಣದಿಂದಾಗಿ, ಅವರು ಓದನ್ನು ಕಳೆದುಕೊಳ್ಳಬಹುದು. “ನಾವು ನಮ್ಮ ಮಕ್ಕಳನ್ನು ಹೇಗೆ ಬೆಳೆಸುವುದು?” ಎಂದು ಅವರು ಕೇಳುತ್ತಾರೆ.
ನನ್ನಿ ದೇವಿ ತನ್ನ ಇಡೀ ಜೀವನವನ್ನು ಹಳೇ ಉಸ್ಮಾನಪುರದಲ್ಲಿ ಕಳೆದಿದ್ದಾರೆ. ಮುರಿದ ಮನೆಗಳನ್ನು ಪುನರ್ನಿರ್ಮಿಸಲು ತನ್ನ ಬಳಿ ಹಣವಿಲ್ಲ ಎಂದು ಅವರು ಹೇಳುತ್ತಾರೆ. “ಜನರ ಬಳಿ ತಿನ್ನಲು ಸಹ ಹಣವಿಲ್ಲದಿರುವಾಗ, ಬಾಡಿಗೆ ಮನೆಯನ್ನು ಹೇಗೆ ಖರೀದಿಸುವುದು? ಬಾಡಿಗೆಗಾಗಿ ನಾವು ಹಣವನ್ನು ಎಲ್ಲಿಂದ ತರುವುದು? ಇಲ್ಲಿನ ಜನರು ಬದುಕುವ ಸಲುವಾಗಿ ಭಿಕ್ಷೆ ಬೇಡುತ್ತಿದ್ದಾರೆ ಅಥವಾ ಕಸವನ್ನು ಹೆಕ್ಕುತ್ತಿದ್ದಾರೆ.”
68 ವರ್ಷದ ನನ್ನಿ ದೇವಿ, ಸುತ್ತಲೂ ಹೊಲಗಳು ಮತ್ತು ಗೋಧಿಯನ್ನು ಉಗ್ರವಾಗಿ ಬೆಳೆಯುತ್ತಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. ರೈತರು ಸಹ ಇಲ್ಲಿ ತರಕಾರಿಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದರು. “ಈ ಮೊದಲು ಭೂಮಿ ಈ ರೀತಿ ಇರಲಿಲ್ಲ. ಇಲ್ಲಿ ಬೆಳೆಗಳು ಇರುತ್ತಿದ್ದವು.”


ಎನ್‌ಜಿಟಿ ಕೃಷಿಯನ್ನು ನಿಷೇಧಿಸಿದ ನಂತರ, ಅತಿಕ್ರಮಣ-ವಿರೋಧಿ ಅಭಿಯಾನಗಳನ್ನು ನಡೆಸಲಾಯಿತು; ಮತ್ತು ಈ ಅಭಿಯಾನಗಳು ಕಳೆದ ಎರಡೂವರೆ ವರ್ಷಗಳಲ್ಲಿ ವೇಗಗೊಂಡಿದೆ. ಅವರು ಮುಂದುವರೆದು ಹೇಳುತ್ತಾರೆ, “ನಿಧಾನವಾಗಿ ಪ್ರತಿಯೊಬ್ಬರ ಭೂಮಿಯನ್ನು ಕಸಿದುಕೊಳ್ಳಲಾಯಿತು. ನಮ್ಮ ಪ್ರದೇಶವನ್ನು 2021ರಲ್ಲಿ ಕೆಡವಲಾಯಿತು.”
ತಾವೇ ನೆಟ್ಟ ಮರಗಳ ನಷ್ಟದ ಬಗ್ಗೆ ವಿಷಾದ ವ್ಯಕ್ತಪಡಿಸಿದ ನನ್ನಿದೇವಿ, “ಮನೆಗಳನ್ನು ಕೆಡವಿದಾಗ ಮರಗಳೂ ನಾಶವಾಗುತ್ತವೆ. ಅವರು [ಅಭಿಯಾನ ನಡೆಸುವವರು] ಏನನ್ನೂ ಬಿಡುವುದಿಲ್ಲ. ನಮ್ಮಲ್ಲಿ ಜಾಮೂನ್, ಮಾವು ಮತ್ತು ಬಾಳೆಗಳ ಅನೇಕ ಮರಗಳಿವೆ. ನಾನು ತುಂಬಾ ಕಷ್ಟಪಟ್ಟು ಅವುಗಳನ್ನು ಬೆಳೆಸಿದ್ದೇನೆ.”
ಅಲ್ಲಿರುವವರಲ್ಲಿ ಹೆಚ್ಚಿನವರು ಸಪೇರಾ ಸಮುದಾಯದ ಕಾರ್ಮಿಕರು ಮತ್ತು ಗುಜರಿ ವ್ಯಾಪಾರಿಗಳು ಎಂದು ರಘು ವಿವರಿಸುತ್ತಾರೆ. “ನಮ್ಮ ಪೂರ್ವಜರು ಅಲೆಮಾರಿಗಳು. ನಮಗೆ ಯಾವುದೇ ಪೂರ್ವಜರ ಭೂಮಿ ಇಲ್ಲ. ಇಲ್ಲಿರುವ ಇತರಿರಿಗೆ ನೀಡಿರುವಂತೆ ನಮಗೂ ಕೂಡ ಸರ್ಕಾರದಿಂದ ಒಂದಿಷ್ಟು ಜಾಗ ಕೊಟ್ಟರೆ ಶಾಶ್ವತ ಮನೆ ಕಟ್ಟಿಕೊಳ್ಳಬಹುದಿತ್ತು ಎನ್ನುತ್ತಾರೆ. ನನ್ನಿ ದೇವಿಯು ಅವರ ಮಾತನ್ನು ಒಪ್ಪುತ್ತಾರೆ ಮತ್ತು “ಅವರು [ಸರ್ಕಾರ] ನಮಗೆ ಸ್ವಲ್ಪ ಭೂಮಿಯನ್ನು ನೀಡಬೇಕು, ಇದರಿಂದ ನಾವು ನಮ್ಮ ಮಕ್ಕಳನ್ನು ಇಲ್ಲಿ ಬೆಳೆಸಬಹುದು ಮತ್ತು ವಾಸಿಸಲು ಮನೆಯನ್ನು ನಿರ್ಮಿಸಬಹುದು.“ ನಮಗೆ ಅಗತ್ಯವಿರುವ ಸಹಾಯವನ್ನು ನಾವು ಪಡೆಯುತ್ತಿಲ್ಲ. “ಕೃಷಿಯನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ, ಕನಿಷ್ಠ ನಮಗೆ ಬದುಕಲು ಬಿಡಿ.”
ಪರಿ ಮುಖಪುಟಕ್ಕೆ ಮರಳಲು, ಇಲ್ಲಿ ಕ್ಲಿಕ್ ಮಾಡಿ.
Editor's note
ಈಶ್ನಾ ಗುಪ್ತಾ ಇತ್ತೀಚೆಗೆ ಆಂಧ್ರಪ್ರದೇಶದ ಶ್ರೀ ಸಿಟಿಯಲ್ಲಿರುವ ಕ್ರಿಯಾ ವಿಶ್ವವಿದ್ಯಾನಿಲಯದಿಂದ ಸಮಾಜ ವಿಜ್ಞಾನದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ದೆಹಲಿಯಂತಹ ನಗರಗಳಿಗೆ ಬಂದಾಗ ಮುಖ್ಯವಾಹಿನಿಯ ಮಾಧ್ಯಮಗಳು ಕೊಳೆಗೇರಿಗಳು, ಅನಧಿಕೃತಕಾಲನಿಗಳು ಮತ್ತು ಸ್ಲಂ ಕ್ಲಸ್ಟರ್‌ಗಳಲ್ಲಿ ವಾಸಿಸುವ ಜನರ ದೈನಂದಿನ ತೊಂದರೆಗಳು ಮತ್ತು ವಾಸ್ತವಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲವೆಂದು ಅನ್ನಿಸಿದ ಕಾರಣ ಈ ಸ್ಟೋರಿಗೆ ಕೆಲಸ ಮಾಡಲು ಬಯಸಿದ್ದರು. ಅವರು ಹೇಳುವಂತೆ: “ಪರಿಯೊಂದಿಗೆ ಕೆಲಸ ಮಾಡುವಾಗ, ಕಥೆಯಲ್ಲಿನ ಪಾಲುದಾರ ಪಾತ್ರಗಳು ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿವೆ ಎನ್ನುವುದನ್ನು ನಾನು ಕಲಿತಿದ್ದೇನೆ. ಘಟನೆಯಿಂದ ನೇರವಾಗಿ ಪರಿಣಾಮಕ್ಕೆ ಒಳಗಾದವರ ದೃಷ್ಟಿಕೋನವನ್ನು ಆಧರಿಸಿ ಕಥೆಯನ್ನು ರಚಿಸಿದಾಗ, ಅದು ಸಾಮಾನ್ಯವಾಗಿ ಇದುವರೆ ಕೇಳದ ಧ್ವನಿಗಳತ್ತ ನಮ್ಮ ಗಮನವನ್ನು ಸೆಳೆಯುತ್ತದೆ. ನನ್ನ ಕಾರ್ಯಕ್ಷೇತ್ರ ಯಾವುದೇ ಇರಲಿ, ಇದು ನನ್ನೊಂದಿಗೆ ಶಾಶ್ವತವಾಗಿ ಉಳಿಯಲಿರುವ ಪಾಠ."
ಅನುವಾದ: ಶಂಕರ ಎನ್. ಕೆಂಚನೂರು
ಶಂಕರ ಎನ್. ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.