ತುಷಾರ್ ಮನೋಹರ್ ಚವಾಣ್ ಶಾಲೆ ಬಿಟ್ಟು 25 ವರ್ಷಗಳಾಗಿರಬಹುದು, ಆದರೆ ಅವರು ಪ್ರತಿ ಮೇ ತಿಂಗಳಲ್ಲಿ ಶೈಕ್ಷಣಿಕ ವರ್ಷದ ಅಂತ್ಯಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾರೆ.

“ಈ ಸಮಯದಲ್ಲಿ [ಮೇ] ಬಹಳಷ್ಟು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದ ತಮ್ಮ ಹಳೆಯ ಪಠ್ಯಪುಸ್ತಕಗಳು ಮತ್ತು ನೋಟ್‌ ಬುಕ್ಕುಗಳನ್ನು ಮಾರಾಟ ಮಾಡುತ್ತಾರೆ,” ಎಂದು ಪುಣೆ ನಗರದ 42 ವರ್ಷದ ಗುಜರಿ ವ್ಯಾಪಾರಿ ಚವಾಣ್ ಹೇಳುತ್ತಾರೆ. “ಶಿಕ್ಷಣವು ಆನ್‌ಲೈನ್‌ ಮಾದರಿಗೆ ಹೋಗಿದ್ದರಿಂದ [2020-21] ಈ ವರ್ಷ ಯಾವುದೇ ವಿದ್ಯಾರ್ಥಿಗಳು ಬಂದಿಲ್ಲ,” ಎಂದು ಅವರು ಜೂನ್ 2021ರ ಕೊನೆಯಲ್ಲಿ ಅವರನ್ನು ಭೇಟಿಯಾದಾಗ ಹೇಳಿದರು.

ಸೆಂಟ್ರಲ್ ಪುಣೆಯ ಗೋಖಲೆ ರಸ್ತೆಯಲ್ಲಿ ಲೋಹದ ಶೀಟುಗಳಿಂದ ಮಾಡಿದ ಅವರ 10ರಿಂದ 10 ಅಡಿಗಳ ಅಂಗಡಿಯಲ್ಲಿ ಪತ್ರಿಕೆಗಳು ಮತ್ತು ಪುಸ್ತಕಗಳ ಹಳೆಯ ಪ್ರತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ದಪ್ಪನೆಯ ಪುಸ್ತಕಗಳು ಮತ್ತು ಹಳೆಯ ವೃತ್ತಪತ್ರಿಕೆಗಳು ಹಿಂಭಾಗದಲ್ಲಿ ರಾಶಿ ಬಿದ್ದಿವೆ ಮತ್ತು ಹೊಸ ಪುಸ್ತಕಗಳು ಸಣ್ಣ ಕಟ್ಟುಗಳಲ್ಲಿ ಅಂಗಡಿಯ ಹೊರಗೆ ಇರುತ್ತವೆ. ಅಂಗಡಿಯ ಕೆಳಗಿರುವ ಒಂದು ಸಣ್ಣ ಶೆಲ್ಫಿನಂತಹ ಜಾಗದಲ್ಲಿ ಒಂದು ದೊಡ್ಡ ಪ್ಲಾಸ್ಟಿಕ್ ಚೀಲವಿದೆ, ಅದರಲ್ಲಿ ಬಿಸಾಡಿದ ಹಾಲಿನ ಪ್ಲಾಸ್ಟಿಕ್ ಪ್ಯಾಕೇಟುಗಳು, ನಿಯತಕಾಲಿಕೆಗಳ ಒಂದು ಸಣ್ಣ ಕಟ್ಟು ಪಕ್ಕದಲ್ಲಿದೆ.

ದೊಡ್ಡ ಕೈಗಾರಿಕಾ ಗಾತ್ರದ ಉಕ್ಕಿನ ತೂಕದ ಮಾಪಕವನ್ನು ಅಂಗಡಿಯ ಮುಂಭಾಗದಲ್ಲಿ ಇರಿಸಲಾಗಿದೆ, ಅಲ್ಲಿ ಗ್ರಾಹಕರು ಅದನ್ನು ಸುಲಭವಾಗಿ ನೋಡಿ ಪರೀಕ್ಷಿಸಬಹುದು. “ನಾನು ಅದನ್ನು (ತೂಕದ ಮಾಪಕವನ್ನು) ಮುಂಭಾಗದಲ್ಲಿ ಇಡಲು ಇಷ್ಟಪಡುತ್ತೇನೆ, ಇದರಿಂದ ನನ್ನ ಗ್ರಾಹಕರು ತಮ್ಮ ರದ್ದಿ ಎಷ್ಟು ತೂಕವಿದೆ ಎಂದು ಸಹ ನೋಡಬಹುದು. ಇದು ನಂಬಿಕೆಯನ್ನು ಬೆಳೆಸುತ್ತದೆ,” ಎಂದು ಅವರು ಹೇಳುತ್ತಾರೆ. ಈ ಮಾಪಕವು 150 ಕಿಲೋಗ್ರಾಂಗಳಷ್ಟು ವಸ್ತುಗಳನ್ನು ತೂಗಬಲ್ಲದು ಮತ್ತು ಹಳೆಯ ಸ್ಟೂಲ್ ಮೇಲೆ ಭಾಗಶಃ ಸಮತೋಲನದಲ್ಲಿರುತ್ತದೆ.‌

ಚವಾಣ್ ತನ್ನ ಗ್ರಾಹಕರೊಂದಿಗೆ ಮಾತನಾಡಲು ಅಂಗಡಿಯ ಮುಂಭಾಗದಲ್ಲಿ ಕುಳಿತುಕೊಳ್ಳುತ್ತಾರೆ. “ನಾವು ರದ್ದಿ – ಹಳೆಯ ವೃತ್ತಪತ್ರಿಕೆಗಳು, ಪುಸ್ತಕಗಳು ಮತ್ತು ಹಾಲು [ಪ್ಲಾಸ್ಟಿಕ್] ಪ್ಯಾಕೇಟುಗಳನ್ನು ಸಂಗ್ರಹಿಸುತ್ತೇವೆ. ಪ್ರಸ್ತುತ, ನಾನು ಹಳೆಯ ದಿನಪತ್ರಿಕೆಗಳು ಮತ್ತು ಹಾಲಿನ ಕವರುಗಳಿಗೆ ಪ್ರತಿ ಕಿಲೋಗ್ರಾಂಗೆ 20 ರೂಪಾಯಿಗಳನ್ನು ಮತ್ತು ಒಂದು ಕಿಲೋಗ್ರಾಂ ಹಳೆಯ ಪುಸ್ತಕಗಳಿಗೆ 10 ರೂಪಾಯಿಗಳನ್ನು ನೀಡುತ್ತೇನೆ,” ಎಂದು ಅವರು ಹೇಳುತ್ತಾರೆ. ಅವರ ಖರೀದಿ ದರವು ಅವರು ಅವುಗಳನ್ನು ಮಾರ್ಕೆಟ್ ಯಾರ್ಡ್ ಮತ್ತು ಭವಾನಿ ಪೇಟೆಯಂತಹ ನಗರದ ಹಳೆಯ ಭಾಗಗಳಲ್ಲಿನ ದೊಡ್ಡ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದಾಗ ಅವರು ಅವುಗಗೆ ಏನು ಬೆಲೆ ಪಡೆಯಬಹುದು ಎಂಬುದರ ಮೇಲೆ ಅವಲಂಬಿತವಾಗಿದೆ. ವಾರಕ್ಕೊಮ್ಮೆ ಈ ಪ್ರದೇಶಗಳಿಗೆ ರದ್ದಿಯನ್ನು ಸಾಗಿಸಲು ಸಣ್ಣ ಟೆಂಪೋದ ಸೇವೆಗಳನ್ನು ಬಳಸುತ್ತಾರೆ.

ಅವರು ಎಷ್ಟು ಲಾಭವನ್ನು ಗಳಿಸುತ್ತಾರೆ ಎಂದು ಅವರನ್ನು ಕೇಳಿದಾಗ, “ನಾನು ನನ್ನ ಗ್ರಾಹಕರಿಗೆ ರದ್ದಿಗೆ ಕೊಡುವುದಕ್ಕಿಂತ ಪ್ರತಿ ಕಿಲೋಗ್ರಾಂಗೆ ಐದು ರೂಪಾಯಿ ಹೆಚ್ಚು ಪಡೆಯುತ್ತೇನೆ,” ಎಂದು ಅವರು ಹೇಳುತ್ತಾರೆ.

ಮಾರ್ಚ್ 2020ರಲ್ಲಿ ಮೊದಲ ಲಾಕ್ಡೌನ್ ಸಮಯದಲ್ಲಿ, ಪುಣೆಯಲ್ಲಿ ದಿನಪತ್ರಿಕೆಗಳ ಮೂಲಕ ವೈರಸ್ ಹರಡುವ ಬಗ್ಗೆ ವದಂತಿಗಳು ಹರಡಿದ್ದರಿಂದ ಪುಣೆಯ ದಿನಪತ್ರಿಕೆಗಳು ಮುದ್ರಣವನ್ನು ನಿಲ್ಲಿಸಿದ್ದವು. “ಇದು ಪತ್ರಕರ್ತರು ಮತ್ತು ಇತರ ಸಿಬ್ಬಂದಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಜನರು ಮಾತನಾಡುತ್ತಿದ್ದರು, ಆದರೆ ಅದು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಯಾರೂ ಯೋಚಿಸಲಿಲ್ಲ,” ಎಂದು ಚವಾಣ್ ಹೇಳುತ್ತಾರೆ.

ಕೆಲವು ವಾರಗಳ ನಂತರ ಮುದ್ರಿತ ವೃತ್ತಪತ್ರಿಕೆಗಳು ಮತ್ತೆ ಚಲಾವಣೆಗೆ ಬಂದವು, ಆದರೆ ವೃತ್ತಪತ್ರಿಕೆಗಳಿಂದ ವೈರಸ್ ಹರಡುವ ಭಯವು ಇನ್ನೂ ಮುಂದುವರಿಯಿತು. “ನನಗೆ ಸಿಗುವ ಹಳೆಯ ವೃತ್ತಪತ್ರಿಕೆಗಳ ಪ್ರಮಾಣವು ಸುಮಾರು 70 ಪ್ರತಿಶತದಷ್ಟು ಕಡಿಮೆಯಾಗಿದೆ,” ಎಂದು ಅವರು ಹೇಳುತ್ತಾರೆ. ಅವರು ಈಗ ಉತ್ತಮ ದಿನದಂದು ಸುಮಾರು 50 ಗ್ರಾಹಕರನ್ನು ಪಡೆಯಬಹುದು, ಆದರೆ ಕೋವಿಡ್-ಪೂರ್ವ ಸಮಯದಲ್ಲಿ ಈ ಸಂಖ್ಯೆ ಹೆಚ್ಚಿತ್ತು.

ಮಾರ್ಚ್ 2020ರಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಿದಾಗ, ಎಲ್ಲಾ ಅಂಗಡಿಗಳನ್ನು ಮುಚ್ಚಬೇಕಾಯಿತು; 2020ರ ಮಾರ್ಚ್‌ ತಿಂಗಳಿನಿಂದ ಆಗಸ್ಟ್ ತನಕ ಚವಾಣ್ ಅವರ ರದ್ದಿ ಅಂಗಡಿಯನ್ನು ಮುಚ್ಚಲಾಗಿತ್ತು. ಫೋಟೋ: ಸಾನ್ವಿತಿ ಅಯ್ಯರ್

ಇಬ್ಬರು ವ್ಯಕ್ತಿಗಳು ಮಧ್ಯಮ ಗಾತ್ರದ ಹಳೆಯ ವೃತ್ತಪತ್ರಿಕೆಗಳ ಬಂಡಲ್ ಹಿಡಿದು ಸ್ಕೂಟರಿನಲ್ಲಿ ಅಂಗಡಿಗೆ ಬಂದರು. ಚವಾಣ್ ಗಂಟನ್ನು ತೆಗೆದುಕೊಂಡು ಅದನ್ನು ಯಂತ್ರದ ಮೇಲೆ ತೂಗಿ, ತಾನು ಪಾವತಿಸಬೇಕಾದ ಬಾಕಿಯನ್ನು ಲೆಕ್ಕ ಹಾಕಿ – ಮೂರು ಕಿಲೋಗ್ರಾಂಗಳಷ್ಟು ಹಳೆಯ ವೃತ್ತಪತ್ರಿಕೆಗಳಿಗೆ 60 ರೂ. ಪಾವತಿಸಿದರು.

ಕಳೆದ 20-25 ವರ್ಷಗಳಿಂದ ತನ್ನ ತಂದೆ ಅಂಗಡಿಯನ್ನು ನಿರ್ವಹಿಸುವುದನ್ನು ನೋಡುತ್ತಾ ಬೆಳೆದು ನಂತರ ಅವರೊಂದಿಗೆ ಕೆಲಸ ಮಾಡಿದ ದಿನಗಳನ್ನು ಚವಾಣ್ ನೆನಪಿಸಿಕೊಳ್ಳುತ್ತಾರೆ. ಅವರ ತಂದೆ ಕೆಲವು ತಿಂಗಳ ಹಿಂದೆ ಕೋವಿಡ್‌ ರೋಗಕ್ಕೆ ಬಲಿಯಾದರು. ಚವಾಣ್ ಈಗಾಗಲೇ ಕಳೆದ ವರ್ಷದಲ್ಲಿ ಎರಡು ಬಾರಿ ಕೊರೋನಾ ಪಾಸಿಟಿವ್‌ ಆಗಿದ್ದರು. “ನಾನು ಎರಡನೇ ಬಾರಿ ಗಂಭೀರ ಸ್ಥಿತಿಯಲ್ಲಿದ್ದೆ. ನಾನು ತುಂಬಾ ಹತಾಶನಾಗಿದ್ದೆ,” ಎಂದು ಅವರು ಹೇಳಿದರು, “ನಾನು ಎರಡು ಬಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಚಿಕಿತ್ಸೆಗಾಗಿ ಯಾವುದೇ ಶುಲ್ಕವನ್ನು ಭರಿಸಬೇಕಾಗಿ ಬರಲಿಲಿಲ್ಲ. ಈ ವಿಷಯದಲ್ಲಿ ನಾನು ಅದೃಷ್ಟಶಾಲಿ,” ಎಂದು ಅವರು ಹೇಳಿದರು. ಅವರು ತನ್ನ ತಾಯಿ, ಹೆಂಡತಿ, ಸಹೋದರ ಮತ್ತು ಚಿಕ್ಕ ಮಗನೊಂದಿಗೆ ಹತ್ತಿರದ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಾರೆ.

ಸುಮಾರು 40 ವರ್ಷಗಳ ಹಿಂದೆ ಈ ಅಂಗಡಿಯನ್ನು ಸ್ಥಾಪಿಸಿದ ತನ್ನ ದಿವಂಗತ ತಂದೆಯ ಬಗ್ಗೆ ಮಾತನಾಡಲು ಅವರಿಗೆ ಕಷ್ಟವಾಗುತ್ತಿತ್ತು. “ನನ್ನ ತಂದೆ ಸುಮಾರು 60 ವರ್ಷಗಳ ಹಿಂದೆ ಈ ಮನೆಗೆ ಬಂದರು, ನಾನು ನನ್ನ ಇಡೀ ಬಾಲ್ಯವನ್ನು ಈ ಮನೆಯಲ್ಲಿ (ಅವರು ಈಗ ವಾಸಿಸುತ್ತಿರುವ) ಕಳೆದಿದ್ದೇನೆ. ನನ್ನ ತಂದೆಗೆ ಪೂರ್ಣ ಸಮಯ ರದ್ದಿ ವ್ಯವಹಾರದಲ್ಲಿ ಸಹಾಯ ಮಾಡಲು ಪ್ರಾರಂಭಿಸುವ ಮೊದಲು ನಾನು 10ನೇ ತರಗತಿಯವರೆಗೆ ಓದಿದೆ,” ಎಂದು ಚವಾಣ್ ಹೇಳುತ್ತಾರೆ, ಅವರು ಹೊಸದಾಗಿ ಪಡೆದ ಹಳೆಯ ಕಾಗದಗಳ ರಾಶಿಯನ್ನು ಕಟ್ಟುತ್ತಾ ಮಾತನಾಡುತ್ತಿದ್ದರು.

ಕೆಲವು ವರ್ಷಗಳ ನಂತರ, ಇನ್ನೂ ಹದಿಹರೆಯದವರಾಗಿದ್ದಾಗ, ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ನಿರ್ವಹಿಸುವ ಕಸ ಸಂಗ್ರಹಿಸುವ ಟ್ರಕ್ಕಿನ ಚಾಲಕನಾಗಿ ಚವಾಣ್ ತನ್ನ ಎರಡನೇ ಕೆಲಸವನ್ನು ಕೈಗೆತ್ತಿಕೊಂಡರು. ತ್ಯಾಜ್ಯವನ್ನು ಸಂಗ್ರಹಿಸುವ ಅವರ ವ್ಯಾಪ್ತಿಯ ಪ್ರದೇಶವು ಪುಣೆಯ ಶಿವಾಜಿನಗರದ ಮಾಡೆಲ್ ಕಾಲೋನಿಯ ಸುತ್ತಲೂ ಇದೆ.

ಚವಾಣ್ ತನ್ನ ಎರಡನೇ ಉದ್ಯೋಗ ಮಾಡುತ್ತಿರುವಾಗ ಅವರ ತಮ್ಮ ಅಂಗಡಿಯನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ. “ನಾನು ಬೆಳಿಗ್ಗೆ ಸಮಯದಲ್ಲಿ ಕಸ ಸಂಗ್ರಹಣೆ ಮಾಡುತ್ತೇನೆ. ಮಧ್ಯಾಹ್ನ 2ರಿಂದ ರಾತ್ರಿಯವರೆಗೆ ರಡ್ಡಿ ಅಂಗಡಿಯಲ್ಲಿ ಕೆಲಸ ಮಾಡುತ್ತೇನೆ, ಕೆಲವೊಮ್ಮೆ ರಾತ್ರಿ 10 ಗಂಟೆಯವರೆಗೆ ಕೆಲಸ ಮಾಡುತ್ತೇನೆ,” ಎಂದು ಅವರು ಹೇಳಿದರು.

ಪಿಎಂಸಿಯೊಂದಿಗಿನ ತನ್ನ ಕೆಲಸವು ಎರಡು ಬಾರಿ ತನ್ನನ್ನು ಎರಡು ಬಾರಿ ವೈರಸ್‌ ಸೋಂಕಿಗೆ ಒಳಗಾಗುವಂತೆ ಮಾಡಿದೆಯೆನ್ನುವುದು ಅವರ ಅರಿವಿಗೆ ಬಂದಿದೆ. “ಕೆಲಸವು ಕೆಲವೊಮ್ಮೆ ಅಪಾಯಕಾರಿ ತ್ಯಾಜ್ಯವನ್ನು ನಿರ್ವಹಿಸುವುದನ್ನು ಒಳಗೊಂಡಿರುತ್ತದೆ,” ಎಂದು ಅವರು ಹೇಳುತ್ತಾರೆ, ಪಿಎಂಸಿ ರಬ್ಬರ್ ಕೈಗವಸುಗಳು ಮತ್ತು ಸ್ಯಾನಿಟೈಸರ್‌ಗಳಂತಹ ಕೆಲವು ಸುರಕ್ಷತಾ ಸಾಧನಗಳನ್ನು ಒದಗಿಸುತ್ತದೆ, ಆದರೆ “ಅವು ಗುಣಮಟ್ಟ ಅಥವಾ ಪ್ರಮಾಣದಲ್ಲಿ ಸಾಕಷ್ಟು ಇರಲಿಲ್ಲ,” ಎಂದು ಅವರು ಹೇಳುತ್ತಾರೆ.

ಚವಾಣ್ ಈಗ ಚೇತರಿಸಿಕೊಂಡಿದ್ದರೂ, ಜನರು ಇನ್ನೂ ಎಚ್ಚರಿಕೆಯಿಂದ ಅವರ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳುತ್ತಾರೆ. “ಅವರು ಇನ್ನೂ ನನ್ನ ಹತ್ತಿರ ಬರಲು ಹೆದರುತ್ತಾರೆ; ನಾನು ವೈರಸ್ ಹರಡುತ್ತೇನೆ ಎಂದು ಅವರು ಭಾವಿಸುತ್ತಾರೆ. ಎಲ್ಲವೂ ಮೊದಲಿನಂತಾಗಬೇಕೆಂದು ನಾನು ಬಯಸುತ್ತೇನೆ,” ಎಂದು ಅವರು ಹೇಳುವ ಹೊತ್ತಿಗೆ, ಇನ್ನೊಬ್ಬ ಗ್ರಾಹಕ ಪತ್ರಿಕೆಗಳ ಸಣ್ಣ ರಾಶಿಯೊಂದಿಗೆ ಅಲ್ಲಿಗೆ ಬಂದರು.

Editor's note

ಸಾನ್ವಿತಿ ಅಯ್ಯರ್ ಪುಣೆಯ ಫ್ಲೇಮ್ ವಿಶ್ವವಿದ್ಯಾಲಯದ ಮೂರನೇ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ. ಪರಿ ಎಜುಕೇಶನ್ ಜೊತೆಗಿನ ತನ್ನ ಇಂಟರ್ನ್ ಶಿಪ್ ಭಾಗವಾಗಿ ಅವರುಸ್ಟೋರಿಯನ್ನು ಬರೆದರು. ಅವರು 'ನ್ಯೂಸ್ ರೂಂಗಳ ಆಚೆಗಿನ ಸುದ್ದಿ ಚಕ್ರದಲ್ಲಿ ಕೋವಿಡ್‌ ಪಡೆದುಕೊಂಡ ಮಾನವ ವೆಚ್ಚವನ್ನು ಎತ್ತಿ ತೋರಿಸುವ ವಿಷಯಗಳನ್ನು' ಆಯ್ಕೆ ಮಾಡಿಕೊಂಡರು. ಅವರು ಹೇಳುವುದು: "ಪರಿ ಎಜುಕೇಶನ್‌ ಜೊತೆ ಕೆಲಸ ಮಾಡುವ ಮೂಲಕ ಇಡೀ ಪ್ರಕ್ರಿಯೆಯನ್ನು ಸಹಾನುಭೂತಿಯ ಮಸೂರದ ಮೂಲಕ ನೋಡಲು ನನಗೆ ಅವಕಾಶ ಸಿಕ್ಕಿತು. ವಿವಿಧ ವೃತ್ತಿಗಳನ್ನು ದಾಖಲಿಸುವ ಪ್ರಾಮುಖ್ಯತೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಮತ್ತು ಇದಲ್ಲದೆ ಉತ್ತಮ ಛಾಯಾಚಿತ್ರಗಳು ಇದನ್ನು ಮಾಡಲು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಸಹ ನಾನು ಅರ್ಥಮಾಡಿಕೊಂಡಿದ್ದೇನೆ."

ಅನುವಾದ: ಶಂಕರ. ಎನ್. ಕೆಂಚನೂರು

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com -ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.