ಸೆಪ್ಟೆಂಬರ್ 2020 ರಲ್ಲಿ, ಶಾಝೆಯಾ ಅಖ್ತರ್ ತನ್ನ ಊರಿನಲ್ಲಿಯೇ 10 ನೇ ತರಗತಿಯಲ್ಲಿ ಉತ್ತೀರ್ಣಳಾದ ಮೊದಲ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. “ನಾನು ಪಾಸ್ ಆಗುತ್ತೇನೆ ಎಂದು ನನಗೆ ನಾನೇ ಹೇಳಿಕೊಂಡಿದ್ದೆ.”

ಅವರು ಶುಹಾಮಾದಲ್ಲಿನ ಸರ್ಕಾರಿ ಸ್ವಾಮ್ಯದ ಬಾಲಕರ ಪ್ರೌಢಶಾಲೆಗೆ ಹಾಜರಾಗಿದ್ದರು. ದಿಗ್ನಿಬಲ್ ನಲ್ಲಿರುವ ಅವರ ಮನೆಯಿಂದ ಹೋಗಬರಲು 10 ಕಿಲೋಮೀಟರ್ ದೂರದ ಪ್ರಯಾಣವು ಕಡಿದಾದ ಮತ್ತು ಪ್ರಯಾಸಕರವಾದ ದಾರಿಯ ನಡಿಗೆಯಿಂದ ಕೂಡಿತ್ತು. “ನಾನು ಆಗಾಗ್ಗೆ ದಣಿಯುತ್ತಿದ್ದೆ ಮತ್ತು ಶಾಲೆಯಿಂದ ಹಿಂದಿರುಗಿದ ನಂತರ ಏಕಾಗ್ರತೆ ವಹಿಸಲು ಮತ್ತು ಓದಲು ಸಾಧ್ಯವಾಗದೆ ಪುಸ್ತಕಗಳನ್ನು ಮುಚ್ಚಿಡುತ್ತಿದ್ದೆ” ಎಂದು 19 ವರ್ಷದ ಯುವತಿ ಹೇಳುತ್ತಾರೆ.

ಶಾಝಿಯಾರ ಪೋಷಕರಾದ ಅಬ್ದುಲ್ ಗನೇಯಿ ಹಜಮ್ (65) ಮತ್ತು ತಾಜಾ ಬೇಗಂ (60) ಶಾಲೆಯ ಮೆಟ್ಟಿಲು ಹತ್ತಿದವರಲ್ಲ, ಮತ್ತು ಅವರ ಒಡಹುಟ್ಟಿದವರು ಸಹ ಶಾಲೆಗೆ ಹೋಗಲಿಲ್ಲ. ಆಕೆಯ ಇಬ್ಬರು ಸಹೋದರರಾದ ತಾರೀಖ್ (30) ಮತ್ತು ಮುಷ್ತಾಕ್ (27) ತಮ್ಮ ತಂದೆಯಂತೆ ದಿನಗೂಲಿ ಕಾರ್ಮಿಕರಾದರು. “ಕುಟುಂಬದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಲು ಅವರು ಸಂಪಾದಿಸಬೇಕಾಗಿತ್ತು” ಎಂದು ಅವರು ಹೇಳುತ್ತಾರೆ.

ಶಾಝೆಯಾರ ಅಣ್ಣಂದಿರು ಚಿಕ್ಕವರಿರುವಾಗ, ಹತ್ತಿರದ ಪ್ರಾಥಮಿಕ ಶಾಲೆಗೆ ಕಡಿದಾದ ಏರುಮುಖದ ದಾರಿಯಲ್ಲಿ ಹೋಗಬೇಕಿತ್ತು, ಅದು ಸರಿಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿತ್ತು. ಊರಿನ ಜನರು ತಮ್ಮ ಊರಿಗೆ ಹತ್ತಿರದಲ್ಲಿ ಒಂದು ಶಾಲೆಯನ್ನು ಹೊಂದಲು ಉತ್ಸುಕರಾಗಿದ್ದರು. “ಈ ಶಾಲೆಯನ್ನು ಪ್ರಾರಂಭಿಸಲು ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. 2001ರಲ್ಲಿ, ನಾವು [ಶಾಲಾ ಶಿಕ್ಷಣ] ನಿರ್ದೇಶನಾಲಯಕ್ಕೆ ಭೇಟಿ ನೀಡಿ ಇಲ್ಲಿ ನಮಗೆ ಒಂದು ಶಾಲೆಯನ್ನು ನಿರ್ಮಿಸುವಂತೆ ಕೇಳಿಕೊಂಡೆವು”, ಎಂದು ದಿನಗೂಲಿಗಾಗಿ ಶಾಲುಗಳನ್ನು ಕಸೂತಿ ಮಾಡುವ ತಾರೀಖ್ ಹೇಳುತ್ತಾರೆ. ಅವರ ಪ್ರಯತ್ನಗಳು ಫಲ ನೀಡಿದವು ಮತ್ತು ದಿಗ್ನಿಬಲ್ ನ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆಯನ್ನು 2002ರಲ್ಲಿ ಸ್ಥಾಪಿಸಲಾಯಿತು. “ಶಿಕ್ಷಕರನ್ನು ಹುಡುಕುವುದು ಮುಂದಿನ ಸವಾಲಾಗಿತ್ತು” ಎಂದು ಅವರು ಹೇಳುತ್ತಾರೆ.  

ಮೊದಲ ಕೆಲವು ವರ್ಷಗಳವರೆಗೆ ಅವರು ಇಡೀ ಶಾಲೆಗೆ ಒಬ್ಬರೇ ಒಬ್ಬ ಪುರುಷ ಶಿಕ್ಷಕರಿದ್ದರು. ದಿಗ್ನಿಬಲ್ ತಲುಪಲು ಇದ್ದ ಕಡಿದಾದ ಏರುಮುಖ ದಾರಿಯು ಶಿಕ್ಷಕರು ಇಲ್ಲಿಗೆ ಬರುವುದನ್ನು ತಡಯುತ್ತಿತ್ತು. ದಿಗ್ನಿಬಲ್‌ನಲ್ಲಿ 350ಕ್ಕೂ ಹೆಚ್ಚು ಜನರಿದ್ದಾರೆ ಎಂದು ಊರಿನ ಹಿರಿಯರಾದ ಮಂಜೂರ್ ಅಹ್ಮದ್ ಮಿರ್ ಅಂದಾಜಿಸುತ್ತಾರೆ.    ಇಲ್ಲಿನ ಶಾಲೆಯ ಎರಡು ಹಳದಿ ಕಟ್ಟಡಗಳನ್ನು ಕವಿ ಇಕ್ಬಾಲ್, ನೆಲ್ಸನ್ ಮಂಡೇಲಾ ಮತ್ತು ಇತರರ ಸ್ಪೂರ್ತಿದಾಯಕ ಉಲ್ಲೇಖಗಳಿಂದ ಅಲಂಕರಿಸಲಾಗಿದೆ. ಮುಖ್ಯ ಕಟ್ಟಡದ ಪ್ರವೇಶದ್ವಾರದಲ್ಲಿ ‘ಇಲ್ಮುಕ್ ಆಗುರ್’ ಎಂದರೆ ‘ಶಿಕ್ಷಣದ ಮನೆ’ ಎಂದು ಬರೆಯಿಸಲಾಗಿದೆ, ಆದರೆ ದುರದೃಷ್ಟವಶಾತ್, ಕೆಲವು ವಿದ್ಯಾರ್ಥಿಗಳು ಮಾತ್ರವೇ ಇಲ್ಲಿಂದ ಉತ್ತೀರ್ಣರಾದ ನಂತರ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಿದೆ.

2008ರಲ್ಲಿ ದಾಖಲಾದ ಮೊದಲ ಬಾಲಕಿಯರಲ್ಲಿ ಶಾಝೆಯಾ ಕೂಡ ಒಬ್ಬರು. ಶಾಲೆಯನ್ನು ಮೇಲ್ದರ್ಜೆಗೇರಿಸಿದ ಸಮಯದಲ್ಲಿ ಅವರು ಶಿಶುವಿಹಾರಕ್ಕೆ ಸೇರಿದರು, ಆಗ ಶಾಲೆಯು ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆಯಾಗಿ ಮಾರ್ಪಟ್ಟಿತ್ತು ಮತ್ತು 8 ನೇ ತರಗತಿಯವರೆಗೆ ಶಿಕ್ಷಣವನ್ನು ನೀಡುತ್ತಿತ್ತು. ಬಿಲಾಲ್ ವಾನಿ ಶಾಝೆಯಾ ಅವರ ಶಿಕ್ಷಕರಾಗಿದ್ದರು ಮತ್ತು ಆಕೆ ಉತ್ತಮ ವಿದ್ಯಾರ್ಥಿಯಾಗಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.

ಕಾಶ್ಮೀರದ ಗಂದೇರ್ಬಾಲ್ ಜಿಲ್ಲೆಯ ದಿಗ್ನಿಬಲ್ ಕುಗ್ರಾಮವು ಒಂದೇ ಅಂತಸ್ತಿನ ತಗಡಿನ ಛಾವಣಿಯ ಮನೆಗಳಿಂದ ಗುರುತಿಸಲ್ಪಟ್ಟಿದೆ; ಹತ್ತಿರದ ನಗರವಾದ ರಾಜ್ಯ ರಾಜಧಾನಿ ಶ್ರೀನಗರಕ್ಕೆ ಹೋಗುವ ರಸ್ತೆ ಬಹುತೇಕ ನಿರ್ಜನವಾಗಿದೆ. ಮಲಿಕ್ ಮೊಹಲ್ಲಾದ ಕೊನೆಯಲ್ಲಿ ಶಾಝೆಯಾ ತನ್ನ ಆರು ಜನರ ಕುಟುಂಬದೊಂದಿಗೆ ವಾಸಿಸುತ್ತಾರೆ. ಅವರ ಎರಡು ಮಲಗುವ ಕೋಣೆಯ ಮನೆಗೆ ಮುರಿದ ತಗಡಿನ ಹಾಳೆಗಳಿಂದ ಬೇಲಿ ಹಾಕಲಾಗಿದೆ ಮತ್ತು ವಾಲ್ನಟ್ ಮತ್ತು ಕಿಕಾರ್ ಮರಗಳಿಂದ ಸುತ್ತುವರೆದಿದೆ.

ತನ್ನ ಹಳ್ಳಿಯಲ್ಲಿ 8ನೇ ತರಗತಿಯನ್ನು ಮುಗಿಸಿದ ಶಾಝೆಯಾ ನಂತರ ಇತರ ಇಬ್ಬರು ಹುಡುಗಿಯರೊಂದಿಗೆ ಐದು ಕಿಲೋಮೀಟರ್ ದೂರದಲ್ಲಿರುವ ಶುಹಾಮಾದಲ್ಲಿನ ಬಾಲಕರ ಪ್ರೌಢಶಾಲೆಗೆ ಸೇರಿಕೊಂಡು ಅಲ್ಲಿ 10ನೇ ತರಗತಿಯನ್ನು ಮುಗಿಸಿದರು. ಅತ್ಯಂತ ಶಿಸ್ತಿನ ವಿದ್ಯಾರ್ಥಿಯಾಗಿದ್ದಕ್ಕಾಗಿ ಪ್ರಶಸ್ತಿ ಸ್ವೀಕರಿಸಿದ್ದನ್ನು ಅವರು ಸಂತೋಷದಿಂದ ನೆನಪಿಸಿಕೊಳ್ಳುತ್ತಾರೆ.

ತನ್ನ ಶಾಲೆ ನೀಡಿದ ಅತ್ಯಂತ ಶಿಸ್ತಿನ ವಿದ್ಯಾರ್ಥಿ ಪ್ರಶಸ್ತಿಯನ್ನು ತೋರಿಸುತ್ತಿರುವ ಶಾಝೆಯಾ. ಚಿತ್ರ: ಸಬ್ಜಾರಾ ಅಲಿ

ಶಾಝೆಯ ಬೆಳಗಿನ ಆರು ಗಂಟೆಗೆ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ನಂತರ ಅಡುಗೆ ಮಾಡಿಟ್ಟು ನಂತರ ಶಾಲೆಗೆ ಹೊರಡುತ್ತಿದ್ದರು. ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಮನೆಯ ಜವಬ್ದಾರಿ ಶಾಝೆಯಾ ಮತ್ತು ಆಕೆಯ ಅತ್ತಿಗೆ, ತಾರೀಖ್‌ ಅವರ ಪತ್ನಿ ಹಜ್ರಾ ಅವರ ಮೇಲಿತ್ತು. “ಅತ್ತಿಗೆ ಇಲ್ಲದ ಸಮಯದಲ್ಲಿ ಮನೆಯ ದನಗಳನ್ನೂ ನೋಡಿಕೊಳ್ಳಬೇಕಿತ್ತು. ಎಲ್ಲವನ್ನೂ ನಾನೇ ನೋಡಿಕೊಳ್ಳಬೇಕಿತ್ತು. ಇದರಿಂದಾಗಿ ಕೆಲವೊಮ್ಮೆ ಬೆಳಗಿನ ಅಸೆಂಬ್ಲಿ ತಪ್ಪಿಹೋಗುತ್ತಿತ್ತು,” ಎಂದು ತಮ್ಮ ಹೈಸ್ಕೂಲಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಮನೆ ನೋಡಿಕೊಳ್ಳುವ ಸಲುವಾಗಿ ಶಾಲೆಗೆ ರಜಾ ಹಾಕಬೇಕಾದ ಸಂದರ್ಭಗಳೂ ಇದ್ದವು.

ಶಾಲೆಯಲ್ಲಿನ ಶಿಕ್ಷಕರು ಬಹಳ ಉತ್ತೇಜನ ನೀಡುವವರಾಗಿದ್ದ ಕಾರಣ ಆಕೆಯ ಓದಿಗೆ ಸಹಾಯಕವಾಯಿತು. “8ನೇ ತರಗತಿಯ ತನಕ ನಾನು ಮಹಿಳಾ ಶಿಕ್ಷಕರನ್ನು ಕಂಡಿರಲಿಲ್ಲ. ಆದರೆ ಹೈಸ್ಕೂಲಿನಲ್ಲಿ ಸಾಕಷ್ಟು ಮಂದಿಯಿದ್ದರು. ಅವರು ನಮಗೆ ಸಾಕಷ್ಟು ಸಹಾಯ ಮತ್ತು ಮಾರ್ಗದರ್ಶನ ನೀಡುತ್ತಿದ್ದರು,” ಎನ್ನುತ್ತಾರಾಕೆ. ಶಾಲಾ ಪಠ್ಯ ಸಾಮಾಗ್ರಿಗಳಿಗಾಗಿ 150 ರೂಪಾಯಿಗಳನ್ನು ಹೊಂದಿಸಲಾಗದ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸುವ ಸಲುವಾಗಿ “ನಮ್ಮ ಶಿಕ್ಷಕರು ನೋಟ್ಸ್‌ಗಳನ್ನು ಹತ್ತಿರದ ಕಿರಾಣಿ ಅಂಗಡಿಯಲ್ಲಿ ಇಟ್ಟು ಹೋಗುತ್ತಿದ್ದರು.”

ಶಾಝೆಯಾ 10 ತರಗತಿಯ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವೇಳೆ ಕೋವಿಡ್‌ ಕಾರಣದಿಂದ ಲಾಕ್ಡೌನ್‌ ಘೋಷಿಸಲಾಯಿತು. ಇದರಿಂದಾಗಿ ಶಾಲೆಗಳನ್ನು ಕೂಡಾ ಮುಚ್ಚಲಾಯಿತು. ಅವರ ಊರಿನಲ್ಲಿ ಆನ್ಲೈನ್‌ ತರಗತಿಗೆ ಹಾಜರಾಗುವುದು ಕೂಡಾ ಸಾಧ್ಯವಿರಲಿಲ್ಲ. ಏಕೆಂದರೆ ಆಗ ಅವರ ಊರಿನಲ್ಲಿ ಇಂಟರ್ನೆಟ್‌ ಸಂಪರ್ಕವಿದ್ದಿರಲಿಲ್ಲ. (ಈಗ ಬಂದಿದೆ). “ನನಗೆ ಆನ್ಲೈನ್‌ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ,” ಎಂದು ಅವರು ಹೇಳುತ್ತಾರೆ. ಪರೀಕ್ಷೆಯಲ್ಲಿ ಪಾಸ್‌ ಆಗಲೇಬೇಕೆಂದು ನಿರ್ಧರಿಸಿದ್ದ ಆಕೆ ತಮ್ಮ ಊರಿನ ಶಾಲೆ ಮುಗಿಸಿದ ಮೂವರು ಹುಡುಗರಲ್ಲಿ ಒಬ್ಬರಾದ ಶೌಕತ್‌ ಅಲಿಯನ್ನು ಸಂಪರ್ಕಿಸಿದರು. ಆತ ಉದಾರವಾಗಿ ಸಹಾಯ ಮಾಡಿದರು. ಅವರು ದಿನವೂ ತಾನು ಹೋಗುತ್ತಿದ್ದ ಕಟ್ಟಡ ನಿರ್ಮಾಣ ಕೆಲಸ ಮುಗಿಸಿ ಬಂದು ಆಕೆಗೆ ಓದಲು ಸಹಾಯ ಮಾಡುತ್ತಿದ್ದರು.

“2020ರಲ್ಲಿ ಫಲಿತಾಂಶಗಳು ಹೊರಬಂದು ನಾನು ತೇರ್ಗಡೆ ಹೊಂದಿದ ವಿಷಯ ತಿಳಿದಾಗ, ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ನಾನು ತೇರ್ಗಡೆ ಹೊಂದದೆ ಹೋಗಿದ್ದರೆ, ನಾನು ಮತ್ತೆ ಪ್ರಯತ್ನಿಸುತ್ತಿದ್ದೆ” ಎಂದು ಅವರು ಹೇಳುತ್ತಾರೆ, ತನ್ನ ಪೋಷಕರು, ಶಿಕ್ಷಕರು ಮತ್ತು ನೆರೆಹೊರೆಯವರು ಅವರನ್ನು ಹೇಗೆ ಅಭಿನಂದಿಸಿದರು ಎನ್ನುವುದನ್ನು ಅವರು ನಗುತ್ತಾ ಹೇಳುತ್ತಾರೆ – ಅವರು ಆ ಊರಿನಲ್ಲಿ ಉತ್ತೀರ್ಣರಾದ ಏಕೈಕ ಹುಡುಗಿಯಾಗಿದ್ದರು.

“ಅವಳು ಏನೋ ಸಾಧಿಸಿದ ಭಾವನೆ ನಮ್ಮಲ್ಲಿ ಮೂಡಿತ್ತು. ನಾವು ಗೌರವಕ್ಕೆ ಪಾತ್ರರಾಗಿದ್ದೆವು” ಎಂದು ತಾರಿಖ್ ಹೇಳುತ್ತಾರೆ.

ದೂರದಲ್ಲೊಂದು ಸೇತುವೆ

ಅದಾಗ್ಯೂ, ಊರಿನ ಹುಡುಗಿಯರಲ್ಲಿ ಅವರೊಬ್ಬರೇ 10ನೇ ತರಗತಿ ತೇರ್ಗಡೆಯಾಗಿದ್ದ ಕಾರಣ, ಹತ್ತಿರದ ಹೈಯರ್‌ ಸೆಕೆಂಡರಿ ಶಾಲೆಗೆ 11 ತರಗತಿಗೆ ಸೇರಲು ಆಕೆಗೆ ಯಾರೂ ಜೊತೆಯಿರಲಿಲ್ಲ. ಈ ಶಾಲೆ ಊರಿನಿಂದ ಐದು ಕಿಲೋಮೀಟರ್‌ ದೂರದ ಖಿಂಬರ್‌ ಎನ್ನುವಲ್ಲಿತ್ತು.

“ಶಾಲೆಯು ತುಂಬಾ ದೂರದಲ್ಲಿದ್ದು, ನಾನು ಏಕಾಂಗಿಯಾಗಿ ಅಲ್ಲಿಗೆ ಹೋಗಬೇಕಾಗಿರುವುದರಿಂದ ನನ್ನ ಓದನ್ನು ನಿಲ್ಲಿಸುವಂತೆ ಅವರು [ಅವರ ಕುಟುಂಬ] ನನಗೆ ಆದೇಶಿಸಿದರು” ಎಂದು ಅವರು ಹೇಳುತ್ತಾರೆ. 2019 ಮತ್ತು 2020ರ ನಡುವೆ, ಶಿಕ್ಷಣ ಸಚಿವಾಲಯವು  ಶೇಕಡಾ 15.1ರಷ್ಟು ಬಾಲಕಿಯರು ಭಾರತದಾದ್ಯಂತ ಮಾಧ್ಯಮಿಕ ಶಾಲೆಗಳಿಂದ ಹೊರಗುಳಿದಿದ್ದಾರೆ – ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡಾ 16.7ರಷ್ಟು ಬಾಲಕಿಯರು ಮಾಧ್ಯಮಿಕ ಶಾಲೆಗಳಿಂದ ಹೊರಗುಳಿದಿದ್ದಾರೆ ಎಂದು ಹೇಳಿದೆ. ದಿಗ್ನಿಬಲ್ ರೀತಿಯ ದೂರದ ಪ್ರದೇಶಗಳಲ್ಲಿ, ಶಿಕ್ಷಣವನ್ನು ಪಡೆಯುವುದು ಇಂದಿಗೂ ಒಂದು ಸವಾಲಾಗಿ ಉಳಿದಿದೆ.

 ತಮ್ಮ ಕುಟುಂಬದ ಕಿರಿಯ ಸದಸ್ಯೆಯನ್ನು ದೂರದ ಶಾಲೆಗೆ ಕಳುಹಿಸಲು ತನ್ನ ಕುಟುಂಬವು ಹಿಂಜರಿಯುತ್ತಿರುವ ಬಗ್ಗೆ ಮಾತನಾಡುತ್ತಾ, ತಾರೀಖ್ ವಿವರಿಸುತ್ತಾರೆ, “ಅದು ತುಂಬಾ ದೂರದಲ್ಲಿತ್ತು ಮತ್ತು ಯಾವುದೇ ಸಾರಿಗೆ ವ್ಯವಸ್ಥೆ ಇದ್ದಿರಲಿಲ್ಲ, ಹೀಗಾಗಿ ನಾವು ಹೆದರುತ್ತಿದ್ದೆವು. ಸಾರ್ವಜನಿಕ ಸಾರಿಗೆ ಇದ್ದಿದ್ದರೆ, ನಮಗೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ” ಎಂದು ಅವರು ಹೇಳಿದರು. ಶಾಲೆಯಿಂದ ಹೊರಗುಳಿಯಬೇಕಾಗಿ ಬಂದದ್ದಕ್ಕಾಗಿ ತನ್ನ ತೀವ್ರ ನಿರಾಶೆಯನ್ನು ಶಾಝೆಯಾ ನೆನಪಿಸಿಕೊಳ್ಳುತ್ತಾರೆ.

ಈ ಪರಿಸ್ಥಿತಿ ತಾತ್ಕಾಲಿಕ ಮತ್ತು ಮುಂದಿನ ವರ್ಷ ತನ್ನ ಸ್ನೇಹಿತರು 11ನೇ ತರಗತಿಗೆ ಅರ್ಹತೆ ಪಡೆಯುತ್ತಾರೆ ಮತ್ತು ಎಲ್ಲರೂ ಒಟ್ಟಿಗೆ ಪ್ರಯಾಣಿಸಬಹುದು ಎಂದು ಅವರು ಆಶಿಸಿದ್ದರು. ಆ ದಿನಕ್ಕಾಗಿ ಕಾಯುತ್ತಿರುವಾಗ, ಅವರು ತನ್ನ ಸಹೋದರ ತಾರೀಖ್ ಅವರಿಂದ ಕಾಶ್ಮೀರಿ ಕರಕುಶಲತೆ ಸೋಜ್ನಿ (ಕಸೂತಿ)ಯನ್ನು ಕಲಿತರು. ಅವರು  ದಿನಗೂಲಿಗಾಗಿ ಪಶ್ಮಿನಾ ಶಾಲುಗಳ ಮೇಲೆ ಕಸೂತಿ ಮಾಡಲು ಪ್ರಾರಂಭಿಸಿದರು.

ಮುಂದಿನ ವರ್ಷ, 2021ರಲ್ಲಿ, ತನ್ನ ಸ್ನೇಹಿತೆ ಅರ್ಹತೆ ಪಡೆಯದಿದ್ದಾಗ, ಶಾಝೆಯಾ ತನ್ನನ್ನು ಹೋಗಲು ಅನುಮತಿಸಬೇಕೆಂದು ಒತ್ತಾಯಿಸಿದರು. “ನನ್ನ ಸ್ನೇಹಿತೆಯರಿಗೆ ನನ್ನಂತೆ ಯಾವುದೇ ಆಕಾಂಕ್ಷೆಗಳಿಲ್ಲ. ಅವರು ಮನೆಯಲ್ಲಿಯೇ ಇರಬೇಕೆಂದು ಅವರಿಗೆ ತಿಳಿದಿದೆ ಮತ್ತು ಅವರಿಗೆ ಬೇರೆ ಆಯ್ಕೆಗಳಿಲ್ಲ. ಆದರೆ ನಾನು ಅಳುತ್ತಿದ್ದೆ ಮತ್ತು ನನ್ನನ್ನು ಶಾಲೆಗೆ ಸೇರಿಸಲು ನನ್ನ ಕುಟುಂಬವನ್ನು ಕೇಳಿದೆ. ನನಗೆ ಓದುವ ಬಲವಾದ ಆಸೆ ಇತ್ತು” ಎಂದು ಶಾಝೆಯಾ ಹೇಳುತ್ತಾರೆ.

ಊರಿನ ಹಿರಿಯರಾದ ಮಂಜೂರ್ ಅಹ್ಮದ್ ಮಿರ್, ಶಾಝೆಯಾರ  ಪರಿಸ್ಥಿತಿ ಇಲ್ಲಿಗೆ ಹೊಸದಲ್ಲ ಮತ್ತು ಅವರ ಸ್ವಂತ ಮಗಳು ಸಹ 8ನೇ ತರಗತಿಯ ನಂತರ ಶಾಲೆಯಿಂದ ಹೊರಗುಳಿದಿದ್ದಾಳೆ ಎಂದು ಹೇಳುತ್ತಾರೆ. “ನಾನು ನನ್ನ ಮಗಳನ್ನು ಖಿಂಬರ್ ಅಥವಾ ಬಕೂರಾ ಗ್ರಾಮದ ಶಾಲೆಯಲ್ಲಿ ಬಿಟ್ಟು ನಂತರ ಕೆಲಸಕ್ಕೆ ಹೋಗಬಹುದಿತ್ತು. ಆದರೆ ಆ ದಿನದ ಶಾಲೆ ಮುಗಿದಾಗ, ನಾನು ಇನ್ನೂ ಕೆಲಸದಲ್ಲಿರುತ್ತೇನೆ ಹೀಗಾಗಿ ಅವಳನ್ನು ಕರೆದೊಯ್ಯಲು ಸಾಧ್ಯವಾಗುವುದಿಲ್ಲ. ಅವಳು ಮನೆಯಲ್ಲಿ ಕೊನೆಗೊಂಡದ್ದು ಹೀಗೆ” ಎಂದು ಅವರು ಹೇಳುತ್ತಾರೆ.

ಮಾರ್ಚ್ 2021ರಲ್ಲಿ, ಶಾಝೆಯಾ ಅವರನ್ನು ಅಂತಿಮವಾಗಿ ಖಿಂಬರ್‌ನ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ 11ನೇ ತರಗತಿಗೆ ಸೇರಿಸಲಾಯಿತು. ಅವರ ಸಹೋದರರು ಅಥವಾ ತಂದೆ ಅವರೊಡನೆ ನಾಲ್ಕು ಕಿಲೋಮೀಟರ್ ನಡೆದು ಬಕೂರಕ್ಕೆ ಹೋಗುತ್ತಿದ್ದರು, ಅಲ್ಲಿ ಅವರು ಅದೇ ಶಾಲೆಗೆ ಹೋಗುವ ಇತರ ಹುಡುಗಿಯರೊಂದಿಗೆ ಸೇರುತ್ತಿದ್ದರು. ಅಲ್ಲಿಂದ ಬಸ್‌ ಹತ್ತುತ್ತಿದ್ದರು ಅಥವಾ ಅಲ್ಲಿಂದ ಶಾಲೆಗೆ ಉಳಿದ ಮೂರು ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದರು. “ನಾವು ನಮ್ಮ ಕೆಲಸವನ್ನು ಬಿಟ್ಟು ಅವಳೊಂದಿಗೆ ಹೋಗಬೇಕಾಗಿತ್ತು” ಎಂದು ತಾರೀಖ್ ಹೇಳುತ್ತಾರೆ.

ಶಾಝೆಯಾ ದೈಹಿಕ ಶಿಕ್ಷಣ, ಇಂಗ್ಲಿಷ್, ರಾಜ್ಯಶಾಸ್ತ್ರ ಮತ್ತು ಉರ್ದುವನ್ನು ತನ್ನ ವಿಷಯಗಳಾಗಿ ಆಯ್ಕೆ ಮಾಡಿಕೊಂಡರು. “ನಾನು ಕ್ರೀಡೆಗಳನ್ನು ಪ್ರೀತಿಸುವ ಕಾರಣ ದೈಹಿಕ ಶಿಕ್ಷಣವನ್ನು ತೆಗೆದುಕೊಂಡಿದ್ದೇನೆ” ಎಂದು ಅವರು ಹೇಳುತ್ತಾರೆ. ಅವರು ಮೊದಲ ಬಾರಿಗೆ ಕ್ರೀಡೆಗಳನ್ನು ಆಡುತ್ತಿದ್ದರು. “ನನ್ನನ್ನು ಕಾಡಿದ ಏಕೈಕ ವಿಷಯವೆಂದರೆ ನಾನು ಮಾತ್ರ [ನನ್ನ ಹಳ್ಳಿಯಿಂದ] ಇಲ್ಲಿಗೆ ಬಂದವಳು”, ಎಂದು ಅವರು ಹೇಳುತ್ತಾರೆ.

ಶಾಝೆಯಾ ತನ್ನ ಸಹೋದರ ತಾರೀಖ್ (ಬಲಗಡೆ) ಅವರೊಡನೆ ಸೋಜ್ನಿ ಕೆಲಸ ಮಾಡುತ್ತಿದ್ದರು. ಅವರ ತಾಯಿ ತಾಜಾ ಅವರ ಆರೋಗ್ಯ (ಎಡಕ್ಕೆ)) ಉತ್ತಮವಾಗಿಲ್ಲ ಮತ್ತು ಆದ್ದರಿಂದ ಮನೆಯನ್ನು ನಡೆಸುವ ಜವಾಬ್ದಾರಿಯನ್ನು ಸಹೋದರ ತಾರೀಖ್ ಅವರ ಪತ್ನಿ ಹಜ್ರಾ ಮತ್ತು ಶಾಝಿಯಾ ಅವರಿಗೆ ವಹಿಸಲಾಗಿದೆ. ಚಿತ್ರ: ಸಬ್ಜಾರಾ ಅಲಿ

ಅವರು ಶಾಲೆಗೆ ಸೇರಿದ ಎರಡು ತಿಂಗಳ ನಂತರ, ಶಾಲೆಯು ಮೇ 2021ರಲ್ಲಿ ಶಾಝೆಯಾ ಅವರ ಪ್ರವೇಶವನ್ನು ಹಿಂತೆಗೆದುಕೊಂಡಿತು. ತಾರೀಖ್ ಮತ್ತು ಅಬ್ದುಲ್ ಅವರನ್ನು ವಿಚಾರಿಸಿದಾಗ, ಶಾಝೆಯಾ ಒಂದು ವರ್ಷ ಶಾಲೆ ಬಿಟ್ಟಿದ್ದರಿಂದ ಆಕೆ ತರಗತಿಗೆ ಅರ್ಹರಲ್ಲ ಎಂದು ಅವರಿಗೆ ತಿಳಿಸಲಾಯಿತು. “ಒಂದು ವರ್ಷವನ್ನು ಬಿಟ್ಟ ಆ ವಿದ್ಯಾರ್ಥಿಗಳನ್ನು ನಿಯಮಿತ ಶಾಲೆಗೆ ಸೇರಲು ಅನುಮತಿಸಬಾರದು ಎಂಬ ಆದೇಶಗಳು ಬಂದಿದ್ದವು” ಎಂದು ಅಬ್ದುಲ್ ಹೇಳುತ್ತಾರೆ, ಇದು ಏಕೆ ಸಂಭವಿಸಿತು ಮತ್ತು ಮುಂದೆ ಏನು ಮಾಡಬೇಕೆಂದು ಖಚಿತವಾಗಿಲ್ಲ.

ಹರುದ್ [ಶರತ್ಕಾಲದಲ್ಲಿ] ಪುರುಷರು ಕೆಲಸ ಮಾಡುತ್ತಿದ್ದರು ಎಂದು ತಾರೀಖ್ ಹೇಳುತ್ತಾರೆ,  ಶಾಲಾ ಅಧಿಕಾರಿಗಳು ಅವರನ್ನು ಕರೆದಾಗ ಶಾಜಿಯಾ ಅವರ ತಂದೆ ಅವರೊಡನೆ ಹೋದರು ಮತ್ತು ಅವರು ಶುಲ್ಕವನ್ನು [ರೂ. 1,500] ಮರಳಿ ತಂದರು. “ಇದು ಸಂಭವಿಸಿದ ನಂತರ ತಿಂಗಳುಗಳ ಕಾಲ ನಾನು ದುಃಖಿತಳಾಗಿದ್ದೆ” ಎಂದು ಶಾಜಿಯಾ ಹೇಳುತ್ತಾರೆ. ಇತ್ತೀಚೆಗೆ ಆಕೆಗೆ ಡಿಸ್ಚಾರ್ಜ್ ಸರ್ಟಿಫಿಕೇಟ್ ಸಹ ನೀಡಲಾಗಿತ್ತು.

ಶಾಲೆಯು ಶಾಝೆಯಾ ಮನೆಯಲ್ಲಿ ಅಧ್ಯಯನ ಮಾಡಲು ಮತ್ತು ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆಗೆ ಹಾಜರಾಗಲು ಶಿಫಾರಸು ಮಾಡಿತು. ಇದಕ್ಕೆ ಶ್ರೀನಗರದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕಾಗಿತ್ತು. ಜೂನ್ 2022ರಲ್ಲಿ ಈ ವರದಿಗಾರ್ತಿಯು ಪರಿಶೀಲಿಸಿದಾಗ, ಕುಟುಂಬವು ಈ ಕಚೇರಿಗೆ ಹೋಗಿರಲಿಲ್ಲ ಅಥವಾ ಬೇರೆ ಯಾವುದೇ ಶಾಲೆಯಲ್ಲಿ ಪ್ರವೇಶಕ್ಕಾಗಿ ಪ್ರಯತ್ನಿಸಿರಲಿಲ್ಲ.

ಏತನ್ಮಧ್ಯೆ, ಶಾಝೆಯಾ ಸೂಜಿ ಕೆಲಸವನ್ನು ಕಲಿಯುವುದರಲ್ಲಿ ಮತ್ತು ಉತ್ಪಾದಿಸುವಲ್ಲಿ ನಿರತರಾಗಿದ್ದಾರೆ, ಇದು ತಿಂಗಳಿಗೆ ಸುಮಾರು 1500 ರೂ.ಗಳ ಆದಾಯವನ್ನು ತರುತ್ತದೆ. “ಶಿಕ್ಷಕರು ಆಕೆಗೆ ನಿಯಮಿತವಾಗಿ ಪ್ರವೇಶ ನೀಡಿದ್ದರೆ ಅವಳು ತನ್ನ ಶಿಕ್ಷಣವನ್ನು ಖಿಂಬರ್‌ನಲ್ಲಿ ಮುಂದುವರಿಸುತ್ತಿದ್ದಳು. ಅವಳು 12ನೇ ತರಗತಿಯವರೆಗೆ ಓದಬೇಕೆಂದು ನಾವು ಬಯಸುತ್ತೇವೆ. ಅವಳು ಕೆಲಸ ಮಾಡುವುದನ್ನು ನಾವು ಬಯಸುವುದಿಲ್ಲ,” ಎಂದು ತಾರೀಖ್ ಹೇಳುತ್ತಾರೆ.

ಈ ಹಿನ್ನಡೆಗಳ ಹೊರತಾಗಿಯೂ, ಶಾಝೆಯಾ ತನ್ನ ಕನಸುಗಳನ್ನು ಕೈಬಿಟ್ಟಿಲ್ಲ. ಅವರು ಕಲಾ ಶಾಲೆಗೆ ಹೋಗಲು, ಶಿಕ್ಷಕಿಯಾಗಲು ಮತ್ತು ತನ್ನ ಸುತ್ತಲಿನ ಇತರ ಹುಡುಗಿಯರಿಗೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಸಹಾಯ ಮಾಡಲು ಬಯಸುತ್ತಾರೆ. “ನನಗೆ ಅನೇಕ ಸಮಸ್ಯೆಗಳಿವೆ, ಆದರೆ ನನಗೂ ಕನಸುಗಳಿವೆ” ಎಂದು ಅವರು ಹೇಳುತ್ತಾರೆ, ಅವುಗಳನ್ನು ಸಾಕಾರಗೊಳಿಸಲು ಅವರು 12ನೇ ತರಗತಿಯನ್ನು ಪೂರ್ಣಗೊಳಿಸಬೇಕು ಎನ್ನುವುದು ಆಕೆಗೆ ತಿಳಿದಿದೆ.

ಪರಿ’ಯ ಮುಖಪುಟಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ

Editor's note

ಸಬ್ಜಾರಾ ಅಲಿ ಶ್ರೀನಗರದ ಸೌರಾದಲ್ಲಿರುವ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿನಿ. ಪರಿ ಎಜುಕೇಶನ್ ಜೊತೆಯಾಗಿ ಇಂಟರ್ನ್ ಶಿಪ್ ಮಾಡುವಾಗ ಅವರು ಏಳು ತಿಂಗಳ ಕಾಲ ಈ ಕಥನವರದಿಯನ್ನು ಕವರ್ ಮಾಡಿದರು.

ಅವರು ಹೇಳುವಂತೆ: "ನಾನೋರ್ವ ಅಂತರ್ಮುಖಿಯಾದ ಕಾರಣ ಜನರೊಂದಿಗೆ ಸಂಪರ್ಕ ಹೊಂದಬಲ್ಲೆನೆಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕಳೆದ ಕೆಲವು ತಿಂಗಳುಗಳು ನನ್ನನ್ನು ಉತ್ತಮ ಕೇಳುಗನ್ನಾಗಿ ಮಾಡಿವೆ ಮತ್ತು ನನ್ನ ಅನೇಕ ಊಹೆಗಳನ್ನು ಮರುಪರಿಶೀಲಿಸುವಂತೆ ಮಾಡಿವೆ. ಉದಾಹರಣೆಗೆ, ಹುಡುಗಿಯರು ಶಿಕ್ಷಣವನ್ನು ಮುಂದುವರಿಸದಿರಲು ಮುಖ್ಯ ಕಾರಣ ಸಾಮಾಜಿಕ ಕಳಂಕ ಎಂದು ನಾನು ಭಾವಿಸಿದ್ದೆ. ಈ ಕಥೆಯನ್ನು ವರದಿ ಮಾಡುವುದು ಮತ್ತು ಸೂಕ್ಷ್ಮ ವಿವರಗಳನ್ನು ಕೇಳುವ ಪ್ರಕ್ರಿಯೆಯು ನನ್ನ ದೃಷ್ಟಿಕೋನವನ್ನು ಬದಲಾಯಿಸಿತು. ಇದು ನನ್ನ ಸುತ್ತಮುತ್ತಲಿನ ಸಣ್ಣ ವಿಷಯಗಳನ್ನು ಗಮನಿಸಲು ನನ್ನನ್ನು ಪ್ರೇರೇಪಿಸಿತು, ನನ್ನ ಪ್ರದೇಶದ ಹೆಚ್ಚಿನ ಸರ್ಕಾರಿ ಶಾಲೆಗಳನ್ನು 'ಬಾಲಕರ ಶಾಲೆ' ಎಂದು ಹೆಸರಿಸಲಾಗಿದೆ."

ಅನುವಾದ: ಶಂಕರ. ಎನ್. ಕೆಂಚನೂರು

ಶಂಕರ. ಎನ್. ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.