“ಇದು ಇಂದಿನ ಮೊದಲ ಬುಟ್ಟಿ. ನಾನು ದಿನವಿಡೀ ಕೆಲಸ ಮಾಡುತ್ತೇನೆ,” ಎಂದು ಹೇಳುತ್ತಾ, ಅವಳು ತನ್ನ ಸುತ್ತಲೂ ಸಂಗ್ರಹವಾಗಿರುವ ‘ಕಲ್ಲಿದ್ದಲು ತ್ಯಾಜ್ಯ’ದ ರಾಶಿಯಿಂದ ಉಪಯುಕ್ತ ಕಲ್ಲಿದ್ದಲುಗಳನ್ನು ಹೊರತೆಗೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿದಳು.

ರಾಜ್ಯ ಸರ್ಕಾರ ನಡೆಸುತ್ತಿರುವ ತಾಮಲಬಸ್ತಿ ಬುಡಕಟ್ಟು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಪ್ರಿಯಾಂಕಾ ಹೆಂಬ್ರಮ್‌ಗೆ ಕೇವಲ 12 ವರ್ಷ. ಅವಳು ಅಪರೂಪವಾಗಿ ಶಾಲೆಗೆ ಬರುತ್ತಾಳೆಂದು ಶಿಕ್ಷಕರು ಹೇಳುತ್ತಾರೆ. ಹೆತ್ತವರನ್ನು ಕಳೆದುಕೊಂಡಿರುವ ಪ್ರಿಯಾಂಕಾ ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯ ದುರ್ಗಾಪುರ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟಿನಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ತನ್ನ ಚಿಕ್ಕಮ್ಮನೊಂದಿಗೆ ತಂಗಿದ್ದಾಳೆ. ಅವಳು ಆರಿಸಿಕೊಂಡು ಬರುವ ಕಲ್ಲಿದ್ದಲಿನಿಂದ ಬರುವ ಆದಾಯವನ್ನು ಚಿಕ್ಕಮ್ಮನಿಗೆ ನೀಡುತ್ತಾ ಅವರೊಂದಿಗೆ ಬದುಕುತ್ತಿದ್ದಾಳೆ.

ಅಲ್ಲಿದ್ದವರಲ್ಲೇ ಹಿರಿಯರಾಗಿದ್ದ ಚೇಪಿ ರೇ ತನ್ನ ಅರವತ್ತರ ದಶಕದ ಕೊನೆಯಲ್ಲಿದ್ದಾರೆ. ನಾನು ಯುವತಿಯಾಗಿದ್ದ ಸಮಯದಲ್ಲಿ ಸುಲಭವಾಗಿ ಒಂದು ದಿನಕ್ಕೆ ಸುಮಾರು 10-12 ಬುಟ್ಟಿ ಕಲ್ಲಿದ್ದಲು ಸಂಗ್ರಹಿಸುತ್ತಿದ್ದೆ. ಆದರೆ ಈಗ ಹೆಚ್ಚು ಹೊತ್ತು ಕೆಲಸ ಮಾಡುವುದು ಅಸಾಧ್ಯ. ಬೆನ್ನು ನೋವು ಮತ್ತು ಕಣ್ಣು ನೋವು ಅದಕ್ಕೆ ಆಸ್ಪದ ನೀಡುವುದಿಲ್ಲ” ಎಂದು ಅವರು ಹೇಳುತ್ತಾರೆ.

ಈ ಕಷ್ಟಕರ ಮತ್ತು ಹಾನಿಕಾರಕ ಕೆಲಸವನ್ನು ಮಾಡುವ ಅನೇಕ ಮಹಿಳೆಯರಂತೆ ನಲವತ್ತರ ಪ್ರಾಯದ ಮೊಮಿನಾ ಬೀಬಿ, “ನಾನು ಕೂಡಾ ಇಲ್ಲಿನ ಅನೇಕ ಮಹಿಳೆಯರಂತೆ ನನ್ನ ಗರ್ಭಾವಸ್ಥೆಯಲ್ಲಿಯೂ ಇಲ್ಲಿ ಕೆಲಸ ಮಾಡಿದ್ದೇನೆ. ವಿಶ್ರಾಂತಿ ಬೇಕೆನಿಸುತ್ತಿದ್ದರೂ ವಿರಮಿಸದೆ ಕೆಲಸ ಮಾಡಿದ ದಿನಗಳೂ ಇದ್ದವು” ಎನ್ನುತ್ತಾರೆ. ಅವರ ಗಂಡನಿಗೆ ಸಾಂದರ್ಭಿಕವಾಗಿ ಗೋದಾಮಿನಲ್ಲಿ ಕಲ್ಲಿದ್ದಲನ್ನು ಲೋಡ್ ಮಾಡುವ ಕೆಲಸ ಸಿಗುತ್ತದೆ. ಅವರು ತನ್ನ ಗಂಡನ ವಾರದ ಸಂಪಾದನೆ 200-300 ರೂ.ಗಳ ಮೇಲೆ ಅವಲಂಬಿಸಿಲ್ಲವೆಂದು ಹೇಳುತ್ತಾರೆ. ಅವರಿಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದಾನೆ. ಪ್ರತಿಯೊಬ್ಬರೂ ಶಾಲೆಯಲ್ಲಿ ಉತ್ತಮವಾಗಿ ಓದುತ್ತಿದ್ದಾರೆಂದು ಮೊಮಿನಾ ಹೆಮ್ಮೆಯಿಂದ ಹೇಳುತ್ತಾರೆ. “ಗಂಡನ ಆದಾಯದ ಮೇಲೆ ಅವಲಂಬಿತರಾಗಿದ್ದರೆ ನನ್ನ ಯಾವ ಮಕ್ಕಳೂ ಶಾಲೆಗೆ ಹೋಗುತ್ತಿರಲಿಲ್ಲ. ನನ್ನ ಹೆಣ್ಣುಮಕ್ಕಳು ಬೆಳೆದು ನಿಂತು ಒಳ್ಳೆಯ ಉದ್ಯೋಗಕ್ಕೆ ಸೇರಿ ಉತ್ತಮ ಜೀವನ ನಡೆಸುವುದನ್ನು ನಾನು ಎದುರು ನೋಡುತ್ತಿದ್ದೇನೆ.”

ಅವರು ಗಂಟೆಗಟ್ಟಲೆ ಬಾಗಿ ಕುಳಿತು ತಮ್ಮ ಬರಿಗೈಯಿಂದ ತ್ಯಾಜ್ಯದಲ್ಲಿರುವ ಕಲ್ಲಿದ್ದಲನ್ನು ಆರಿಸುತ್ತಾರೆ. ಕಲ್ಲಿದ್ದಲಿನ ಧೂಳು ತಮ್ಮ ಬಾಯಿ ಮತ್ತು ಮೂಗಿಗೆ ಹೋಗದಂತೆ ತಡೆಯಲು ಬಾಯಿ ಮತ್ತು ಮೂಗನ್ನು ಸೀರೆ ಸೆರಗು ಅಥವಾ ದುಪಟ್ಟಾದಿಂದ ಮುಚ್ಚಿಕೊಳ್ಳುತ್ತಾರೆ’ ಫೋಟೋಗಳು: ಆಧ್ಯೇತಾ ಮಿಶ್ರಾ

ಅಪ್ರಾಪ್ತ ವಯಸ್ಕರು, ಗರ್ಭಿಣಿ ಅಥವಾ ಆರೋಗ್ಯ ಸರಿಯಿಲ್ಲಯೆನ್ನುವುದೆಲ್ಲ ದುರ್ಗಾಪುರ ಸ್ಥಾವರದ ಸುತ್ತಲೂ ಕೈಗಾರಿಕಾ ತ್ಯಾಜ್ಯದಿಂದ ಕಲ್ಲಿದ್ದಲನ್ನು ಹೊರತೆಗೆಯುವ ಕೆಲಸ ಮಾಡದಿರಲು ಕಾರಣವಾಗುವುದೇ ಇಲ್ಲ. ಇಲ್ಲಿ ಎಲ್ಲರೂ ಕೆಲಸ ಮಾಡುತ್ತಾರೆ. ನೆರೆಯ ಬಿಹಾರದ ಮರುಬಳಕೆಯ ವಸ್ತುಗಳನ್ನು ಆಯುವ ಕೆಲಸಗಾರರಾದ ಗೊಡ್ಡಾ ಕೊಯ್ಲಾವಾಲಗಳ ಕುರಿತ ಪಿ. ಸಾಯಿನಾಥ್‌ ಅವರ ಲೇಖನವೊಂದರಲ್ಲಿ ಅವರು ಹೀಗೆ ಬರೆಯುತ್ತಾರೆ: ‘ಈ ಕಸದಿಂದ ಮರುಬಳಕೆಯ ವಸ್ತುಗಳನ್ನು ಆಯುವರೆಲ್ಲರೂ ಮಹಿಳೆಯರೇ ಆಗಿರುತ್ತಾರೆ. ಮತ್ತು ಬಡವರು ಕೂಡಾ. ಅವರ ಕೆಲಸವನ್ನು ರಾಷ್ಟ್ರೀಯ ಉಳಿತಾಯದ ಕೆಲಸವೆಂದು ಅಧಿಕಾರಿಗಳು ಕರೆಯುವುದರಿಂದಾಗಿ ಈ ರಾಷ್ಟ್ರೀಯ ಉಳಿತಾಯದ ಜವಬ್ದಾರಿಯನ್ನು ಬಡ ಮಹಿಳೆಯರು ತಲೆಯ ಹೊತ್ತುಕೊಳ್ಳಬೇಕಾಗಿದೆ.’

ಯುವತಿಯರು ಮತ್ತು ಮಹಿಳೆಯರು ದಿನಕ್ಕೆ 10 ಗಂಟೆಗಳ ಕಾಲ ದುಡಿದು ದಿನಕ್ಕೆ 150 ರೂ.ಗಳ ತನಕ ದುಡಿಯುತ್ತಾರೆ. ಸರಿಸುಮಾರು 20 ಕಿಲೋಗ್ರಾಂಗಳಷ್ಟು ತೂಕವಿರುವ ಪ್ರತಿ ಬುಟ್ಟಿಗೆ ಅವರಿಗೆ 25 ರೂಪಾಯಿಗಳನ್ನು ತರುತ್ತದೆ. ಮತ್ತು ಹೆಚ್ಚಿನವರು ದಿನವೊಂದಕ್ಕೆ ಐದು ಬುಟ್ಟಿಗಳಷ್ಟು ಕಲ್ಲಿದ್ದಲನ್ನು ಕಸದಿಂದ ಆಯುತ್ತಾರೆ.

ದುರ್ಗಾಪುರ ಸ್ಟೀಲ್ ಪ್ಲಾಂಟ್ ಸಾರ್ವಜನಿಕ ವಲಯದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಒಡೆತನ ಮತ್ತು ನಿರ್ವಹಣೆಯಲ್ಲಿದೆ. ಉಕ್ಕಿನ ಕಾರ್ಖಾನೆ ಮತ್ತು ಸುತ್ತಮುತ್ತಲಿನ ಕೈಗಾರಿಕೆಗಳು ಗಣಿಗಳಿಂದ ನೇರವಾಗಿ ಕಳುಹಿಸಲಾಗುವ ಕಲ್ಲಿದ್ದಲನ್ನು ಬಳಸುತ್ತವೆ. ತ್ಯಾಜ್ಯ ಕಲ್ಲಿದ್ದಲು ಅಥವಾ ಹಾರ್ಡ್ ಕೋಕ್ ಕಾರ್ಬೊನೈಸಿಂಗ್ ಕೋಕಿಂಗ್ ನಂತರ ಹೊರಹೊಮ್ಮುವ ಉತ್ಪನ್ನವಾಗಿದೆ – ಈ ಉಳಿದ ಹಾರ್ಡ್ ಕೋಕ್ ಅನ್ನು ಸಂಗ್ರಹಿಸಿ ಮತ್ತು ಕೋಯಿಲಾ ಡಿಪೋಗಳಲ್ಲಿ ಮ್ಯಾಂಗನೀಸ್, ಕಬ್ಬಿಣದ ಅದಿರು, ಸಿಂಟರ್ ಮೊದಲಾದ ಇತರ ಕೈಗಾರಿಕಾ ತ್ಯಾಜ್ಯಗಳ‌ ಜೊತೆ ಸುರಿಯಲಾಗುತ್ತದೆ ಮತ್ತು ಇವುಗಳನ್ನು ವಿವಿಧ ಮಹಾಜನರಿಗೆ (ಮಾಲೀಕರು) ಹರಾಜು ಮಾಡಿ ಆಯಾ ಡಿಪೋಗಳಿಗೆ ಕಳುಹಿಸಲಾಗುತ್ತದೆ.

“ಮಹಾಜನರು ವಿರಳವಾಗಿ ಡಿಪೋಗಳಿಗೆ ಭೇಟಿ ನೀಡುತ್ತಾರೆ ಮತ್ತು ಅವರು ಬಂದಾಗಲೂ, ಅವರು ನಮ್ಮ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ಆಲಿಸುವ ಕುರಿತು ಹೆಚ್ಚು ಕಾಳಜಿ ತೋರುವುದಿಲ್ಲ” ಎಂದು ಮೊಮಿನಾ ಹೇಳುತ್ತಾರೆ.

ಇಲ್ಲಿ ಸಂತಾಲ್ ಆದಿವಾಸಿ ಸಮುದಾಯಕ್ಕೆ ಸೇರಿದ ಯುವತಿಯರು ಮತ್ತು ಮಹಿಳೆಯರು ಈಗಾಗಲೇ ಬಳಕೆಯಾಗಿರುವ ಕಲ್ಲಿದ್ದಲನ್ನು ಇತರ ಕೈಗಾರಿಕಾ ತ್ಯಾಜ್ಯ ವಸ್ತುಗಳಿಂದ ಬೇರ್ಪಡಿಸುತ್ತಾರೆ. ಸೀರೆ ಅಥವಾ ದುಪಟ್ಟಾಗಳ ತುದಿಯಿಂದ ಬಾಯಿ ಮತ್ತು ಮೂಗನ್ನು ಮುಚ್ಚಿ ಕಲ್ಲಿದ್ದಲಿನ ಧೂಳು ದೇಹದೊಳಗೆ ಪ್ರವೇಶಿಸದಂತೆ ಕಾಪಾಡಿಕೊಂಡು ಗಂಟೆಗಟ್ಟಲೆ ಕುಳಿತು ಗಟ್ಟಿಯಾದ ಕಲ್ಲಿದ್ದಲನ್ನು ಬರಿಗೈಯಲ್ಲಿ ಆಯ್ದು ತೆಗೆಯುತ್ತಾರೆ. ಹತ್ತಿರದಲ್ಲಿ ಯಾವುದೇ ಶೌಚಾಲಯಗಳಿಲ್ಲದ ಕಾರಣ ಅವರು 10 ಗಂಟೆಗಳ ಕಾಲ ಯಾವುದೇ ರೀತಿಯ ವಿರಾಮವಿಲ್ಲದೆ ಕೆಲಸ ಮಾಡುತ್ತಾರೆ.

ಹಲವಾರು ಕೊಯಿಲಾ ಡಿಪೋಗಳನ್ನು ಹೊಂದಿರುವ ಪ್ರದೇಶಗಳನ್ನು ಮಹಾಜನರು ನಿಯಂತ್ರಿಸುತ್ತಾರೆ. ಡಿಪೋಗಳನ್ನು ಮಹಿಳಾ ಕಾರ್ಮಿಕರೊಂದಿಗೆ ವ್ಯವಹರಿಸುವ ಮೇಲ್ವಿಚಾರಕರು ನೋಡಿಕೊಳ್ಳುತ್ತಾರೆ. ಅವರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದು, ಮೇಲ್ವಿಚಾರಣೆ ಮಾಡುವುದು ಮತ್ತು ಅವರ ಕೆಲಸವನ್ನು ಗಮನಿಸುವುದು ಮತ್ತು ಅದಕ್ಕೆ ತಕ್ಕಂತೆ ಪಾವತಿಸುವುದು ಇವರ ಕೆಲಸವಾಗಿರುತ್ತದೆ.

“ತ್ಯಾಜ್ಯದ ಗುಡ್ಡಗಳಿಂದ ಮಹಿಳೆಯರು ಸಂಗ್ರಹಿಸುವ ಕಲ್ಲಿದ್ದಲನ್ನು ಟ್ರಕ್‌ಗಳಲ್ಲಿ ತುಂಬಿಸಲಾಗುತ್ತದೆ ಮತ್ತು ಮುಖ್ಯವಾಗಿ ರಸ್ತೆಬದಿಯ ದಾಬಾಗಳು, ಬಿಸ್ಕತ್ತು ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ ಮತ್ತು ಕೆಲವೊಮ್ಮೆ ಅಡುಗೆ ಒಲೆಗೆ ಇದ್ದಿಲನ್ನು ಬಳಸುವ ಮನೆಗಳಿಗೆ ಮಾರಲಾಗುತ್ತದೆ” ಎಂದು ಡಿಪೋವೊಂದರ ಮೇಲ್ವಿಚಾರಕರಾದ ಅನಿಲ್ ಕುಮಾರ್ ಶಾ ಹೇಳುತ್ತಾರೆ ಕಲ್ಲಿದ್ದಲಿಗೆ ಹೆಚ್ಚಿನ ಬೆಲೆ ಕೊಡುವಂತೆ ಆಗ್ರಹಿಸುವುದಿಲ್ಲವಾದ ಕಾರಣ ಈ ಕೆಲಸಕ್ಕೆ ತಾಮಲಬಸ್ತಿ ಸುತ್ತಲಿನ ಮಹಿಳೆಯರನ್ನು ನೇಮಿಸಿಕೊಳ್ಳಲು ಆದ್ಯತೆ ನೀಡುವುದಾಗಿ ಶಾ ಹೇಳುತ್ತಾರೆ, ಮತ್ತು ಅವರು ದಿನದ ಕೊನೆಯಲ್ಲಿ ಮಾರಾಟ ಯೋಗ್ಯ ಕಲ್ಲಿದ್ದಲನ್ನು ತರುತ್ತಾರೆ ಎಂದು ಅವರು ಖಚಿತವಾಗಿ ಹೇಳಬಹುದು ಎನ್ನುವುದು ಅವರ ಅಭಿಪ್ರಾಯ. ಈ ಲೇಖನದಲ್ಲಿ ಸಂದರ್ಶಿಸಿದ ಎಲ್ಲ ಮಹಿಳೆಯರೂ ತಾವು ಯೋಗ್ಯ ಬೆಲೆ ಪಡೆಯುತ್ತಿರುವುದಾಗಿ ಭಾವಿಸುತ್ತಾರೆ, ಆದರೆ ಬೇರೆ ಉದ್ಯೋಗಗಳು ಲಭ್ಯವಿಲ್ಲದ ಕಾರಣ ಅವರಿಗೆ ಆಯ್ಕೆಗಳು ಕಡಿಮೆಯಿವೆ.

ಕಲ್ಲಿದ್ದಲು ಡಿಪೋಗಳು ಪಟ್ಟಣದ ಹೊರವಲಯದ ತಾಮಲಬಸ್ತಿಯಂತಹ ಪ್ರದೇಶಗಳಲ್ಲಿ ನೆಲೆಗೊಂಡಿವೆ, ಹತ್ತಿರದ ತಾಮಲ ಕಾಲುವೆಯಿಂದಾಗಿ ಈ ಪ್ರದೇಶಕ್ಕೆ ಈ ಹೆಸರು ಬಂದಿದೆ. ದುರ್ಗಾಪುರದ ನೈಋತ್ಯದಲ್ಲಿರುವ ಈ ಪ್ರದೇಶವು 6-7 ಅಡಿ ಎತ್ತರದ ತ್ಯಾಜ್ಯ ಕಲ್ಲಿದ್ದಲಿನ ಗುಡ್ಡಗಳಿಂದ ಕೂಡಿದೆ. ಇಲ್ಲಿ ಕೆಲಸ ಮಾಡುವ ಜನರು ಹತ್ತಿರದ ಮಣ್ಣು ಮತ್ತು ಟಾರ್ಪಾಲಿನ್ ಮನೆಗಳಲ್ಲಿ ವಾಸಿಸುತ್ತಾರೆ. ಪುರುಷರಿಗೆ ಟ್ರಕ್‌ಗಳನ್ನು ಲೋಡ್ ಮಾಡುವುದು ಮತ್ತು ಇಳಿಸುವಂತಹ ಸಾಂದರ್ಭಿಕ ಉದ್ಯೋಗ ದೊರೆಯುತ್ತದೆ.

ಪ್ರಬೋಧ್ ಮಲ್ಲಿಕ್ ಅಂತಹ ಕಾರ್ಮಿಕರಲ್ಲಿ ಒಬ್ಬರು. ಅವರ ಪತ್ನಿ ತುಲಿಕಾ ಮಲ್ಲಿಕ್ ಹತ್ತಿರದಲ್ಲೇ ಕಲ್ಲಿದ್ದಲನ್ನು ಹೆಕ್ಕುತ್ತಿದ್ದಾರೆ. 36ರ ಹರೆಯದ ಪ್ರೊಬೋಧ್ ಹೇಳುವಂತೆ ಇದು ಇಲ್ಲಿ ಲಭ್ಯವಿರುವ ಏಕೈಕ ಕೆಲಸವಾಗಿದೆ ಮತ್ತು ಅದು ಕೂಡಾ ಅವರಿಗೆ ಆಗಾಗ ಸಿಗುವುದಿಲ್ಲ. “ನನ್ನ ಕುಟುಂಬದಲ್ಲಿ ನಾಲ್ಕು ಜನರಿದ್ದಾರೆ: ನನ್ನ ಹೆಂಡತಿ, ನಮ್ಮ ಚಿಕ್ಕ ಮಗ ಮತ್ತು ನನ್ನ ತಾಯಿ. ನಾನು ತಿಂಗಳಿಗೆ 450ರಿಂದ 500 ರೂಪಾಯಿಗಳನ್ನು ಸಂಪಾದಿಸುತ್ತೇನೆ,” ಎಂದು ಅವರು ಹೇಳುತ್ತಾರೆ. ತುಲಿಕಾ ಕಲ್ಲಿದ್ದಲು ಆಯುವ ಕೆಲಸದಿಂದ ತಿಂಗಳಿಗೆ ಸರಿಸುಮಾರು ರೂ. 4,000 ಗಳಿಸುತ್ತಾರೆ. ಇದರಿಂದ ಮನೆಯ ಖರ್ಚುವೆಚ್ಚಗಳನ್ನು ನಿಭಾಯಿಸುತ್ತಾರೆ.

ತನ್ನ 50ರ ದಶಕದ ಅಂತ್ಯದಲ್ಲಿರುವ, ನಿಯೋತಿ ಬಹದ್ದೂರ್ ಸುಮಾರು ನಾಲ್ಕು ದಶಕಗಳಿಂದ ಡಿಪೋಗಳಲ್ಲಿ ಕೆಲಸ ಮಾಡುತ್ತಿದ್ದಾರೆ. “ಈ ಡಿಪೋಗಳು ಆಗ ನನ್ನ ಏಕೈಕ ಆದಾಯದ ಮೂಲವಾಗಿತ್ತು [ತೊಂಬತ್ತರ ದಶಕದಲ್ಲಿ]” ಎಂದು ಅವರು ಹೇಳುತ್ತಾರೆ. “ಈಗ ನನ್ನಿಂದ ಕೂರಲು ಮತ್ತು ಬಹಳ ಹೊತ್ತು ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ, ನಾನು ಮನೆಯಿಂದ ತಂದು ಸ್ಟೂಲ್ ಮೇಲೆ ಕುಳಿತು ಕೆಲಸ ಮಾಡುತ್ತೇನೆ ಮತ್ತು ನಾನು ಪ್ರತಿ ದಿನ ಐದು ಬುಟ್ಟಿಗಳಷ್ಟನ್ನು ಮಾತ್ರ ಸಂಗ್ರಹಿಸಬಲ್ಲೆ.

ನಿಯೋತಿ ಬಹದ್ದೂರ್ ಸುಮಾರು ನಾಲ್ಕು ದಶಕಗಳಿಂದ ಡಿಪೋಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಫೋಟೋ: ಆಧ್ಯೇತಾ ಮಿಶ್ರಾ

ನಿಯೋತಿಯವರಿಗೆ ನಾಲ್ಕು ಮಕ್ಕಳಿದ್ದು ಅವರಲ್ಲಿ ಮೂರು ಗಂಡು ಮತ್ತು ಒಂದು ಹೆಣ್ಣು. “ನನ್ನ ಮಗಳು ಗಂಡು ಮಕ್ಕಳಿಗಿಂತಲೂ ಓದುವುದರಲ್ಲಿ ಮುಂದಿದ್ದಳು. ಅವಳನ್ನು ಚೆನ್ನಾಗಿ ಓದಿಸಿ ಅವಳು ಒಳ್ಳೆಯ ಕೆಲಸ ಪಡೆಯುವಂತೆ ಮಾಡಬೇಕೆನ್ನುವುದು ನನ್ನ ಬಯಕೆಯಾಗಿತ್ತು. ಆದರೆ ಅದನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ನಾವು ಅವಳಿಗೆ ಸಣ್ಣ ವಯಸ್ಸಿನಲ್ಲಿಯೇ ಮದುವೆ ಮಾಡಿಸಿದೆವು” ಎಂದು ಅವರು ಹೇಳುತ್ತಾರೆ. ಆಕೆಯ ಪತಿ ಒಂದು ಕಾಲದಲ್ಲಿ ದುರ್ಗಾಪುರ ಸ್ಟೀಲ್ ಪ್ಲಾಂಟ್‌ನಲ್ಲಿ ಖಾಯಂ ಉದ್ಯೋಗಿಯಾಗಿದ್ದರು. ನಿಯೋತಿ ಹೇಳುವಂತೆ ಅವರ ಗಂಡ ದುಡಿದ ಹಣವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡುತ್ತಿದ್ದರು. ಬಹುತೇಕ ಪ್ರತಿದಿನ ಅಮಲಿನಲ್ಲಿಯೇ ಮನೆಗ ಬರುತ್ತಿದ್ದರು. ಸ್ವಲ್ಪ ದಿನದಲ್ಲೇ ಕೆಲಸವನ್ನೂ ಕಳೆದುಕೊಂಡರು. ಪ್ರಸ್ತುತ ನಿಯೋತಿ ಮತ್ತು ಅವರ ಗಂಡ ಉಕ್ಕಿನ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸಗಾರನಾಗಿರುವ ತಮ್ಮ ಹಿರಿಯ ಮಗ ಮತ್ತು ಅವರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

ಕ್ಷಯ, ಬ್ರಾಂಕೈಟಿಸ್ ಮತ್ತು ಆಸ್ತಮಾದಂತಹ ಉಸಿರಾಟದ ಕಾಯಿಲೆಗಳು ಸರ್ವೇಸಾಮಾನ್ಯ ಎಂದು ತಾಮಲಬಸ್ತಿಯಿಂದ ಸರಿಸುಮಾರು 2.5 ಕಿಲೋಮೀಟರುಗಳ ಹತ್ತಿರದ ಆರೋಗ್ಯ ಕೇಂದ್ರವಾಗಿರುವ ಪಲಾಶ್ದಿಹಾ ಡಯಾಗ್ನೋಸ್ಟಿಕ್ ಸೆಂಟರ್‌ನ ಆಶಾ ಕಾರ್ಯಕರ್ತೆ ಅನಿತಾ ರೇ ಹೇಳುತ್ತಾರೆ. “ಕಲ್ಲಿದ್ದಲು ಧೂಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದು ಅವರಲ್ಲಿ ಚರ್ಮ ರೋಗಗಳನ್ನು ಉಂಟುಮಾಡುತ್ತದೆ. ಡಿಪೋಗಳಲ್ಲಿ ತಮ್ಮ ತಾಯಂದಿರ ಜೊತೆಯಲ್ಲಿ ಬರುವ ಮಕ್ಕಳು ಚರ್ಮರೋಗದಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ವಯಸ್ಸಾದ ಮಹಿಳೆಯರಿಗೆ ಸ್ತ್ರೀರೋಗದ ತೊಡಕುಗಳು (ಅವರ ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ರಕ್ಷಣೆಯಿಲ್ಲದ ಕಾರಣ) ಮತ್ತು ಶೌಚಾಲಯವಿಲ್ಲದ ಕಾರಣ ಮೂತ್ರದ ಸೋಂಕು ಕೂಡಾ ಉಂಟಾಗುತ್ತದೆ. ಆರೋಗ್ಯ ಕೇಂದ್ರಕ್ಕೆ ಬರುವ ಯುವತಿಯರನ್ನು ಸ್ಯಾನಿಟರಿ ನ್ಯಾಪ್ಕಿನ್‌ ಬಳಸುವಂತೆ ಮನವೊಲಿಸುವಲ್ಲಿ ಅನಿತಾ ಯಶಸ್ವಿಯಾಗಿದ್ದಾರೆ.

ಲಾಕ್‌ಡೌನ್‌ ಮತ್ತು ಶಾಲೆಗಳ ಮುಚ್ಚುವಿಕೆಯು ಚೋಬಿ ರಾಣಿ ಮುರ್ಮು ಅವರಂತಹ ಯುವತಿಯರನ್ನು ಡಿಪೋಗಳಿಗೆ ಮರಳುವಂತೆ ಮಾಡಿ ದಿನವಿಡೀ ಕಲ್ಲಿದ್ದಲು ಆಯುವ ಕೆಲಸಕ್ಕೆ ಹಚ್ಚುತ್ತಿದೆ. 18 ವರ್ಷದ ಆಕೆ 2020ರಲ್ಲಿ 12ನೇ ತರಗತಿ ಉತ್ತೀರ್ಣರಾಗಿದ್ದ ಅವರು ದುರ್ಗಾಪುರದಲ್ಲಿ ಕಾಲೇಜಿಗೆ ಸೇರಿಕೊಂಡು ಸರ್ಕಾರಿ ನೌಕರಿ ಪಡೆಯುವ ನಿರೀಕ್ಷೆಯಲ್ಲಿದ್ದರು. ತಾನು ಐದು ವರ್ಷದವಳಿದ್ದಾಗಿನಿಂದಲೂ ಚೋಬಿ ತನ್ನ ತಾಯಿಗೆ ಸಹಾಯ ಮಾಡುತ್ತಾ ಡಿಪೋಗಳಲ್ಲಿ ಕೆಲಸ ಮಾಡುತ್ತಿದ್ದರು. “ವಾರಾಂತ್ಯ ಮತ್ತು ವಾರದ ದಿನಗಳಲ್ಲಿ ಶಾಲೆಯ ನಂತರ ತಾಯಿಗೆ ಡಿಪೋಗಳಲ್ಲಿ ಸಹಾಯ ಮಾಡಬಲ್ಲೆ. ಸಾಮಾನ್ಯವಾಗಿ, ಪ್ರತಿದಿನ 10 ಬುಟ್ಟಿ ಕಲ್ಲಿದ್ದಲನ್ನು ಸಂಗ್ರಹಿಸಬಹುದು ಆದರೆ ಬೇಸಿಗೆಯ ಬಿಸಿಲಿನಲ್ಲಿ ನಮ್ಮ ತಲೆಯ ಮೇಲೆ ನೆರಳಿಲ್ಲದೆ ಕೆಲಸ ಮಾಡುವುದು ತುಂಬಾ ಕಷ್ಟ,” ಎಂದು ಅವರು ಹೇಳುತ್ತಾರೆ. ಚೋಬಿ ಮತ್ತು ಅವರ ತಾಯಿ ನೆರಳಿನಲ್ಲಿ ಕೆಲಸ ಮಾಡುವ ಸಲುವಾಗಿ ದೊಡ್ಡ ಛತ್ರಿಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅದು ಹೆಚ್ಚಿನ ರಕ್ಷಣೆ ನೀಡುವುದಿಲ್ಲ. ಮಳೆ ಬಂದಾಗ ಡಿಪೋಗಳು ಮುಚ್ಚಿರುತ್ತವೆ ಮತ್ತು ಕಲ್ಲಿದ್ದಲು ಆಯುವವರು ಅಂದಿನ ಆದಾಯವನ್ನು ಕಳೆದುಕೊಳ್ಳುತ್ತಾರೆ.

ಲಾಕ್‌ಡೌನ್‌ನಿಂದಾಗಿ ಕಾಲೇಜು ಮುಚ್ಚಲಾಗಿರುವುದರಿಂದ, ದುರ್ಗಾಪುರದ ಮಹಿಳಾ ಕಾಲೇಜಿನಲ್ಲಿ ಸಂಸ್ಕೃತ ಸಾಹಿತ್ಯದಲ್ಲಿ ದ್ವಿತೀಯ ವರ್ಷದ ಪದವಿಪೂರ್ವ ವಿದ್ಯಾರ್ಥಿನಿಯಾಗಿರುವ ಸಬಿತಾ ಸರೇನ್ ತನ್ನ ತಾಯಿಗೆ ಸಹಾಯ ಮಾಡಲು ಡಿಪೋಗೆ ಮರಳಿದ್ದಾರೆ. ತನ್ನ ತಲೆಯನ್ನು ತನ್ನ ಸಲ್ವಾರ್ ಕಮೀಜ್ ದುಪಟ್ಟದಿಂದ ಮುಚ್ಚಿಕೊಂಡು ಬಿಸಿಲಿನಿಂದ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಿದ್ದ ಅವರು “ಇಲ್ಲಿ ಸುತ್ತಲೂ ಕಾಣುವ ತ್ಯಾಜ್ಯದ ರಾಶಿಯಿಂದ ಕಲ್ಲಿದ್ದಲಿನ ತುಣುಕುಗಳನ್ನು ಬೇರ್ಪಡಿಸುವುದು ಬಹಳ ಶ್ರಮ ಬಯಸುವ ಕೆಲಸವಾಗಿದೆ. ಮಹಿಳೆಯರು ಮಾಡುವ ಈ ಕೆಲಸವು ಬಹಳ ಕಷ್ಟಕರವಾದುದು.” ಎಂದರು. ಅದೇ ಡಿಪೋದಲ್ಲಿ ನಿಯಮಿತವಾಗಿ ಕೆಲಸ ಮಾಡುವ ಸಬಿತಾರ ತಾಯಿ ತನ್ನ ಮಗಳ ಓದಿನ ಕುರಿತು ಹೆಚ್ಚು ಕಾಳಜಿ ಹೊಂದಿದ್ದು ತನ್ನ ಮಗಳು ಒಂದು ದಿನವೂ ಶಾಲೆ ತಪ್ಪಿಸದಂತೆ ನೋಡಿಕೊಳ್ಳುತ್ತಾರೆ.

ರೀಮಾ ಮಾಂಜಿ ಬಸ್ ಮತ್ತು ಆಟೋದಲ್ಲಿ ಕಾಲೇಜಿಗೆ ಹೋಗಲು ಬೇಕಾಗುವ ಪ್ರಯಾಣದ ಹಣವನ್ನು ಭರಿಸಲು ಸಾಂದರ್ಭಿಕವಾಗಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಾಮಲಬಸ್ತಿಯಿಂದ ಒಂಬತ್ತು ಕಿಲೋಮೀಟರ್ ದೂರದಲ್ಲಿರುವ ಮೈಕೆಲ್ ಮಧುಸೂದನ್ ಸ್ಮಾರಕ ಕಾಲೇಜಿನಲ್ಲಿ ಓದುತ್ತಿದ್ದಾರೆ. ಈಗ ಕಾಲೇಜು ಮುಚ್ಚಿರುವುದರಿಂದ, ಈ ಆದಾಯವು ಅವರ 4ಜಿ ಸಂಪರ್ಕಕ್ಕೆ ಸಹಾಯ ಮಾಡುತ್ತದೆ. ಅವರು ತನ್ನ ದೊಡ್ಡಕ್ಕ ಮತ್ತು ತಂದೆಯೊಂದಿಗೆ ವಾಸಿಸುತ್ತಾರೆ. ಅವರ ತಂದೆ ದುರ್ಗಾಪುರ ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದಾರೆ. ಪ್ರತಿಭಾವಂತ ಓಟಗಾರ್ತಿಯಾದ ರೀಮಾ ಶಾಲಾ ಮಟ್ಟದಲ್ಲಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ. “ನನ್ನ ಅಕ್ಕ ಡಿಪೋದಲ್ಲಿ ಕೆಲಸ ಮಾಡುತ್ತಾಳೆ. ಮುಂದಿನ ವರ್ಷ ಅವಳಿಗೆ ಮದುವೆ. ನಾನು ರೇಖಾ ದೀದಿಯಂತೆ ಪದವೀಧರಳಾಗಿ ಸೇನೆಗೆ ಸೇರಲು ಬಯಸುತ್ತೇನೆ,” ಎಂದು ನಗುತ್ತಾ ಹೇಳುತ್ತಾರೆ.

ರೇಖಾ ಕಲ್ಲಿದ್ದಲು ಆಯುವ ಕೆಲಸ ಮಾಡುವ ಕುಂತಿ ರಾಜ್‌ಪರ್ ಅವರ ಮಗಳು. ಅವರು ಅಸ್ಸಾಂ ರೈಫಲ್ಸ್ ಸೇನಾ ತುಕಡಿಯಲ್ಲಿ ಜವಾನರಾಗಿದ್ದಾರೆ. “ನಮ್ಮ ಇಡೀ ಜೀವನದಲ್ಲಿ ನಾವು ಏನನ್ನು ಸಾಧಿಸಲು ಸಾಧ್ಯವಿಲ್ಲವೋ ಅದನ್ನು ನಮ್ಮ ಮಗಳು ಸಾಧಿಸಬೇಕೆಂದು ನಾವು ಬಯಸಿದ್ದೆವು” ಎಂದು ಕುಂತಿ ತನ್ನ ಮಗಳ ಬಗ್ಗೆ ಹೆಮ್ಮೆಯಿಂದ ಹೇಳಿದರು.

ರೇಖಾ ತನ್ನ ಮನೆಗೆ ಭೇಟಿ ನೀಡುತ್ತಿದ್ದಾರೆ ಮತ್ತು ಅವರು ನಮಗೆ ಹೇಳಿದರು, “ಈಗ ನನಗೆ ಕೆಲಸವಿದೆ, ನಮ್ಮ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನಮ್ಮ ಮಣ್ಣಿನ ಮನೆ ಇತ್ತೀಚೆಗೆ ಪಕ್ಕಾ ಸಿಮೆಂಟ್ ಮನೆಯಾಗಿದೆ. ನಾನು ನಿರಂತರ ಶಿಕ್ಷಣ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನನ್ನ ತಾಯಿ ನಡೆಸಿದ ಪ್ರಯತ್ನದಿಂದಾಗಿ ಇದೆಲ್ಲವೂ ಸಾಧ್ಯವಾಗಿದೆ.”

Editor's note

ಆಧ್ಯೇತಾ ಮಿಶ್ರಾ ಕೋಲ್ಕತ್ತಾದ ಜಾಧವಪುರ ವಿಶ್ವವಿದ್ಯಾಲಯದಲ್ಲಿ ತುಲನಾತ್ಮಕ ಸಾಹಿತ್ಯದ ಪದವಿಪೂರ್ವ ವಿದ್ಯಾರ್ಥಿನಿ. ದುರ್ಗಾಪುರದ ಉಕ್ಕಿನ ಕಾರ್ಖಾನೆಗಳಿಂದ ಕೈಗಾರಿಕಾ ತ್ಯಾಜ್ಯದಿಂದ ಕಲ್ಲಿದ್ದಲು ಸಂಗ್ರಹಿಸಲು ಉದ್ಯೋಗದಲ್ಲಿರುವ ಮಹಿಳಾ ಕಾರ್ಮಿಕರ ಕುರಿತು ಅವರು ಆಸಕ್ತಿ ಹೊಂದಿದ್ದಾರೆ. ಅವರು ಹೇಳುತ್ತಾರೆ: "ಕಲ್ಲಿದ್ದಲು ಗಣಿ ಕೆಲಸಗಾರರ ಮೇಲೆ ಅನೇಕ ಅಧ್ಯಯನಗಳನ್ನು ನಡೆಸಲಾಗಿದೆ ಆದರೆ ಮಹಿಳೆಯರ ಈ ಉಪ ಉದ್ಯೋಗಕ್ಕೆ ಅರ್ಹವಾದ ಗಮನವನ್ನು ನೀಡಲಾಗಿಲ್ಲ. ಅವರ ಹೋರಾಟಗಳ ಬಗ್ಗೆ ಬರೆಯಲು ʼಪರಿʼ ನನಗೆ ಅವಕಾಶವನ್ನು ನೀಡಿ ಅವರ ಬದುಕಿನ ಕುರಿತ ವಿರಗಳನ್ನು ಹೇಗೆ ಕಲೆಹಾಕಬೇಕು ಎನ್ನುವ ಕುರಿತು ಮಾರ್ಗದರ್ಶನ ನೀಡಿತು."  

ಅನುವಾದಕರು: ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.