ಒಂದು ಹಣ್ಣು. ಮೂರು ಬಣ್ಣ. ಮೂರು ರುಚಿ: ಕಹಿ, ಸಿಹಿ ಮತ್ತು ಹುಳಿ.

“ಇದು ಗುಲಾಬಿ, ಕೆಂಪು ಮತ್ತು ಹಳದಿ ಬಣ್ಣದ ಹಣ್ಣುಗಳನ್ನು ಬಿಡುತ್ತದೆ. ಗುಲಾಬಿ ಬಣ್ಣದ ಮೂತಿಫಲ ಕಹಿಯಾಗಿರುತ್ತದೆ, ಕೆಂಪು ಬಣ್ಣದ್ದು ಸಿಹಿಯಾಗಿ ಮತ್ತು ಹಳದಿ ಬಣ್ಣದ್ದು ಹುಳಿ ಮಿಶ್ರಿತ ಸಿಹಿಯಾಗಿರುತ್ತದೆ,” ಎಂದರು ಕೇರಳದ ಇಡುಕ್ಕಿ ಜಿಲ್ಲೆಯ ವಣ್ಣಪ್ಪುರಂನ ರೈತರಾದ ಬೇಬಿ ಅಬ್ರಾಹಂ. “ಹುಳಿಯೊಂದಿಗೆ ಕಹಿಯೂ ಇದ್ದರೆ ಆ ಹಣ್ಣಿನಲ್ಲಿ ಹೆಚ್ಚು ಔಷಧೀಯ ಗುಣಗಳಿರುತ್ತವೆ. ಇದು ಸಕ್ಕರೆ ಕಾಯಿಲೆ ಇರುವವರಿಗೆ ಒಳ್ಳೆಯದು. ಆದಿವಾಸಿ ಜನರು ಇದನ್ನು ಹೊಟ್ಟೆ ಮತ್ತು ಗಂಟಲಿನ ಕಾಯಿಲೆಗಳ ಮದ್ದಿಗೆ ಬಳಸುತ್ತಾರೆ” ಎಂದರು.

ಈ ಹಣ್ಣಿಗೆ ಈ ಹೆಸರು – ಮೂತಿಫಲ – ಬರಲು ಕಾರಣ ಮೂತಿ (ಮಲಯಾಳಂ) ಅಂದರೆ ಕೆಳಗೆ ಮತ್ತು ಫಲ ಅಂದರೆ ಹಣ್ಣು, ಅಂದರೆ ಕೊಂಬೆಗಳಲ್ಲಿ ಮತ್ತು ಬುಡದಲ್ಲಿ ಕೈಗೆ ಎಟುಕುವಂತೆ ಕೆಳಗೆಯೇ ಹಣ್ಣು ಸಿಗುತ್ತದೆ. ಹಣ್ಣಿನ ಈ ಎದ್ದುಕಾಣುವ ಬಣ್ಣಗಳು ಕಾಡುಪ್ರಾಣಿಗಳನ್ನು ಕೈಬೀಸಿ ಕರೆಯುತ್ತವೆ. ಬೇಬಿಯವರು ಹೇಳುವಂತೆ ಕಾಡಿನಲ್ಲಿರುವ ಮೂತಿಫಲದ ಮರಗಳಲ್ಲಿ ಒಂದು ಹಣ್ಣೂ ಸಿಗುವುದಿಲ್ಲ – ಮಂಗಗಳು, ಕರಡಿಗಳು, ಆನೆಗಳು ಕೊನೆಗೆ ಆಮೆಗಳೂ ತಿನ್ನುತ್ತವೆ.

36 ವರುಷಗಳ ಕೆಳಗೆ ಪಶ್ಚಿಮ ಘಟ್ಟದ ಕಾಡುಗಳ ಬುಡಕಟ್ಟು ಸಮುದಾಯದ ಹಿರಿಯ ಮುಪಾನರೊಬ್ಬರಿಂದ ತಂದಿದ್ದ ಎರಡು ಸಸಿಗಳನ್ನು ಅವರ ಅಣ್ಣ 67ರ ಪ್ರಾಯದ ಅಬ್ರಾಹಂರಿಗೆ ಉಡುಗೊರೆಯಾಗಿ ಕೊಟ್ಟಿದ್ದರು. ಈಗ ಅವರ ಬಳಿ 200 ಕ್ಕಿಂತ ಹೆಚ್ಚು ಮರ ಮತ್ತು ಸಸಿಗಳಿವೆ. ಮೊದಲ ಜೋಡಿಯನ್ನು ತುಂಬಾ ಹತ್ತಿರದಲ್ಲಿ ಹಾಕಿದ್ದರಿಂದ ಅವುಗಳ ಬುಡಗಳೆರಡೂ ಒಂದರೊಳಗೊಂದು ಸೇರಿ ಒಂದೇ ಮರವಾಗಿಬಿಟ್ಟವು. ಆದ್ದರಿಂದ ಬೀಜಗಳನ್ನು ಎರಡು ಅಡಿ ಆಳಕ್ಕೆ, ಸಸಿಗಳ ಮಧ್ಯೆ 5 ಮೀ ಅಂತರವಿರುವಂತೆ ನೆಟ್ಟರೆ ಉತ್ತಮ ಇಳುವರಿ ಪಡೆಯಬಹುದು ಎನ್ನುತ್ತಾರೆ ಅಬ್ರಾಹಂ. ವರುಷದ ಯಾವ ತಿಂಗಳಲ್ಲಿ ಬೇಕಾದರೂ ಹಾಕಬಹುದು, ಆದರೆ ಮಳೆಗಾಲದಲ್ಲಿ ಹಾಕುವುದು ಉತ್ತಮ. “ಮೂರರಿಂದ ನಾಲ್ಕು ವರುಷಗಳಲ್ಲಿ ಹೂಬಿಡುತ್ತವೆ. ಪೂರ್ತಿ ಚೆನ್ನಾಗಿ ಬೆಳೆದ ಮರ ಸುಮಾರು 50 ಕಿಗ್ರಾಂ ಹಣ್ಣುಗಳನ್ನು ಕೊಡುತ್ತದೆ, ಚಿಕ್ಕ ಮರವಾದರೆ 15 ಕಿಗ್ರಾಂ ಕೊಡುತ್ತದೆ” ಎಂದರು ಅಬ್ರಾಹಂ.

ಅವರ ಒಂದು ಎಕರೆ ಭೂಮಿಯಲ್ಲಿ, ಅಬ್ರಾಹಂರವರು ರಬ್ಬರ್, ನೀಲಿಯಂತಹ ಹಣದ ಬೆಳೆಗಳು, ಮೂತಿಫಲ, ಮ್ಯಾಂಗೊಸ್ಟೀನ್, ರಾಂಬುಟಾನ್, ನಿಂಬೆ ಮತ್ತು ನೆಲ್ಲಿಯಂತಹ ಹಣ್ಣಿನ ಮರಗಳು, ಮರಗೆಣಸು, ಅರಿಶಿಣ ಮತ್ತು ಕೂವೆಯಂತಹ ಅಡುಗೆಗೆ ಬಳಸುವ ಗೆಡ್ಡೆಗಳು ಮತ್ತು ಜಾಯಿಕಾಯಿಯಂತಹ ಮಸಾಲೆಪದಾರ್ಥವನ್ನೂ ಬೆಳೆಯುತ್ತಿದ್ದಾರೆ. “ನನ್ನ ಮನೆಯವರು ಅಂದರೆ ನನ್ನ ಹೆಂಡತಿ ಮತ್ತು ಮಗ ಜೆರಿನ್ ಹಾಗೂ ಮಗಳು ಜೆಂತಿನಾ ಎಲ್ಲರೂ ಸೇರಿ ನನಗೆ ಬೇಸಾಯದಲ್ಲಿ ಸಹಾಯ ಮಾಡುತ್ತಾರೆ. ನಾವು ತೋಟದ ಕೆಲಸಕ್ಕೆ ಕೂಲಿಯವರನ್ನು ಕರೆಯುವುದಿಲ್ಲ. ನರ್ಸರಿಗೆ ಗುಡಾರ ಹಾಕುವುದರಿಂದ ಹಿಡಿದು ಜಮೀನಿನೊಳಗಿನ ಬಂಡೆಗಳನ್ನು ತೆಗೆಯುವ ಕೆಲಸಗಳನ್ನು ನಾವೇ ಮಾಡಿಕೊಳ್ಳುತ್ತೇವೆ” ಎಂದರು.

ಮೂತಿಫಲಕ್ಕೆ ಔಷಧೀಯ ಗುಣಗಳಿರುವುದರಿಂದ ಅಬ್ರಾಹಂರು ಅವುಗಳಿಗೆ ವರ್ಷಕ್ಕೆರಡು ಸಾರಿ, ಸಾಮಾನ್ಯವಾಗಿ ಸೆಪ್ಟೆಂಬರಿನಲ್ಲಿ ಸಾವಯವ ಗೊಬ್ಬರವನ್ನೇ ಹಾಕುತ್ತಾರೆ, “ನಾವು ಬಹುತೇಕ ಸಗಣಿ, ಎರೆಹುಳು ಕಾಂಪೋಸ್ಟ್ ಮತ್ತು ಕಡಲೆ ಹಿಂಡಿ – ಕಡಲೆಕಾಯಿಯಿಂದ ಎಣ್ಣೆ ತೆಗೆದ ಮೇಲೆ ಉಳಿಯುವ ಪದಾರ್ಥ- ಇವುಗಳನ್ನು ಬಳಸುತ್ತೇವೆ. ಮೂತಿಫಲದ ಮರ ಹೂಬಿಡಲು ಶುರುವಾಯಿತೆಂದರೆ ಅದಕ್ಕೆ ಹೆಚ್ಚು ನೀರು ಕೊಡಬೇಕಾಗುತ್ತದೆ, ಬೇಸಿಗೆಯಲ್ಲಿ ಮೂರುದಿನಕ್ಕೊಮ್ಮೆ ನೀರು ಬಿಡುತ್ತೇವೆ” ಎಂದರು, ಜೊತೆಗೆ ಬಾವಲಿಗಳಿಂದ ರಕ್ಷಣೆಗೆ ಮರದ ಸುತ್ತ ಬಲೆ ಹಾಕುತ್ತೇವೆಂದೂ ಹೇಳಿದರು.

ಅಬ್ರಾಹಂ ತಮ್ಮ ನರ್ಸರಿಯಲ್ಲಿ ಒಂದು ಜೊತೆ ಸಸಿಗಳಿಗೆ 250 ರೂಪಾಯಿಯಂತೆ ಮಾರುತ್ತಾರೆ. ಮೂತಿಫಲಕ್ಕೆ (ಲ್ಯಾಟಿನ್ ಹೆಸರು ಬಕಾರಿಯಾ ಕೋರ್ಟಲೆನ್ಸಿಸ್) ಇತರೆ ಸ್ಥಳಿಯ ಹೆಸರುಗಳೂ ಇವೆ: ಮೂತಿಕಾಯಿ, ಮೂತಿಹುಳಿ ಮತ್ತು ಮೆರಟಾಕ. ಒಮ್ಮೆ ಕೊಯ್ದರೆ, ಎರಡು ತಿಂಗಳವರೆಗೂ ಹಾಳಾಗುವುದಿಲ್ಲ, ಆದರೆ ಒಳಗಿನ ತಿರುಳು ಕಡಿಮೆಯಾಗುತ್ತದೆ. ಸ್ಥಳೀಯರು ಅದರ ಹಣ್ಣಿನ ತಿರುಳಿನಿಂದ ಉಪ್ಪಿನಕಾಯಿಯನ್ನು, ಸಿಪ್ಪೆಯಿಂದ ವೈನನ್ನು ಮತ್ತು ಆದಿವಾಸಿ ಜನರು ಅದಕ್ಕೆ ಜೇನುತುಪ್ಪ ಹಾಕಿ ಅದರಿಂದ ಜೇನಿನ ಮೂತಿಯೆಂಬ ಸಿಹಿಯನ್ನು ಮಾಡುತ್ತಾರೆ.

“ಮೂತಿಫಲದ ಮರಗಳಲ್ಲಿ ಒಂದು ವಿಶೇಷತೆಯಿದೆ. ಹೆಣ್ಣು ಮರವಿದ್ದ ಕಡೆ ಗಂಡು ಮರವೂ ಇರಲೇಬೇಕು, ಇಲ್ಲದಿದ್ದರೆ ಅದು ಬಿಡುವ ಹಣ್ಣಿನ ಒಳಗೆ ತಿರುಳೇ ಇರುವುದಿಲ್ಲ, ಬರೀ ಸಿಪ್ಪೆಯಿರುತ್ತದೆ. ಇವುಗಳಲ್ಲಿ ಪರಾಗದಾನವು ಗಾಳಿ ಮತ್ತು ಸಣ್ಣ ದುಂಬಿಗಳ ನೆರವಿನಿಂದ ಆಗುತ್ತದೆ,” ಎಂದರು ಅಬ್ರಾಹಂ. ಸುಮಾರು ನಾಲ್ಕು ವರುಷಗಳಲ್ಲಿ ಗಂಡು ಮರ ಹೂಬಿಟ್ಟ ತಕ್ಷಣ ಹೆಣ್ಣುಮರವೂ ದ್ರಾಕ್ಷಿ ಹಣ್ಣುಗಳು ಮರದಿಂದ ಧುಮ್ಮಿಕ್ಕುತ್ತಿರುವಂತೆ  ಕಾಣುವ ಕೆಂಪಾದ ಹಣ್ಣುಗಳಿಂದ ತುಂಬಿಕೊಳ್ಳುತ್ತದೆ. ಹಣ್ಣುಗಳು ಜನವರಿಯ ಕೊನೆಯ ವಾರದಲ್ಲಿ ಶುರುವಾಗಿ ಆಗಸ್ಟ್ ಕೊನೆಯವರೆಗೂ ಸಿಗುತ್ತವೆ. 

“ಜನರು (ಮೂತಿಫಲ ಬೆಳೆಗಾರರು) ಹಣ್ಣಿನಲ್ಲಿ ಬರಿ ಸಿಪ್ಪೆಯಿದೆ, ಒಳಗೇ ತಿರುಳೇ ಇಲ್ಲ ಎಂದು ಆಗಾಗ ಕೇಳಿಕೊಂಡು ಬರುತ್ತಾರೆ. ಇದಕ್ಕೆ ಕಾರಣ ಆ ಮರದ ಹತ್ತಿರ ಗಂಡು ಮರ ಇಲ್ಲದಿರುವುದು. ಅದರ ಬೀಜವನ್ನು ನೋಡಿ ಅದು ಗಂಡು ಮರವಾಗುತ್ತದೋ ಇಲ್ಲ ಹೆಣ್ಣು ಮರವಾಗುತ್ತದೋ ಎಂದು ನಾನು ಹೇಳಬಲ್ಲೆ. ಆದರೆ ಅದು ಒಮ್ಮೆ ಮೊಳಕೆಯೊಡೆದು ಸಸಿಯಾಗಿಬಿಟ್ಟರೆ, ಅದು ಗಂಡೋ ಹೆಣ್ಣೋ ಹೇಳುವುದು ಬಲು ಕಷ್ಟ,” ಎನ್ನುವ ಅಬ್ರಾಹಂ ಇತರೆ ಬೆಳೆಗಾರರಿಗೆ ಸಲಹಾ ಸಹಾಯವನ್ನೂ ಮಾಡುತ್ತಾರೆ.  

ಮೂತಿಫಲದ ಮರಗಳ ಎತ್ತರವೂ ಬೇರೆಬೇರೆ. ಅಬ್ರಾಹಂರ ಮನೆಯ ಬಳಿಯಿರುವ ಹಳದಿ ತಳಿಯು ಏಳು ಮೀ ವರೆಗೆ ಬೆಳೆಯುತ್ತದೆ, ಕಾಡಿನಲ್ಲಿ ಕಾಣಸಿಗುವ ಅದೇ ತಳಿಯ ಮರ 10 ರಿಂದ 15 ಮೀಟರಿನವರೆಗೆ ಬೆಳೆಯುತ್ತದೆ. ಆ ಮರವು ಇಡುಕ್ಕಿ ಜಿಲ್ಲೆಯ ಅರಕ್ಕುಳಂ ಹಳ್ಳಿಯಲ್ಲಿ ಮತ್ತು ಕೊಲ್ಲಂ ಜಿಲ್ಲೆಯ ಪತ್ತನಾಪುರಂ ತಾಲೂಕಿನಲ್ಲಿ ದೊರೆತಿದೆ. “2019 ರಲ್ಲಿ ಕೃಷಿ ಸಚಿವರಾಗಿದ್ದ ವಿ.ಎಸ್. ಸುನಿಲ್ ಕುಮಾರರವರು ಒಮ್ಮೆ ಬಂದು ನೋಡಿಕೊಂಡು ಹೋದ ಮೇಲೆ ಜನರು ಮೂತಿಫಲವನ್ನು ಗುರುತಿಸಲು ಆರಂಭಿಸಿದರು,” ಎನ್ನುತ್ತಾರೆ ಅವರು. ಸಚಿವರ ಭೇಟಿಯ ನಂತರ ಹಣ್ಣಿನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ವಿಜ್ಞಾನಿಗಳು ಬಂದರು. ತದನಂತರ ಸ್ಥಳಿಯ ಮಾಧ್ಯಮಗಳು ವಿಷಯವನ್ನು ಹೆಚ್ಚು ಪ್ರಚುರಪಡಿಸಿದರು.

“ಆದಿವಾಸಿ ಜನರು ಈ ಹಣ್ಣನ್ನು ರಸ್ತೆಬದಿಯಲ್ಲಿ ಮಾರುತ್ತಾರೆ (ಕೇರಳದಲ್ಲಿ). ಇದು ನಿಮಗೆ ಮಾರ್ಕೆಟ್ಟಿನಲ್ಲಿ ಸಿಗುವುದಿಲ್ಲ,” ಎನ್ನುವ ಅಬ್ರಾಹಂರನ್ನು ಗ್ರಾಹಕರು ಹುಡುಕಿಕೊಂಡು ಬಂದು ಅವರಲ್ಲಿ ಹಣ್ಣನ್ನು ಕೊಳ್ಳುತ್ತಾರೆ, “ಒಂದು ಕಿಲೋಗೆ ರೂ. 100 ರಿಂದ 150 ನೀಡಿ ಹಣ್ಣು ಕೊಳ್ಳುವ ಅವರು ಈ ಹಣ್ಣಿನ ರುಚಿಯು ರಾಂಬುಟಾನ್, ಡ್ರಾಗನ್ ಫ್ರೂಟ್ ನಂತಹ ವಿದೇಶದ ಉಷ್ಣಪ್ರದೇಶಗಳಲ್ಲಿ ಬೆಳೆಯುವ ಹಣ್ಣುಗಳಂತೆಯೇ ಇದೆ ಎಂದು ಹೇಳುತ್ತಾರೆ.” ಜೊತೆಗೆ ಹೊರರಾಜ್ಯಗಳಿಗೂ ಈ ಹಣ್ಣನ್ನು ಕೊರಿಯರ್ ಮೂಲಕ ಕಳಿಸುತ್ತಾರೆ.

ಮೂತಿಫಲದ ಮರವು ಬೆಳೆಯಲು ಹೆಚ್ಚಿನ ಸೂರ್ಯನ ಬೆಳಕು ಮತ್ತು ಜಾಗದ ಅಗತ್ಯವಿಲ್ಲವಾದ್ದರಿಂದ ಕಡಿಮೆ ಜಾಗವಿರುವವರು ಜೊತೆಗೆ ಪಟ್ಟಣಗಳಲ್ಲಿರುವ ಜನರೂ ಸಹ ಬೆಳೆಯಲು ಇದು ಅನುಕೂಲಕರ ಬೆಳೆ. ಹಾಗಾಗಿ ಹೆಚ್ಚು ಹೆಚ್ಚು ರೈತರು ಈ ಬಣ್ಣಬಣ್ಣದ ಹಣ್ಣುಗಳ ಮರಗಳನ್ನು ಬೆಳೆಯಲು ಮುಂದೆ ಬರಲಿ ಎಂದು ಆಶಿಸುತ್ತಾರೆ ಅಬ್ರಾಹಂ.

Editor's note

ಜೋಸ್ ಪೌಲ್ ಸಿ ಎಸ್. ಇವರು ಶಿಲ್ಲಾಂಗಿನ ಇಂಗ್ಲಿಶ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದ ಕೊನೆಯ ವರ್ಷದ ವಿದ್ಯಾರ್ಥಿ. ಇವರು ಒಮ್ಮೆ ಸ್ಥಳೀಯ ರೈತಪತ್ರಿಕೆಯೊಂದರಲ್ಲಿ ಮೂತಿಫಲದ ಬಗ್ಗೆ ನೋಡಿದ ಮೇಲೆ ಇದರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕೆಂದು ಅನಿಸಿತು. “ಪರಿ ಶಿಕ್ಷಣದೊಂದಿಗೆ ಕೆಲಸ ಮಾಡುತ್ತಾ ನನಗೆ ಅರಿವಾಗಿದ್ದೇನೆಂದರೆ ನಾವು ಆಗಾಗ್ಗೆ ಮೇಲೆಮೇಲೆ ಓದುವ ವಿಷಯಗಳಲ್ಲಿ ಅಗಾಧ ವಿವರಗಳು ಮತ್ತು ಸಂಕೀರ್ಣತೆಗಳಿರುತ್ತವೆ. ಈ ವರದಿಯನ್ನು ಮಾಡಿದ್ದರಿಂದ ಅನೇಕ ಸಣ್ಣ ಸಣ್ಣ ವಿಷಯಗಳಲ್ಲಿ ಒಳನೋಟ ಸಿಕ್ಕಿತು”  

ಅನುವಾದ: ಬಿ.ಎಸ್. ಮಂಜಪ್ಪ

ಬಿ.ಎಸ್. ಮಂಜಪ್ಪ ಇವರು ಒಬ್ಬ ಕನ್ನಡದ ಉದಯೋನ್ಮುಖ ಬರಹಗಾರ ಮತ್ತು ಅನುವಾದಕರು.