
48 ವರ್ಷದ ಅಜಿತಾಗೆ ಚಾಕುವಿನಲ್ಲೇ ಬುಟ್ಟಿಯನ್ನು ನೇಯಬೇಕಾಗಿತ್ತು. ಅವರು ಬಿದರಿನ ಕೆಲವು ಎಳೆಗಳನ್ನು ಪರಸ್ಪರ ಸರಿಯಾದ ಕೋನದಲ್ಲಿ ಜೋಡಿಸಿದರು ಮತ್ತು ನಂತರ ಒಂಟಿ ಎಳೆಯ ಮೂಲಕ ಅದನ್ನು ನೇಯತೊಡಗಿದರು. ತಾನು ತಯಾರಿಸುತ್ತಿರುವ ಉತ್ಪನ್ನದ ವೃತ್ತಕಾರವು ಸಿಗುವ ತನಕವೂ ಅವರು ಮುಂದುವರಿಸಿದರು.
“ನಾನು ಈ ಕಲೆಯನ್ನು 16ನೇ ವಯಸ್ಸಿನಲ್ಲಿ ಕಲಿಯಲು ಆರಂಭಿಸಿದೆ,” ಎನ್ನುತ್ತಾರೆ ಅಜಿತಾ. ತ್ರಿಶೂರ್ ಜಿಲ್ಲೆಯ ಚಾಲಕ್ಕುಡಿ ಬ್ಲಾಕ್‌ನ ಕುಟ್ಟಿಚಿರಾ ಗ್ರಾಮದಲ್ಲಿ ವಾಸಿಸುವ ಅಜಿತಾ ಅವರ ಕುಟುಂಬದಲ್ಲಿ ತಂದೆ ಕೃಷಿ ಕೂಲಿಯಾಗಿ ದುಡಿಯುತ್ತಿದ್ದ ಕಾರಣ ಅವರ ಗಳಿಕೆ ಸಂಸಾರ ನಡೆಸಲು ಸಾಕಾಗುತ್ತಿರಲಿಲ್ಲ, ಈ ಕಾರಣ ಅಜಿತಾ 10ನೇ ತರಗತಿಯಲ್ಲೇ ಶಾಲೆಯನ್ನು ಬಿಡಬೇಕಾಯಿತು.

ಅಜಿತಾ ಅವರು ತಮ್ಮ ಪತಿಯ ನೆರವಿನಿಂದ ಇಂದು ಬಿದಿರಿನ ವಿಭಿನ್ನ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ, ಅವುಗಳಲ್ಲಿ ಲ್ಯಾಂಪ್ ಶೇಡ್, ಪೆನ್ ಸ್ಟ್ಯಾಂಡ್, ಬಿದಿರಿನಿಂದ ತಯಾರಿಸಿ ಹೂವುಗಳು, ಬಿದಿರಿನಲ್ಲಿ ನೇಯ್ದ ಗ್ಲಾಸುಗಳು, ಫ್ಯಾನ್ ಮತ್ತು ಬುಟ್ಟಿಗಳು ವಿಭಿನ್ನ ಶೈಲಿ ಹಾಗೂ ಗಾತ್ರಗಳಲ್ಲಿ ತಯಾರಿಸುತ್ತಿದ್ದಾರೆ.
“ಬುಟ್ಟಿಯೊಂದನ್ನು ನೇಯಲು ಒಂದೂವರೆ ದಿನ ತಲುತ್ತದೆ. ಪೂರ್ಣಗೊಳಿಸಲು ಒಂದು ದಿನ ಮತ್ತು ಉತ್ತಮ ಬಿದಿರಿನ ಎಳೆಗಳನ್ನು ಆಯ್ಕೆ ಮಾಡಲು ಮತ್ತು ಮೃದುಗೊಳಿಸಲು ಅರ್ಧ ದಿನ ತಗಲುತ್ತದೆ- ಹೆಚ್ಚು ಎಳೆಗಳನ್ನು ತೆಗೆದಷ್ಟೂ, ಹೆಚ್ಚು ಹೊಳಪಿನ ಮೇಲ್ಭಾಗ ಸಿಗುತ್ತದೆ,” ಎಂದು ಅವರು ವಿವರಿಸಿದರು. ಲ್ಯಾಂಪ್‌ಶೇಡ್ ಒಂದನ್ನು ಸಿದ್ಧಗೊಳಿಸಲು ಎರಡು ದಿನ ತಗಲುತ್ತದೆ. 8 ರಿಂದ 10 ಹೂವುಗಳ ಗುಚ್ಛ ಅಥವಾ ಐದು ಪೆನ್ ಸ್ಟ್ಯಾಂಡ್‌ಗಳನ್ನು ಒಂದೇ ದಿನದಲ್ಲಿ ಮಾಡಬಹುದು. ಬಾಟಲಿಯ ಸುತ್ತ ಬಿದಿರನ್ನು ನೇಯುವುದು ಒಂದು ವಿಸ್ತೃತವಾದ ಪ್ರಕ್ರಿಯೆ, ಅದಕ್ಕೆ ಬಹುತೇಕ ಎರಡು ದಿನ ತಗಲುತ್ತದೆ.








ತಾವು ತಯಾರಿಸಿರುವ ಬಿದಿರು ಉತ್ಪನ್ನಗಳನ್ನು ತಮ್ಮ ಸುತ್ತಲೂ ಹರಡಿಕೊಂಡಿದ್ದು ಮತ್ತು ಅವುಗಳ ಮೇಲೆ ಹೊಳಪು ಇದ್ದಿತ್ತು. “ಬಿದಿರಿನಲ್ಲಿ ಆಗಲೇ ಹೊಳಪು ಇರುತ್ತದೆ, ಅದು ಅವು ಎಷ್ಟು ಒಣಗಿವೆ ಎಂಬುದನ್ನು ಆಧರಿಸಿರುತ್ತದೆ. ಹೆಚ್ಚು ಒಣಗಿದ್ದು, ಉತ್ತಮ.” ಎಂದು ಅವರು ಹೇಳಿದರು. ದೀರ್ಘ ಅವಧಿಯಲ್ಲಿ ಬಿದಿರನ್ನು ನಾಶ ಮಾಡುವುದರಿಂದ ವಾರ್ನಿಷ್ ಅನ್ನು ಅಜಿತಾ ಮಿತವಾಗಿ ಬಳಸುತ್ತಾರೆ.
ಚಾಲಕುಡಿಯಲ್ಲಿರುವ ಬಿದಿರು ನಿಗಮದ ಡಿಪೋದಲ್ಲಿ ಬಿದಿರು ಸಿಗುತ್ತದೆ, ಇದು ಅಜಿತಾ ಅವರ ಮನೆಯಿಂದ 10ಕಿಮೀ ದೂರದಲ್ಲಿದೆ. ತಿಂಗಳಿಗೊಮ್ಮೆ ಅಜಿತಾ ಅವರು ಅಲ್ಲಿಗೆ ಹೋಗಿ ಬಿದಿರು ತರುತ್ತಿದ್ದರು, ಇಲ್ಲವಾದಲ್ಲಿ ನಿಗಮದವರು ಇವರ ಮನೆಯ ಹತ್ತಿರ ಹಾದುಹೋಗುವಾಗ ನೀಡುತ್ತಿದ್ದರು. ಅವರು ತಿಂಗಳಿಗೊಮ್ಮೆ ಅಂದಾಜು 10 ಮೀ. ಉದ್ದದ, ಪ್ರತಿಯೊಂದಕ್ಕೆ 30 ರೂ. ಬೆಲೆಯ 100 ಎಳೆಗಳನ್ನು ಖರಿದಿಸುತ್ತಿದ್ದರು. ನಿಗಮದಿಂದ ಎಳೆಗಳನ್ನು ತರುವವರು ಅಜಿತಾಗೆ ಸಂಗ್ರಹಣಾ ಕೊಠಡಿಯಲ್ಲಿ ಇರಿಸಲು ನೆರವು ಮಾಡುತ್ತಾರೆ, ಏಕೆಂದರೆ ಅವುಗಳನ್ನು ಮಳೆಯಿಂದ ರಕ್ಷಿಸಬೇಕಾದ ಅಗತ್ಯವಿದೆ.


2015ರಲ್ಲಿ ಅಜಿತಾ ಅವರು ತಮ್ಮ ಕಂಪೆನಿಯನ್ನು ಶ್ರೀದೀಪಂ ಕರಕುಶಲೋದ್ಯಮ ಎಂದು ನೋಂದಾಯಿಸಿದರು. ಅವರ ಪತಿ ಮತ್ತು ಮಗ (ಸ್ಕೂಟರ್ ಮೆಕ್ಯಾನಿಕ್) ಸಿದ್ಧಗೊಂಡ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಲಸದಲ್ಲಿ ನೆರವಾದರು ಮತ್ತು ಮಗಳು ಬೇರೆ ಕಡೆ ಕೆಲಸ ಮಾಡುತ್ತಿದ್ದರೂ ತಮಗೆ ಸಮಯ ಸಿಕ್ಕಾಗ ನೆರವಾಗುತ್ತಿದ್ದರು.
“ಸಾಂಕ್ರಾಂಮಿಕ ಸಿಲುಕಿದ ಕೂಡಲೇ ಬಿದಿರು ಉದ್ದಿಮೆಯಲ್ಲಿ ತೊಡಗಿದ್ದ ನಾವೆಲ್ಲ ಬಹಳ ದುಃಸ್ಥಿತಿಯನ್ನು ತಲುಪಿದೆವು. ನಮ್ಮ ಆದಾಯವು ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳ ಸಂಘಟಕರು ಮತ್ತು ಹೊಟೇಲುಗಳಿಗೆ ಪೂರೈಸುವುದನ್ನೇ ಅವಲಂಬಿಸಿತ್ತು,” ಎನ್ನುತ್ತಾರೆ ಅಜಿತಾ. ಕೇರಳ ಮೂಲದ ಮನೋರಮಾ ಫಿಯೇಸ್ಟಾ ಮತ್ತು ಬ್ಯಾಂಬೂ ಮಿಷನ್ ಆತಿಥ್ಯದಲ್ಲಿ ನಡೆಯುವ ಬಿದಿರು ಉತ್ಸವದಲ್ಲಿ ರಾಜ್ಯಾದ್ಯಂತ ಮಾರಾಟಕ್ಕೆ ಅವಕಾಶ ಸಿಗುತ್ತಿತ್ತು, ಆದರೆ 2020ರ ಲಾಕ್‌ಡೌನ್‌ನಿಂದಾಗಿ ಅವರು ಕೂಡ ರದ್ದುಗೊಳಿಸಿದರು. “ಸಾಂಕ್ರಾಮಿಕಕ್ಕೆ ಮೊದಲು ನಾನು ತಿಂಗಳಿಗೆ 30,000 ರಿಂದ 35,000 ರೂ. ಲಾಭ ಗಳಿಸುತ್ತಿದ್ದೆ. ಈಗ 20 -30 ಪ್ರತಿಶತ ಕಡಿಮೆಯಾಗಿದೆ,” ಎಂದು ಮುಂದುವೆರೆದು ಹೇಳುತ್ತಾರವರು.





ತಮ್ಮದೇ ಆದ ಕಂಪೆನಿಯನ್ನು ಆರಂಭಿಸುವುದಕ್ಕೆ ಮೊದಲು ಅಜಿತಾ ಅವರು 20 ವರ್ಷಗಳ ಕಾಲ ಚಾಲಕುಡಿ ಮೂಲದ ಸರಾಫಿಕ್ ಹ್ಯಾಂಡಿಕ್ರಾಫ್ಟ್ಸ್ ಎಂಬ ಸಹಕಾರಿ ಸಂಘದಲ್ಲಿ ಕೆಲಸ ಮಾಡಿದ್ದರು. ಇದು ಬಿದಿರು ಉತ್ಪನ್ನಗಳಾದ ಬುಟ್ಟಿ, ಟ್ರೈ ಮತ್ತು ಲ್ಯಾಂಪ್‌ಶೇಡ್‌ಗಳನ್ನು ತಯಾರಿಸುತ್ತಿತ್ತು.
ಇ-ಕಾಮರ್ಸ್ ವೇದಿಕೆಗಳು ಹಠಾತ್ ಬೆಳವಣಿಕೆ ಕಂಡಿರಬಹುದು, ಆದರೆ ಅಜಿತಾ ಆ ಬಗ್ಗೆ ಸ್ವಲ್ಪ ಸಂಶಯವಿದೆ ಮತ್ತು ಅವುಗಳು ನನ್ನ ಉತ್ಪನ್ನಗಳನ್ನು ಸರಿಯಾಗಿ ನೋಡಿಕೊಂಡಿಲ್ಲವೆಂಬ ಅನುಭವ ಅವರಿಗೆ, “ನನ್ನ ಉತ್ಪನ್ನಗಳು ಬಹಳ ತೆಳುವಾದ ಹಾಗೂ ನಾಜೂಕಿನಿಂದ ಕೂಡಿರುವವುಗಳು,” ಎಂದಿರುವ ಅವರು, ಬಿದಿರಿನ ಎಳೆಯೊಂದನ್ನು ತೆಗೆದು ಬಾಗಿಸಿ ಅದು ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ತೋರಿಸಿದರು. “ತಳದಲ್ಲಿ ಉತ್ತಮ ರೀತಿಯಲ್ಲಿ ಬಲಿಷ್ಠವಾಗಿದ್ದರೂ ಸಮರ್ಪಕ ರೀತಿಯಲ್ಲಿ ನೋಡಿಕೊಳ್ಳದಿದ್ದರೆ ಅದು ಹಾಳಾಗುವುದು,” ಎಂದು ಅವರು ವಿವರಿಸಿದರು. “ನನಗೆ ಯಾವುದೇ ಮೂಲಗಳಿಲ್ಲ ಅಥವಾ ಸಮಾಜದಿಂದ ದೊಡ್ಡ ಪ್ರಮಾಣದಲ್ಲಿ ಬೆಂಬಲವಿಲ್ಲ, ಹಾಳಾದ ಉತ್ಪನ್ನಗಳಿಂದ ಆಗುವ ನಷ್ಟ ನನ್ನ ಗಳಿಕೆಗೆ ಹೊಡೆಬೀಳಲಿದೆ. ಆದ್ದರಿಂದ ನನ್ನ ಉತ್ಪನ್ನಗಳು ಹಾಳಾಗುವುದಕ್ಕೆ ಬಿಡುವುದಿಲ್ಲ,” ಎಂದರು.
ತಾನು ಸಿದ್ಧಪಡಿಸಿರುವ ಉತ್ಪನ್ನಗಳ ಬಗ್ಗೆ ದೃಷ್ಟಿಬೀರಿದ ಅಜಿತಾ, “ಈ ಕೆಲಸವನ್ನು ಮಾಡುವಾಗ ನಾನು ಬೇರೆ ಕಡೆ ಕೆಲಸ ಮಾಡಿದ್ದಕ್ಕೆ ಸಿಗುವಷ್ಟು ಗಳಿಕೆ ಸಿಗುತ್ತದೆ ಎಂದು ಊಹಿಸಿರಲಿಲ್ಲ. ನಾನು ಬದ್ಧತೆ ಮತ್ತು ಪ್ರೀತಿಯಿಂದ ಈ ಕೆಲಸ ಮತ್ತು ಕಲೆಯನ್ನು ಮಾಡುತ್ತಿದ್ದೇನೆ,” ಎಂದರು.
ಲಾಕ್‌ಡೌನ್ ಸಂದರ್ಭದಲ್ಲಿನ ಬದುಕಿನ ಕುರಿತಾದ ಸರಣಿ ಲೇಖನಗಳಲ್ಲಿ ಇದು ಒಂದು ಕತೆ. PARI ಶಿಕ್ಷಣ ತಂಡವು ಈ ಸಹಯೋಗವನ್ನು ಮುನ್ನಡೆಸಿರುವುದಕ್ಕಾಗಿ ಮುಂಬಯಿಯ ಸೇಂಟ್ ಜೇವಿಯರ್ ಕಾಲೇಜು (ಸ್ವಾಯತ್ತ) ಇಲ್ಲಿನ ಪ್ರಾಧ್ಯಾಪಕರಾದ ಅಕ್ಷರಾ ಪಾಠಕ್, ಜಾಧವ್ ಮತ್ತು ಪೆರ್ರಿ ಸುಬ್ರಹ್ಮಣ್ಯಮ್ ಅವರಿಗೆ ಧನ್ಯವಾದ ಹೇಳುತ್ತಿದೆ.
Editor's note
ಡಾನ್ ಫಿಲಿಪ್ ಅವರು ಮುಂಬಯಿಯ ಸೇಂಟ್ ಜೇವಿಯರ್ಸ್ ಕಾಲೇಜು (ಸ್ವಾಯತ್ತ) ಇಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಎರಡನೇ ವರ್ಷದ ವಿದ್ಯಾರ್ಥಿ. ಕಾಲೇಜಿ ಶಿಕ್ಷಣದ ಜತೆಯಲ್ಲಿ ಅವರು PARI ಶಿಕ್ಷಣದ ಲಾಕ್‌ಡೌನ್ ಸಂದರ್ಭದಲ್ಲಿ ಜೀವವ ಕುರಿತ ಸಹಯೋಗದಲ್ಲಿ ಸೇರಿಕೊಂಡು, ಕೇರಳದಲ್ಲಿ ಬಿದಿರು ಕುಶಲಕರ್ಮಿಗಳ ಬದುಕಿನ ಮೇಲಾದ ಪರಿಣಾಮಗಳ ಬಗ್ಗೆ ಬರೆಯಲು ಆಯ್ಕೆ ಮಾಡಿಕೊಂಡಿದ್ದಾರೆ. “PARI ಅವರ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಸಾಂಕ್ರಮಿಕ ಸಂದರ್ಭದಲ್ಲಿ ಸಣ್ಣಪ್ರಮಾಣದ ಉದ್ದಿಮೆದಾರರು ಮತ್ತು ಅವರು ಅನುಭವಸಿದ ಸಮಸ್ಯೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಸಾಧ್ಯವಾಯಿತು. ಅಜಿತಾ ಅವರ ಬದುಕನ್ನು ದಾಖಲೀಕರಿಸಿರುವುದಕ್ಕೆ ಪತ್ರಕರ್ತರ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ, ಸಂಕೀರ್ಣವಾದ ವಿಷಯವನ್ನು ಅಷ್ಟು ದಕ್ಷತೆಯಿಂದ ನಿರ್ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ,” ಎಂದಿದ್ದಾರೆ.
ಅನುವಾದ: ಸೋಮಶೇಖರ ಪಡುಕರೆ
ಸೋಮಶೇಖರ ಪಡುಕರೆ ಉಡುಪಿ ಮೂಲದ ಕ್ರೀಡಾ ಪತ್ರಕರ್ತರು. ಕಳೆದ 25 ವರ್ಷಗಳಿಂದ ಅವರು ವಿವಿಧ ಕನ್ನಡ ದಿನಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.